ರಾಜ್ಯದಲ್ಲಿ ಭೀಕರ ಅಪಘಾತಗಳ ಸರಣಿ ಮುಂದುವರಿದಿದೆ. ಗುರುವಾರ ಬೆಳಗ್ಗೆ ತರೀಕೆರೆ ಬಳಿ ಖಾಸಗಿ ಬಸ್ ಒಂದರ ಅಟ್ಟಹಾಸಕ್ಕೆ ಶಾಲೆಗೆ ಹೊರಟಿದ್ದ 15 ವರ್ಷದ ಬಾಲಕಿ ಪ್ರಾಣವನ್ನೇ ಕಳೆದುಕೊಂಡು ಮತ್ತೊಬ್ಬ ಬಾಲಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಮಧ್ಯಾಹ್ನದ ಹೊತ್ತಿಗೆ ಶಿವಮೊಗ್ಗದ ಭದ್ರಾವತಿ ತಾಲೂಕಿನ ಜಾವಳ್ಳಿಯಲ್ಲಿ ಅಪಘಾತದಲ್ಲಿ ತಂದೆ ಮತ್ತು ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರವಷ್ಟೇ ಚಿಕ್ಕಮಗಳೂರಿನ ಕಣಿವೆ ಕ್ರಾಸ್‌ನಲ್ಲಿ ಕಾರಿನಲ್ಲಿ ಸಾಗುತ್ತಿದ್ದ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದರು. ಪಿಕಪ್ ವಾಹನ ಡಿಕ್ಕಿ ಹೊಡೆದು ನಾಲ್ವರು ಶಾಲಾ ಬಾಲಕಿಯರ ಇತ್ತೀಚೆಗೆ ಪ್ರಾಣ ಕಳೆದುಕೊಂಡಿದ್ದರು. ಪ್ರತಿದಿನವೂ ಇಂಥ ಸುದ್ದಿಗಳನ್ನು ಓದುತ್ತೇವೆ, ನೋಡುತ್ತೇವೆ. ಅಪಘಾತ ಬರ್ಬರವಾಗಿದ್ದರಷ್ಟೇ ನಮ್ಮ ಗಮನ ಸೆಳೆಯುತ್ತದೆ ಎಂಬಂತಾಗಿದೆ. ಈ ರಸ್ತೆ ಅಪಘಾತಗಳಿಗೆ ಪ್ರಮುಖವಾಗಿ ಎರಡು ಕಾರಣಗಳನ್ನು ಗಮನಿಸಬಹುದು- ಒಂದನೆಯದು ರಸ್ತೆ ಅವ್ಯವಸ್ಥೆ, ಎರಡನೆಯದು ಮಾನವ ಪ್ರಮಾದ. ಯಾವ್ಯಾವ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ ಎಂಬುದನ್ನು ಕೇಂದ್ರ ಸಾರಿಗೆ ಇಲಾಖೆ ನೀಡಿರುವ ಅಂಕಿಅಂಶಗಳ ಮೂಲಕ ಗಮನಿಸಬಹುದು.
ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳು ನಮ್ಮ ದೇಶದಲ್ಲಿ ಹೆಚ್ಚಿನ ಸಾವುನೋವು ಮತ್ತು ಅಂಗವೈಕಲ್ಯಗಳಿಗೆ ಪ್ರಮುಖ ಕಾರಣವಾಗಿವೆ. ಭಾರತದಲ್ಲಿ ವಾರ್ಷಿಕ ಸರಾಸರಿ 1,50,000 ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ. ವೇಗದ ಮಿತಿ ಮೀರಿ ಹೋಗುವುದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಸರ್ಕಾರ ತಿಳಿಸಿದೆ. ಅಂಕಿಅಂಶಗಳ ಪ್ರಕಾರ 70 ಪ್ರತಿಶತದಷ್ಟು ರಸ್ತೆ ಅಪಘಾತಗಳು ಅತಿಯಾದ ವೇಗದಿಂದ ಸಂಭವಿಸುತ್ತವೆ ಮತ್ತು ಇದರಿಂದಲೇ ಅಪಘಾತಗಳ ಶೇ.65 ಸಾವುಗಳು ಸಂಭವಿಸುತ್ತವೆ. ಎಲ್ಲಾ ರಸ್ತೆ ಅಪಘಾತ-ಸಂಬಂಧಿತ ಸಾವುಗಳಲ್ಲಿ ಆರು ಪ್ರತಿಶತಕ್ಕಿಂತಲೂ ಹೆಚ್ಚು ಲೇನ್ ಅಶಿಸ್ತಿನ ಕಾರಣದಿಂದಾಗಿ ಸಂಭವಿಸುತ್ತವೆ. ಚಾಲಕ ತನ್ನ ವಾಹನವನ್ನು ಸ್ವಂತ ಲೇನ್‌ನ ಮಿತಿಯೊಳಗೆ ಇಡಲು ವಿಫಲವಾದಾಗ ಅಪಘಾತ ಸಂಭವಿಸುತ್ತದೆ. ಟ್ರಾಫಿಕ್ ಸೂಚನೆಗಳನ್ನು ನಿರ್ಲಕ್ಷಿಸುವುದು ಅಪಘಾತದ ಇನ್ನೊಂದು ಪ್ರಮುಖ ಕಾರಣ. ಕೆಲವು ಚಾಲಕರು ಸಮಯ ಅಥವಾ ಇಂಧನ ಉಳಿಸಲು ಹೋಗಿ, ರೆಡ್ ಸಿಗ್ನಲ್ ಇದ್ದರೂ ಅವಸರಿಸಿ ತಮ್ಮ ಮತ್ತು ಇತರರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸುತ್ತಾರೆ.
ರಸ್ತೆ ಅಪಘಾತಗಳಿಗೆ ಮತ್ತೊಂದು ಪ್ರಮುಖ ಕಾರಣ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು. ಚಾಲನೆಗೆ ಹೆಚ್ಚಿನ ಏಕಾಗ್ರತೆ ಮತ್ತು ತ್ವರಿತ ಪ್ರತಿಕ್ರಿಯೆಗಳ ಅಗತ್ಯವಿರುತ್ತದೆ. ಆಲ್ಕೋಹಾಲ್ ಸೇವನೆ ನಮ್ಮ ಇಂದ್ರಿಯಗಳನ್ನು ಮಂದಗೊಳಿಸಿ ಅರಿವಿನ ಸಾಮರ್ಥ್ಯಗಳನ್ನು ನಿಶ್ಚೇಷ್ಟಿತಗೊಳಿಸುತ್ತದೆ. ಇದು ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತದೆ. ಕಳೆದ ಐದು ವರ್ಷಗಳಿಂದ ಸೇರ್ಪಡೆಯಾಗಿರುವ ಹೊಸ ಪ್ರಮುಖ ಕಾರಣ ಎಂದರೆ ರಸ್ತೆ ಮೇಲಿರಬೇಕಾದ ಗಮನ ಫೋನ್ ಮೇಲಿರುವುದು. ಇನ್ನು ವಾಹನ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಅಪಘಾತ ಸಂದರ್ಭದಲ್ಲಿ ಜೀವಹಾನಿ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪ್ರಮುಖ ಅಂಶ. ಕಾರಿನಲ್ಲಿ ಸೀಟ್ ಬೆಲ್ಟ್, ಬೈಕ್‌ನಲ್ಲಿ ಹೆಲ್ಮೆಟ್‌ಗಳು ಚಾಲಕ ಮತ್ತು ಸವಾರರನ್ನು ಅಪಘಾತಗಳಿಂದ ರಕ್ಷಿಸಲೆಂದೇ ಉದ್ದೇಶಿಸಿ ಇಡಲಾಗಿದೆ ಹಾಗೂ ಅವು ಕಡ್ಡಾಯವಾಗಿದ್ದರೂ ಹಲವರು ಬಳಸುವುದಿಲ್ಲ.
ಹಲವೆಡೆ ರಸ್ತೆಗಳ ಪರಿಸ್ಥಿತಿಯೂ ಕಳವಳ ಹುಟ್ಟಿಸುವಂತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಬಳಿ ಇರುವ 2021 ಹಾಗೂ 2022ರಲ್ಲಿ ನಡೆದ ರಸ್ತೆ ಅಪಘಾತಗಳ ಅಂಕಿಸಂಖ್ಯೆ ಪರಿಶೀಲಿಸಿದರೆ, ಅಪಘಾತಗಳ ಸಂಖ್ಯೆಯಲ್ಲಿ ದಿಲ್ಲಿ ಹಾಗೂ ಚೆನ್ನೈಗಳ ಬಳಿಕ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಅಪಘಾತಗಳ ಸಾವಿನ ಸಂಖ್ಯೆಯಲ್ಲೂ ಇದೇ ಅನುಕ್ರಮಣಿಕೆಯನ್ನು ನೋಡಬಹುದು. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿದೆ. ಹೊಸ ಹೊಸ ಫ್ಲೈಓವರ್‌ಗಳು, ಎಕ್ಸ್‌ಪ್ರೆಸ್‌ವೇಗಳು, ರಿಂಗ್ ರಸ್ತೆಗಳು ನಗರಕ್ಕೆ ಸೇರ್ಪಡೆಯಾಗುತ್ತಿವೆ. ಇವು ಹೆಚ್ಚಾದಂತೆ ವಾಹನಗಳ ವೇಗವೂ ಹೆಚ್ಚಾಗುತ್ತದೆ ಹಾಗೂ ಅಪಘಾತಗಳು ಹೆಚ್ಚುತ್ತವೆ. ಬೆಂಗಳೂರಿನ ಮತ್ತು ಬೆಂಗಳೂರನ್ನು ಜಿಲ್ಲಾ ಕೇಂದ್ರಗಳಿಂದ ಸಂಪರ್ಕಿಸುವ ಮುಖ್ಯ ರಸ್ತೆಗಳು ವೇಗದ ಟ್ರಾಫಿಕ್‌ಗೆ ಮೂಲ. ಇಲ್ಲಿ ಮುಖ್ಯವಾಗಿ ಕಳಪೆ ಹಾಗೂ ಅವೈಜ್ಞಾನಿಕ ರಸ್ತೆ ಉಬ್ಬುಗಳು, ರಸ್ತೆ ವಿಭಜಕಗಳು ಹಾಗೂ ಗುಂಡಿಗಳು ಜೀವಗಳ ಬಲಿ ಪಡೆಯುತ್ತಿವೆ. ರಾತ್ರೋರಾತ್ರಿ ನಿರ್ಮಿಸಿ ಪಟ್ಟಿ ಬಳಿಯದೇ ಹೋದ ಹಂಪ್‌ನಿಂದಾಗಿ ಎಗರಿ ಬಿದ್ದು ಪ್ರಾಣ ಕಳೆದುಕೊಳ್ಳುವ ದ್ವಿಚಕ್ರ ವಾಹನ ಸವಾರರನ್ನು ಕಂಡಿದ್ದೇವೆ. ದಿಢೀರನೆ ಎದುರಾಗುವ ರಸ್ತೆ ವಿಭಜಕಗಳು ಪ್ರಾಣ ತೆಗೆಯುತ್ತವೆ. ಸರಿಪಡಿಸದೇ ಹಾಗೇ ಬಿಟ್ಟ ಗುಂಡಿಗಳು ವರ್ಷವರ್ಷವೂ ಹತ್ತಾರು ಜೀವಗಳನ್ನು ಬಲಿಪಡೆಯುತ್ತವೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಮಾನವ- ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಅಗತ್ಯ
ಹಾಗಾದರೆ ರಸ್ತೆ ಅಪಘಾತಗಳು ಕಡಿಮೆಯಾಗಬೇಕಿದ್ದರೆ ಎಲ್ಲಿಂದ ಶುರು ಮಾಡಬೇಕು? ಇದು ಎಲ್ಲರೂ ಗಮನಿಸಿ ಸರಿಪಡಿಸಿಕೊಳ್ಳುತ್ತಾ ಹೋಗಬೇಕಿರುವ ಬೃಹತ್ ವ್ಯವಸ್ಥೆಯಾಗಿದೆ. ರಸ್ತೆ ತೆರಿಗೆ, ವಾಹನ ತೆರಿಗೆಗಳನ್ನು ವಸೂಲು ಮಾಡುವ ಸರ್ಕಾರ ರಸ್ತೆಗಳ ಸುರಕ್ಷತೆ, ವೈಜ್ಞಾನಿಕ ವಿನ್ಯಾಸದ ಕಡೆಗೆ ಗಮನ ಹರಿಸಿ ಪ್ರಯಾಣಿಕರ ಜೀವರಕ್ಷಣೆ ಮಾಡಬೇಕು. ವಾಹನ ಸವಾರರು ವೈಯಕ್ತಿಕವಾಗಿಯೂ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ತಡರಾತ್ರಿಯ ನಂತರ ಡ್ರೈವ್ ಮಾಡುವುದು ಅಪಾಯಕರ. ಮದ್ಯ ಸೇವಿಸಿ ವಾಹನ ಚಲಾಯಿಸುವುದು ಜೀವಹಾನಿಗೆ ಮೂಲ. ತಮ್ಮ ವಾಹನ ಚಾಲನೆಗೆ ಸುರಕ್ಷಿತವೇ ಎಂದು ಖಚಿತಪಡಿಸಿಕೊಳ್ಳದೆ ರಸ್ತೆಗಿಳಿಸುವುದು ಅಪರಾಧ. ಪಾದಚಾರಿಗಳಿಗೂ ಅವರದೇ ಜವಾಬ್ದಾರಿಗಳಿರುತ್ತವೆ. ಈ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಮೂಡಿದ ದಿನ ಅಪಘಾತಗಳು ಇಲ್ಲವಾಗುತ್ತವೆ.
ಇನ್ನಷ್ಟು ಸಂಪಾದಕೀಯಗಳಿಗೆ ಇಲ್ಲಿ ಕ್ಲಿಕ್ ಮಾಡಿ.