ದೇಶಾದ್ಯಂತ ಟೊಮ್ಯಾಟೊ ಬೆಲೆ (Tomato Price) ಏರಿಕೆಯಾಗುತ್ತಿದ್ದು, ಬೆಳೆಗಾರರಿಗೆ ಬಂಪರ್ ಎಂಬಂತಾಗಿದೆ. ಜತೆಜತೆಗೇ ಟೊಮ್ಯಾಟೊ ಕಳವು ಕೇಸ್ಗಳೂ ಹೆಚ್ಚುತ್ತಿವೆ. ಆದರೆ ಆಂಧ್ರಪ್ರದೇಶದಲ್ಲಿ ಟೊಮ್ಯಾಟೊ ರೈತನೊಬ್ಬನ ಹತ್ಯೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ರೈತ ನರೇಮ್ ರಾಜಶೇಖರ್ ರೆಡ್ಡಿ ಎಂಬುವರು ಇತ್ತೀಚೆಗಷ್ಟೇ ತಾನು ಬೆಳೆದ ಟೊಮ್ಯಾಟೊವನ್ನು ಮಾರಾಟ ಮಾಡಿ, 30 ಲಕ್ಷ ರೂಪಾಯಿ ಆದಾಯ ಗಳಿಸಿದ್ದರು (Tomato Price Rise). ಅದರ ಬೆನ್ನಲ್ಲೇ ಅವರನ್ನು ಹತ್ಯೆ ಮಾಡಿ, ಹಣವನ್ನೆಲ್ಲ ದೋಚಲಾಗಿದೆ.
62 ವರ್ಷದ ನರೇಮ್ ರಾಜಶೇಖರ್ ರೆಡ್ಡಿ ಬೋಡುಮಲ್ಲದಿನ್ನೆ ಹಳ್ಳಿಯವರು. ಇವರು ತಮ್ಮ ಹೊಲದಲ್ಲಿ ಭರ್ಜರಿ ಟೊಮ್ಯಾಟೊ ಬೆಳೆದಿದ್ದರು. ಹಳ್ಳಿಯಿಂದ ಸ್ವಲ್ಪ ದೂರದಲ್ಲಿ ಇರುವ ಹೊಲದಲ್ಲಿಯೇ ಚಿಕ್ಕ ಮನೆ ಮಾಡಿಕೊಂಡು ವಾಸವಾಗಿದ್ದರು. ಬುಧವಾರ ಬೆಳಗ್ಗೆ ರೆಡ್ಡಿಯವರು ಹಾಲು ಕೊಡಲೆಂದು ಗ್ರಾಮಕ್ಕೆ ಹೋಗುವಾಗ ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿದ್ದಾರೆ. ರೆಡ್ಡಿಯವರ ಕೈಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾರೆ. ಬಳಿಕ ಟವೆಲ್ನ್ನು ಕುತ್ತಿಗೆಗೆ ಹಾಕಿ ಗಟ್ಟಿಯಾಗಿ ಕಟ್ಟಿದ್ದಾರೆ. ಇದರಿಂದ ರೈತ ರೆಡ್ಡಿ ಉಸಿರು ಹೋಗಿದೆ. ನರೇಮ್ ರಾಜಶೇಖರ್ ರೆಡ್ಡಿ ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಈ ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: Suniel Shetty: ದರ ಏರಿಕೆಯಿಂದಾಗಿ ಟೊಮೆಟೊ ತಿನ್ನುವುದನ್ನೇ ಕಡಿಮೆ ಮಾಡಿದ್ದೇನೆ ಎಂದ ಸುನೀಲ್ ಶೆಟ್ಟಿ
ಘಟನೆ ಬಗ್ಗೆ ಮಾಹಿತಿ ನೀಡಿದ ರೆಡ್ಡಿ ಅವರ ಪತ್ನಿ ‘ಹಂತಕರು ಮೊದಲು ಟೊಮ್ಯಾಟೊ ಖರೀದಿಸಲು ಬಂದ ಗ್ರಾಹಕರಂತೆ ವರ್ತಿಸಿದ್ದಾರೆ. ಮೊದಲು ಮನೆಗೆ ಬಂದರು. ರೆಡ್ಡಿ ಬಗ್ಗೆ ಕೇಳಿದರು. ಆದರೆ ಅವರಿಲ್ಲ ಎಂದು ಹೇಳುತ್ತಿದ್ದಂತೆ ಅಲ್ಲಿಂದ ಹೋಗಿದ್ದಾರೆ. ದಾರಿಯಲ್ಲಿ ಅಡ್ಡಗಟ್ಟಿ ಕೊಂದಿದ್ದಾರೆ’ ಎಂದು ತಿಳಿಸಿದ್ದಾರೆ. ಕೊಲೆಯಾದ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ‘ಒಂದೆರಡು ದಿನಗಳ ಹಿಂದಷ್ಟೇ ರೆಡ್ಡಿಯವರು 30 ಲಕ್ಷಕ್ಕೆ ಟೊಮ್ಯಾಟೊ ಮಾರಿದ್ದರು. ಅದು ಊರಲ್ಲಿ ದೊಡ್ಡ ಸುದ್ದಿಯಾಗಿತ್ತು. ಹಣಕ್ಕಾಗಿಯೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ನಾವು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಡಿಸಿಪಿ ಕೆ.ಕೇಸಪ್ಪಾ ತಿಳಿಸಿದ್ದಾರೆ.