Site icon Vistara News

2nd PUC Result: ಫೇಲ್‌ ಆಗಿದ್ದಕ್ಕೆ ಸೂಸೈಡ್‌ ಎಂದು ಬರೆದು ಟ್ವಿಟರ್‌ನಲ್ಲಿ ಪೊಲೀಸರಿಗೆ ಟ್ಯಾಗ್‌; ಆತಂಕದಲ್ಲಿ ವಿದ್ಯಾರ್ಥಿ ಪೋಷಕರು

2nd PUC result Student tags police by writing suicide on Twitter for failing

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಪ್ರಕಟವಾಗಿದ್ದು, ಎರಡು ವಿಷಯಗಳಲ್ಲಿ ಫೇಲ್‌ ಆಗಿದ್ದ ವಿದ್ಯಾರ್ಥಿಯೊಬ್ಬ ಟ್ವಿಟರ್‌ನಲ್ಲಿ ತನ್ನ ಮಾರ್ಕ್‌ಶೀಟ್‌ ಅನ್ನು ಅಪ್ಲೋಡ್‌ ಮಾಡಿದ್ದು, “ಸೂಸೈಡ್‌” ಎಂದು ಬರೆದುಕೊಂಡಿದ್ದಾನೆ. ಬಳಿಕ ಇದನ್ನು ಪೊಲೀಸ್ ಪೇಜ್‌ಗೆ ಟ್ಯಾಗ್ ಮಾಡಿದ್ದಾನೆ. ಇದು ಆತಂಕಕ್ಕೆ ಕಾರಣವಾಗಿದ್ದು, ಕೂಡಲೇ ಆತನ ರಕ್ಷಣೆಗಾಗಿ ನೆಟ್ಟಿಗರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಯು ತನ್ನ ಟ್ವಿಟರ್‌ ಅಕೌಂಟ್‌ನಲ್ಲಿ ನಟ ಯಶ್‌ ಅವರ ಫೋಟೊವನ್ನು ಪ್ರೊಫೈಲ್‌ ಪಿಕ್‌ ಆಗಿ ಹಾಕಿಕೊಂಡಿದ್ದಾನೆ. ಆದರೆ, ಬಳಕೆದಾರರ ಐಡಿಯಲ್ಲಿ @ _ _ x user_ _ ಎಂದಿದೆ. ವಿದ್ಯಾರ್ಥಿಯ ಹೆಸರು ಗೊತ್ತಾಗಿಲ್ಲ. ಆದರೆ, ಆತನ ಹುಡುಕಾಟದಲ್ಲಿ ಪೋಷಕರು ಇದ್ದಾರೆ ಎನ್ನಲಾಗಿದೆ. ಆದರೆ, ಇದು ನಿಜವಾಗಿಯೇ ವಿದ್ಯಾರ್ಥಿಯ ಐಡಿಯೇ? ಅಥವಾ ಕಿಡಿಗೇಡಿಗಳು ಮಾಡಿದ ಕೃತ್ಯವೇ ಎಂಬುದು ಗೊತ್ತಾಗಿಲ್ಲ.

ಆದರೆ, ಈ ಐಡಿಯಿಂದ ಟ್ವೀಟ್‌ ಬರುತ್ತಿದ್ದಂತೆ ಉಳಿದ ವಿದ್ಯಾರ್ಥಿಗಳು ಟ್ವಿಟರ್‌ನಲ್ಲಿ ಆತನ ಸಮಾಧಾನ ಮಾಡುತ್ತಿದ್ದಾರೆ. ಜತೆಗೆ ತಂದೆ – ತಾಯಿ ಆತನನ್ನು ಹುಡುಕುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ರಕ್ಷಿಸಿ ಎಂದು ಆತನ ನಂಬರ್‌ ಸಹಿತ ಪೊಲೀಸರಿಗೆ ಮನವಿ‌ ಮಾಡಿದ್ದಾರೆ. ವಿದ್ಯಾರ್ಥಿ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಫೇಲ್‌ ಆಗಿದ್ದೀರಾ? ಸ್ಕೋರ್‌ ಕಡಿಮೆಯಾಗಿದೆಯಾ? ಚಿಂತೆ ಬೇಡ; ಇನ್ನೆರಡು ಪರೀಕ್ಷೆ ಇದೆ!

ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಪ್ರಕಟವಾಗಿದೆ. ಕೆಲವರು ಅನುತ್ತೀರ್ಣರಾಗಿದ್ದಾರೆ. ಮತ್ತೆ ಕೆಲವರಿಗೆ ಅಂಕಗಳು ನಿರೀಕ್ಷೆಯಂತೆ ಬಂದಿರುವುದಿಲ್ಲ. ಹಾಗಂತ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನಿಮಗಾಗಿ ಇನ್ನೂ 2 ಪರೀಕ್ಷೆ ಕಾಯುತ್ತಿದೆ. ಇನ್ನೆರಡು ಬಾರಿ ಪರೀಕ್ಷೆಯನ್ನು ಬರೆಯಬಹುದಾಗಿದ್ದು, ಚಿಂತೆ ಬಿಟ್ಟು ಪರೀಕ್ಷೆಯನ್ನು ಕಟ್ಟಿ. ಪರೀಕ್ಷೆ 2ಕ್ಕೆ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ.

ದ್ವಿತೀಯ ಪಿಯು ಪರೀಕ್ಷೆ 2 ಬರೆಯಲು ಇಚ್ಛಿಸುವವರು ಏಪ್ರಿಲ್ 10 ರಿಂದ 16 ರವರೆಗೆ ಅರ್ಜಿ ಸಲ್ಲಿಸಬಹುದು. ಕಾಲೇಜಿನಲ್ಲಿ ಪ್ರಾಂಶುಪಾಲರ ಸಹಾಯದೊಂದಿಗೆ ಅಥವಾ ವೆಬ್‌ಸೈಟ್‌ನಲ್ಲಿ ನೇರವಾಗಿ ಪರೀಕ್ಷೆ 2ಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದು ದಂಡ ರಹಿತ ಅವಕಾಶವಾಗಿದೆ. ಇನ್ನು ಇದರ ನಂತರ ದಂಡ ಸಹಿತವಾಗಿ ಏಪ್ರಿಲ್‌ 17 ಮತ್ತು 18ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಮರು ಮೌಲ್ಯಮಾಪನ ಫಲಿತಾಂಶಕ್ಕೆ ಕಾಯಬೇಕಿಲ್ಲ

ದ್ವಿತೀಯ ಪಿಯು ಪರೀಕ್ಷೆ 2 ಬರೆಯಲು ಇಚ್ಛಿಸುವವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರೆ ಅದರ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ. ಕೂಡಲೇ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದರೆ, ಯಾವುದೇ ಸಂದರ್ಭದಲ್ಲಿ “ಕರ್ನಾಟಕ ಪ್ರಿ-ಯೂನಿವರ್ಸಿಟಿ ಕೋರ್ಸ್ ಎಸ್‌ಎಲ್‌ಪಿಇ 1997, 29 (ಎ)” ಪ್ರಕಾರ ಈ ಹಿಂದೆ ಗಳಿಸಿದ ಅಂಕಗಳನ್ನು ಮರುಮೌಲ್ಯಮಾಪನದ ನಂತರ ಮರುಸ್ಥಾಪಿಸಲು ಸಾಧ್ಯವಿಲ್ಲ. ಮರು ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳೇ ಪರೀಕ್ಷೆ-1ರ ಅಂಕಗಳೆಂದು ಪರಿಗಣಿಸಲಾಗುವುದು. ಇನ್ನು ಮರು ಮೌಲ್ಯಮಾಪಕರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಬಗ್ಗೆ ಯಾವುದೇ ಮೇಲ್ಮನವಿಗಳಿಗೆ ಅವಕಾಶವಿಲ್ಲ.

ಮರು ಮೌಲ್ಯಮಾಪನದ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ಮೂಲಕ ನೋಡಿಕೊಳ್ಳಬಹುದು. ಇನ್ನು ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ.

2ನೇ ಪರೀಕ್ಷೆಗೆ ಎಷ್ಟು ಶುಲ್ಕ?

ಪರೀಕ್ಷೆ 2 ಅನ್ನು ಬರೆಯುವವರಿಗೆ ಒಂದು ವಿಷಯಕ್ಕೆ 140 ರೂಪಾಯಿ ಶುಲ್ಕವನ್ನು ನಿಗದಿ ಮಾಡಿದ್ದರೆ, ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ.

ಪರೀಕ್ಷೆ 2ರ ನಿಯಮಗಳೇನು?

  1. ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ದಿನಾಂಕ: 10-04-2024 ರಿಂದ 16-04-2024ರವರೆಗೆ ತಮ್ಮ ಕಾಲೇಜು ಅಥವಾ ಕೆಎಸ್‌ಇಎಬಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬಹುದು.
  2. 2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2024ರ ದ್ವಿತೀಯ ಪಿಯುಸಿ ಪರೀಕ್ಷೆ- 2ರ ಪರೀಕ್ಷೆಯನ್ನು ತೆಗೆದುಕೊಳ್ಳಲು, ಮಂಡಳಿಯು ಒದಗಿಸಿದ ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಶುಲ್ಕವನ್ನು ಭರಿಸಿಕೊಳ್ಳಬಹುದು.
  3. ಪ್ರಾಂಶುಪಾಲರು 2022ನೇ ಸಾಲಿನ ಅಥವಾ ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿಯನ್ನು ‘MCA’ ಆಧಾರದ ಮೇಲೆ ಮಾತ್ರ ಸ್ವೀಕರಿಸಬೇಕು.
  4. ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
  5. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಹಾಯವಾಣಿ ಸಂಖ್ಯೆಗಳು: 080- 233100 & 080-23310076ಕ್ಕೆ ಕರೆ ಮಾಡಿ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಉತ್ತರ ಪತ್ರಿಕೆ ಡೌನ್ಲೋಡ್, ಮರು ಮೌಲ್ಯಮಾಪನ, ಮರು ಎಣಿಕೆಗೆ ಈಗಲೇ ಅರ್ಜಿ ಸಲ್ಲಿಸಿ!

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರ ಫಲಿತಾಂಶವನ್ನು (2nd PUC Result) ಬುಧವಾರ ಪ್ರಕಟವಾಗಿದೆ. ಅಧಿಕೃತ ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಿಕೊಳ್ಳಬಹುದಾಗಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ, ಡೌನ್‌ಲೋಡ್‌ ಮಾಡಿಕೊಳ್ಳಲು ಹಾಗೂ ಮರು ಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.

ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ‌ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಅಂಕ ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ಆಗಿರುತ್ತದೆ.

ನಿಮ್ಮ ಫಲಿತಾಂಶವನ್ನು ನೋಡುವುದು ಹೇಗೆ?

ದ್ವಿತೀಯ PUC ಫಲಿತಾಂಶಗಳು karresults.nic.in ನಲ್ಲಿ ಲಭ್ಯವಿರುತ್ತವೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು:

ದ್ವಿತೀಯ ಪಿಯುಸಿಯಲ್ಲಿ ಶೇ.84.59 ಮಂದಿ ಪಾಸ್;‌ ದ.ಕ, ಉಡುಪಿ ಮೊದಲೆರಡು ಸ್ಥಾನ

ಪರೀಕ್ಷೆ ಬರೆದವರಲ್ಲಿ ಒಟ್ಟಾರೆ ಶೇಕಡ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಹೊಸದಾಗಿ ಪರೀಕ್ಷೆ ಬರೆದವರು ಶೇ.84.59 ಫಲಿತಾಂಶ ದಾಖಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಎಂದಿನಂತೆ ಮೊದಲ ಸ್ಥಾನದಲ್ಲಿದ್ದು, ಶೇ.97.37 ಫಲಿತಾಂಶ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಉಡುಪಿ ಇದ್ದು, ಶೇ.96.80 ಫಲಿತಾಂಶ ಗಳಿಸಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿ ವಿಜಯಪುರ (ಶೇ.94.89) ಹಾಗೂ ಉತ್ತರ ಕನ್ನಡ (ಶೇ.92.51) ಇವೆ. ಕೊನೆಯ ಸ್ಥಾನದಲ್ಲಿ ಗದಗ (ಶೇ.72.86) ಪಡೆದಿದೆ. ಬೆಂಗಳೂರು ಉತ್ತರ ಶೇ.88.67 ಹಾಗೂ ಬೆಂಗಳೂರು ದಕ್ಷಿಣ ಶೇ.89.57 ಫಲಿತಾಂಶ ದಾಖಲಿಸಿವೆ.

ಇದನ್ನೂ ಓದಿ: 2nd PUC Result: ದ್ವಿತೀಯ ಪಿಯುಸಿಯಲ್ಲಿ ಶೇ.84.59 ಮಂದಿ ಪಾಸ್;‌ ದ.ಕ, ಉಡುಪಿ ಮೊದಲೆರಡು ಸ್ಥಾನ; ಫಲಿತಾಂಶ ಇಲ್ಲಿದೆ ನೋಡಿ

ಗಣಿತದಲ್ಲಿ 6960 ಮಂದಿ, ಜೀವಶಾಸ್ತ್ರದಲ್ಲಿ 5925 ಮಂದಿ, 2570 ಮಂದಿ ಕನ್ನಡದಲ್ಲಿ , 1499 ಮಂದಿ ಸಂಸ್ಕೃತದಲ್ಲಿ , ಅರ್ಥಶಾಸ್ತ್ರದಲ್ಲಿ 1403 ಮಂದಿ, ಗಣಕ ವಿಜ್ಞಾನದಲ್ಲಿ 2661 ಮಂದಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

Exit mobile version