ಕಾರವಾರ: ಬಸ್‌ಗೆ ಓವರ್‌ಟೇಕ್ ಮಾಡಲು ಜಾಗವನ್ನೂ ಬಿಡದ ಸ್ಕೂಟಿ ಚಾಲಕನೊಬ್ಬ ಬಳಿಕ ತನ್ನ ವಿಡಿಯೊ ಮಾಡಿದ್ದಾರೆಂಬ ಕಾರಣಕ್ಕೆ ಬಸ್ ಅನ್ನು ಅಡ್ಡಗಟ್ಟಿ ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಹಾಗೂ ನಿರ್ವಾಹಕನ ಮೇಲೆ ಹಲ್ಲೆ (Assault case) ನಡೆಸಿದ್ದಾನೆ. ಈ ವಿಡಿಯೊ ಈಗ ವೈರಲ್ (Video Viral) ಆಗಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಜಾಂಬಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಶಿರವಾಡ ಮೂಲದ ಸುಭಾಷ್ ಬಾಡ್ಕರ್ ಹಲ್ಲೆ ಮಾಡಿದ ಯುವಕ ಎಂದು ಗೊತ್ತಾಗಿದೆ.
ಯುವಕನೊಬ್ಬ ಕುಡಿದು ಸ್ಕೂಟಿ ಚಲಾಯಿಸುತ್ತಿದ್ದುದಲ್ಲದೆ, ಬಸ್‌ಗೆ ಮುಂದಕ್ಕೆ ಹೋಗಲು ಜಾಗವನ್ನೂ ಬಿಡುತ್ತಿರಲಿಲ್ಲ. ಅಡ್ಡಾದಿಡ್ಡಿಯಾಗಿ ವಾಹನ ಚಲಾವಣೆ ಮಾಡುತ್ತಿದ್ದನ್ನು ಕಂಡ ಚಾಲಕ ಸಾಕಷ್ಟು ಬಾರಿ ಹಾರ್ನ್ ಮಾಡಿದ್ದಾರೆ. ಆದರೆ, ಆತ ಪಕ್ಕಕ್ಕೂ ಹೋಗದೆ, ಬಸ್‌ಗೆ ದಾರಿಯನ್ನೂ ಬಿಡದೆ ಸತಾಯಿಸುತ್ತಿದ್ದ ಇದರಿಂದ ಕುಪಿತಗೊಂಡ ಚಾಲಕ ಆತನ ವರ್ತನೆ ಸಹಿತ ಚಾಲನೆಯನ್ನು ವಿಡಿಯೊ ಮಾಡಿಕೊಂಡಿದ್ದಾರೆ.
ವಿಡಿಯೊ ಮಾಡಿಕೊಂಡ ಚಾಲಕ
ಕಾರವಾರದಿಂದ ಕಡವಾಡಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಇದಾಗಿದ್ದು, ಸ್ಕೂಟಿಯಲ್ಲಿ ತೆರಳುತ್ತಾ ಬಸ್ ಓವರ್‌ಟೇಕ್ ಮಾಡಲು ಬಿಡದೆ ಯುವಕನಿಂದ ಉದ್ಧಟತನ ಮೆರೆಯಲಾಗಿದ್ದಕ್ಕೆ ಚಾಲಕ ವಿಡಿಯೊ ಮಾಡಿಕೊಂಡಿದ್ದಾರೆ. ಅಸಹನೆಗೊಂಡು ದಾರಿ ಬಿಡಲು ಗೊತ್ತಾಗುವುದಿಲ್ಲವಾ ಎಂದು ಕೂಗಿದ್ದಾರೆ ಕೂಡ. ಆದರೆ, ಇದನ್ನು ಸಹಿಸದ ಯುವಕ ಸುಭಾಷ್ ಬಾಡ್ಕರ್, ಜಾಂಬಾ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ತನ್ನ ಸ್ಕೂಟಿಯನ್ನು ನಿಲ್ಲಿಸಿದ್ದಾನೆ.
ಬಸ್ ಅಡ್ಡಗಟ್ಟಿ ಹಲ್ಲೆ
ಸೀದಾ ಹೋಗಿ ಜಗಳಕ್ಕೆ ಇಳಿದಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ನಿರ್ವಾಹಕನ ಮೇಲೆ ಮೊದಲು ಹಲ್ಲೆ ನಡೆಸಿದ್ದಾನೆ. ಬಳಿಕ ಉದ್ದಟತನದ ಡ್ರೈವಿಂಗ್ ಮಾಡಿದ್ದಕ್ಕೆ ಹಾಗೂ ಹಲ್ಲೆ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ ಚಾಲಕನಿಗೂ ಎರಡು ಬಾರಿಸಿದ್ದಾನೆ. ಈ ವೇಳೆ ಸಾಕಷ್ಟು ಗದ್ದಲ ನಡೆದಿದೆ.
ಮಹ್ಮದ್ ಇಸಾಕ್ ಹಲ್ಲೆಗೊಳಗಾದ ಬಸ್ ಚಾಲಕರಾಗಿದ್ದಾರೆ. ಇವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಯುವಕ ಸುಭಾಷ್ ಕುಡಿದಿದ್ದ ಎಂದು ಗೊತ್ತಾಗಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಲ್ಲೆ ವಿಡಿಯೊವನ್ನು ಸಹ ಪ್ರಯಾಣಿಕರು, ಸಾರ್ವಜನಿಕರು ವಿಡಿಯೊ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಕಾರವಾರ: ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಆನಂದ ನಗರದಲ್ಲಿ ನಡೆದಿದೆ. ಬಸವರಾಜ ಮಲ್ಲೂರ(42) ಎಂಬವರು ಆತ್ಮಹತ್ಯೆಗೆ ಶರಣಾದ ರೈತ.
ಅಡಿಕೆ, ಜೋಳದ ಬೆಳೆ ಬೆಳೆಯಲು ಸಾಲ ಮಾಡಿದ್ದ ರೈತ ಬಸವರಾಜ, ಬೆಳೆ ಹಾನಿಯಿಂದ ಸಾಲ ಮರುಪಾವತಿ ಮಾಡಿರಲಿಲ್ಲ. ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ನಿಂದ ನಿರಂತರ ಕಿರುಕುಳ ಬಂದಿದ್ದು, ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Drunken Driving: ಎರ‍್ರಾಬಿರ‍್ರಿ ಟಿಪ್ಪರ್ ಚಲಾಯಿಸಿ ಪಾದಚಾರಿಯನ್ನು ಕೊಂದ ಪಾನಮತ್ತ
ಯಾದಗಿರಿ: ಪಾನಮತ್ತನಾಗಿ ಎರ‍್ರಾಬಿರ‍್ರಿ ಟಿಪ್ಪರ್ ಚಾಲನೆ ಮಾಡಿ (Drunken Driving) ಅಪಘಾತ ಎಸಗಿ (Road Accident) ಪಾದಚಾರಿಯೊಬ್ಬರನ್ನು ಕೊಂದುಹಾಕಿದ, ರಸ್ತೆ ಪಕ್ಕದ ಮರ, ಟ್ರಾಕ್ಟರ್ ಇತ್ಯಾದಿ ಘಾಸಿಗೊಳಿಸಿದ ಟಿಪ್ಪರ್ ಚಾಲಕನನ್ನು (Tipper Driver) ವಶಕ್ಕೆ ಪಡೆಯಲಾಗಿದೆ.
ಯಾದಗಿರಿ (Yadagiri news) ಜಿಲ್ಲೆಯ ಶಹಾಪುರ ನಗರದಲ್ಲಿ ನಸುಕಿನ ಜಾವ ಘಟನೆ ನಡೆದಿದೆ. ಸಾಹಿಲ್ ಪಟೇಲ್ (18) ಮೃತ ದುರ್ದೈವಿ. ಕುಡಿದ ಮತ್ತಿನಲ್ಲಿದ್ದ ಟಿಪ್ಪರ್ ಚಾಲಕ ಯದ್ವಾತದ್ವಾ ಟಿಪ್ಪರ್ ಚಲಾಯಿಸಿ ರಸ್ತೆ ಪಕ್ಕ ನಿಂತಿದ್ದ ಯುವಕನಿಗೆ ಗುದ್ದಿದ್ದಾನೆ. ಸಾಹಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಕೇಸ್; ಜೈಲಲ್ಲೇ ಕುಳಿತು ಸ್ಕೆಚ್ ಹಾಕಿದ್ದ ಮೊದಲ ಆರೋಪಿ!
ನಂತರ ರಸ್ತೆ ಪಕ್ಕದಲ್ಲಿ ಇದ್ದ ಮರ, ಟ್ರಾಕ್ಟರ್ ಹಾಗೂ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದು, ಸ್ಥಳದಿಂದ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಟಿಪ್ಪರ್ ಮೇಲೆ ಕಲ್ಲು ತೂರಾಟ ನಡೆಸಿ, ನಂತರ ಟಿಪ್ಪರ್ ಸಹಿತ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಪ್ಪರ್ ಚಾಲಕ ಜೀವನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.