ಭೋಪಾಲ್: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿಡಿಗೇಡಿಗಳು ಲೈಂಗಿಕ ಹಿಂಸೆ ನೀಡಿ ನಂತರ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರದೂಡಿ ಕೊಲೆ ಮಾಡುವ ಪ್ರಯತ್ನ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ರೈಲ್ವೆ ನಿಲ್ದಾಣದ ಬಳಿ (Crime News) ನಡೆದಿದೆ.
ಈ ಬಗ್ಗೆ 32 ವರ್ಷದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಜಾರ್ಖಂಡ್ ಮೂಲದ ಕಾರ್ಮಿಕ ಮಹಿಳೆ ಆಗಿರುವ ಆಕೆ ಸೋಮವಾರ ರಾತ್ರಿ ಸಮಯದಲ್ಲಿ ತನ್ನ 23 ವರ್ಷದ ಸಂಬಂಧಿಯೊಬ್ಬನೊಂದಿಗೆ ಸೂರತ್ ಕಡೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ಆಗ ಐವರು ಯುವಕರ ಗುಂಪು ಆಕೆಗೆ ಲೈಂಗಿಕ ಹಿಂಸೆ ನೀಡಲಾರಂಭಿಸಿದೆ. ಆಕೆ ಅದರಿಂದ ತಪ್ಪಿಸಿಕೊಂಡು ರೈಲಿನ ಬಾಗಿಲ ಬಳಿ ಹೋದಾಗ ಕಿಡಿಗೇಡಿಯೊಬ್ಬ ಆಕೆಯ ಸೀರೆಯನ್ನು ಹಿಡಿದು ಎಳೆದಿದ್ದಾನೆ. ಜತೆಗಿರುವ ಸಂಬಂಧಿ ತನ್ನ ಪತಿಯೆಂದು ಹೇಳಿದರೂ ಕೇಳದೆ ಕಿರುಕುಳ ನೀಡಿದ್ದಾರೆ. ಆಕೆ ಪ್ರತಿರೋಧಿಸಲು ಆರಂಭಿಸಿದಾಗ ಆಕೆಯನ್ನು ಮತ್ತು ಆಕೆಯ ಸಂಬಂಧಿಯನ್ನು ರೈಲಿನಿಂದ ಹೊರಗೆ ತಳ್ಳಿದ್ದಾರೆ ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ.
ಇದನ್ನೂ ಓದಿ: Viral Video: ಇದು ಬರೀ ಪುಶ್‌ಅಪ್ ಅಲ್ಲ, ಸೈನ್ ಬೋರ್ಡ್ ಪುಶ್‌ಅಪ್! ಇಂತಹ ಸಾಹಸವನ್ನು ಮಾಡಲೇ ಬೇಡಿ
ಮಂಗಳವಾರ ಬೆಳಗ್ಗೆ ಗ್ವಾಲಿಯರ್ ರೈಲು ನಿಲ್ದಾಣದ ಬಳಿ ಈ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದದ್ದಾಗಿ ಹೇಳಲಾಗಿದೆ.
ಈ ಸಂಬಂಧ ಪೊಲೀಸರು ಐಪಿಸಿಯ ಸೆಕ್ಷನ್ 354 (ಹೆಣ್ಣಿನ ಮೇಲೆ ದೌರ್ಜನ್ಯ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮಹಿಳೆಗೆ ತಾನು ಯಾವ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ ಎನ್ನುವುದೂ ತಿಳಿಯದ ಹಿನ್ನೆಲೆ ಅದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.