ಲಖನೌ: ಪ್ರೀತಿಗೆ ಕಣ್ಣಿಲ್ಲ ಎಂಬ ಮಾತನ್ನು ಪದೇಪದೆ ಕೇಳಲ್ಪಡುತ್ತೇವೆ. ಅದೇ ಪ್ರೀತಿಗೆ ಮಿತಿಯೂ ಇಲ್ಲ. ಮನಸಲ್ಲಿ ಹುಟ್ಟುವ ಪ್ರೀತಿ ಅದೇ ಮನಸನ್ನು ಹೇಗಾದರೂ ಆಡಿಸಬಲ್ಲದು. ‘ಮೋಸ’ ಎಂಬ ಮಹಾಜಾಲವನ್ನೂ ಹೆಣೆದುಬಿಡಬಲ್ಲದು. ಒಟ್ಟಿನಲ್ಲಿ ಪ್ರೀತಿಯ ಸ್ವಭಾವ ಹೀಗೇ ಅಂಥ ಹೇಳಲು ಸಾಧ್ಯವಿಲ್ಲ. ಈ ಸ್ಟೋರಿ ಓದಿದರೆ ನೀವೂ ಈ ಮಾತನ್ನು ಒಪ್ಪಿಕೊಳ್ಳುತ್ತೀರಿ. ಇದು ಪ್ರೀತಿಗಾಗಿ ಲಿಂಗವನ್ನೇ ಪರಿವರ್ತಿಸಿಕೊಂಡವಳು, ಅದೇ ಪ್ರೀತಿಯಿಂದ ವಂಚನೆಗೆ ಒಳಗಾದ ದುರದೃಷ್ಟದ ಕತೆ.
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಿಂದ ಒಂದು ವಿಷಾದ ಪ್ರೇಮಕತೆ ವರದಿಯಾಗಿದೆ. ಇದು ಸಾಮಾನ್ಯ ಲವ್ ಸ್ಟೋರಿಯೂ ಅಲ್ಲ. ಹುಡುಗಿ-ಹುಡುಗಿ ಪ್ರೀತಿಸಿ, ಅದರಲ್ಲೊಬ್ಬಳು ಲಿಂಗ ಬದಲಿಸಿಕೊಂಡ ಬಳಿಕ, ಆಕೆಯ ಪ್ರೇಮಿ ಇವಳಿಗೆ/ಇವನಿಗೆ ವಂಚಿಸಿ ಮತ್ತೊಬ್ಬನ ಜತೆ ಪ್ರಣಯ ಶುರು ಮಾಡಿದ ಕತೆ. ಗೊಂದಲಕ್ಕೀಡಾಬೇಡಿ..ಈ ಸುದ್ದಿ ಓದಿ.
ಝಾನ್ಸಿಯಲ್ಲಿ ಸೋನಲ್ ಎಂಬ ಯುವತಿ ತನ್ನ ಅಪ್ಪ-ಅಮ್ಮನೊಟ್ಟಿಗೆ ವಾಸವಾಗಿದ್ದಳು. ಅದೇ ಮನೆಯ ಕೊನೇ ಫ್ಲೋರ್ಗೆ 2016ರಲ್ಲಿ ಸನಾ ಎಂಬ ಹುಡುಗಿ ಪೇಯಿಂಗ್ ಗೆಸ್ಟ್ ಆಗಿ ಬಂದು ಸೇರಿದಳು. ಸೋನಲ್ ಮತ್ತು ಸನಾ ಇಬ್ಬರೂ ಬಹುತೇಕ ಒಂದೇ ವಯಸ್ಸಿನವರಾಗಿದ್ದರಿಂದ ಸಹಜವಾಗಿಯೇ ಉತ್ತಮ ಗೆಳತಿಯರಾದರು. ಆದರೆ ಇವರಿಬ್ಬರ ಸ್ನೇಹ ಬರುಬರುತ್ತ ಪ್ರೀತಿಯಾಗಿ ತಿರುಗಿತು. ಮತ್ತು ಅವರಿಬ್ಬರೂ ಸಲಿಂಗಿ ಜೋಡಿಯಾಗಿ ಬದಲಾದರು. ಇವರಿಬ್ಬರ ಪ್ರೇಮ ಗುಟ್ಟಾಗಿ ಉಳಿಯಲಿಲ್ಲ. ಇವರಿಬ್ಬರೂ ಪ್ರೀತಿಸುತ್ತಿರುವ ವಿಷಯ ಸೋನಲ್ ಮನೆಯಲ್ಲಿ ಗೊತ್ತಾಗಿ, ಸಿಟ್ಟಾದರು. ಹೀಗೆ ಇಬ್ಬರು ಹುಡುಗಿಯ ಸಂಬಂಧವನ್ನು ಸಮಾಜ ಒಪ್ಪುವುದಿಲ್ಲ-ನಾವಂತೂ ಖಂಡಿತ ಒಪ್ಪುವುದಿಲ್ಲ ಎಂದು ಹೇಳಿ, ಸನಾಳನ್ನು ಮನೆಬಿಟ್ಟು ಹೋಗುವಂತೆ ಗದರಿಸಿ ಕಳಿಸಿದರು. ಇಷ್ಟೆಲ್ಲ ಆಗಿದ್ದು 2017ರಲ್ಲಿ.
ಇನ್ನು ಸನಾ ಸರ್ಕಾರಿ ಉದ್ಯೋಗಿಯಾಗಿದ್ದಳು. ಉತ್ತಮ ವೇತನವಿತ್ತು. ಆಕೆ ಕೆಲಸ ಮಾಡುತ್ತಿದ್ದ ಕಚೇರಿಯ ಕ್ವಾರ್ಟರ್ನಲ್ಲಿಯೇ ಉಳಿಯಲು ಅವಕಾಶ ಸಿಕ್ಕಿತು. ಹೀಗೆ ಸನಾ ಅಲ್ಲಿ ಹೋಗುತ್ತಿದ್ದಂತೆ ಇತ್ತ ಸೋನಲ್ ಕೂಡ ಅಪ್ಪ-ಅಮ್ಮನನ್ನು ಬಿಟ್ಟು ಹೋಗಿ ಸನಾ ಜತೆಗೇ ವಾಸಿಸಲು ಪ್ರಾರಂಭಿಸಿದಳು. ಅಷ್ಟಲ್ಲದೇ, ಸನಾಳಿಗೆ ಲಿಂಗ ಪರಿವರ್ತನೆ ಮಾಡಿಸಿಕೊಂಡು ‘ಪುರುಷ’ ನಾಗುವಂತೆ ಮನವೊಲಿಸಿದಳು. ನಾವು ಹೀಗೆ ಒಟ್ಟಿಗಿದ್ದರೆ ಸಮಾಜ ಒಪ್ಪುವುದಿಲ್ಲ ಎಂದು ಸನಾ ತಲೆಗೆ ತುಂಬಿದಳು. ಪ್ರೀತಿ ನೋಡಿ, ಸನಾ ಕೂಡ ಸೋನಲ್ ಮಾತಿಗೆ ಒಪ್ಪಿಯೇಬಿಟ್ಟಳು. ಬಳಿಕ 2020ರಲ್ಲಿ ಇವರಿಬ್ಬರೂ ದೆಹಲಿಯ ಶ್ರೀಗಂಗಾ ರಾಮ್ ಆಸ್ಪತ್ರೆಗೆ ತೆರಳಿದರು. ಅಲ್ಲಿ ಸನಾಳನ್ನು ಸಮಗ್ರವಾಗಿ ತಪಾಸಣೆ ಮಾಡಿದ ಬಳಿಕ ವೈದ್ಯರು ಆಕೆಗೆ ಲಿಂಗ ಪರಿವರ್ತನೆ ಸರ್ಜರಿಯನ್ನೂ ಮಾಡಿದರು. ಅದಾದ ಮೇಲೆ ಸನಾ ‘ಸೊಹಿಲ್ ಖಾನ್’ ಆಗಿ ಬದಲಾದಳು/ನು. ಹೀಗೆ ಸರ್ಜರಿ ಮಾಡುವಾಗ ಆಸ್ಪತ್ರೆಗೆ ಒದಗಿಸಬೇಕಿದ್ದ ಎಲ್ಲ ದಾಖಲೆಗಳ ಮೇಲೆಯೂ ಸೋನಲ್, ತಾನು ಸೊಹಿಲ್ ಖಾನ್ ಪತ್ನಿ ಎಂದೇ ಉಲ್ಲೇಖಿಸಿದ್ದಳು.
ಇದನ್ನೂ ಓದಿ: Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!
ಮೂರನೇಯವನ ಪ್ರವೇಶ
2020ರಿಂದ ಎರಡು ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. ಇವರಿಬ್ಬರೂ ಪ್ರೀತಿಯಿಂದಲೇ ಇದ್ದರು. ಆದರೆ 2022ರಲ್ಲಿ ಸೋನಲ್ಗೆ ಅಲ್ಲೇ ಉತ್ತರ ಪ್ರದೇಶದ ಯತಾರ್ಥ್ ಆಸ್ಪತ್ರೆಯಲ್ಲಿ ಉದ್ಯೋಗ ಸಿಕ್ಕಿತು. ಅಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಸೋನಲ್ ನಡವಳಿಕೆಯಲ್ಲಿ ತುಂಬ ಬದಲಾವಣೆಯಾಗಿತ್ತು. ಪದೇಪದೇ ಈ ಜೋಡಿ ಮಧ್ಯೆ ಜಗಳ ನಡೆಯಲು ಪ್ರಾರಂಭವಾಯಿತು. ಸೊಹಿಲ್ ಖಾನ್ (ಹಿಂದಿನ ಸನಾ)ಗೆ ಏನೂ ಅರ್ಥವಾಗುತ್ತಿರಲಿಲ್ಲ. ಆದರೆ ಸೋನಲ್ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬುದು ಆತನಿಗೆ ಗೊತ್ತಾಗುತ್ತಿತ್ತು. ಒಂದು ದಿನ ರಾತ್ರಿ ಸೋನಲ್ ಮೊಬೈಲ್ನಲ್ಲಿ ಯಾರೊಂದಿಗೋ ಗುಂಪುಕರೆಯಲ್ಲಿ ತೊಡಗಿದ್ದಳು. ಆಗ ದೊಡ್ಡದಾಗಿ ಅಳುತ್ತ, ‘ನಾನು ನನ್ನ ಮನೆಯವರನ್ನು ಮಿಸ್ ಮಾಡಿಕೊಳ್ತಿದ್ದೇನೆ’ ಎಂದು ಹೇಳುತ್ತಿದ್ದಳು. ಅದನ್ನು ಸೊಹಿಲ್ ನೋಡಿದ್ದ.
ಹೀಗೆ ಸೋನಲ್ಗೆ ಏನಾಗಿರಬಹುದು ಎಂಬುದರ ತನಿಖೆಯಲ್ಲಿ ತೊಡಗಿದ ಸೊಹಿಲ್ ಖಾನ್ಗೆ ಆಘಾತವೇ ಕಾದಿತ್ತು. ಇವರಿಬ್ಬರ ಪ್ರೀತಿಯಲ್ಲಿ ಗ್ಯಾನ್ ಎಂಬ ಮೂರನೇ ವ್ಯಕ್ತಿಯ ಪ್ರವೇಶವಾಗಿತ್ತು. ಸೋನಲ್ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದ ಗ್ಯಾನ್ ಮೇಲೆ ಸೋನಲ್ಗೆ ಪ್ರೀತಿ ಹುಟ್ಟಿತ್ತು. ಆಕೆಗೆ ತನಗೋಸ್ಕರ ಲಿಂಗ ಬದಲಿಸಿಕೊಂಡ ಸನಾ/ಸೊಹಿಲ್ ಖಾನ್ ಈಗ ಬೇಡವಾಗಿತ್ತು. ಈ ಬಗ್ಗೆ ಸೋನಲ್ ಬಳಿ ಪ್ರಶ್ನಿಸಿದ್ದಕ್ಕೆ, ಅವಳು ದೊಡ್ಡ ಗಲಾಟೆ ಮಾಡಿ ಮನೆಬಿಟ್ಟು ಹೋಗಿ ತವರು ಮನೆ ಸೇರಿಕೊಂಡಳು. ಅಷ್ಟೇ ಅಲ್ಲ, ಪಾಲಕರೊಂದಿಗೆ ಪೊಲೀಸ್ ಸ್ಟೇಶನ್ಗೆ ಬಂದು ಸೊಹಿಲ್ ಖಾನ್ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣ ದಾಖಲು ಮಾಡಿದಳು.
ಇದನ್ನೂ ಓದಿ: ಹಾಸನ ಮಿಕ್ಸಿ ಸ್ಫೋಟದ ಆರೋಪಿ ಅರೆಸ್ಟ್: ಪ್ರೀತಿ ನಿರಾಕರಣೆ, ಅಪಮಾನಕ್ಕೆ ಪ್ರತೀಕಾರ ಎಂದ ವಿಕೃತ ಪ್ರೇಮಿ ಅನೂಪ್
ಪೊಲೀಸರಿಂದ ಕರೆ ಬಂದ ಹಿನ್ನೆಲೆಯಲ್ಲಿ ಸ್ಟೇಶನ್ಗೆ ಬಂದ ಸೊಹಿಲ್ ಖಾನ್/ಸನಾ ಎಲ್ಲವನ್ನೂ ವಿವರಿಸಿದಳು. 2016ರಿಂದ ಇಲ್ಲಿಯವರೆಗೆ ಏನಾಯಿತು. ಸೋನಲ್ಗಾಗಿ ತಾನೇನು ತ್ಯಾಗ ಮಾಡಿದೆ? ಅದಕ್ಕೆ ಪ್ರತಿಯಾಗಿ ಆಕೆ ಹೇಗೆ ಮೋಸ ಮಾಡಿದಳು ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟ. ಸೊಹಿಲ್ ಹೇಳಿಕೆ ಪಡೆದ ಬೆನ್ನಲ್ಲೇ ಪೊಲೀಸರು ಸೋನಲ್ಗೆ ಸಮನ್ಸ್ ಕೊಟ್ಟಿದ್ದರು. ಆಕೆಯ ವಂಚನೆ ಸಾಬೀತಾದ ಬೆನ್ನಲ್ಲೇ, ಅವಳನ್ನು ಅರೆಸ್ಟ್ ಕೂಡ ಮಾಡಿದ್ದರು. ಸದ್ಯ ಆಕೆ ಜಾಮೀನು ಪಡೆದು ಹೊರಗಿದ್ದಾಳೆ. ಈ ಕೇಸ್ ವಿಚಾರಣೆ ಫೆ.23ಕ್ಕೆ ನಡೆಯಲಿದೆ.