ಬೆಂಗಳೂರು: ಎಂಜಿನಿಯರಿಂಗ್, ಕೃಷಿ ಸೇರಿದಂತೆ ಹಲವು ವೃತ್ತಿಪರ ಕೋರ್ಸ್‌ಗಳಿಗೆ ಬುಧವಾರ, ಗುರುವಾರ ನಡೆದಿದ್ದ ದಿನದ ಸಿಇಟಿ-2024 ಪರೀಕ್ಷೆಯಲ್ಲಿ (CET 2024 exam) ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಮಹಾ ಎಡವಟ್ಟು ಆಗಿದೆ. ನಾಲ್ಕು ವಿಷಯಗಳಿಂದ ಒಟ್ಟು 50 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಬಂದಿವೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲು ಇಂದೇ (ಶನಿವಾರ – ಏಪ್ರಿಲ್ 20) ಸಮಿತಿಯನ್ನು ರಚನೆ ಮಾಡಲು ಮುಂದಾಗಿದೆ. ಅಲ್ಲದೆ, ಮರು ಪರೀಕ್ಷೆ ಮಾಡಲಿದೆಯೇ? ಅಥವಾ ಗ್ರೇಸ್ ಮಾರ್ಕ್ಸ್ ಕೊಡಲಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.
ಮೊದಲ ದಿನದ ಸಿಇಟಿ ಪರೀಕ್ಷೆಯಲ್ಲಿ ಗಣಿತ ಹಾಗೂ ಜೀವಶಾಸ್ತ್ರದ ವಿಷಯದಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಎರಡನೇ ದಿನದ ಪರೀಕ್ಷೆಯಲ್ಲಿಯೂ ಈ ಸಮಸ್ಯೆ ಪುನರಾವರ್ತನೆಯಾಗಿತ್ತು. ಭೌತಶಾಸ್ತ್ರದಲ್ಲಿ 8 ಹಾಗೂ ರಸಾಯನಶಾಸ್ತ್ರ ವಿಷಯದಲ್ಲಿ 18 ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದು ವಿದ್ಯಾರ್ಥಿಗಳ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಮಸ್ಯೆಯನ್ನು ಸರಿಪಡಿಸಲಾಗದ ಸ್ಥಿತಿಗೆ ಕೆಇಎ ಬಂದಿದೆ ಎನ್ನಲಾಗಿದೆ. ನಾಲ್ಕು ವಿಷಯಗಳಲ್ಲಿ ಒಟ್ಟು 50 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಇರುವುದರಿಂದ ಕೆಇಎ ಮುಂದೆ ಏನು ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈಗ ಗ್ರೇಸ್ ಮಾರ್ಕ್ಸ್ ನೀಡಲು ಸಾಧ್ಯವೇ? ಮರು ಪರೀಕ್ಷೆ ನಡೆಸಬೇಕಾ? ಎಂಬ ಗೊಂದಲ ಏರ್ಪಿಟ್ಟಿದೆ.
ಇದನ್ನೂ ಓದಿ: Neha Murder Case: ನೇಹಾಳನ್ನು ಮದುವೆ ಮಾಡಿಸುವಂತೆ ಆಕೆಯ ಹೆತ್ತವರ ಪ್ರಾಣ ತಿಂದಿದ್ದ ಫಯಾಜ್!
ಮರು ಪರೀಕ್ಷೆ ಮಾಡುತ್ತಾ?
ಮರು ಪರೀಕ್ಷೆ ನಡೆಸಲು ಕೆಇಎ ಮುಂದಾಗುತ್ತದೆಯೇ? ಒಂದು ವೇಳೆ ಈ ನಿರ್ಧಾರಕ್ಕೆ ಬಂದರೆ ದೂರದೂರಿನಿಂದ ಬಂದು ಪರೀಕ್ಷೆ ಬರೆದ ಮಕ್ಕಳಿಗೆ ಮತ್ತೊಂದು ಸವಾಲು ಎದುರಾಗಲಿದೆ. ಹೀಗಾಗಿ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡಿ. ಇಲ್ಲದಿದ್ದರೆ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ ಎಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ.
ಏಪ್ರಿಲ್ 27ರವರೆಗೆ ಆಕ್ಷೇಪಣೆ ಸಲ್ಲಿಕೆಗೆ KEA ಅವಕಾಶ
ಈ ಬಾರಿ ಸಿಇಟಿಯಲ್ಲಿ ನೋಂದಣಿ ಮಾಡಿಕೊಂಡಿದ್ದ 3,49,637 ವಿದ್ಯಾರ್ಥಿಗಳ ಪೈಕಿ ಶೇ.92ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ವರ್ಷ ಪಠ್ಯದಲ್ಲಿ ಇಲ್ಲದ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರ ಪ್ರಶ್ನೆ ಕೇಳಿದೆ. ಪಿಯು ಮಂಡಳಿ ನಿಗದಿ ಪಡಿಸಿರುವ ಪಿಯು ಪಠ್ಯಪುಸ್ತಕದ ಆಧಾರದ ಮೇಲೆ ಸಿಇಟಿ ಪರೀಕ್ಷೆ ನಡೆಸಬೇಕು. ಆದರೆ ಪಿಯು ಮಂಡಳಿ ನಿಗದಿ ಮಾಡದ ಪಠ್ಯ ಪುಸ್ತಕದ ಪ್ರಶ್ನೆ ಕೇಳಿ ಕೆಇಎ ಗೊಂದಲ ಸೃಷ್ಟಿಸಿದೆ. ಕೆಇಎ ಎಡವಟ್ಟಿಗೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 27ರವರೆಗೆ ಕಾಲಾವಕಾಶವನ್ನು ಕೆಇಎ ನೀಡಿದೆ.
ಪ್ರಶ್ನೆಪತ್ರಿಕೆಯಲ್ಲಿನ ಯಾವುದೇ ಪ್ರಶ್ನೆಗಳ ಬಗ್ಗೆ ಆಕ್ಷೇಪಣೆಗಳು ಇದ್ದರೆ, ವಿಷಯ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆಗಳನ್ನು ನಮೂದಿಸಿ keaugcet24@gmail.com ಗೆ ಇ – ಮೇಲ್ ಮೂಲಕ ಸಂಜೆ 5.30ರ ಒಳಗೆ ದೂರು ಸಲ್ಲಿಸಲು ಕೆಇಎ ಸೂಚಿಸಿದೆ. ಇದಕ್ಕೆ ತಜ್ಞರ ಸಮಿತಿಯು ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪರೀಕ್ಷಾ ಪ್ರಾಧಿಕಾರ ಹಾಗೂ ಪಿಯು ಮಂಡಳಿ ನಡುವೆ ಆರೋಪ ಪ್ರತ್ಯಾರೋಪ ನಡೆದಿದೆ. ಪಿಯು ಮಂಡಳಿ ನೀಡಿದ ಪಠ್ಯ ಪುಸ್ತಕದ ಆಧಾರದ ಮೇಲೆಯೇ ಸಿಇಟಿ ಪ್ರಶ್ನೆ ಪತ್ರಿಕೆ ತಯಾರಿಸಲಾಗಿದೆ ಎಂದು ಕೆಇಎ ಹೇಳಿದೆ. ತಾವು ನೀಡಿದ ಪರಿಷ್ಕೃತ ಪಠ್ಯಪುಸ್ತಕ ಕೆಇಎ ಅನುಸರಿಸಿಲ್ಲ ಎಂದು ಪಿಯು ಮಂಡಳಿ ಆರೋಪಿಸಿದೆ. ಎರಡು ಇಲಾಖೆ ನಡುವೆ ಪತ್ರವ್ಯವಹಾರ ನಡೆದಿದೆ. ಪಠ್ಯಪುಸ್ತಕ ಪರಿಷ್ಕರಣೆ ಆಧಾರದ ಮೇಲೆ ಸಿಇಟಿ ಪರೀಕ್ಷೆ ನಡೆಸುವಂತೆ ಪಿಯು ಬೋರ್ಡ್ ಮೊದಲೇ ಪತ್ರ ಬರೆದಿತ್ತು. ಪಿಯು ಬೋರ್ಡ್ ಪತ್ರಕ್ಕೆ ಉತ್ತರವನ್ನೂ ಕೆಇಎ ನೀಡಿತ್ತು. ಪರಿಷ್ಕೃತ ಪಠ್ಯಪುಸ್ತಕ ಅನುಸರಿಸಲಾಗಿದೆ ಎಂದಿದೆ. ಕೊನೆಗೆ ಪಿಯು ಬೋರ್ಡ್ ನೀಡಿದ ಪರಿಷ್ಕೃತ ಪಠ್ಯಪುಸ್ತಕವನ್ನು ಕೆಇಎ ನಿರ್ಲಕ್ಷ್ಯ ಮಾಡಿದೆ.
ಇಂದು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೆಇಎ ಸೂಚನೆ ನೀಡಿದೆ. ಆಕ್ಷೇಪಣೆಗಳ ಆಧಾರದ ಮೇಲೆ ಪರಿಶೀಲನೆಗೆ ಸಮಿತಿ ರಚಿಸುವ ಭರವಸೆಯನ್ನು ಕೆಇಎ ನೀಡಿದ್ದು, ಸಮಿತಿ ನೀಡುವ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಇಎ ನಿರ್ದೇಶಕಿ ರಮ್ಯಾ ಹೇಳಿದ್ದಾರೆ.