ಡೆಹ್ರಾಡೂನ್: ಉತ್ತರಾಖಂಡ್ನ ರಿಷಿಕೇಶ್ನಲ್ಲಿ ನಡೆದ 19 ವರ್ಷದ ಯುವತಿ ಕೊಲೆ ಪ್ರಕರಣದಲ್ಲಿ, ಅಲ್ಲಿನ ಪ್ರಮುಖ ಬಿಜೆಪಿ ನಾಯಕನ ಮಗನೊಬ್ಬನ ಬಂಧನವಾಗಿದೆ. ಆತನ ಮಾಲೀಕತ್ವದ ವನತಾರಾ ರೆಸಾರ್ಟ್ನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿದೆ. ಯುವತಿಯ ಹತ್ಯೆಯಾದ ಬೆನ್ನಲ್ಲೇ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಪ್ರಾರಂಭವಾಗಿತ್ತು. ಈ ಪ್ರಕರಣವನ್ನು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಧಮಿ ಗಂಭೀರವಾಗಿ ಪರಿಗಣಿಸಿದ್ದಾರೆ. ಬಿಜೆಪಿ ನಾಯಕನ ಪುತ್ರನ (ಈ ಕೇಸ್ನ ಆರೋಪಿ) ಒಡೆತನದಲ್ಲಿರುವ ರೆಸಾರ್ಟ್ನ್ನು ನೆಲಸಮ ಮಾಡಲು ಅವರು ಆದೇಶ ಕೊಟ್ಟಿದ್ದರು.
ರಿಸಪ್ಷನಿಸ್ಟ್ ಆಗಿದ್ದವಳ ಕೊಲೆ
ಉತ್ತರಾಖಂಡ್ನ ವನತಾರಾ ರೆಸಾರ್ಟ್ನಲ್ಲಿ ರಿಸಪ್ಷನಿಸ್ಟ್ (ಸ್ವಾಗತಕಾರಿಣಿ) ಆಗಿದ್ದ 19ವರ್ಷದ ಹುಡುಗಿ ಅಂಕಿತಾ ಭಂಡಾರಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಳು. ಬಳಿಕ ಕಾಲುವೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅಂಕಿತಾಳನ್ನು ರೆಸಾರ್ಟ್ನಲ್ಲಿ ವೇಶ್ಯಾ ವಾಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಲೀಕ ಒತ್ತಾಯಿಸುತ್ತಿದ್ದ. ಅದಕ್ಕೆ ಆಕೆ ಒಪ್ಪಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಮಾಲೀಕ ತನ್ನ ರೆಸಾರ್ಟ್ನಲ್ಲಿದ್ದ ಇನ್ನಿಬ್ಬರು ಉದ್ಯೋಗಿಗಳ ಜತೆ ಸೇರಿ, ಅಂಕಿತಾಳನ್ನು ಒಂದು ಪ್ರಪಾತ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಗಂಗಾನದಿಗೆ ತಳ್ಳಿ ಹತ್ಯೆ ಮಾಡಿದ್ದು ಸಾಬೀತಾಗಿದೆ. ಬಂಧಿತನಾಗಿರುವ ಆರೋಪಿ, ಬಿಜೆಪಿ ನಾಯಕನ ಪುತ್ರ, ತಾವೇ ಅಂಕಿತಾಳನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಪ್ರಮುಖ ಆರೋಪಿ ಪುಲಕಿತ್ ಆರ್ಯಾ (35), ಉತ್ತರಾಖಂಡ್ನ ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ವಿನೋದ್ ಆರ್ಯಾ ಅವರ ಮಗ. ಈತ ನಡೆಸುತ್ತಿದ್ದ ವನತಾರಾ ರೆಸಾರ್ಟ್ಗೆ ಅಂಕಿತಾ ಇದೇ ವರ್ಷ ಆಗಸ್ಟ್ 28ರಂದು ಸ್ವಾಗತಕಾರಿಣಿಯಾಗಿ ಸೇರಿಕೊಂಡಿದ್ದಳು. ತಿಂಗಳಿಗೆ 10 ಸಾವಿರ ರೂಪಾಯಿ ಸಂಬಳ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಪುಲಕಿತ್, ರೆಸಾರ್ಟ್ಗೆ ಬಂದವರ ಜತೆ ನೀನು ಲೈಂಗಿಕವಾಗಿ ಸಹಕರಿಸಬೇಕು ಎಂದು ಆಕೆಗೆ ಇನ್ನಿಲ್ಲದ ಒತ್ತಾಯ ಮಾಡುತ್ತಿದ್ದ. ಸ್ವತಃ ಆತನೇ ಆಕೆಯನ್ನು ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದ. ಈ ಬಗ್ಗೆ ಅಂಕಿತಾ ತನ್ನ ಸ್ನೇಹಿತೆಗೆ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಕೂಡ ಕಳಿಸಿದ್ದಳು. ‘ರೆಸಾರ್ಟ್ಗೆ ಬಂದ ಅತಿಥಿಗಳಿಗೆ ಹೆಚ್ಚುವರಿ ಸೇವೆ ಸಲ್ಲಿಸು ಎಂದು ನನ್ನನ್ನು ಪೀಡಿಸುತ್ತಿದ್ದಾರೆ. ನನಗಿಲ್ಲಿ ಅಭದ್ರತೆ ಕಾಡುತ್ತಿದೆ. ಅಷ್ಟಲ್ಲದೆ, ಇಲ್ಲಿನ ಓನರ್ ಪುಲಕಿತ್ ಕೂಡ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದ’ ಎಂದು ಸಂದೇಶ ಕಳಿಸಿ, ನೋವು ತೋಡಿಕೊಂಡಿದ್ದಳು.
ಸದ್ಯ ಪುಲಕಿತ್ ಆರ್ಯಾ ಜತೆ ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್, ಅಸಿಸ್ಟಂಟ್ ಮ್ಯಾನೇಜರ್ ಅಂಕಿತ್ ಗುಪ್ತಾ ಅರೆಸ್ಟ್ ಆಗಿದ್ದು, ಎಲ್ಲರನ್ನೂ 14ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇಂಥ ಅಪರಾಧಗಳಿಗೆ ಕಠಿಣ ಶಿಕ್ಷೆ ಕಟ್ಟಿಟ್ಟಬುತ್ತಿ ಎಂದಿರುವ ಉತ್ತರಾಖಂಡ ಸಿಎಂ ಪುಷ್ಕರ್ ಧಮಿ, ರಾಜ್ಯದ ಎಲ್ಲ ಕಡೆ ಇರುವ ರೆಸಾರ್ಟ್ಗಳನ್ನೂ ಆಯಾ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಇಂಥ ಚಟುವಟಿಕೆಗಳು ನಡೆಯದಂತೆ ತಡೆಯಬೇಕು ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿ: Flash Flood | ಹಿಮಾಚಲ ಪ್ರದೇಶ, ಉತ್ತರಾಖಂಡ್‌ನಲ್ಲಿ ಪ್ರವಾಹ ವಿಕೋಪಕ್ಕೆ 37 ಬಲಿ