ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರ ಫಲಿತಾಂಶವನ್ನು (2nd PUC Result) ಬುಧವಾರ ಪ್ರಕಟವಾಗಿದೆ. ಅಧಿಕೃತ ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಿಕೊಳ್ಳಬಹುದಾಗಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ, ಡೌನ್‌ಲೋಡ್ ಮಾಡಿಕೊಳ್ಳಲು ಹಾಗೂ ಮರು ಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ಆಗಿರುತ್ತದೆ.
ರಾಜ್ಯಾದ್ಯಂತ 2024ರ ದ್ವಿತೀಯ ಪಿಯುಸಿಗೆ 6,98,627 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದಾರೆ. ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಯು 1,124 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. 2023-24ನೇ ಸಾಲಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕ್ರಮದಲ್ಲಿ 80+20 ಮಾದರಿಯಂತೆ (80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಅಂಕಗಳನ್ನು ನೀಡಲಾಗಿರುತ್ತದೆ.
ನಿಮ್ಮ ಫಲಿತಾಂಶವನ್ನು ನೋಡುವುದು ಹೇಗೆ?
ದ್ವಿತೀಯ PUC ಫಲಿತಾಂಶಗಳು karresults.nic.in ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು:
- karresults.nic.in ನಲ್ಲಿ ಕರ್ನಾಟಕ ಫಲಿತಾಂಶ ಪೋರ್ಟಲ್ಗೆ ಭೇಟಿ ನೀಡಿ.
- ಮುಖಪುಟದಲ್ಲಿ ನೀಡಲಾದ ಪಿಯುಸಿ 2 ಪರೀಕ್ಷೆಯ ಫಲಿತಾಂಶದ ಲಿಂಕ್ ಅನ್ನು ತೆರೆಯಿರಿ.
- ಲಾಗಿನ್ ಪುಟದಲ್ಲಿ, ನಿಮ್ಮ KSEAB ನೋಂದಣಿ ಸಂಖ್ಯೆಯನ್ನು ಒದಗಿಸಿ; ವಿಷಯ ಸಂಯೋಜನೆ ಅಥವಾ ಸ್ಟ್ರೀಮ್ ಅನ್ನು ಆಯ್ಕೆ ಮಾಡಿ (ವಿಜ್ಞಾನ/ಕಲೆ/ವಾಣಿಜ್ಯ)
- ನಿಮ್ಮ 2ನೇ ಪಿಯುಸಿ ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪರಿಶೀಲಿಸಿ.
ದ್ವಿತೀಯ ಪಿಯುಸಿಯಲ್ಲಿ ಶೇ.84.59 ಮಂದಿ ಪಾಸ್; ದ.ಕ, ಉಡುಪಿ ಮೊದಲೆರಡು ಸ್ಥಾನ
ಪರೀಕ್ಷೆ ಬರೆದವರಲ್ಲಿ ಒಟ್ಟಾರೆ ಶೇಕಡ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಹೊಸದಾಗಿ ಪರೀಕ್ಷೆ ಬರೆದವರು ಶೇ.84.59 ಫಲಿತಾಂಶ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಎಂದಿನಂತೆ ಮೊದಲ ಸ್ಥಾನದಲ್ಲಿದ್ದು, ಶೇ.97.37 ಫಲಿತಾಂಶ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಉಡುಪಿ ಇದ್ದು, ಶೇ.96.80 ಫಲಿತಾಂಶ ಗಳಿಸಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿ ವಿಜಯಪುರ (ಶೇ.94.89) ಹಾಗೂ ಉತ್ತರ ಕನ್ನಡ (ಶೇ.92.51) ಇವೆ. ಕೊನೆಯ ಸ್ಥಾನದಲ್ಲಿ ಗದಗ (ಶೇ.72.86) ಪಡೆದಿದೆ. ಬೆಂಗಳೂರು ಉತ್ತರ ಶೇ.88.67 ಹಾಗೂ ಬೆಂಗಳೂರು ದಕ್ಷಿಣ ಶೇ.89.57 ಫಲಿತಾಂಶ ದಾಖಲಿಸಿವೆ.
ಇದನ್ನೂ ಓದಿ: 2nd PUC Result: ದ್ವಿತೀಯ ಪಿಯುಸಿಯಲ್ಲಿ ಶೇ.84.59 ಮಂದಿ ಪಾಸ್; ದ.ಕ, ಉಡುಪಿ ಮೊದಲೆರಡು ಸ್ಥಾನ; ಫಲಿತಾಂಶ ಇಲ್ಲಿದೆ ನೋಡಿ
ಗಣಿತದಲ್ಲಿ 6960 ಮಂದಿ, ಜೀವಶಾಸ್ತ್ರದಲ್ಲಿ 5925 ಮಂದಿ, 2570 ಮಂದಿ ಕನ್ನಡದಲ್ಲಿ , 1499 ಮಂದಿ ಸಂಸ್ಕೃತದಲ್ಲಿ , ಅರ್ಥಶಾಸ್ತ್ರದಲ್ಲಿ 1403 ಮಂದಿ, ಗಣಕ ವಿಜ್ಞಾನದಲ್ಲಿ 2661 ಮಂದಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.