ಮುಂಬಯಿ: ಈ ದಿನಗಳಲ್ಲಿ ಮಕ್ಕಳ ಮನಸು ಸಿಕ್ಕಾಪಟೆ ಸೂಕ್ಷ್ಮವಾಗುತ್ತಿದೆ. ಚಿಕ್ಕಚಿಕ್ಕ ಕಾರಣಕ್ಕೂ ಆತ್ಮಹತ್ಯೆಯಂಥ ಬಹುದೊಡ್ಡ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದ್ದಾರೆ. ಸಣ್ಣಪುಟ್ಟದ್ದಕ್ಕೆಲ್ಲ ಸಿಟ್ಟು ಮಾಡಿಕೊಂಡು, ತಾಳ್ಮೆ ಕೆಡಿಸಿಕೊಂಡು, ಮುಂದೇನಾಗುತ್ತದೆ ಎಂಬುದನ್ನೆಲ್ಲ ಯೋಚಿಸದೆ ಸಾವಿನ ದಾರಿ ತುಳಿಯುತ್ತಿದ್ದಾರೆ. ಅದರಲ್ಲೂ ಈ ಹೆಜ್ಜೆ ಇಡುತ್ತಿರುವವರು ಸಾಮಾನ್ಯವಾಗಿ ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು. ಈಗೊಬ್ಬಳು 15ವರ್ಷದ ಹುಡುಗಿ ಅದೇನೋ ಅವಸರಕ್ಕೆ ಬಿದ್ದು, ಏಳು ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ.
ಈ ಘಟನೆ ನಡೆದಿದ್ದು ಮುಂಬಯಿಯ ಮಲಾಡ್ನಲ್ಲಿರುವ ಮಾಲ್ವಾನಿ ಏರಿಯಾದಲ್ಲಿ. ಶುಕ್ರವಾರ ಸಂಜೆ ಹುಡುಗಿ ಕಟ್ಟಡದ ಏಳನೇ ಅಂತಸ್ತಿಗೆ ಹೋಗಿ ಅಲ್ಲಿಂದ ಕೆಳಗೆ ಜಿಗಿದಿದ್ದಾಳೆ. ಮನೆಯವರೆಲ್ಲ ಕಂಗಾಲಾಗಿ ಕೂಡಲೇ ಪೊಲೀಸರನ್ನು ಕರೆಸಿದ್ದಾರೆ. ಆ ಹುಡಗಿ ಯಾಕೆ ಬಿದ್ದಳು ಎಂಬುದು ಸ್ಪಷ್ಟವಾಗದೆ ಇದ್ದರೂ, ಮುನ್ನಾದಿನವಷ್ಟೇ ಆಕೆ ಮೊಬೈಲ್ ನೋಡುತ್ತಿದ್ದಾಗ ಅಪ್ಪ-ಅಮ್ಮ ಬೈದಿದ್ದರು. ಆಕೆಯ ಕೈಯಿಂದ ಮೊಬೈಲ್ನ್ನು ಕಿತ್ತುಕೊಂಡಿದ್ದರು. ಅದರಿಂದ ಹುಡುಗಿ ತೀವ್ರವಾಗಿ ನೊಂದಿದ್ದಳು ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Crime News: ಐಎಎಸ್ ಅಧಿಕಾರಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಇತ್ತೀಚೆಗೆ ಮಹಾರಾಷ್ಟ್ರದ ಭಯಂದರ್ ಎಂಬಲ್ಲಿ 13ವರ್ಷದ ಬಾಲಕನೊಬ್ಬ ತಲೆಕೂದಲು ಸಣ್ಣದಾಗಿ ಕತ್ತರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈತ ತನ್ನ ಸಹೋದರ ಸಂಬಂಧಿಯೊಂದಿಗೆ ಸಲೂನ್ಗೆ ಹೋಗಿದ್ದ. ಆದರೆ ಮನೆಗೆ ಬಂದು ತನ್ನ ಹೇರ್ ಕಟ್ ನೋಡಿ ದೊಡ್ಡದಾಗಿ ಅತ್ತಿದ್ದ. ತೀರ ಚಿಕ್ಕದಾಯಿತು, ನಾನು ಹೇಳಿದಂತೆ ಮಾಡಲಿಲ್ಲ ಎಂದು ಬೇಸರಿಸಿಕೊಂಡಿದ್ದ. ಅಮ್ಮ-ಅಕ್ಕಂದಿರೆಲ್ಲ ಅವನನನ್ನು ಸಮಾಧಾನ ಮಾಡಿದ್ದರೂ, ರಾತ್ರಿ 11ಗಂಟೆ ಬಳಿಕ, ಎಲ್ಲರೂ ಮಲಗಿದ ಮೇಲೆ ಸ್ನಾನದ ಕೋಣೆಯ ಕಿಟಕಿಯಿಂದ ಜಿಗಿದು ಸಾವನ್ನಪ್ಪಿದ್ದ.