Site icon Vistara News

ಲಿಂಗ ಬದಲಿಸುತ್ತೇನೆಂದು ಹೇಳಿ ಮಲಗಿಸಿ ಕಣ್ಮುಚ್ಚಿಸಿದ ಮಂತ್ರವಾದಿ; ಹೆಣವಾಗಿ ಬಿದ್ದಿದ್ದಳು ಯುವತಿ

Tantric Rituals

#image_title

ಲಖನೌ: ಲಿಂಗ ಪರಿವರ್ತನೆ (Gender Change) ಮಾಡಿಕೊಡುತ್ತೇನೆ ಎಂದು ಹೇಳಿ 30ವರ್ಷದ ಯುವತಿಯನ್ನು ನಂಬಿಸಿದ ಮಾಂತ್ರಿಕ, ಆಕೆಯನ್ನು ನದಿ ದಡದ ಮೇಲೆ ಅಂಗಾತ ಮಲಗಿಸಿ ಕತ್ತು ಕೊಯ್ದು ಕೊಂದಿದ್ದಾನೆ (Woman Killed by a Tantrik). ಮಂತ್ರವಾದಿ ಈ ಕ್ರೂರ ಹತ್ಯೆಯ ಹಿಂದೆ ಒಂದು ಸಲಿಂಗಿ ಪ್ರೇಮಕಥೆಯಿದೆ. ದುರಂತದಲ್ಲಿ ಪ್ರೀತಿ ಕೊನೆಗೊಂಡಿದೆ.

ಉತ್ತರ ಪ್ರದೇಶದ ಆರ್​ಸಿ ಮಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ಏರಿಯಾವೊಂದರ ನಿವಾಸಿ ಪ್ರಿಯಾ (30) ಮತ್ತು ಪುವಾಯಾನ್​ ಎಂಬ ಏರಿಯಾದ ಹುಡುಗಿ ಪ್ರೀತಿ (24)ಗೆ ಸ್ನೇಹ ಬೆಳೆದು, ಅದು ಪ್ರೀತಿಯಾಗಿ ಬದಲಾಯಿತು. ಸಲಿಂಗಿ ಜೋಡಿಯಾಗಿದ್ದ ಪ್ರೀತಿ-ಪ್ರಿಯಾ ಒಂದಷ್ಟು ವರ್ಷ ಹೀಗೆ ಒಟ್ಟಾಗಿ ಕಳೆದರು. ಬರುಬರುತ್ತ ಇವರಿಬ್ಬರ ಪ್ರೀತಿ ವಿಷಯ ಬಹಿರಂಗಗೊಂಡಿತು. ಊರಲ್ಲೆಲ್ಲ ಗೊತ್ತಾಯಿತು. ಪ್ರಿಯಾಗೆ ತಾನೊಬ್ಬ ಸಲಿಂಗಿ ಎಂಬುದು ಗೊತ್ತಾಗಿತ್ತು. ಆದರೆ ಪ್ರೀತಿ ಹಾಗಿರಲಿಲ್ಲ. ಅವಳ ಮನೆಯಲ್ಲಿ ಮದುವೆ ಮಾಡಲು ಯತ್ನಿಸುತ್ತಿದ್ದರು. ಆಕೆಯೂ ಮದುವೆಯಾಗಲು ಒಪ್ಪಿಗೆ ಕೊಟ್ಟಿದ್ದಳು. ಆದರೆ ಇವಳ ಮತ್ತು ಪ್ರಿಯಾ ನಡುವಿನ ಸ್ನೇಹ ಊರಸುದ್ದಿಯಾಗಿದ್ದರಿಂದ ಏನೇ ಮಾಡಿದರೂ ಪ್ರೀತಿಗೆ ಮದುವೆಯಾಗುತ್ತಿರಲಿಲ್ಲ. ಈ ಮಧ್ಯೆ ಪ್ರಿಯಾ ತಾನೇ ಪ್ರೀತಿಗಾಗಿ ಹುಡುಗನಾಗಿ ಬದಲಾಗಲೂ ನಿರ್ಧಾರ ಮಾಡಿದ್ದಳು. ಲಿಂಗ ಬದಲಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಳು.

ಇದರಿಂದ ರೋಸಿ ಹೋದ ಪ್ರೀತಿಯ ತಾಯಿ ಒಬ್ಬ ಮಾಟಗಾರನ ಭೇಟಿಗೆ ಹೊರಟಳು. ಜತೆಗೆ ಪ್ರೀತಿಯನ್ನೂ ಕರೆದುಕೊಂಡೇ ಮಾಂತ್ರಿಕ ಬಳಿ ಹೋಗಿ ಇರುವ ವಿಷಯವನ್ನು ತಿಳಿಸಿದರು. ಹಾಗೇ, ಪ್ರಿಯಾಳನ್ನು ಕೊಂದು ಬಿಡಬೇಕು ಎಂಬ ಯೋಜನೆ ರೂಪಿಸಿದರು. ಪ್ರಿಯಾ ಹುಡುಗನಾಗಿ ಬದಲಾಗಲು ನಿರ್ಧರಿಸಿದ್ದನ್ನು ಪ್ರೀತಿ ಮಾಂತ್ರಿಕನ ಬಳಿ ಹೇಳಿದಳು. ನಾವು ಹೇಳಿದಂತೆ ಕೆಲಸ ಮಾಡಿಕೊಟ್ಟರೆ ಲಕ್ಷಾಂತರ ರೂಪಾಯಿ ಕೊಡುವುದಾಗಿ ಪ್ರೀತಿಯ ತಾಯಿ ಆ ಮಾಂತ್ರಿಕನಿಗೆ ಹೇಳಿದರು.

ಹಣದ ಆಸೆಗೆ ಬಿದ್ದ ಮಾಂತ್ರಿಕ ಒಂದು ಭರ್ಜರಿ ಉಪಾಯ ಮಾಡಿದ. ಪ್ರಿಯಾಳನ್ನು ಲಿಂಗ ಬದಲಿಸಿಕೊಡುತ್ತೇವೆ ಎಂದು ಹೇಳಿ ಕರೆದುಕೊಂಡು ನನ್ನ ಬಳಿ ಕರೆದುಕೊಂಡು ಬನ್ನಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಇನ್ನು ಪ್ರೀತಿಗಾಗಿ ತಾನು ಹುಡುಗನಾಗಿ ಬದಲಾಗಲು ನಿರ್ಧರಿಸಿದ್ದ ಪ್ರಿಯಾ ಹರಕೆ ಕುರಿಯಂತೆ ಆ ಆತಿ-ಮಗಳ ಬೆನ್ನ ಹಿಂದೆ ಹೊರಟು ಬಂದು ಕ್ರೂರ ಮಾಂತ್ರಿಕನ ಬಳಿ ಸೇರಿದ್ದಳು. ಹೀಗೆ ಬಂದ ಪ್ರಿಯಾ ಹೆಣವಾಗಿದ್ದಳು. ಎರಡು ದಿನವಾದರೂ ಪ್ರಿಯಾ ಕಾಣಿಸದಾಗ ಆಕೆಯ ಮನೆಯವರು ಪೊಲೀಸರು ದೂರು ಕೊಟ್ಟಿದ್ದರು.

ಇದನ್ನೂ ಓದಿ:Same sex marriage : ಸಲಿಂಗಿಗಳ ವಿವಾಹಕ್ಕೆ ರಾಜಸ್ಥಾನ ವಿರೋಧ, 6 ರಾಜ್ಯಗಳಿಂದ ಪರಿಶೀಲನೆಗೆ ಅವಕಾಶ ನಿರೀಕ್ಷೆ

ವಿಚಾರಣೆ ನಡೆಸುತ್ತ ತನಿಖೆ ಶುರು ಮಾಡಿದ ಪೊಲೀಸರಿಗೆ ಮೊದಮೊದಲು ಏನೂ ಸುಳಿವು ಸಿಕ್ಕಿರಲಿಲ್ಲ. ಆದರೆ ಒಂದೆರಡು ಜನ ಪ್ರೀತಿ ಬಗ್ಗೆ ಹೇಳಿದ್ದರು. ಹಾಗೇ, ಪ್ರಿಯಾ ಒಂದು ದಿನ ಪ್ರೀತಿ ಜತೆ ಹೋಗಿದ್ದನ್ನು ನೋಡಿದ್ದಾಗಿ ಒಬ್ಬರು ಪೊಲೀಸರಿಗೆ ತಿಳಿಸಿದರು. ಅನುಮಾನ ಬಂದು ಪೊಲೀಸರು ಪ್ರೀತಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಆಕೆ ಮಾಂತ್ರಿಕ ಬಗ್ಗೆ ತಿಳಿಸಿದ್ದಾರೆ. ಮಾಂತ್ರಿಕನನ್ನು ಹಿಡಿದು ವಿಚಾರಣೆ ಮಾಡಿದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ. ಲಿಂಗ ಬದಲಿಸಿಕೊಡುತ್ತೇನೆ ಎಂದು ಹೇಳಿ ನದಿ ದಡಕ್ಕೆ ಕರೆದುಕೊಂಡು ಹೋದೆ. ಕಣ್ಮುಚ್ಚಿಕೊಂಡು ಅಂಗಾತ ಮಲಗುವಂತೆ ಹೇಳಿದೆ. ಆಕೆ ಹಾಗೇ ಮಾಡಿದಳು. ಬಳಿಕ ನಾನು ಅವಳ ಕತ್ತು ಕೊಯ್ದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಪ್ರೀತಿ ಮತ್ತು ಮಾಂತ್ರಿಕ ಇಬ್ಬರ ವಿಚಾರಣೆಯನ್ನೂ ಪೊಲೀಸರು ಮುಂದುವರಿಸಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Exit mobile version