ದೆಹಲಿಯ ಉತ್ತರ ರೋಹಿಣಿಯ ಶಹಬಾದ್ ಡೇರಿ ಏರಿಯಾದಲ್ಲಿ ನಡೆದ 16 ವರ್ಷದ ಹುಡುಗಿ ಸಾಕ್ಷಿಯ ಕೊಲೆ ಕೇಸ್ನಲ್ಲಿ (Delhi Murder) ಪ್ರತಿಕ್ಷಣವೂ ಒಂದೊಂದು ಬೆಳವಣಿಗೆಯಾಗುತ್ತಿದೆ. ಬಂಧಿತನಾಗಿರುವ ಮೊಹಮ್ಮದ್ ಸಾಹಿಲ್ ಒಂದೊಂದೇ ವಿಷಯವನ್ನು ಪೊಲೀಸರ ಎದುರು ಹೇಳುತ್ತಿದ್ದಾನೆ. ಹಾಗೇ, ಪೊಲೀಸರು ಇನ್ನೂ ಕೆಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯ ಮಧ್ಯೆ ಇನ್ನೊಂದು ವರದಿ ಹೊರಬಿದ್ದಿದೆ. ಸಾಕ್ಷಿ ಮತ್ತು ಸಾಹಿಲ್ ಮಧ್ಯೆ ಪ್ರವೀಣ್ ಎಂಬಾತನ ಪ್ರವೇಶವಾಗಿದ್ದೇ ಇವರಿಬ್ಬರ ಜಗಳ-ಮನಸ್ತಾಪಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಸಾಕ್ಷಿ ಮತ್ತು ಸಾಹಿಲ್ 2021ರಿಂದಲೂ ರಿಲೇಶನ್ಶಿಪ್ನಲ್ಲಿದ್ದರು. ಆದರೆ ಇತ್ತೀಚೆಗೆ ತುಂಬ ಜಗಳವಾಗುತ್ತಿತ್ತು. ಸಾಹಿಲ್ ಮತ್ತು ಸಾಕ್ಷಿ ಕಿತ್ತಾಡುತ್ತಿದ್ದರು. ಸಾಕ್ಷಿ ಸಾಹಿಲ್ನಿಂದ ದೂರವಾಗಲು ಯತ್ನಿಸುತ್ತಿದ್ದಳು. ಆದರೆ ಸಾಹಿಲ್ ಪದೇಪದೆ ಸಾಕ್ಷಿ ಬಳಿ ಬಂದು ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಇದೇ ಜಗಳವೀಗ ಸಾಕ್ಷಿ ಹತ್ಯೆಯಲ್ಲಿ ಅಂತ್ಯವಾಗಿದೆ. ಸಾಕ್ಷಿ ಮೃತದೇಹ ಪರೀಕ್ಷೆ ಮಾಡುವಾಗ ಆಕೆಯ ಕೈ ಮೇಲೆ ಒಂದು ಟ್ಯಾಟ್ಯೂ ಕಾಣಿಸಿದೆ. ‘ಪ್ರವೀಣ್’ ಎಂದು ಅವಳು ಬರೆಸಿಕೊಂಡಿದ್ದಳು. ಈ ಪ್ರವೀಣ್ ಯಾರೆಂದು ಗೊತ್ತಾಗಿಲ್ಲ. ಆದರೆ ಇವರಿಬ್ಬರ ಮಧ್ಯೆ ಪ್ರವೀಣ್ ಬಂದಿದ್ದು, ಆಕೆ ಅವನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದೇ ಜಗಳಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಸಾಹಿಲ್ನನ್ನು ಇನ್ನಷ್ಟು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Delhi Murder: ಆಕೆಯ ನಿರ್ಲಕ್ಷ್ಯ ಸಹಿಸಲಾಗದೆ ಕೊಂದೆ; ಹಿಂದು ಬಾಲಕಿಯ ಹಂತಕ ಸಾಹಿಲ್ ಹೇಳಿಕೆ
ಸಾಕ್ಷಿಗೆ ಚಾಕುವಿನಿಂದ ಇರಿದು ಕೊಂದ ಸಾಹಿಲ್ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿ ಉತ್ತರ ಪ್ರದೇಶಕ್ಕೆ ಹೋಗಿದ್ದ. ಅಲ್ಲಿಯೇ ಅವನ ಬಂಧನವಾಗಿದೆ. ಸಾಕ್ಷಿ ನಿರ್ಲಕ್ಷ್ಯ ನನಗೆ ಕೋಪ ಹುಟ್ಟಿಸುತ್ತಿತ್ತು. ಹಾಗಾಗಿಯೇ ಕೊಂದೆ ಎಂದು ಆರೋಪಿ ಪೊಲೀಸರ ಎದುರು ಹೇಳಿಕೊಂಡಿದ್ದಾನೆ. ಘಟನೆ ಬಗ್ಗೆ ಮಾಹಿತಿ ನೀಡಿದ ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಆಯುಕ್ತ ದೀಪೇಂದ್ರ ಪಾಠಕ್, ‘ಹುಡುಗಿಯ ಕೊಲೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ತಡಮಾಡದೆ ಸಾಹಿಲ್ನ ಪಾಲಕರನ್ನು ಬಂಧಿಸಿದೆವು. ಖಂಡಿತ ಸಾಹಿಲ್ ಅವರಿಗೆ ಕರೆ ಮಾಡುತ್ತಾನೆ ಎಂದು ಖಂಡಿತ ನಮಗೆ ಗೊತ್ತಿತ್ತು. ಹಾಗೇ, ಅವನು ಕರೆ ಮಾಡಿದ. ಕರೆ ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚಿ, ಅಲ್ಲಿಗೇ ಹೋಗಿ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.