ಡೆಹ್ರಾಡೂನ್: ಉತ್ತರ ಪ್ರದೇಶ ಪೊಲೀಸರು ಮತ್ತು ಉತ್ತರಾಖಂಡ್ನ ಭರತ್ಪುರ ಗ್ರಾಮನ ಜನರ ನಡುವೆ ನಡೆದ ಸಂಘರ್ಷದಲ್ಲಿ ಅಲ್ಲಿನ ಬಿಜೆಪಿ ನಾಯಕರೊಬ್ಬರ ಪತ್ನಿ ಮೃತಪಟ್ಟಿದ್ದಾರೆ. ಅಲ್ಲಿಗೆ ತೆರಳಿದ್ದ ಉತ್ತರ ಪ್ರದೇಶ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೇ, ಹಳ್ಳಿಗರಿಂದ ಥಳಿತಕ್ಕೆ, ಹಲ್ಲೆಗೆ ಒಳಗಾಗಿ ಐವರು ಪೊಲೀಸರೂ ಗಾಯಗೊಂಡಿದ್ದಾರೆ.
ಮರಳು ಅಕ್ರಮ ಗಣಿಗಾರಿಕೆ ಕೇಸ್ನ ಪ್ರಮುಖ ಆರೋಪಿ ಜಾಫರ್ ಎಂಬಾತನನ್ನು ಹುಡುಕಿಕೊಂಡು ಉತ್ತರ ಪ್ರದೇಶ ಮೊರಾದಾಬಾದ್ ಪೊಲೀಸರು ಉತ್ತರಾಖಾಂಡ್ನ ಭರತ್ಪುರ ಗ್ರಾಮಕ್ಕೆ ಬಂದಿದ್ದರು. ಆತ ಇಲ್ಲಿಯೇ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿದ್ದರಿಂದಲೇ ಅವರಿಲ್ಲಿ ಆಗಮಿಸಿದ್ದರು. ಈ ಜಾಫರ್ ದೊಡ್ಡ ಕ್ರಿಮಿನಲ್ ಆಗಿದ್ದು, ಆತನ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಕೂಡ ಕಟ್ಟಲಾಗಿತ್ತು. ಪೊಲೀಸರು ಆತನ ಬೆನ್ನ ಹಿಂದೆ ಬಿದ್ದು ಬಹುದಿನಗಳೇ ಆಗಿತ್ತು.
ಹೀಗೆ ಭರತ್ಪುರಕ್ಕೆ ಬಂದ ಉತ್ತರ ಪ್ರದೇಶ ಪೊಲೀಸರನ್ನು ನೋಡಿ ಅಲ್ಲಿನ ಜನರು ಉಗ್ರರೂಪ ತಾಳಿದ್ದಾರೆ. ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಪೊಲೀಸರನ್ನು ಮುಂದಕ್ಕೆ ಹೋಗಲು ಬಿಡದೆ, ಸುತ್ತುವರಿದಿದ್ದಾರೆ. ಅಷ್ಟಲ್ಲದೆ, ಅವರ ಕೈಯಲ್ಲಿದ್ದ ಶಸ್ತ್ರಗಳನ್ನೂ ಕಿತ್ತುಕೊಂಡಿದ್ದರು. ಪೊಲೀಸರು ಪ್ರತಿರೋಧಿಸಿದರು. ಈ ಗಲಾಟೆ ಘರ್ಷಣೆಯ ಹಂತ ತಲುಪಿತ್ತು. ಹಳ್ಳಿಯ ಜನ ಪೊಲೀಸರ ಮೇಲೆ ಗುಂಡಿನ ದಾಳಿಗೂ ಮುಂದಾದರು, ಅದಕ್ಕೆ ಪ್ರತಿಯಾಗಿ ಪೊಲೀಸರೂ ಫೈರಿಂಗ್ ನಡೆಸಿದರು. ಇದೇ ವೇಳೆ ಕೆಲಸದಿಂದ ಮನೆಗೆ ಬರುತ್ತಿದ್ದ ಗುರ್ಪ್ರೀತ್ ಕೌರ್ ಯುಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇವರು ಸ್ಥಳೀಯ ಬಿಜೆಪಿ ನಾಯಕ ಗುರ್ತಾಜ್ ಭುಲ್ಲಾರ್ ಅವರ ಪತ್ನಿ. ಮೊರಾದಾಬಾದ್ನಿಂದ ಅಲ್ಲಿಗೆ ಹೋಗಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಹಾಗೇ, ಗ್ರಾಮಸ್ಥರ ಹಲ್ಲೆಯಿಂದ ಗಾಯಗೊಂಡ ಐವರು ಪೊಲೀಸರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Receptionist Murder | ವಿಶೇಷ ಸೇವೆ ನೀಡಲೊಪ್ಪದ ಕಾರಣ ಯುವತಿಯ ಹತ್ಯೆ, ಬಿಜೆಪಿ ನಾಯಕನ ರೆಸಾರ್ಟ್‌ಗೆ ಬೆಂಕಿ