Site icon Vistara News

ವಿಸ್ತಾರ ಸಂಪಾದಕೀಯ: ದೇಶದಲ್ಲಿ ವಿಮಾನಯಾನ ಮೂಲ ಸೌಕರ್ಯ ಕ್ರಾಂತಿ

Aviation team

ನೆರೆಹೊರೆಯ ದೇಶಗಳಿಗೆ ಹೋಲಿಸಿದರೆ ಸ್ವತಂತ್ರ ಭಾರತದಲ್ಲಿ ವಿಮಾನಯಾನ ಸೌಕರ್ಯ ಚೆನ್ನಾಗಿದೆ. ಈಗ ಕಳೆದ 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರ ವಿಮಾನ ಯಾನ ಮೂಲಸೌಕರ್ಯ ಅಭಿವೃದ್ಧಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ರಾಜ್ಯಗಳ ರಾಜಧಾನಿಯಲ್ಲದೆ ಸಣ್ಣ ಸಣ್ಣ ನಗರಗಳ ಮಟ್ಟದಲ್ಲೂ ಸುಸಜ್ಜಿತ ವಿಮಾನ ನಿಲ್ದಾಣಗಳು ನಿರ್ಮಾಣ ಆಗುತ್ತಿವೆ. ಅಯೋಧ್ಯೆಯಯಂಥ ಧಾರ್ಮಿಕ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಮೂಲಕ ಕೇಂದ್ರ ಸರ್ಕಾರ ಬೆರಗು ಮೂಡಿಸಿದೆ. ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಂತೂ ಮೋದಿ ಮತ್ತು ಯೋಗಿ ಸರ್ಕಾರಗಳು ಜತೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಹಲವು ಅತ್ಯಾಧುನಿಕ ವಿಮಾನ ನಿಲ್ದಾಣಗಳನ್ನು ನಿರ್ಮಿಸಿವೆ.

ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ಗಳ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಲಾಗಿದೆ. ದೇಶಾದ್ಯಂತ ಇಂಥ 15 ಏರ್‌ಪೋರ್ಟ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದಾರೆ. ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ವರ್ಚ್ಯುವಲ್‌ ವೇದಿಕೆ ಮೂಲಕ ಏರ್‌ಪೋರ್ಟ್‌ ಯೋಜನೆಗಳಿಗೆ ಚಾಲನೆ ನೀಡಿ, ಭವಿಷ್ಯದಲ್ಲಿ ದೇಶದ ವಿಮಾನಯಾನ ವಲಯದ ವ್ಯಾಪ್ತಿ ಮತ್ತಷ್ಟು ವಿಸ್ತರಿಸುವ ಚಿತ್ರಣ ನೀಡಿದ್ದಾರೆ.

ದೇಶದ ವಿಮಾನ ನಿಲ್ದಾಣ ಯೋಜನೆಗಳಿಗೆ ಚಾಲನೆ ನೀಡಿರುವುದು 2047ರ ವಿಕಸಿತ ಭಾರತ ನಿರ್ಮಾಣದ ಸಂಕಲ್ಪಕ್ಕೆ ಮುನ್ನುಡಿಯಾಗಿದೆ. ದೇಶದಲ್ಲಿ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ತತ್ವದಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಸಣ್ಣ ನಗರಗಳಲ್ಲೂ ಈಗ ವಿಮಾನ ನಿಲ್ದಾಣಗಳು ರಾರಾಜಿಸುತ್ತಿವೆ. ರೈಲ್ವೆ ಸಂಪರ್ಕವೂ ಉತ್ತಮವಾಗಿದೆ. ದಾಖಲೆ ಪ್ರಮಾಣದಲ್ಲಿ ರಸ್ತೆ ನಿರ್ಮಿಸಲಾಗಿದೆ. ಇದೆಲ್ಲ ಮೋದಿಯ ಗ್ಯಾರಂಟಿಯಾಗಿದೆ ಎಂದು ಪ್ರಧಾನಿ ಹೇಳಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ 352 ಕೋಟಿ ರೂ. ವೆಚ್ಚದಲ್ಲಿ ಹೊಸ ಟರ್ಮಿನಲ್‌ ನಿರ್ಮಿಸಲಾಗುತ್ತದೆ. ಇನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲೂ 350 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಿಸಲಾಗುತ್ತದೆ. ಎರಡು ವರ್ಷಗಳ ನಂತರ ಇಲ್ಲಿ 4ರಿಂದ 10 ವಿಮಾನಗಳ ನಿಲುಗಡೆಗೆ ವ್ಯವಸ್ಥೆ ಸಾಧ್ಯವಾಗಲಿದೆ. ನಿತ್ಯ 2,400 ಪ್ರಯಾಣಿಕರ ಸಂಚಾರಕ್ಕೂ ಇದರಿಂದ ಸಾಧ್ಯವಾಗಲಿದೆ. ಅಭಿವೃದ್ಧಿ ಹೊಂದುತ್ತಿರುವ ಅವಳಿ ನಗರಗಳಿಗೆ ಈ ಹೊಸ ಕಾಮಗಾರಿ ಹೆಮ್ಮೆಯ ಗರಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿನ ದೇವನಹಳ್ಳಿ ಸಮೀಪ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಸೆಂಟರ್‌ (BIETC) ಕ್ಯಾಂಪಸನ್ನು (BIETC Campus) ಲೋಕಾರ್ಪಣೆಗೊಳಿಸಿದ್ದರು. ವಿಮಾನ ಯಾನ ಕ್ಷೇತ್ರದಲ್ಲಿ ಹೆಣ್ಮಕ್ಕಳಿಗೆ ಪ್ರೋತ್ಸಾಹ ನೀಡುವ ಬೋಯಿಂಗ್‌ ಸುಕನ್ಯಾ (Boeing sukanya programme) ಎಂಬ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದರು. ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ಭಾರತದಲ್ಲಿದ್ದಾರೆ. ಇದನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಮಹಿಳಾ ಪೈಲಟ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಬೋಯಿಂಗ್‌ ಸುಕನ್ಯಾ ಯೋಜನೆ ಜಾರಿಗೆ ತಂದಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಗಡಿ ಸುರಕ್ಷತೆ, ವ್ಯೂಹಾತ್ಮಕತೆಗೆ ಸೆಲಾ ಸುರಂಗ ಪೂರಕ

ಭಾರತ ಈಗ ಮೂರನೇ ಅತಿ ದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆಯಾಗಿದೆ. ಕಳೆದ 10 ವರ್ಷಗಳಲ್ಲಿ ವಿಮಾನ ಯಾನ ವಲಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ದೇಶದ ಮೂಲೆ ಮೂಲೆಗಳಲ್ಲಿ ಈಗ ವಿಮಾನ ಯಾನ ಸಂಪರ್ಕ ಸಾಧ್ಯವಾಗಿದೆ. “ಉಡಾನ್‌ʼ ಯೋಜನೆಯೂ ಈ ನಿಟ್ಟಿನಲ್ಲಿ ಗಣನೀಯ ಕೊಡುಗೆ ನೀಡಿದೆ. 2014ರಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 150ಕ್ಕೆ ಏರಿದೆ.

ಮೋದಿ ಸರ್ಕಾರ ವಿಮಾನ ಯಾನಕ್ಕೆ ಸಂಬಂಧಿಸಿ ಕರ್ನಾಟಕಕ್ಕೂ ಆದ್ಯತೆ ನೀಡುತ್ತಿದೆ. ಕರ್ನಾಟಕ ಮುಂದಿನ ದಿನಗಳಲ್ಲಿ ಅತಿ ದೊಡ್ಡ ಏವಿಯೇಷನ್‌ ಹಬ್‌ ಆಶಾಕಿರಣ ಮೂಡಿದೆ. ಕರ್ನಾಟಕವು ವೈಮಾನಿಕ ತಂತ್ರಜ್ಞಾನ ಮತ್ತು ಉತ್ಪಾದನೆಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

ಸಮಯ ಅತ್ಯಂತ ಮಹತ್ವದ್ದು. ವಿಮಾನಯಾನ ಸೌಕರ್ಯ ಗಣನೀಯ ಪ್ರಮಾಣದಷ್ಟು ಸಮಯ ಉಳಿಸುತ್ತದೆ. ವ್ಯಾಪಾರ ಉದ್ಯಮಗಳ ಬೆಳವಣಿಗೆಗೂ ವಿಮಾನಯಾನ ಸೌಕರ್ಯ ಮಹತ್ವದ ಕೊಡುಗೆ ನೀಡುತ್ತದೆ. ಹಾಗಾಗಿ ವಿಮಾನ ಯಾನ ಸೌಕರ್ಯ ಅಭಿವೃದ್ಧಿ ಮಾಡುವುದೆಂದರೆ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮಹತ್ವದ ಕಾರ್ಯವೂ ಹೌದು

Exit mobile version