ತುಮಕೂರು: ತುಮಕೂರಿನಲ್ಲಿ ಪೊಲೀಸ್ ತುಪಾಕಿ (Tumkur Shoot out) ಸದ್ದು ಮಾಡಿದೆ. ನಿರಂತರವಾಗಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆಂಧ್ರದ ಹಿಂದೂಪುರ ಮೂಲದ ರಿಜ್ವಾನ್ ಎಂಬಾತನಿಗೆ ಗುಂಡೇಟು ಬಿದ್ದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಈಜೀಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ.
ಆರೋಪಿ ರಿಜ್ವಾನ್ ಒಟ್ಟು 15ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳೆದ ಒಂದು ವಾರದ ಹಿಂದೆ ಎ1 ಆರೋಪಿ ಚಿನ್ನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ (ಜೂ.24) ಖಚಿತ ಮಾಹಿತಿ ಮೇರೆಗೆ ಎ2 ಆರೋಪಿ ರಿಜ್ವಾನ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ, ಸಿಪಿಐ ಹನುನಂತರಾಯಪ್ಪ, ಪಿಎಸ್‌ಐ ಶ್ರೀನಿವಾಸ್, ದಾದಪೀರ್, ಹಾಗೂ ಪೊಲೀಸ್ ಸಿಬ್ಬಂದಿ ರಮೇಶ್ ತಂಡ ತೆರಳಿತ್ತು. ಹೊಸಪೇಟೆಯಿಂದ ಪೊಲೀಸ್ ಜೀಪ್‌ನಲ್ಲಿ ಮಧುಗಿರಿಗೆ ಕರೆತರುತ್ತಿದ್ದಾಗ, ಬಹಿರ್ದೆಸೆಗೆ ಹೋಗುವುದಾಗಿ ಈಜಿಹಳ್ಳಿ ಕ್ರಾಸ್ ಬಳಿ ಇಳಿದಿದ್ದ. ಈ ವೇಳೆ ಪೊಲೀಸ್ ಪೇದೆ ರಮೇಶ್ ಮೇಲೆ ರಿಹ್ವಾನ್ ಬಿಯರ್ ಬಾಟಲ್ ಎಸೆದು ಹಲ್ಲೆ ನಡೆಸಿ, ಪರಾರಿ ಆಗಲು ಯತ್ನಿಸಿದ್ದ. ಪೊಲೀಸರು ಶರಣಾಗುವಂತೆ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಕರೆ ತಂದಿದ್ದಾರೆ.
ಇದನ್ನೂ ಓದಿ: Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು
ಬಿಯರ್ ಬಾಟೆಲ್‌ನಿಂದ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ರಮೇಶ್‌ಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಿಜ್ವಾನ್‌ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ರಿಜ್ವಾನ್ ಮೇಲೆ ಮಧುಗಿರಿ 3, ಮಿಡಗೇಶಿ 4, ಬಡವನಹಳ್ಳಿ 2, ಕೊರಟಗೆರೆ 1, ಕೊಡಿಗೇನಹಳ್ಳಿ 2 ಹಾಗೂ ಮಡಕಶಿರಾ 1, ಪಟ್ಟನಾಯಕನಹಳ್ಳಿ 2, ಗೌರಿಬಿದನೂರು 1 ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿವೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ ಎರಡು ತಿಂಗಳಿಂದ ಸುಮಾರು 18 ಸರಗಳ್ಳತನ ಆಗಿತ್ತು. ಹಳ್ಳಿಗಳಿಗೆ ಹೋಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದರು. ಮಧುಗಿರಿ ಡಿವೈಎಸ್‌ಪಿ ನೇತೃತ್ವದಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ತಂಡ ರಚನೆ ಮಾಡಲಾಗಿತ್ತು. A1 ಆರೋಪಿ ಚಿನ್ನು ಎಂಬಾತನನ್ನು ಮೊದಲಿಗೆ ಬಂಧಿಸಲಾಗಿತ್ತು. A2 ಆರೋಪಿ ರಿಜ್ವಾನ್ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು. ಇದೀಗ ಹೊಸಕೋಟೆಯಿಂದ ಆರೋಪಿ ರಿಜ್ವಾನ್‌ನನ್ನು ಬಂಧಿಸಿ ಕರೆತರುವಾಗ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಈಜಿಹಳ್ಳಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬಿಯರ್ ಬಾಟಲ್‌ನಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಮಧುಗಿರಿ ಸಿಪಿಐ ಹನುಮಂತರಾಯಪ್ಪ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡು ಹೊಡೆದು ಬಂಧಿಸಿದ್ದಾರೆಂದು ಮಾಹಿತಿ ಬಂದಿದೆ. ಪೊಲೀಸ್ ಸಿಬ್ಬಂದಿಯ ಎಡಗೈಗೆ ಗಾಯ ಆಗಿದ್ದು, ಮಧುಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಆರೋಪಿಗಳು ಕದ್ದ ಚಿನ್ನವನ್ನು ರಿಕವರಿ ಮಾಡಲಾಗಿದೆ. 500 ಗ್ರಾಂ ಚಿನ್ನವನ್ನ ರಿಕವರಿ ಮಾಡಲಾಗಿದೆ ಎಂದರು.
ಕೊಡಗಿನಲ್ಲಿ ಮತ್ತೆ ಮಾರ್ಧನಿದ ಗುಂಡಿನ ಸದ್ದು
ಕೊಡಗಿನ ಕುಶಾಲನಗರಲ್ಲಿ ತಡರಾತ್ರಿ 12 ಗಂಟೆಗೆ ಗುಂಡಿನ ಶಬ್ಧ ಕೇಳಿ ಬಂದಿದೆ. ಅನುದೀಪ್ ( ಡುಮ್ಮಿ) ಮತ್ತು ಶಶಿಕುಮಾರ್ ಗೌಡ (ಎಂಎಲ್ಎ ಶಶಿ) ಇವರಿಬ್ಬರು ಸ್ನೇಹಿತರಾಗಿದ್ದಾರೆ. ತಡರಾತ್ರಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಈ ವೇಳೆ ಅನುದೀಪ್ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಅದೃಷ್ಟವಶಾತ್ ಶಶಿ ಕಾಲಿಗೆ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಶಾಲನಗರದ ಚೌಡೇಶ್ವರಿ ಬಡಾವಣೆ ಗುಮ್ಮನಕೊಲ್ಲಿಯಲ್ಲಿ ಘಟನೆ ನಡೆದಿದೆ. ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ