ದೆಹಲಿಯ ಹರಿನಗರದಲ್ಲಿ ಮಂಗಳವಾರ ಒಂದೇ ಮನೆಯ ಮೂವರ ಭೀಕರ ಹತ್ಯೆಯಾಗಿದೆ. ಪತಿ-ಪತ್ನಿ ಮತ್ತು ಅವರ ಮನೆ ಕೆಲಸದಾಕೆಯನ್ನು ಇಬ್ಬರು ಯುವಕರು ಸೇರಿ, ಕುತ್ತಿಗೆ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸಮೀರ್ ಅಹುಜಾ (38), ಶಾಲು (35) ಮತ್ತು ಇವರ ಮನೆ ಕೆಲಸದಾಕೆ ಸ್ವಪ್ನಾ (33) ಮೃತರು. ಈ ಹತ್ಯೆ ಆರೋಪಿಗಳಾದ ಸಚಿನ್ (19) ಮತ್ತು ಸುಜಿತ್ (21)ನನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಸಚಿನ್ ನಜಾಫ್ಗಡ್ ನಿವಾಸಿಯಾಗಿದ್ದು, ಸುಜೀತ್ ಉತ್ತಮ್ನಗರ ನಿವಾಸಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಘನಶ್ಯಾಮ ಬನ್ಸಾಲ್ ಹೇಳಿದ್ದಾರೆ.
ಇವರ ಮನೆ ನಾಲ್ಕಂತಸ್ತಿನ ಕಟ್ಟಡವಾಗಿದ್ದು, ಶಾಲು ಮತ್ತು ಮನೆ ಕೆಲಸದಾಕೆ ಸ್ವಪ್ನಾ ಶವ ಗ್ರೌಂಡ್ ಫ್ಲೋರ್ ಸಿಕ್ಕಿದೆ. ಇವರಿಬ್ಬರ ಹತ್ಯೆಯೂ ಒಂದೇ ಮಾದರಿಯಲ್ಲೇ ಆಗಿದೆ. ಅಂದರೆ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಹಾಗೇ ಸಮೀರ್ ಶವ ಮೊದಲ ಅಂತಸ್ತಿನಲ್ಲಿ ಸಿಕ್ಕಿದೆ. ಆತನ ಮುಖ-ತಲೆಯ ಮೇಲೆಲ್ಲ ವಿಪರೀತ ಗಾಯಗಳಾಗಿದ್ದವು. ಹರಿತವಾದ ವಸ್ತುಗಳಿಂದ ಇರಿದಿದ್ದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 8ಗಂಟೆ ಹೊತ್ತಿಗೆ ಸ್ವಪ್ನಾ ಮನೆಕೆಲಸಕ್ಕೆಂದು ಬಂದಿದ್ದಳು. ಅದೇ ಹೊತ್ತಿಗೆ ಈ ಇಬ್ಬರು ಯುವಕರು ಬೈಕ್ನಲ್ಲಿ ಬಂದು ಹತ್ಯೆ ಮಾಡಿ ಹೋಗಿದ್ದಾರೆ. ದುಷ್ಕರ್ಮಿಗಳು ಮನೆಯ ಬಳಿ ಬಂದು ಇಳಿದು, ಒಳಹೋದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹತ್ಯೆಯ ಮುಖ್ಯ ಪಿತೂರಿಗಾರ ತಪ್ಪಿಸಿಕೊಂಡಿದ್ದಾನೆ. 9 ಗಂಟೆಗೆ ಸಮೀರ್ನ ಚಾಲಕ ಬಂದು ಮನೆಯೊಳಗೆ ಹೋದಾಗ ಅಲ್ಲಿ ಮೂವರ ಶವ ಬಿದ್ದಿತ್ತು. ಅದನ್ನು ನೋಡಿ ಆತ ನಮಗೆ ಮಾಹಿತಿ ನೀಡಿದ್ದಾನೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಆ ದಂಪತಿಯ ಪುಟ್ಟ ಮಗಳನ್ನು ಜೀವ ಸಹಿತ ಬಿಟ್ಟಿದ್ದಾರೆ. ಹತ್ಯೆ ನಡೆದ ಸಂದರ್ಭದಲ್ಲಿ ಆಕೆ ನಿದ್ರಿಸುತ್ತಿದ್ದಳು, ಅವಳಿಗೆ ಏನೂ ತೊಂದರೆ ಮಾಡಿಲ್ಲ ಎಂದು ಹೇಳಿದ್ದಾರೆ.
ಹತ್ಯೆಗೆ ಕಾರಣವೇನು?
ಶಾಲು ಒಂದು ಸಲೂನ್ ನಡೆಸುತ್ತಿದ್ದರು. ಅದರಲ್ಲಿ ಈ ಕೊಲೆಯ ಸಂಚುಕೋರ ಮತ್ತು ಅವನ ಪ್ರೇಯಸಿ ಕೆಲಸ ಮಾಡುತ್ತಿದ್ದರು. ಆದರೆ 10 ದಿನಗಳ ಹಿಂದೆ ಇವರಿಬ್ಬರನ್ನೂ ಶಾಲು ಕೆಲಸದಿಂದ ತೆಗೆದುಹಾಕಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆಂಬ ವಿಷಯ ಶಾಲುಗೆ ಗೊತ್ತಾಗಿತ್ತು. ಅಷ್ಟೇ ಅಲ್ಲ ವೃತ್ತಿಯಲ್ಲಿ ಬದ್ಧತೆಯಿಲ್ಲ, ಶಿಸ್ತಿಲ್ಲ ಎಂಬ ಕಾರಣಕ್ಕೆ ಅವರಿಬ್ಬರನ್ನೂ ಶಾಲು ಮನೆಗೆ ಕಳಿಸಿದ್ದರು. ಸಮೀರ್ ಕೂಡ ಇಬ್ಬರಿಗೂ ಸಿಕ್ಕಾಪಟೆ ಬೈದು ಕಳಿಸಿದ್ದ. ಇದರಿಂದ ಅವಮಾನಿತಗೊಂಡಿದ್ದ ಆ ಇಬ್ಬರು ಹೇಗಾದರೂ ಶಾಲು-ಸಮೀರ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದರು. ಇದೇ ವಿಚಾರವನ್ನು ಅವರ ಸ್ನೇಹಿತರಾದ ಸುಜಿತ್ ಮತ್ತು ಸಚಿನ್ ಜತೆ ಚರ್ಚಿಸಿದರು. ಮಂಗಳವಾರ ಬೆಳಗ್ಗೆ ಸುಜಿತ್-ಸಚಿನ್ ಈ ಮನೆಗೆ ಆಗಮಿಸುವುದಕ್ಕೂ ಮೊದಲು ಆ ಮುಖ್ಯ ಸಂಚುಕೋರ ಇಲ್ಲಿಗೆ ಭೇಟಿ ಕೊಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಲು ಬಂದ ಸಮಯದಲ್ಲಿ ಕೆಲಸದಾಕೆಯೂ ಇದ್ದಿದ್ದರಿಂದ ಅವಳನ್ನೂ ಕೊಂದು ಹೋಗಿದ್ದರು. ಅದರ ಜತೆಗೆ ಮನೆಯಲ್ಲಿದ್ದ ಲ್ಯಾಪ್ಟಾಪ್, ಡಿವಿಆರ್, ನಗದು ಸೇರಿ ಎಲ್ಲ ಅಮೂಲ್ಯ ವಸ್ತುಗಳನ್ನೂ ಕೊಂಡೊಯ್ದಿದ್ದರು ಎಂದೂ ಹೇಳಿದ್ದಾರೆ. ತನಿಖೆ ಪ್ರಾರಂಭಿಸಿದ್ದು, ಮುಖ್ಯ ಆರೋಪಿಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಆತ್ಮಹತ್ಯೆ ಮಾಡ್ಕೊಬೇಕು ಅನ್ನೋ ಯೋಚನೆ ಇದ್ದರೆ ಅದಕ್ಕಿಂತ ಮೊದಲು ಒಮ್ಮೆ ಇದನ್ನು ಓದಿ!