Site icon Vistara News

ಮನೆಗೆ ಹೋಗುತ್ತಿದ್ದ ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ; ಸಾಯಲು ಹೊರಟಿದ್ದವನನ್ನು ತಡೆದ ವಾಚ್​ಮೆನ್​

Set Fire on College Principal

Set Fire on College Principal

ಇಂದೋರ್​: ಕಾಲೇಜು ವ್ಯಾಸಂಗ ಮುಗಿಸಿದ್ದರೂ, ತನಗೆ ಅಂಕಪಟ್ಟಿ (ಮಾರ್ಕ್ಸ್​ಕಾರ್ಡ್​)ನೀಡಲು ವಿಳಂಬ ಮಾಡಿದರು ಎಂಬ ಕಾರಣಕ್ಕೆ ಮಾಜಿ ವಿದ್ಯಾರ್ಥಿಯೊಬ್ಬ ತಾನು ಓದಿದ ಕಾಲೇಜು ಪ್ರಾಂಶುಪಾಲರಿಗೇ ಬೆಂಕಿ ಹಚ್ಚಿದ್ದಾನೆ. ಮಧ್ಯಪ್ರದೇಶದ ಇಂದೋರ್​​ನ ಬಿಎಂ ಕಾಲೇಜಿನ 54 ವರ್ಷದ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಶೇ.90ರಷ್ಟು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೇ, ಆರೋಪಿ ಆಶುತೋಶ್​ ಶ್ರೀವಾತ್ಸವ್​ ಕೈಯಿಗೆ ಮತ್ತು ಎದೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ.

ಆಶುತೋಶ್​ ಶ್ರೀವಾತ್ಸವ್​ ಇದೇ ಬಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದ. ಆತ ಪರೀಕ್ಷೆ ಮುಗಿಸಿ ಕಾಲೇಜು ಬಿಟ್ಟು ಹೋದರೂ ಅಂಕಪಟ್ಟಿ ಇನ್ನೂ ಕೈ ಸೇರಿರಲಿಲ್ಲ ಎಂಬ ಕಾರಣಕ್ಕೇ ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ‘ನಾನು ನನ್ನ ಏಳು ಮತ್ತು ಎಂಟನೇ ಸೆಮಿಸ್ಟರ್​ ಪರೀಕ್ಷೆಯನ್ನು ಮುಗಿಸಿ, 2022ರ ಜುಲೈನಲ್ಲಿಯೇ ರಿಸಲ್ಟ್​ ಕೂಡ ಬಂದಿದೆ. ನಾನು ಕಾಲೇಜು ಮುಗಿಸಿ ಹೋಗಿಯಾದ ಮೇಲೆ, ನನ್ನ ಅಂಕಪಟ್ಟಿ ಕೊಡುವಂತೆ ಹಲವು ಬಾರಿ ಕಾಲೇಜಿಗೆ ಮನವಿ ಮಾಡಿದೆ. ಆದರೆ ಅವರು ಕೊಡಲಿಲ್ಲ. ಇದೇ ಕಾರಣಕ್ಕೆ ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದೆ’ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Jain College: ಸ್ಕಿಟ್‌ನಲ್ಲಿ ಅಂಬೇಡ್ಕರ್‌ಗೆ ಅಪಮಾನ ಪ್ರಕರಣ; ಏಳು ವಿದ್ಯಾರ್ಥಿಗಳ ಬಂಧನ

ಸೋಮವಾರ ಪ್ರಾಂಶುಪಾಲೆ ವಿಮುಕ್ತಾ ಶರ್ಮಾ ಕಾಲೇಜು ಮುಗಿಸಿ, ಮನೆಯತ್ತ ತೆರಳುತ್ತಿದ್ದ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದ ಆಶುತೋಶ್​, ಅವರ ಮೇಲೆ ಪೆಟ್ರೋಲ್​ ಹಾಕಿ ಬೆಂಕಿ ಹಚ್ಚಿದ್ದಾನೆ. ವಿಮುಕ್ತಾ ಅವರು ಕೂಡಲೇ ದೊಡ್ಡದಾಗಿ ಅರಚುತ್ತ ಕಾಲೇಜಿನ ಕಟ್ಟಡದೊಳಗೆ ಓಡಿದ್ದಾರೆ. ಅಲ್ಲಿದ್ದ ಅವರ ಸಹೋದ್ಯೋಗಿಗಳೆಲ್ಲ ಸೇರಿ ಬೆಂಕಿ ನಂದಿಸಿದ್ದಾರೆ. ಇನ್ನು ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ ಆಶುತೋಶ್​ ತಾನು ಕಟ್ಟಡದಿಂದ ಕೆಳಗೆ ಬಿದ್ದು ಸಾಯುವ ಪ್ರಯತ್ನ ಮಾಡಿದ್ದ. ಆದರೆ ವಾಚ್​ಮೆನ್​ ಆತನನ್ನು ತಡೆದ. ಬಳಿಕ ಅವನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಅಂಕಪಟ್ಟಿ ಸಿಗಲು ತಡವಾಗುತ್ತಿದೆ ಎಂಬ ಕಾರಣಕ್ಕೆ ಈ ಹಿಂದೆಯೂ ಹಲವು ಬಾರಿ ಆಶುತೋಶ್​ ಪ್ರಾಂಶುಪಾಲೆಗೆ ಕಿರುಕುಳ ಕೊಟ್ಟಿದ್ದ. ವಿಮುಕ್ತಾ ಶರ್ಮಾ ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಕಾಲೇಜಿನ ಇನ್ನೊಬ್ಬ ಪ್ರಾಧ್ಯಾಪಕನ ಮೇಲೆ ಕೂಡ ಚಾಕುವಿನಿಂದ ಹಲ್ಲೆ ನಡೆಸಿ, ಕೆಲ ಅವಧಿಗೆ ಅರೆಸ್ಟ್ ಆಗಿದ್ದ ಎನ್ನಲಾಗಿದೆ.

Exit mobile version