Site icon Vistara News

Youth Drowned : ಮುರ್ಡೇಶ್ವರ ಕಡಲಿನಲ್ಲಿ ಈಜಲುಹೋದ ಒಬ್ಬ ನೀರುಪಾಲು, ಮತ್ತೊಬ್ಬ ಪಾರು

youth drowned in Murdeshwara Beach

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ (Tourist place) ಮತ್ತು ಪುಣ್ಯ ಕ್ಷೇತ್ರವಾದ ಮುರ್ಡೇಶ್ವರ ಕಡಲ ತೀರದಲ್ಲಿ (Murdeshwara beach) ನೀರಿಗೆ ಇಳಿದ ಪ್ರವಾಸಿಗರಲ್ಲಿ ಒಬ್ಬರು ನೀರುಪಾಲಾಗಿದ್ದು (Tourist drowned), ಇನ್ನೊಬ್ಬರನ್ನು ರಕ್ಷಿಸಲಾಗಿದೆ. ಕೋಲಾರ ಮೂಲದ ಮಣಿತೇಜಾ (21) ಕಾಣೆಯಾಗಿದ್ದರೆ (Youth drowned), ಕೋಲಾರದ ಯಶ್(22) ಎಂಬವರನ್ನು ರಕ್ಷಿಸಲಾಗಿದೆ.

ಕೋಲಾರ ಮೂಲದ 22 ಮಂದಿ ಪ್ರವಾಸಿಗರು ಭಾನುವಾರ ಮುರ್ಡೇಶ್ವರಕ್ಕೆ ಬಂದಿದ್ದರು. ಎಲ್ಲರೂ ಸಮುದ್ರ ತೀರದಲ್ಲೇ ನೀರಾಟವಾಡುತ್ತಿದ್ದರೆ, ಇಬ್ಬರು ಸ್ವಲ್ಪ ದೂರ ನೀರಿನಲ್ಲಿ ಮುಂದೆ ಹೋಗಿದ್ದಾರೆ.

ಸಮುದ್ರಕ್ಕಿಳಿಯದಂತೆ ನಿರ್ಬಂಧ ಇದ್ದರೂ ಪ್ರವಾಸಿಗರು ನೀರಿಗೆ ಇಳಿದಿದ್ದರು. ಈ ನಡುವೆ, ಅವರಲ್ಲಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕೂಡಲೇ ಅಲ್ಲಿದ್ದ ರಕ್ಷಕರು ಅವರಿಬ್ಬರನ್ನು ರಕ್ಷಿಸಲು ಮುಂದಾದರು. ಆದರೆ ಒಬ್ಬ ಯಶ್‌ ಮಾತ್ರ ಅವರ ಕೈಗೆ ಸಿಕ್ಕಿದ್ದು, ಮಣಿತೇಜಾ ಸಿಕ್ಕಿರಲಿಲ್ಲ. ನಾಪತ್ತೆಯಾದ ಪ್ರವಾಸಿಗನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಗಾಲದಲ್ಲಿ ಕಡಲಿನಲ್ಲಿ ಭಾರಿ ಪ್ರಕ್ಷುಬ್ಧತೆ ಇರುತ್ತದೆ ಎನ್ನುವ ಕಾರಣಕ್ಕಾಗಿ ಯಾರೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿತ್ತು. ಕೆಲವು ಸಮಯದ ಹಿಂದೆ ತೀರದ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ದೂರದ ಊರಿನಿಂದ ಜನರ ಬರುತ್ತಾರೆ. ತೀರಕ್ಕೆ ಹೋಗಲೂ ಬಿಡದಿರುವುದು ತಪ್ಪಾಗುತ್ತದೆ ಎಂಬ ಕಾರಣಕ್ಕೆ ನಿರ್ಬಂಧವನ್ನು ಸ್ವಲ್ಪ ಸಡಿಲಿಸಲಾಗಿತ್ತು. ತೀರಕ್ಕೆ ಹೋಗಬಹುದು, ನೀರಿನಲ್ಲಿ ದೂರ ಹೋಗುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದರೆ, ಕೆಲವರು ಅಲ್ಲಿರುವ ಸೂಚನೆ, ಜೀವರಕ್ಷಕರ ಮನವಿಗೂ ಕಿವಿಗೊಡದೆ ಮುನ್ನುಗ್ಗುವ ಘಟನೆಗಳು ಅಲ್ಲಿ ನಡೆಯುತ್ತಿರುತ್ತಿವೆ.

ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಧಾಬಾಗೆ ಊಟಕ್ಕೆ ಹೋದವರು ಸಾವು

ಧಾರವಾಡ: ಕಾರೊಂದು ರಸ್ತೆ ಡಿವೈಡರ್‌ಗೆ ಡಿಕ್ಕಿ (Car hits divider) ಹೊಡೆದು ಪಲ್ಟಿಯಾದ (Road accident) ಹಿನ್ನೆಲೆಯಲ್ಲಿ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಾಣ (Two died in Accident) ಕಳೆದುಕೊಂಡಿದ್ದಾರೆ. ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭಾನುವಾರ ತಡರಾತ್ರಿ ದುರಂತ ಸಂಭವಿಸಿದೆ.

ವಿನಯ ಹಿರೇಮಠ (28) ಹಾಗೂ ಸಂದೀಪ್ (29) ಸಾವನ್ನಪ್ಪಿದ ದುರ್ದೈವಿಗಳು. ಅವರು ತಡ ರಾತ್ರಿ ಧಾರವಾಡದಿಂದ ಹೊರಟು ತೇಗೂರು ಗ್ರಾಮದ ಬಳಿಯ ಧಾಬಾಕ್ಕೆ ಊಟಕ್ಕೆ ಹೋಗಿದ್ದರು. ಅಲ್ಲಿ ಊಟ ಮುಗಿಸಿ ವಾಪಸ್‌ ಬರುವಾಗ ಹೆದ್ದಾರಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಸಂದೀಪ್‌ ಮತ್ತು ಹಿರೇಮಠ

ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ ಮತ್ತೊಬ್ಬರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು ಪ್ರಕರಣ ದಾಖಲಾಗಿತ್ತು.

ಈ ರಸ್ತೆಯಲ್ಲಿ ವಾಹನಗಳು ಅತಿಯಾದ ವೇಗದಲ್ಲಿ ಚಲಿಸುತ್ತವೆ ಮತ್ತು ಸ್ವಲ್ಪ ಎಡವಟ್ಟಾದರೂ ಅಪಾಯ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Road Accident: ಬಸ್-ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ, ಮಗ ಸ್ಥಳದಲ್ಲೇ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Exit mobile version