ನವ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭೀಕರ ಕಾರು ಅಪಘಾತವೀಗ (Accident In Delhi) ರಾಜಕೀಯ ಸ್ವರೂಪಕ್ಕೆ ತಿರುಗಿದೆ. ಇಲ್ಲಿನ ಸುಲ್ತಾನ್ಪುರಿಯಲ್ಲಿ ಹೊಸವರ್ಷದ ದಿನವೇ 20ವರ್ಷದ ಯುವತಿಯೊಬ್ಬಳು ಅತ್ಯಂತ ದಾರುಣವಾಗಿ ಮೃತಪಟ್ಟಿದ್ದಳು. ಅಮಾನ್ ವಿಹಾರ್ ನಿವಾಸಿಯಾದ 20 ವರ್ಷದ ಯುವತಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಸುಲ್ತಾನ್ಪುರಿಯಲ್ಲಿ ಕಾರೊಂದು ಡಿಕ್ಕಿಯಾಗಿತ್ತು. ಆಕೆ ಬಿದ್ದಿದ್ದನ್ನು ನೋಡದ ಚಾಲಕ ಕಾರನ್ನು ಮುಂದೆ ಚಲಾಯಿಸಿದ್ದ. ಯುವತಿ ಕಾರಿನಡಿಗೆ ಸಿಲುಕಿ ಸುಮಾರು 12-18 ಕಿಮೀ ದೂರ ಎಳೆಯಲ್ಪಟ್ಟಿದ್ದಳು. ಬಳಿಕ ಕಂಝಾವಲ್ ಬಳಿ ನಗ್ನ ಸ್ಥಿತಿಯಲ್ಲಿ ರಸ್ತೆ ಮೇಲೆ ಬಿದ್ದಿದ್ದಳು.
ಈ ಅಮಾನುಷ ಕೃತ್ಯಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕ ಮನೋಜ್ ಮಿತ್ತಲ್ರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಇದ್ದ ಐವರಲ್ಲಿ ಇವರೂ ಒಬ್ಬರು ಎಂದು ಖಚಿತವಾದ ಹಿನ್ನೆಲೆಯಲ್ಲಿ ಅಮಿತ್ ಮಿತ್ತಲ್ ಅರೆಸ್ಟ್ ಆಗಿದ್ದಾರೆ. ಹಾಗೇ, ಉಳಿದ ನಾಲ್ವರೂ ಬಂಧಿತರಾಗಿದ್ದಾರೆ. ಅದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಕಿಡಿ ಕಾರಿದೆ. ಅರೆಸ್ಟ್ ಆದವನು ಬಿಜೆಪಿ ಸದಸ್ಯ ಆಗಿದ್ದರಿಂದ ಪೊಲೀಸರು ಈ ಕೇಸ್ನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌರಭ್ ಭಾರದ್ವಾಜ್ ‘ಸ್ಥಳೀಯ ಪೊಲೀಸ್ ಠಾಣೆ ಹೊರಭಾಗದಲ್ಲಿ ಒಂದು ದೊಡ್ಡದಾದ ಬ್ಯಾನರ್ ಇರುವ ಫೋಟೋವೀಗ ವೈರಲ್ ಆಗುತ್ತಿದೆ. ಆ ಬ್ಯಾನರ್ನಲ್ಲಿ ಬಿಜೆಪಿ ನಾಯಕ ಅಮಿತ್ ಮಿತ್ತಲ್ ಫೋಟೋವನ್ನು ನೋಡಬಹುದು. ಬ್ಯಾನರ್ ಹಾಕಲಾದ ಜಾಗದ ಸಮೀಪವೇ ಇರುವ ಪೊಲೀಸ್ ಠಾಣೆಯಲ್ಲೇ ಈಗ ಮಿತ್ತಲ್ ಮತ್ತು ಅವರ ಸ್ನೇಹಿತರನ್ನು ಬಂಧಿಸಿಡಲಾಗಿದೆ. ಅಂದಮೇಲೆ ಅವರಿಗೆ ಅದೆಷ್ಟು ಪಾರದರ್ಶಕವಾಗಿ ಶಿಕ್ಷೆ ವಿಧಿಸಬಹುದು?’ ಎಂದು ಪ್ರಶ್ನಿಸಿದ್ದಾರೆ.
‘ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರಬಹುದು. ಅತ್ಯಾಚಾರವೂ ಆಗಿರಬಹುದು. ಇಲ್ಲದೆ ಇದ್ದರೆ ಯುವತಿ ಅದು ಹೇಗೆ ಸಂಪೂರ್ಣ ನಗ್ನಳಾಗಿ ಪತ್ತೆಯಾಗುತ್ತಾಳೆ? ಆದರೆ ಪೊಲೀಸರು ಇದ್ಯಾವುದೇ ಆಯಾಮದಲ್ಲಿ ತನಿಖೆ ಕೈಗೆತ್ತಿಕೊಳ್ಳುತ್ತಿಲ್ಲ. ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮಗಳಿರುವ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಅವರ ನಡವಳಿಕೆ ವಿಚಿತ್ರ ಎನ್ನಿಸುತ್ತಿದೆ. ಪೊಲೀಸರು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾರನ್ನು ಟೀಕಿಸಿದ ಸೌರಭ್ ಭಾರದ್ವಾಜ್ ‘ದೆಹಲಿಯ ಪೊಲೀಸ್ ವ್ಯವಸ್ಥೆಯನ್ನು ನಿಯಂತ್ರಿಸುವ ಅಧಿಕಾರ ಇರುವ ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರು ಬೋಟ್ ರೈಡ್ನಲ್ಲಿ ತೊಡಗಿಕೊಂಡಿದ್ದಾರೆ. ಆಮೇಲೆ ಇದೊಂದು ತಲೆತಗ್ಗಿಸುವ ವಿಷಯ ಎನ್ನುತ್ತಾರೆ. ಅಷ್ಟು ಕಾಳಜಿ ಇದ್ದಿದ್ದರೆ, ನಿನ್ನೆ ಘಟನೆ ನಡೆದ ತಕ್ಷಣವೇ ಆರೋಪಿಗಳ ವಿರುದ್ಧ ಗಂಭೀರ ಸ್ವರೂಪದ ಕ್ರಮಕ್ಕೆ ಆಗ್ರಹಿಸಬೇಕಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾರದರ್ಶಕ ತನಿಖೆಯಾಗಲಿ ಎಂದ ಬಿಜೆಪಿ
ಆಪ್ ಆರೋಪದ ಬೆನ್ನಲ್ಲೇ ಬಿಜೆಪಿಯ ಮಾಧ್ಯಮ ಘಟಕ ಮುಖ್ಯಸ್ಥ ಹರೀಶ್ ಖುರಾನಾ ಪ್ರತಿಕ್ರಿಯೆ ನೀಡಿ, ‘ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಪಾರದರ್ಶಕವಾಗಿ ತನಿಖೆ ನಡೆಸುತ್ತಾರೆ. ಅಪರಾಧಿಗಳು ಯಾರೇ ಆದರೂ, ಅವರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅವರಿಗೆ ಖಂಡಿತ ಕಠಿಣ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.
ಆರೋಪಿಗಳು ಹೇಳೋದೇನು?
ಯುವತಿ ಅಪಘಾತ ಕೇಸ್ಗೆ ಸಂಬಂಧಪಟ್ಟಂತೆ ಮನೋಜ್ ಮಿತ್ತಲ್ ಜತೆ ಬಂಧಿತರಾಗಿರುವ ಆರೋಪಿಗಳನ್ನು ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕೃಷ್ಣನ್ (27), ಮಿಥುನ್ (26) ಎಂದು ಗುರುತಿಸಲಾಗಿದೆ. ಇವರೆಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಾವು ಕಾರಿನಲ್ಲಿ ಹೋಗುತ್ತಿದ್ದಾಗ ಸುಲ್ತಾನ್ಪುರಿ ಬಳಿ ಯುವತಿಯ ಸ್ಕೂಟರ್ಗೆ ಡಿಕ್ಕಿಯಾಯಿತು. ಸುಮಾರು ನಾಲ್ಕು ಕಿಮೀಗಳಷ್ಟು ದೂರ ಆಕೆ ಎಳೆಯಲ್ಪಟ್ಟಳು. ಹೀಗಾಗಿಯೇ ಅವಳ ಸಂಪೂರ್ಣ ಬಟ್ಟೆ ಹರಿದು ಹೋಗಿದೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Accident in Delhi | ಯುವತಿಯ ದೇಹವನ್ನು ಎಳೆದುಕೊಂಡೇ ಹೋದ ಕಾರು, ಸಿಸಿಟಿವಿಯಲ್ಲಿ ದೃಶ್ಯ ಸೆರೆ