ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು (KSEAB) ಏಪ್ರಿಲ್ 29 ರಿಂದ ಮೇ 16 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 (PUC Exam 2024) ಅನ್ನು ನಡೆಸಿತ್ತು. ಇಂದು (ಮಂಗಳವಾರ – ಮೇ 21) ರಂದು ಫಲಿತಾಂಶವನ್ನು ಪ್ರಕಟ (2nd PUC Exam 2 Result) ಮಾಡುವುದಾಗಿ ಹೇಳಿದೆ.
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೇಲೆ ಕ್ಲಿಕ್ ಮಾಡಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಮಂಗಳವಾರವೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-3ರ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ನಿಮ್ಮ ಫಲಿತಾಂಶವನ್ನು ನೋಡುವುದು ಹೇಗೆ?
ದ್ವಿತೀಯ PUC ಫಲಿತಾಂಶಗಳು karresults.nic.in ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು:
- karresults.nic.in ನಲ್ಲಿ ಕರ್ನಾಟಕ ಫಲಿತಾಂಶ ಪೋರ್ಟಲ್ಗೆ ಭೇಟಿ ನೀಡಿ.
- ಮುಖಪುಟದಲ್ಲಿ ನೀಡಲಾದ ಪಿಯುಸಿ 2 ಪರೀಕ್ಷೆಯ ಫಲಿತಾಂಶದ ಲಿಂಕ್ ಅನ್ನು ತೆರೆಯಿರಿ.
ಲಾಗಿನ್ ಪುಟದಲ್ಲಿ, ನಿಮ್ಮ KSEAB ನೋಂದಣಿ ಸಂಖ್ಯೆಯನ್ನು ಒದಗಿಸಿ; ವಿಷಯ ಸಂಯೋಜನೆ ಅಥವಾ ಸ್ಟ್ರೀಮ್ ಅನ್ನು ಆಯ್ಕೆ ಮಾಡಿ (ವಿಜ್ಞಾನ/ಕಲೆ/ವಾಣಿಜ್ಯ)
ನಿಮ್ಮ 2ನೇ ಪಿಯುಸಿ ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪರಿಶೀಲಿಸಿ.
ಸಿಇಟಿಗೆ ಹೆಚ್ಚು ಅಂಕಗಳ ಪಟ್ಟಿ ಪರಿಗಣನೆ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್‌ನ್ಯೂಸ್ ನೀಡಿದೆ. ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಯಾವುದರಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೋ ಅದನ್ನೇ ಸಿಇಟಿ (CET 2024)ಗೆ ಪರಿಗಣಿಸಲು ಕೆಇಎ ಸಮ್ಮತಿ ಸೂಚಿಸಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ನಿರಾಳವಾಗಿದ್ದಾರೆ. ಎಂಜಿನಿಯರ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೆಇಎ ಪ್ರತಿವರ್ಷ ಸಿಇಟಿ ನಡೆಸುತ್ತದೆ.
ಸಿಇಟಿ ಜತೆಗೆ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕವನ್ನೂ ರ್ಯಾಂಕಿಂಗ್ಗೆ ಪರಿಗಣಿಸಲಾಗುತ್ತದೆ. ಇದುವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದರೆ ಪೂರಕ ಪರೀಕ್ಷೆ ಬರೆದು ತೇರ್ಗಡೆಯಾಗಬೇಕಿತ್ತು. ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕ್ರೂಡೀಕರಿಸಿ ಅಂಕಪಟ್ಟಿ ನೀಡಲಾಗುತ್ತಿತ್ತು.
ನಿಯಮದಲ್ಲಿ ಬದಲಾವಣೆ
ಈ ಬಾರಿ ಈ ನಿಯಮದಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಒಂದು ವೇಳೆ ಕಡಿಮೆ ಅಂಕ ಬಂದಿದ್ದರೆ ಅದನ್ನು ಉತ್ತಮಪಡಿಸಿಕೊಳ್ಳಲು ವಿದ್ಯಾರ್ಥಿಗಳು ಇನ್ನು ಉಳಿದ ಎರಡು ಪರೀಕ್ಷೆಗಳನ್ನೂ ಬರೆಯಬಹುದು. ಹೆಚ್ಚು ಅಂಕ ಬಂದಿರುವುದನ್ನೇ ಪರಿಗಣಿಸಿ ಅಂತಿಮ ಅಂಕಪಟ್ಟಿ ನೀಡಲಾಗುತ್ತದೆ. ಇದೀಗ ಆ ಹೆಚ್ಚುವರಿ ಅಂಕವನ್ನೇ ಸಿಇಟಿ ರ‍್ಯಾಂಕಿಂಗ್‌ಗೂ ಪರಿಣಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಕೆಇಎ ಸಹ ಸ್ಪಷ್ಟನೆ ನೀಡಿದ್ದು, ʼʼಹೆಚ್ಚು ಅಂಕ ಬಂದಿರುವ ಅಂತಿಮ ಅಂಕ ಪಟ್ಟಿಯನ್ನು ಸಿಇಟಿ ಅಂಕಗಳ ಜತೆ ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲು ಪರೀಕ್ಷಾ ಪ್ರಾಧಿಕಾರ ಪರಿಗಣಿಸಲಿದೆʼʼ ಎಂದು ತಿಳಿಸಿದೆ.
ದ್ವಿತೀಯ ಪಿಯು 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ
2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ರಿಸಲ್ಟ್‌ಗಾಗಿ (CET Result) ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ದ್ವಿತೀಯ ಪಿಯು 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ಪಷ್ಟನೆ ನೀಡಿದೆ. ಈಗ ಮಂಗಳವಾರ ಪಿಯು ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶದ ದಿನಾಂಕವನ್ನು ಕೆಇಎ ಪ್ರಕಟಿಸಬೇಕಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಸ್ಪಷ್ಟನೆ ನೀಡಿದ್ದು, ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮೊದಲ ಎರಡು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೊ ಅವುಗಳನ್ನೇ ಸಿಇಟಿ ರ‍್ಯಾಂಕ್‌ಗೆ ಪರಿಗಣನೆ ಮಾಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಎರಡನೇ ಪರೀಕ್ಷೆಯ ಫಲಿತಾಂಶಕ್ಕಾಗಿ ಕೆಇಎ ಕಾಯುವುದು ಅನಿವಾರ್ಯವಾಗಿದೆ.
ಅಧಿಕಾರಿಗಳ ಎಡವಟ್ಟು
ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ವೃತ್ತಿಪರ ಕೋಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ, ಈ ಬಾರಿಯ ಸಿಇಟಿ ಪರೀಕ್ಷೆ ಗೊಂದಲದ ಗೂಡಾಗಿತ್ತು. ಪರೀಕ್ಷೆಯಲ್ಲಿ 4 ವಿಷಯಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಔಟ್ ಆಫ್ ಸಿಲಬಸ್ (Out of Syllabus) ಪ್ರಶ್ನೆಗಳನ್ನು ಕೇಳಲಾಗಿತ್ತು. ರಸಾಯನ ಶಾಸ್ತ್ರ ವಿಷಯದಲ್ಲಿ 6, ಭೌತಶಾಸ್ತ್ರ ವಿಷಯದಲ್ಲಿ 5, ಪ್ರಶ್ನೆಗಳು, ಜೀವಶಾಸ್ತ್ರ ಪರೀಕ್ಷೆಯಲ್ಲಿ 11 ಪ್ರಶ್ನೆಗಳು, ಗಣಿತದಲ್ಲಿ 9 ಪ್ರಶ್ನೆಗಳು ಪಠ್ಯಕ್ರಮದಿಂದ ಹೊರತಾಗಿದ್ದವು. ಇದಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದ್ದವು. ಬಳಿಕ ಆ 50 ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳ ಮೌಲ್ಯ ಮಾಪನ ಮಾಡಲಾಗಿದೆ.
ಇದನ್ನೂ ಓದಿ: Public Exam: 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದ ಮಹತ್ವ ನಿರ್ಧಾರ
ಸದ್ಯ ಸಿಇಟಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೌಲ್ಯಮಾಪನ ಮಾಡಿ ಸಿದ್ಧಪಡಿಸಿದೆ. ಇದರ ಜತೆಗೆ ಶೇ. 50ರಷ್ಟು ದ್ವಿತೀಯ ಪಿಯುಸಿ ಅಂಕ ಮತ್ತು ಬಿಎಸ್‌ಸಿ ಸೀಟು ಹಂಚಿಕೆಗಾಗಿ ಜಿಕೆವಿಕೆ ನಡೆಸುವ ಪ್ರಾಯೋಗಿಕ ಪರೀಕ್ಷೆ ಫಲಿತಾಂಶದ ಅಂಕ ಸೇರಿಸಬೇಕಾಗಿರುವುದರಿಂದ ಕೆಇಎ ಅದಕ್ಕಾಗಿ ಕಾಯುತ್ತಿದೆ. ಈ ಬಾರಿ 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಪ್ರತಿ ವರ್ಷ ಮೇ, ಜೂನ್‌ನಲ್ಲಿ ಪರೀಕ್ಷೆ ನಡೆದರೆ ಈ ಬಾರಿ ಏಪ್ರಿಲ್‌ನಲ್ಲೇ ಪರೀಕ್ಷೆ ನಡೆಸಲಾಗಿತ್ತು.