ಕಾನ್ಪುರ: ಗಣಿತದಲ್ಲಿ 2ರ ಗುಣಾಕಾರದ ಕೋಷ್ಟಕವನ್ನು ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ 5ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಅತ್ಯಂತ ಕ್ರೂರವಾದ ಶಿಕ್ಷೆಯನ್ನು ನೀಡಿದ್ದಾರೆ. ಆ ಹುಡುಗನ ಕೈಯನ್ನು ಡ್ರಿಲ್ಲಿಂಗ್ ಮಷಿನ್ನಿಂದ ಕೊರೆದಿದ್ದಾರೆ. ಅಂದಹಾಗೇ ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಪ್ರೇಮನಗರ ಏರಿಯಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಡ್ರಿಲ್ ಮಾಡಿಸಿಕೊಂಡು ಗಾಯಗೊಂಡಿರುವ ಹುಡುಗ ಸಿಸಮು ನಿವಾಸಿ ಎನ್ನಲಾಗಿದೆ.
ಈ ಹುಡುಗ ಶಾಲೆಯ ಲೈಬ್ರರಿ ಮೂಲಕ ಹಾದು ಹೋಗುತ್ತಿದ್ದ. ಆಗ ಅಲ್ಲಿಯೇ ಇದ್ದ ಬೋಧಕ ಅನುಜ್ ಪಾಂಡೆ ಎಂಬುವರು ಬಾಲಕನನ್ನು ನೋಡಿ ಹತ್ತಿರ ಕರೆದಿದ್ದಾರೆ. ನಿಂತಲ್ಲಿಯೇ 2ರ ಮಗ್ಗಿ ಹೇಳುವಂತೆ ಕೇಳಿದ್ದಾರೆ. ಬಾಲಕ ಹೇಳಿದ್ದಾನೆ. ಆದರೆ ತಪ್ಪಾಗಿದೆ. 2ರ ಮಗ್ಗಿಯೂ ಸರಿಯಾಗಿ ಬರೋದಿಲ್ಲ ಎಂದು ಕ್ರೋಧಗೊಂಡ ಶಿಕ್ಷಕ, ಅಲ್ಲಿಯೇ ಇದ್ದ ಡ್ರಿಲ್ ಮಷಿನ್ ತೆಗೆದುಕೊಂಡು ಬಾಲಕನ ಕೈಯಿಗೆ ಕೊರೆದಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಇನ್ನೊಬ್ಬ ಬಾಲಕ ಅವನನ್ನು ಶಿಕ್ಷಕನಿಂದ ಬಿಡಿಸಿದ್ದಾನೆ. ಈ ಶಿಕ್ಷಕ ಒಂದು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಈ ಶಾಲೆಗೆ ಆಗಮಿಸಿದ್ದ ಎನ್ನಲಾಗಿದೆ.
ಬಾಲಕನ ಸಂಬಂಧಿಯೊಬ್ಬರಿಗೆ ಈ ವಿಷಯ ತಿಳಿದು ಶಾಲೆಗೆ ಆಗಮಿಸಿ ಗಲಾಟೆ ಮಾಡಿದ್ದಾರೆ. ಅಷ್ಟೇ ಅಲ್ಲ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ. ‘ನನ್ನ ಬಳಿ 2ರ ಮಗ್ಗಿ ಹೇಳುವಂತೆ ಟೀಚರ್ ಹೇಳಿದರು. ನನಗೆ ಕೆಲವು ಕಡೆ ತಪ್ಪಾಯಿತು. ಅದಕ್ಕೆ ಕೋಪಗೊಂಡು ನನ್ನ ಕೈಯನ್ನು ಕೊರೆದಿದ್ದಾರೆ. ಇನ್ನೊಬ್ಬ ಹುಡುಗ ಡ್ರಿಲ್ ಮಷಿನ್ ಸ್ವಿಚ್ ಆಫ್ ಮಾಡುವ ಮೂಲಕ ನನ್ನನ್ನು ಕಾಪಾಡಿದ್ದಾನೆ’ ಎಂದು ಹುಡುಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಸದ್ಯ ಹುಡುಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾನ್ಪುರ ನಗರದ ಪ್ರಾಥಮಿಕ ಶಿಕ್ಷಣ ಅಧಿಕಾರಿ ಸುಜಿತ್ ಕುಮಾರ್ ಸಿಂಗ್, ‘ಇಡೀ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಒಂದು ಸಮಿತಿ ರಚಿಸಲಾಗಿದೆ. ಪ್ರೇಮ್ನಗರ ಮತ್ತು ಶಾಸ್ತ್ರಿ ನಗರದ ಬ್ಲಾಕ್ ಶಿಕ್ಷಣ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಅವರು ವರದಿ ಕೊಟ್ಟ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಕ ತಪ್ಪಿತಸ್ಥನಾಗಿದ್ದೇ ಹೌದಾದರೆ ಕಠಿಣ ಕ್ರಮ ನಿಶ್ಚಿತ’ ಎಂದಿದ್ದಾರೆ.
ಇದನ್ನೂ ಓದಿ: Midday Meal | ಹುಳ ಮಿಶ್ರಿತ ಬಿಸಿಯೂಟ ವಿತರಣೆ; ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಮಕ್ಕಳ ಪೋಷಕರು