Site icon Vistara News

ಅಮಾವಾಸ್ಯೆ ದಿನ ಪತ್ನಿಯನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗುತ್ತಿದ್ದ ಪತಿ; ಮಾನವರ ಮೂಳೆ ಪುಡಿ ತಿನ್ನಲು ಒತ್ತಡ ಹೇರುತ್ತಿದ್ದ!

ruckus over financial issues, Son-in-law's gruesome murder by father-in-law in yadgiri

ಪುಣೆ: ತಮಗೂ ಒಂದೋ-ಎರಡು ಮಕ್ಕಳಾಗಬೇಕು ಎಂಬ ಬಯಕೆ ಮದುವೆಯಾದ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲವರಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಮಕ್ಕಳಾಗುವುದಿಲ್ಲ. ಅದಕ್ಕಾಗಿ ಇನ್ನಿಲ್ಲದ ಔಷಧಿ ಮಾಡುತ್ತಾರೆ, ಪೂಜೆ-ಪುನಸ್ಕಾರದ ಜತೆ ಹರಕೆಯನ್ನೂ ಕಟ್ಟಿಕೊಳ್ಳುತ್ತಾರೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಕುಟುಂಬದವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಮಾಟ-ಮಂತ್ರದ ಮೊರೆ ಹೋಗಿದ್ದಾರೆ. ಮಹಿಳೆಯೊಬ್ಬರ ಪತಿ-ಕುಟುಂಬದವರೆಲ್ಲ ಸೇರಿ ಆಕೆಗೆ ಇನ್ನಿಲ್ಲದಷ್ಟು ಕಷ್ಟ ಕೊಟ್ಟಿದ್ದಾರೆ. ಮನುಷ್ಯನ ಮೂಳೆಗಳ ಪುಡಿಯನ್ನು ಸೇವಿಸುವಂತೆ ಆಕೆಗೆ ಒತ್ತಡ ಹೇರಿದ್ದಾರೆ. ಸಹಿಸಲು ಸಾಧ್ಯವಾಗದೆ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ.

ನನಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನೆಯವರೆಲ್ಲ ಸೇರಿ ಮಾಟ-ಮಂತ್ರದ ಮೊರೆ ಹೋಗಿದ್ದಾರೆ. ಪ್ರತಿ ಅಮಾವಾಸ್ಯೆ ದಿನ ಮನೆಯಲ್ಲೇ ಮಂತ್ರ ವಿದ್ಯೆಗೆ ಸಂಬಂಧಪಟ್ಟ ಆಚರಣೆ ಮಾಡಿಸುತ್ತಿದ್ದರು. ಅದ್ಯಾರೋ ಮಂತ್ರವಾದಿ ವಿಡಿಯೊ ಕರೆ ಮೂಲಕ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದ. ನನ್ನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಹೆಣಗಳನ್ನು ಸುಟ್ಟ ಸ್ಥಳದಲ್ಲಿರುವ ಮನುಷ್ಯರ ಮೂಳೆಗಳ ಪುಡಿಯನ್ನು ಬಲವಂತವಾಗಿ ತಿನ್ನಿಸುತ್ತಿದ್ದರು. ಅಷ್ಟೇ ಅಲ್ಲ, ಸತ್ತ ಕೋಳಿಗಳ ತಲೆ ಮತ್ತು ಕಾಲುಗಳ ಪುಡಿಯನ್ನೂ ತಿನ್ನಿಸಲು ಪ್ರಯತ್ನಿಸುತ್ತಿದ್ದರು. ಎಷ್ಟೋ ಬಾರಿ ಪ್ರತಿರೋಧ ಒಡ್ಡುತ್ತಿದ್ದೆ ಎಂದು ಆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಮಹಿಳೆ ಪುಣೆಯ ಸಿಂಹಗಡ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈಕೆ ಇದು ಮೊದಲೇನೂ ಅಲ್ಲ, ಈ ಹಿಂದೆಯೂ ಅಂದರೆ 2019ರಲ್ಲಿ ತನ್ನ ಪತಿ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು ಎಂಬ ವಿಷಯ ಗೊತ್ತಾಗಿದೆ. ಪ್ರಸ್ತುತ ಮಾಟ-ಮಂತ್ರ ಪ್ರಕರಣದಡಿ ಮಹಿಳೆಯ ಪತಿ ಸೇರಿ ಒಟ್ಟು 7 ಮಂದಿ ವಿರುದ್ಧ ಪೊಲೀಸರು ಕೇಸ್​ ದಾಖಲಿಸಿದ್ದಾರೆ.

ಇದನ್ನೂ ಓದಿ: ಮಾಟ ಮಾಡಿಸಿದ್ದಾಳೆ ಎಂಬ ಭ್ರಮೆಯಲ್ಲಿ ತಮ್ಮ, ಪ್ರೇಯಸಿ ಜತೆ ಸೇರಿ ತಾಯಿಯನ್ನೇ ಕೊಂದ ಡ್ರೈವರ್‌

Exit mobile version