ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಹೆಣ್ಣು ಮಗುವನ್ನೇ ಕೊಂದು, ಅದರ ಶವವನ್ನು ರೈಲಿನಿಂದ ಎಸೆದಿದ್ದಾಳೆ. ಈ ಕೃತ್ಯಕ್ಕೆ ಆಕೆಗೆ ಅವಳ ಪ್ರಿಯಕರ ಸಹಾಯ ಮಾಡಿದ್ದಾನೆ. ಸದ್ಯ ಇಬ್ಬರೂ ಬಂಧಿತರಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇಂಥದ್ದೊಂದು ಘಟನೆ ನಡೆದಿದ್ದು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ. ಆರೋಪಿಗಳು ಸುನೀತಾ ಮತ್ತು ಆಕೆಯ ಪ್ರಿಯಕರ ಸನ್ನಿ ಅಲಿಯಾಸ್ ಮಾಲ್ತಾ. ಈ ಸುನೀತಾಗೆ ಈಗಾಗಲೇ ಮದುವೆಯಾಗಿ ಐವರು ಮಕ್ಕಳು ಇದ್ದಾರೆ. ಆದರೆ ಪತಿಯಿಂದ ದೂರವಾಗಿ, ಸನ್ನಿ ಜತೆ ಇದ್ದಳು. ಇಬ್ಬರು ಮಕ್ಕಳು ಸುನೀತಾ ಜತೆ ಮತ್ತು ಮೂವರು ಮಕ್ಕಳು ಆಕೆಯ ಪತಿ ಜತೆ ವಾಸವಾಗಿದ್ದರು. ಇಬ್ಬರು ಹೆಣ್ಣುಮಕ್ಕಳಲ್ಲಿ ಕೊನೇ ಮಗುವನ್ನು ಸುನೀತಾ ಕೊಂದಿದ್ದಾಳೆ.
ಸನ್ನಿ ಸಹಾಯದಿಂದ ಮನೆಯಲ್ಲೇ ಮಗುವನ್ನು ಕೊಂದ ಸುನೀತಾ ಅದನ್ನು ಒಂದು ಬೆಡ್ಶೀಟ್ನಲ್ಲಿ ಸುತ್ತಿಕೊಂಡು ಮುಂಜಾನೆಯೇ ಶ್ರೀಗಂಗಾನಗರ ರೈಲ್ವೆ ಸ್ಟೇಶನ್ಗೆ ಆಗಮಿಸಿದ್ದಳು. ಜತೆಗೆ ಸನ್ನಿಯೂ ಇದ್ದ. ಇವರಿಬ್ಬರೂ ಸೋಮವಾರ ಬೆಳಗ್ಗೆ 6.10ಕ್ಕೆ ಸ್ಟೇಶನ್ನಿಂದ ಹೊರಡುವ ರೈಲನ್ನು ಹತ್ತಿದ್ದಾರೆ. ಆ ರೈಲು ಸ್ವಲ್ಪ ದೂರ ಚಲಿಸಿ ಕಾಲುವೆಯ ಸೇತುವೆ ಬಳಿ ಬಂದಾಗ ಸುನೀತಾ ಮಗುವನ್ನು ಎಸೆದಿದ್ದಾಳೆ. ಆ ಮಗುವನ್ನು ಕಾಲುವೆಗೆ ಎಸೆಯುವುದು ಸುನೀತಾ-ಸನ್ನಿ ಉಪಾಯವಾಗಿತ್ತು. ಆದರೆ ಅದು ತಪ್ಪಿ ರೈಲ್ವೆ ಹಳಿ ಮೇಲೆಯೇ ಬಿದ್ದಿತ್ತು ಮತ್ತು ಮರುದಿನ ಆ ಶವ ಸಿಕ್ಕಿ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.
ಅಂತಿಮವಾಗಿ ಆ ಮಗು ಸುನೀತಾಳದ್ದೇ ಎಂದು ಗೊತ್ತಾದಾಗ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ಸನ್ನಿಯನ್ನೂ ಬಂಧಿಸಿದ್ದಾರೆ. ತಾನೇ ಮಗುವನ್ನು ಹತ್ಯೆಗೈದಿದ್ದೇನೆ ಎಂದು ಸುನೀತಾ ಒಪ್ಪಿಕೊಂಡಿದ್ದಾಳೆ. ಈ ಕೇಸ್ನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: Road Accident: ಮುಂಬಯಿ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ; 4 ವರ್ಷದ ಮಗು ಸೇರಿ 9 ಜನ ಸ್ಥಳದಲ್ಲೇ ಸಾವು