ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರ್ ಸಂತೋಷ್ (Varthur Santhosh) ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜತೆಗೆ ಅವರ ವಿರುದ್ಧ ಹಲವರು ಟೀಕೆ ಮಾಡುವವರು ಇದ್ದಾರೆ.ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಹುಲಿ ಉಗುರು ಪ್ರಕರಣದಿಂದಾಗಿ ಜೈಲು ಪಾಲಾಗಿದ್ದ ವರ್ತೂರು ಸತೋಷ್ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಾಣಿ ಸಾಗಾಟ ನಿಯಮವನ್ನು ಉಲ್ಲಂಘಿಸಿದ್ದಾರೆಂದು ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘಿಸಿ ಅಸುರಕ್ಷಿತ ರೀತಿಯಿಂದ ಪ್ರಾಣಿಗಳನ್ನು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವರ್ತೂರು ಸಂತೋಷ್ ಅನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಸಹ ಮಾಡಲಾಗಿದೆ ಎನ್ನಲಾಗುತ್ತಿದೆ. ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿರುವ ವರ್ತೂರು ಸಂತೋಷ್‌ಗೆ ಸಂಕಷ್ಟ ಎದುರಾಗಿದೆ. ರೇಸ್ ಮಾಡಲು ಮುಂದಾಗಿದ್ದ ವರ್ತೂರ್ ಒಂದರಲ್ಲಿ ಒಂಬತ್ತು ಹೋರಿಗಳನ್ನು ತುಂಬಿ ಸಾಗಾಟ ಮಾಡಿದ್ದರಂತೆ ಅಲ್ಲದೆ ಅದೇ ಟ್ರಕ್ನಲ್ಲಿ ಕೆಲವು ವಸ್ತುಗಳನ್ನು ಸಹ ತುಂಬಿಸಿದ್ದರಂತೆ. ಇದು ಪ್ರಾಣಿ ಸಾಗಾಟ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಅಧಿಕಾರಿ ಹರೀಶ್ ವರ್ತೂರು ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಲು ಸಹ ಹರೀಶ್ ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!
ಹಳ್ಳಿಕಾರ್ʼ ವರ್ತೂರ್ ಸಂತೋಷ್ (Varthur Santhosh) ಅವರು ʻಬಿಗ್ ಬಾಸ್ ಸೀಸನ್ ಹತ್ತರʼ 4ನೇ ರನ್ನರ್ ಅಪ್ ಆಗಿದ್ದರು. ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವೇದಿಕೆ ಮೇಲೆ ವರ್ತೂರ್ ಅವರು ಕಿಚ್ಚ ಸುದೀಪ್ ಅವರಿಗೆ ರೇಸ್‌ಗೆ ಆಹ್ವಾನ ನೀಡಿದ್ದರು. ಸುದೀಪ್ ಕೂಡ ರೇಸ್‌ಗೆ ಬರುವುದಾಗಿ ಹೇಳಿದ್ದರು.
ಹುಲಿ ಉಗುರು ಹೊಂದಿರುವ ಆರೋಪ ಬಂದು ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದರು. ಸಂತೋಷ್ ಮದುವೆ ಬಗ್ಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆಯೂ ಅವರಿಗೆ ಪ್ರಶ್ನೆ ಎದುರಾಗಿತ್ತು. ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ವರ್ತೂರು ಸಂತೋಷ್. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರು ಪಾಲ್ಗೊಳ್ಳುತ್ತಿರಲಿಲ್ಲ. ಹಾಗಾಗಿಯೇ ಪ್ರತಿ ವಾರ ನಾಮಿನೇಷನ್ ಆಗುವಾಗಲೂ ಈ ಕಾರಣ ಎಲ್ಲರ ಬಾಯಿಯಲ್ಲಿ ಬರುತ್ತಿತ್ತು. ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರು ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಸಾಕಷ್ಟು ನೆನಪುಗಳನ್ನು ಬಿಗ್‌ಬಾಸ್ ಮನೆಯೊಳಗಿಂದ ಹೊತ್ತು ಬಂದಿದ್ದರು.