ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ ಹತ್ಯೆ (Delhi Murder) ಪ್ರಕರಣ ಇನ್ನೂ ಹಸಿಯಾಗಿ ಇರುವಾಗಲೇ, ಇನ್ನೊಂದು ಭೀಕರ ಹತ್ಯೆ ನಡೆದಿದೆ. ಈ ಕೊಲೆಗೂ ಲವ್ ಜಿಹಾದ್ ಛಾಯೆ ಆವರಿಸಿದೆ. 16ವರ್ಷದ ಹಿಂದು ಹುಡುಗಿ ಸಾಕ್ಷಿಯನ್ನು ಮುಸ್ಲಿಂ ಯುವಕ ಮೊಹಮ್ಮದ್ ಸಾಹಿಲ್ ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ. ಆಕೆಗೆ 40ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ, 20ಕ್ಕೂ ಹೆಚ್ಚಿನ ಸಲ ಕಲ್ಲಿನಿಂದ ಜಜ್ಜಿದ್ದಾನೆ. ಸಾಕ್ಷಿಯನ್ನು ಸಾಹಿಲ್ ಕೊಂದ ದೃಶ್ಯವಿರುವ ಸಿಸಿಟಿವಿ ಫೂಟೇಜ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಸಾಹಿಲ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ‘ಕಳೆದ ಕೆಲವು ದಿನಗಳಿಂದ ಸಾಕ್ಷಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಳು. ಆಕೆಯ ನಿರ್ಲಕ್ಷ್ಯವನ್ನು ಸಹಿಸಲಾಗುತ್ತಿರಲಿಲ್ಲ. ಅದಕ್ಕೆ ಕೊಲೆ ಮಾಡಿದೆ’ ಎಂದು ಹೇಳಿಕೊಂಡಿದ್ದಾನೆ.
ದೆಹಲಿಯ ಉತ್ತರ ರೋಹಿಣಿ ಪ್ರದೇಶದ ಶಹಬಾದ್ ಡೇರಿ ಎಂಬಲ್ಲಿ ಸಾಕ್ಷಿಯನ್ನು ಸಾಹಿಲ್ ಕೊಂದಿದ್ದಾನೆ. 16ವರ್ಷದ ಬಾಲಕಿ ಸಾಕ್ಷಿ ಮತ್ತು 20ವರ್ಷದ ಯುವಕ ಮೊಹಮ್ಮದ್ ಸಾಹಿಲ್ ಪ್ರೀತಿಸುತ್ತಿದ್ದರು, ಇತ್ತೀಚೆಗೆ ಇವರಿಬ್ಬರ ಮಧ್ಯೆ ಜಗಳವಾಗಿತ್ತು ಎಂದು ಹೇಳಲಾಗಿದೆ. ಭಾನುವಾರ ರಾತ್ರಿ ಸುಮಾರು 8.45ರ ಹೊತ್ತಿಗೆ ಸಾಕ್ಷಿ ತನ್ನ ಸ್ನೇಹಿತೆಯ ಮಗನ ಹುಟ್ಟುಹಬ್ಬದ ಪಾರ್ಟಿಗೆಂದು ಆಕೆಯ ಮನೆಗೆ ಹೋಗುತ್ತಿದ್ದಳು. ಮಾರ್ಗ ಮಧ್ಯೆ ಅಡ್ಡಗಟ್ಟಿದ್ದ ಸಾಹಿಲ್ ಈ ಕೃತ್ಯ ನಡೆಸಿದ್ದಾನೆ.
ಇದನ್ನೂ ಓದಿ: Delhi Murder: ಸಾಹಿಲ್‌ನನ್ನು ನೋಡೇ ಇಲ್ಲ, ನನ್ನ ಮಗಳಿಗೆ ನ್ಯಾಯ ಕೊಡಿಸಿ; ಹತ್ಯೆಗೀಡಾದ ಹಿಂದು ಬಾಲಕಿ ಪೋಷಕರ ಆಗ್ರಹ
ಬಾಲಕಿ ಸಾಕ್ಷಿಯನ್ನು ಕೊಂದ ಮೊಹಮ್ಮದ್ ಸಾಹಿಲ್ ತಕ್ಷಣವೇ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸ್ಥಳದಿಂದ ಪರಾರಿಯಾಗಿದ್ದ. ಅದಾದ ಮೇಲೆ ಬಸ್ ಹತ್ತಿ ಉತ್ತರಪ್ರದೇಶದ ಬುಲಾಂದ್ಶಹರ್ಗೆ ತೆರಳಿದ್ದ. ಆದರೆ ಪೊಲೀಸರೂ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಇರುವ ಜಾಗವನ್ನು ಪತ್ತೆ ಹಚ್ಚಿದ್ದರು. ದೆಹಲಿಯಲ್ಲಿರುವ ಸಾಹಿಲ್ ಮೊಹಮ್ಮದ್ ಮನೆಗೆ ಹೋಗಿ, ಆತನ ಅಪ್ಪನನ್ನೂ ಕರೆದುಕೊಂಡು ಉತ್ತರ ಪ್ರದೇಶದ ಬುಲಾಂದ್ಶಹರ್ಗೆ ಹೋಗಿ ಸಾಹಿಲ್‌ನನ್ನು ಬಂಧಿಸಿದ್ದಾರೆ. ಇನ್ನು ಸಾಹಿಲ್ ಸಾಕ್ಷಿಯನ್ನು ಕೊಲ್ಲುವುದಕ್ಕೂ ಮೊದಲು ಮಧ್ಯ ರಸ್ತೆಯಲ್ಲೇ ಆಕೆಗೆ ನಿಂದಿಸಿದ್ದಾನೆ, ಜಗಳವಾಡಿದ್ದಾನೆ. ಹಲವರು ಇವರಿಬ್ಬರ ಜಗಳ ನೋಡಿಕೊಂಡು ಹೋಗಿದ್ದಾರೆ ಹೊರತು, ಯಾರೊಬ್ಬರೂ ಅಲ್ಲಿ ನಿಂತು, ಏನಾಯಿತು? ಎಂದು ಕೇಳಿಲ್ಲ. ಅವರಿಬ್ಬರ ಮಧ್ಯೆ ಆಗುತ್ತಿರುವ ಗಲಾಟೆಯನ್ನು ಬಿಡಿಸಲಿಲ್ಲ ಎಂದು ವರದಿಯಾಗಿದೆ. ಹಾಗೇ, ದೆಹಲಿ ಮಹಿಳಾ ಆಯೋಗ ಈ ಕೇಸ್ನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರಿಗೆ ನೋಟಿಸ್ ನೀಡಿದೆ.