ಕ್ರಿಶ್ಚಿಯನ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹಿಂದು ಹುಡುಗಿ ಆತ್ಮಹತ್ಯೆ (Student Suicide) ಮಾಡಿಕೊಂಡಿದ್ದು ದೊಡ್ಡಮಟ್ಟದ ವಿವಾದ-ಪ್ರತಿಭಟನೆಗೆ ಕಾರಣವಾಗಿದೆ. ಜಾರ್ಖಂಡ್ನ ಧನ್ಬಾದ್ನ ಟೆತುಲ್ಮರಿ ಎಂಬಲ್ಲಿರುವ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಬಾಲಕಿ ಉಷಾಕುಮಾರಿ (16) ವಿದ್ಯಾಭ್ಯಾಸ ಮಾಡುತ್ತಿದ್ದಳು. ಸೋಮವಾರ ಉಷಾಕುಮಾರಿ ಹಣೆಗೆ ಬಿಂದಿ ಇಟ್ಟುಕೊಂಡು (ಹಿಂದು ಸಂಪ್ರದಾಯದಂತೆ ಹಣೆಗೆ ಕುಂಕುಮ/ಸ್ಟಿಕರ್ ಇಡುವುದು) (Wearing A Bindi) ಶಾಲೆಗೆ ಬಂದಿದ್ದಳು. ಅದನ್ನು ನೋಡಿದ ಶಿಕ್ಷಕಿಯೊಬ್ಬಳು ಬಾಲಕಿಗೆ ಹೊಡೆದಿದ್ದಾಳೆ. ಹೀಗೆ ಬಿಂದು ಇಟ್ಟುಕೊಂಡು ಹೋಗಿದ್ದಕ್ಕೆ ಶಿಕ್ಷಕಿಯಿಂದ ಥಳಿತಕ್ಕೆ ಒಳಗಾದ ಹುಡುಗಿ ಮರುದಿನ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸೋಮವಾರ ಶಾಲೆಯಲ್ಲಿ ಪ್ರಾರ್ಥನೆ ವೇಳೆ ಎಲ್ಲ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಮವಸ್ತ್ರ, ಶೂಗಳನ್ನೆಲ್ಲ ತಪಾಸಣೆ ಮಾಡಲಾಯಿತು. ಈ ವೇಳೆ ಉಷಾ ಕುಮಾರಿ ಹಣೆಯಲ್ಲಿ ಕುಂಕುಮ ನೋಡಿದ ಶಿಕ್ಷಕಿ ಆಕೆಗೆ ಎಲ್ಲರ ಎದುರು ಅವಮಾನಿಸಿದ್ದಲ್ಲದೆ, ಹೊಡೆದಿದ್ದಾಳೆ. ಇದರಿಂದ ಉಷಾ ತೀವ್ರ ನೊಂದಿದ್ದಳು. ಹನುಮಾನ್ಗಢಿ ಕಾಲನಿಯಲ್ಲಿರುವ ತನ್ನ ಮನೆಗೆ ಬಂದು ಮಂಗಳವಾರ ಬೆಳಗ್ಗೆ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾಳೆ. ಆಕೆ ಶಾಲಾ ಸಮವಸ್ತ್ರದಲ್ಲಿಯೇ ತನ್ನನ್ನು ತಾನು ಕೊಂದುಕೊಂಡಿದ್ದಾಳೆ. ಹಾಗೇ, ಒಂದು ಸೂಸೈಡ್ ನೋಟ್ ಬರೆದು, ಅದನ್ನು ತನ್ನ ಸಮವಸ್ತ್ರದ ಜೇಬಿನಲ್ಲಿ ಇಟ್ಟುಕೊಂಡಿದ್ದಳು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೇ, ಹುಡುಗಿಯ ಆರೋಪದ ಅನ್ವಯ ಸೇಂಟ್ ಕ್ಸೇವಿಯರ್ ಶಾಲೆಯ ಪ್ರಿನ್ಸಿಪಾಲ್ ಮತ್ತು ಹುಡುಗಿಗೆ ಹೊಡೆದ ಶಿಕ್ಷಕಿ ಇಬ್ಬರನ್ನೂ ಬಂಧಿಸಿದ್ದಾರೆ.
ಹುಡುಗಿ ಬರೆದಿಟ್ಟ ಸೂಸೈಡ್ ನೋಟ್ನಲ್ಲಿ ಏನಿದೆ ಎಂಬುದನ್ನು ಪೊಲೀಸ್ ಅಧಿಕಾರಿ ಆಶಿಶ್ ಯಾದವ್ ತಿಳಿಸಿದ್ದಾರೆ. ‘ನಾನು ಹಣೆಗೆ ಬಿಂದಿ ಇಟ್ಟುಕೊಂಡು ಹೋದೆ ಎಂಬ ಕಾರಣಕ್ಕೆ ಎಲ್ಲರ ಎದುರು ನನಗೆ ಹೊಡೆದರು. ಶಾಲೆಯ ಪ್ರಾರ್ಥನಾ ಹಾಲ್ನಿಂದ ನನ್ನ ಆಚೆಗೆ ಕಳಿಸಿದರು. ನನಗೆ ಈ ಅವಮಾನ ಸಹಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹುಡುಗಿ ಬರೆದಿದ್ದಾಳೆ. ಅಷ್ಟೇ ಅಲ್ಲ, ನನ್ನ ಸಾವಿಗೆ ಸೇಂಟ್ ಕ್ಸೇವಿಯರ್ ಶಾಲೆಯ ಪ್ರಿನ್ಸಿಪಾಲ್ ಮತ್ತು ನನಗೆ ಹೊಡೆದ ಶಿಕ್ಷಕಿಯೇ ಕಾರಣ ಎಂದಿದ್ದಾಳೆ. ಅವರಿಬ್ಬರ ಹೆಸರನ್ನೂ ಉಲ್ಲೇಖಿಸಿ, ಇಬ್ಬರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದಾಳೆ ಎಂದು ಆಶಿಶ್ ಯಾದವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kanal Kannan Arrested: ಕ್ರಿಶ್ಚಿಯನ್ ಧರ್ಮ ವಿರುದ್ಧ ಟ್ವೀಟ್; ತಮಿಳು ಸಿನಿಮಾ ಸ್ಟಂಟ್ ಮಾಸ್ಟರ್ ಕಣ್ಣನ್ ಅಂದರ್!
ಇನ್ನು ಹುಡುಗಿಯ ಸಾವಿನ ಬೆನ್ನಲ್ಲೇ ಆಕೆಯ ಪಾಲಕರು, ಸಂಬಂಧಿಗಳು, ಇನ್ನಿತರ ಕೆಲವು ಮಕ್ಕಳ ಪಾಲಕರೆಲ್ಲ ಸೇರಿ ಶಾಲೆ ಎದುರು ಪ್ರತಿಭಟನೆಯನ್ನೂ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕವೇ ಅವರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಹುಡುಗಿಯ ಸಾವಿಗೆ ಶಾಲೆಯ ಆಡಳಿತ ಮಂಡಳಿಯೇ ಕಾರಣ. ನಾವು ಎಫ್ಐಆರ್ ದಾಖಲು ಮಾಡಿದ್ದೇವೆ ಎಂದು ಆಶಿಶ್ ಯಾದವ್ ತಿಳಿಸಿದ್ದಾರೆ.