ಬೆಂಗಳೂರು: ಕರ್ನಾಟಕದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ನಾಡಿನ 83 ಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದು, ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಅವರನ್ನು ಆಯ್ಕೆ ಮಾಡಲು ಯಾವ ಮಾನದಂಡ ಅನುಸರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಡಾ. ಮರುಳುಸಿದ್ಧಪ್ಪ, ಡಾ. ರಾಜೇಂದ್ರ ಚೆನ್ನಿ, ಡಾ. ವಿಜಯಾ, ಡಾ. ಬಂಜೆಗರೆ ಜಯಪ್ರಕಾಶ್ ಡಾ. ರಹಮತ್ ತರಿಕೆರೆ, ದಿನೇಶ್ ಅಮಿನ್ ಮಟ್ಟು, ವಿ.ಪಿ. ನಿರಂಜನಾರಾಧ್ಯ, ಪ್ರೊ. ಪಟ್ಟಾಭಿರಾಮ ಸೋಮಯಾಜಿ ಸೇರಿ 83 ಮಂದಿಯಿಂದ ಸರ್ಕಾರಕ್ಕೆ ಬಹಿರಂಗ ಪತ್ರ ಬರೆಯಲಾಗಿದೆ.
ಇದನ್ನೂ ಓದಿ | ಪಠ್ಯ ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಅರ್ಹತೆ ಏನು?: MLC ವಿಶ್ವನಾಥ್ ಆಕ್ರೋಶ
ಪಿ. ಲಂಕೇಶ್‌ರ ಮೃಗ ಮತ್ತು ಸುಂದರಿ, ಡಾ. ಜಿ. ರಾಮಕೃಷ್ಣ ಅವರ ಭಗತ್ ಸಿಂಗ್, ಸಾರಾ ಅಬೂಬಕ್ಕರ್ ಅವರ ಯುದ್ಧ, ಎ. ಎನ್. ಮೂರ್ತಿಯವರ ವ್ಯಾಘ್ರ, ಶಿವಕೋಟ್ಯಾಚಾರ್ಯರ ಸುಕುಮಾರ ಸ್ವಾಮಿ ಕಥೆಯನ್ನು ಕೈಬಿಡಲಾಗಿದೆ. ಹಾಗೂ ಬ್ರಹ್ಮಶ್ರೀ ನಾರಾಯಣಗುರು, ಪೆರಿಯಾರ್ ಚಿಂತನೆಗಳಿರುವ ಪಠ್ಯಗಳನ್ನೂ ಹೊರಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪಠ್ಯಗಳ ಬದಲಿಗೆ ಎಸ್. ವಿ. ಪರಮೇಶ್ವರ ಭಟ್ಟ ಅವರ ಹೇಮಂತ, ಗಜಾನನ ಶರ್ಮಾ ಅವರ ಚೆನ್ನಭೈರಾಧೇವಿ, ಎನ್. ರಂಗನಾಥ್ ಅವರ ರಾಮರಾಜ್ಯ ಹಾಗೂ ಎಸ್.ಎಲ್. ಭೈರಪ್ಪ ಅವರ ನಾನು ಕಂಡಂತೆ ಡಾ. ಬಿಜಿಎಲ್ ಸ್ವಾಮಿ ಎಂಬ ಪಾಠಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ..
ಪಠ್ಯಪುಸ್ತಕವನ್ನು ಪರಿಷ್ಕಾರ ಮಾಡುವ ಮುನ್ನ ಚರ್ಚೆ ನಡೆಸಬೇಕು. ಸರ್ಕಾರ ಯಾವುದೇ ರೀತಿ ಚರ್ಚೆಯನ್ನೂ ಮಾಡಿಲ್ಲ. ಮನಸೋಯಿಚ್ಛೆ ಬಲಪಂಥೀಯ ಚಿಂತನೆಗಳನ್ನು ಪಠ್ಯಕ್ಕೆ ತುಂಬಿದೆ. ಶಿಕ್ಷಣ ತಜ್ಞ ಆಗಿರದ ಹಾಗು ಶಿಕ್ಷಣ ಕ್ಷೇತ್ರದಲ್ಲಿ ಏನೂ ಸಂಶೋಧನೆ ಮಾಡದಿರುವ ರೋಹಿತ್ ಚಕ್ರತೀರ್ಥ ಅವರನ್ನು ಯಾವ ಆಧಾರದ ಮೇಲೆ ಪಠ್ಯ ಪುಸ್ತಕ ಪರಿಷ್ಕೃತ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು? ಎಂದು ಸರ್ಕಾರಕ್ಕೆ ಪತ್ರದ ಮೂಲಕ ಪ್ರಶ್ನೆ ಮಾಡಲಾಗಿದೆ.
ಇದನ್ನೂ ಓದಿ: ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಎಂದ ಸಿದ್ದರಾಮಯ್ಯ