Site icon Vistara News

ನಿಮಗಿದು ಗೊತ್ತೆ? ವಿಮಾನದಲ್ಲಿ ಸುರಕ್ಷತೆಗೆ ಪ್ಯಾರಾಚೂಟ್‌ ಬಳಕೆಯಿಲ್ಲವೇಕೆ?

parachute

ವಿಮಾನಯಾನ ಮಾಡಬೇಕೆಂಬುದು ಬಹಳಷ್ಟು ಜನರ ಮನದ ಬಯಕೆ. ಸಾವಿರಾರು ಅಡಿ ಮೇಲಿನಿಂದ ಕೆಳಗೆ ಇರುವೆಗಳಂತೆ ಕಾಣುವ ನಗರಗಳನ್ನು, ಹನಿಗಳಂತೆ ಕಾಣುವ ಕೆರೆ-ನದಿಗಳನ್ನು, ಆಟಿಕೆಗಳಂತೆ ಕಾಣುವ ಬೆಟ್ಟ-ಗುಡ್ಡಗಳನ್ನು ನೋಡಬೇಕು… ಹೀಗೆ ಏನೇನೆಲ್ಲಾ ಆಸೆಗಳಿರುವುದು ಸಹಜ. ಇವೆಲ್ಲದರ ಜೊತೆಗೆ ವಿಮಾನ ಪ್ರಯಾಣ ಸುರಕ್ಷಿತ ಎಂಬ ಭಾವನೆಯೂ ಹಲವರ ಮನದಲ್ಲಿದೆ. ಸುರಕ್ಷಿತ ಎಂಬುದು ಸುಳ್ಳೇನಲ್ಲದಿದ್ದರೂ ಪ್ರತಿಯೊಬ್ಬ ಪ್ರಯಾಣಿಕನಿಗೂ ಒಂದೊಂದು ಪ್ಯಾರಚೂಟ್‌ ಇರುವುದಿಲ್ಲವಲ್ಲ ಎನ್ನುವ ಅನುಮಾನ ಕೆಲವರ ಮನದಲ್ಲಾದರೂ ಬಂದಿರಬಹುದು.

ದುಬಾರಿ ಬೆಲೆ ತೆತ್ತು ಸಂಚರಿಸುವ ಪ್ರಯಾಣಿಕರಿಗೂ ಸರಿಯಾದ ಸುರಕ್ಷತಾ ವ್ಯವಸ್ಥೆಗಳನ್ನು ವಿಮಾನಯಾನ ಸಂಸ್ಥೆಗಳು ಮಾಡುವುದಿಲ್ಲವೇಕೆ? ಪ್ರಯಾಣಿಕರ ಜೀವ ಅವರಿಗೆ ಅಗ್ಗವೇ? ಎಂದೆಲ್ಲಾ ಯೋಚಿಸುವ ಮುನ್ನ ಕೆಲವು ವಿವರಗಳನ್ನು ತಿಳಿದುಕೊಳ್ಳಬೇಕಿದೆ. ಪ್ಯಾರಾಚೂಟ್‌ ನಿರ್ವಹಿಸಲು ಸ್ವಲ್ಪ ಮಟ್ಟಿಗಾದರೂ ತರಬೇತಿಯ ಅಗತ್ಯವಿದೆ. ವಿಮಾನದಲ್ಲಿ ಸಂಚರಿಸುವ ಬಹುತೇಕ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಸ್ಕೈಡೈವಿಂಗ್‌ ಮಾಡುವಾಗ ಪರಿಣತ ತರಬೇತುದಾರ ಜೊತೆಗೇ ಇದ್ದರೂ, ಉತ್ಸಾಹಿಗಳಿಗೆ ಪೂರ್ವತಯಾರಿಗೆ ಅಗತ್ಯವಿರುತ್ತದೆ. ಇನ್ನು ತರಬೇತುದಾರ ಜೊತೆಗಿಲ್ಲದೇ ಸ್ಕೈಡೈವ್‌ ಮಾಡುವವರಿಗೆ ಹಲವಾರು ಗಂಟೆಗಳ ತರಬೇತಿಯನ್ನು ಕಡ್ಡಾಯವಾಗಿ ನೀಡಲಾಗುತ್ತದೆ. ಇದಾವುದೂ ಇಲ್ಲದ ಪ್ರಯಾಣಿಕರಿಂದ ಪ್ಯಾರಾಚೂಟ್‌ ಬಳಕೆ ಹೇಗೆ ಸಾಧ್ಯ?

ಇದನ್ನೂ ಓದಿ: Explainer: Johnny Depp Amber Heard- ಹಾಲಿವುಡ್‌ನ ಮುದ್ದಾದ ಜೋಡಿ ಅತಿದೊಡ್ಡ ವೈರಿಗಳಾದ ಕತೆ

ಸ್ಕೈಡೈವಿಂಗ್‌ನಂಥ ಸಾಹಸಗಳನ್ನು ಮಾಡುವವರು ಧುಮುಕುವುದು 15,000 ಅಡಿ ಎತ್ತರದಿಂದ. ಆದರೆ ನಾಗರಿಕ ಸೇವಾ ವಿಮಾನಗಳು ಸಂಚರಿಸುವುದು 35,000 ಅಡಿ ಎತ್ತರದಲ್ಲಿ. 18,000 ಅಡಿಗಳಿಗಿಂತ ಎತ್ತರದಿಂದ ಧುಮುಕುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುತ್ತಾರೆ ಅಮೆರಿಕ ಪ್ಯಾರಾಚೂಟ್‌ ಸಂಸ್ಥೆಯ ತರಬೇತಿ ಮತ್ತು ಸುರಕ್ಷತಾ ವಿಭಾಗದ ನಿರ್ದೇಶಕರಾದ ಜಿಮ್‌ ಕ್ರೌಚ್.‌ ಇವಿಷ್ಟೇ ಅಲ್ಲ, ಗಂಟೆಗೆ 150 ಮೈಲಿಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಿಮಾನಗಳಿಂದ ಧುಮುಕುವುದು ಸೂಕ್ತವಲ್ಲ. ಹಾಗಿರುವಾಗ ಗಂಟೆಗೆ 500 ಮೈಲಿ ವೇಗದಲ್ಲಿ ಸಂಚರಿಸುವ ವಾಣಿಜ್ಯೋದ್ದೇಶಿತ ವಿಮಾನಗಳಿಂದ ಪ್ಯಾರಾಚೂಟ್‌ನಲ್ಲಿ ಧುಮುಕುವುದು ಅತಿರೇಕದ ಕೆಲಸ ಎಂಬುದು ಜಿಮ್‌ ಅವರ ಅಭಿಮತ.

ಇದಲ್ಲದೆ, ಸಾಧ್ಯಾಸಾಧ್ಯತೆಗಳನ್ನು ಇನ್ನೂ ಪರೀಕ್ಷಿಸುವ ಅಗತ್ಯವಿದೆ. ಪ್ಯಾರಾಚೂಟ್‌ ಕಿಟ್‌ಗಳು ಭರಪೂರದವು- ಬೆಲೆಯಲ್ಲೂ ತೂಕದಲ್ಲೂ. ಪ್ರತಿಯೊಬ್ಬ ಪ್ರಯಾಣಿಕನಿಗೂ ಒಂದೊಂದು ಪ್ಯಾರಾಚೂಟ್‌ ಎಂದಾದರೆ, ವಿಮಾನಗಳ ಈಗಿರುವ ತೂಕಕ್ಕೆ ಸುಮಾರು 3,000 ಕಿ.ಗ್ರಾಂ. ಗಳ ತೂಕ ಹೆಚ್ಚುವರಿಯಾಗಿ ಸೇರುತ್ತದೆ. ಇದಕ್ಕೆ ಪೂರಕವಾಗಿ ಬೃಹತ್‌ ಗಾತ್ರದ ವಿಮಾನಗಳನ್ನು ಬಳಸಬೇಕಾಗುತ್ತದೆ. ಇದೆಲ್ಲದರ ಹೊರೆ ಅಂತಿಮವಾಗಿ ಬೀಳುವುದು ಪ್ರಯಾಣಿಕರ ಮೇಲೆ. ಇವೆಲ್ಲ ಕಾರಣಗಳಿಗಾಗಿ ಸುರಕ್ಷತಾ ಸಾಧನವಾಗಿ ಪ್ಯಾರಾಚೂಟ್‌ ಬಳಕೆಯಲ್ಲಿಲ್ಲ.

ಇದನ್ನೂ ಓದಿ: Explainer: ಬೆಲೆ ಏರಿಕೆಗೆ ಬ್ರೇಕ್‌ ಹಾಕಲು ಬಡ್ಡಿ ದರ ಹೆಚ್ಚಿಸಿದ ಆರ್‌ಬಿಐ, ಸಾಲಗಾರರಿಗೆ EMI ಹೊರೆ

Exit mobile version