ʻರೆಕ್ಕೆಯೊಂದಿದ್ದರೆ ಮನೋವೇಗದಲ್ಲಿ ಎಲ್ಲಿಂದೆಲ್ಲಿಗೆ ಹಾರಿಬಿಡುತ್ತಿದ್ದೆʼ ಎಂದು ಅದೆಷ್ಟು ಬಾರಿ ಯೋಚಿಸಿಲ್ಲ ನಾವು! ಚಿಟ್ಟೆ-ಜೇನು-ಖಗ-ಭೃಂಗಗಳ ರೆಕ್ಕೆಗಳನ್ನು ಕಂಡು ಒಂದಿಲ್ಲೊಂದು ಬಾರಿ ಆಸೆ ಕಣ್ಣು ಬಿಟ್ಟೇ ಇರುತ್ತೇವೆ. ಹಾಗೆಂದು ರೆಕ್ಕೆ ಇರುವ ಪ್ರಾಣಿಗಳನ್ನೆಲ್ಲಾ ಕಂಡು ಆಸೆ ಪಡುವುದಕ್ಕಾದೀತೆ… ಜಿರಲೆ (cockroach) ಯನ್ನೂ ಕಂಡು! ಛೀ! ಥೂ! ಅನಿಷ್ಟ… ಎನ್ನುತ್ತಾ ಒಂದೋ ಹೆದರಿ ಓಡುತ್ತೇವೆ; ಅಥವಾ ಬೆನ್ನಟ್ಟಿ ಹೊಡೆಯುತ್ತೇವೆ. ಮನೆಯನ್ನು ಎಷ್ಟೇ ಸ್ವಚ್ಛ ಇಟ್ಟುಕೊಂಡರೂ ಕೆಲವೊಮ್ಮೆ ತಮ್ಮ ಸಂತತಿಯನ್ನು ಸತತ ಹೆಚ್ಚಿಸಿಕೊಂಡು ನಮ್ಮ ನಿದ್ದೆಗೆಡಿಸುತ್ತದೆ ಈ ಕ್ಷುದ್ರಜೀವಿಗಳು. ಅವುಗಳಿಂದಾಗುವ ಕೊಳಕಂತೂ ಹೇಳಲಸಾಧ್ಯ. ಎಷ್ಟೇ ಗುಡಿಸಿ-ಒರೆಸಿ ಶುಚಿ ಮಾಡಿದರೂ ಅಗೋಚರ ಸಂದಿ-ಗೊಂದಿಗಳಿಂದ ತೂರಿಬಂದು ತಲೆ ಕೆಡಿಸುತ್ತವೆ. ತರುವ ರೋಗಗಳೂ ಆತಂಕಕಕಾರಿ. ಯಾವ್ಯಾವ ಅಂಗಡಿಗಳಲ್ಲಿ ಜಿರಳೆಗಳ ನಿಯಂತ್ರಣಕ್ಕೆ ಏನೇನು ದೊರೆಯುತ್ತದೆಯೊ ಅದೆಲ್ಲವನ್ನೂ ತಂದು ಪ್ರಯೋಗ ಮಾಡಿದರೂ, ಅವುಗಳಿಂದ ಮುಕ್ತಿ ದೊರೆಯತ್ತದೆಂಬ ಖಾತ್ರಿಯಿಲ್ಲ. ಅದರಲ್ಲೂ ಮನೆಗೆ ಅತಿಥಿಗಳು ಬಂದಾಗ ಈ ಅಭ್ಯಾಗತ ಪ್ರಾಣಿಗಳು ಎದುರಿಗೆ ಕಾಣಿಸಿಕೊಂಡು ತರುವ ಮುಜುಗರ… ಈ ಲೋಕದ್ದಲ್ಲ! ನಾವು ಮಾನವರು ಹೀಗೆಂದುಕೊಂಡರೆ, ಪ್ರಕೃತಿಯ ರೀತಿ ಭಿನ್ನ.
ಕಾಣುವುದಕ್ಕೆ ಎಂಥಾ ಕ್ಷುಲ್ಲಕ ಜೀವಿಯೇ ಆದರೂ, ಅದಕ್ಕೊಂದಿಷ್ಟು ವೈಶಿಷ್ಟ್ಯಗಳನ್ನು ಪ್ರಕೃತಿ ನೀಡಿಯೇ ಇರುತ್ತದೆ… ಜಿರಳೆಗಳಿಗೂ ಸಹಾ ಬದುಕಿ ಉಳಿಯುವುದಕ್ಕೆ ಎಲ್ಲಾ ಜೀವಿಗಳೂ ಒಂದಿಷ್ಟು ತಂತ್ರಗಳನ್ನು ಅನುಸರಿಸುವಂತೆ ಜಿರಳೆಗಳೂ ಮಾಡುತ್ತವೆ. ಉದಾ, ನೀರಿನಡಿಯಲ್ಲಿ ಸುಮಾರು 40 ನಿಮಿಷಗಳವರೆಗೂ ತಮ್ಮ ಉಸಿರು ಹಿಡಿದು ಬದುಕಬಲ್ಲವಂತೆ ಈ ಜೀವಿಗಳು. ಮಾತ್ರವಲ್ಲ, ತಲೆ ಕಡಿದು ಹೋದರೂ ಕೆಲವು ದಿನಗಳವರೆಗೆ ಜೀವಂತ ಇರಬಲ್ಲವು ಎಂಬುದಂತೂ ಚೋದ್ಯ! ಅಷ್ಟೇಕೆ, ಯಾವುದೇ ಆಹಾರವಿಲ್ಲದೆ ಸುಮಾರು ಮೂರು ತಿಂಗಳುಗಳವರೆಗೆ ಜೀವ ಹಿಡಿಯಬಲ್ಲವು ಎನ್ನುತ್ತಾರೆ ವಿಜ್ಞಾನಿಗಳು.
ಇಂಥ ವೈಚಿತ್ರ್ಯಗಳನ್ನು ಹೊಂದಿರುವ ಈ ಜೀವಿಗಳು ರೆಕ್ಕೆಗಳಿದ್ದರೂ ದೂರಕ್ಕೆ ಏಕೆ ಹಾರುವುದಿಲ್ಲ? ಹಕ್ಕಿಗಳಂತೆ ನಭಕ್ಕೆ ಹಾರಿ ಖಂಡಾಂತರ ಪ್ರವಾಸ ಹೋಗಬಹುದಿತ್ತಲ್ಲ. ʻಅಯ್ಯೋ! ಭಾರತದಲ್ಲಿ ಜಿರಳೆಗಳಿವೆʼ ಎಂದು ಮೂಗು ಮುರಿಯುವ ಎಲ್ಲಾ ದೇಶಗಳಿಗೂ ಇವುಗಳನ್ನು ಸುಲಭಕ್ಕೆ ಹಾರಿಸಬಹುದಿತ್ತೇನೊ! ಜಿರಳೆಗಳ ದೇಹಕ್ಕಿಂತ ಅವುಗಳ ರೆಕ್ಕೆ ತುಂಬಾ ಹಗುರ. ದೇಹದ ಭಾರವನ್ನು ಹೊತ್ತು, ಹೆಚ್ಚು ಕಾಲ ಗಾಳಿಯಲ್ಲಿ ಹಾರಬಲ್ಲ ಸಾಮರ್ಥ್ಯ ಈ ರೆಕ್ಕೆಗಳಿಗೆ ಇಲ್ಲ. ಉಳಿದೆಲ್ಲ ಕೀಟಗಳಿಗೆ ಇರುವಂತೆಯೇ ಜಿರಳೆಗಳಲ್ಲೂ ಕಾರ್ಯನಿರ್ವಹಿಸುವ ನರಮಂಡಲ, ಅವು ಹಾರುವ ದಿಕ್ಕು ಮತ್ತು ದೂರವನ್ನು ನಿರ್ಧರಿಸುತ್ತದೆ. ಹಾಗಾಗಿ ನಮ್ಮ ಗುರಿಯಿಂದ ತಪ್ಪಿಸಿಕೊಂಡು ಪಕ್ಕದ ಗೋಡೆಯ ಮೇಲಷ್ಟೇ ಅವು ಹಾರುವುದು, ಇನ್ನೂ ದೂರಕ್ಕಲ್ಲ. ಆದರೆ ಅದು ಹಾರುವ ವೇಗವನ್ನು ಲೆಕ್ಕ ಹಾಕುವುದಾದರೆ, ಗಂಟೆಗೆ ಐದು ಕಿ.ಮೀ.ವರೆಗೆ ಹಾರಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು.