ಚಿತ್ತೂರ್: 17 ವರ್ಷದ ಹುಡುಗಿಯನ್ನು ನಂಬಿಸಿ (Child Marriage), ಮದುವೆಯಾದ 33ವರ್ಷದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಶಿಕ್ಷಕ ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಗಂಗಾವರಮ್ ಮಂಡಲ್ ನಿವಾಸಿಯಾಗಿದ್ದು, ಹೆಸರು ಚಲಪತಿ. ಆತನಿಗೆ ಅದಾಗಲೇ ಮದುವೆಯಾಗಿ ಒಬ್ಬಳು ಮಗಳೂ ಇದ್ದಳು. ಖಾಸಗಿ ಇಂಟರ್ ಕಾಲೇಜ್ವೊಂದರಲ್ಲಿ ಅಧ್ಯಾಪಕನಾಗಿದ್ದ. ಅದೇ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ, 17ವರ್ಷದ ಹುಡುಗಿಯನ್ನು ನಂಬಿಸಿ ಮದುವೆಯಾಗಿದ್ದ. ಇದೀಗ ಚಲಪತಿಯನ್ನು ಬಂಧಿಸಿರುವ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಸಬ್ ಇನ್ಸ್ಪೆಕ್ಟರ್ ಸುಧಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ‘ಬುಧವಾರ ಆ ವಿದ್ಯಾರ್ಥಿನಿಗೆ ಕೊನೇ ಪರೀಕ್ಷೆ ಇತ್ತು. ಆಕೆಗೆ ಎಕ್ಸಾಮ್ ಮುಗಿಯುತ್ತಿದ್ದಂತೆ ಶಿಕ್ಷಕ ಚಲಪತಿ ಅವಳನ್ನು ತಿರುಪತಿಗೆ ಕರೆದುಕೊಂಡು ಹೋದ. ಅಲ್ಲಿನ ದೇವಸ್ಥಾನಕ್ಕೆ ಕರೆದೊಯ್ದು ನಾನು ನಿನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದೇನೆ. ನನ್ನನ್ನು ನಂಬು. ನೀನು ನನ್ನ ಮದುವೆಯಾದರೆ ತುಂಬ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿದ. ಆಕೆ ಅವನನ್ನು ಸಂಪೂರ್ಣವಾಗಿ ನಂಬಿದಳು. ಬಳಿಕ ಚಲಪತಿ ಆ ಹುಡುಗಿಗೆ ತಾಳಿಕಟ್ಟಿದ. ಆದರೆ ಮದುವೆಯಾಗಿ ಕೆಲವೇ ದಿನದಲ್ಲಿ ಚಲಪತಿ ವರ್ತನೆ ಬದಲಾಯಿತು. ಆಗಲೇ ಯುವತಿ ಈ ಘಟನೆಯನ್ನು ತನ್ನ ಪಾಲಕರಿಗೆ ತಿಳಿಸಿದಳು.
ಇದನ್ನೂ ಓದಿ: Child Marriage: ಬಾಲ್ಯ ವಿವಾಹ ತಡೆಯಲು 200 ಕೋಟಿ ರೂ. ಮೀಸಲಿಟ್ಟ ಅಸ್ಸಾಂ ಸರ್ಕಾರ!
ಮಗಳು ಹೇಳಿದ ವಿಷಯ ಕೇಳಿದ ಪಾಲಕರು ಪ್ರಾರಂಭದಲ್ಲಿ ಆಘಾತಕ್ಕೆ ಒಳಗಾದರು. ಬಳಿಕ ಗುರುವಾರ ಗಂಗಾವರಂ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವನನ್ನು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಹೆಣ್ಣುಮಕ್ಕಳ ಮದುವೆ ವಯಸ್ಸು 18. 18ವರ್ಷದ ಮೊದಲು ಅವರ ಮದುವೆ ಮಾಡಿದರೆ ಅದು ಬಾಲ್ಯ ವಿವಾಹ ಎನ್ನಿಸಿಕೊಳ್ಳುತ್ತದೆ. ಈ ಶಿಕ್ಷಕ ಅಪ್ರಾಪ್ತೆಯನ್ನು ವಿವಾಹ ಆಗಿದ್ದಲ್ಲದೆ, ನಂಬಿಸಿ ಮದುವೆಯಾಗಿರುವ ಆರೋಪದಡಿ ಶಿಕ್ಷೆಗೆ ಒಳಗಾಗಲಿದ್ದಾನೆ.