ನವ ದೆಹಲಿ: ಏಷ್ಯಾದ ಅತ್ಯುತ್ತಮ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ (Asia University Rankings 2023) ದೇಶದ 75 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದು, ಇದೊಂದು ದಾಖಲೆಯಾಗಿದೆ. ಕಳೆದ ವರ್ಷ 71 ಭಾರತೀಯ ವಿವಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಜಪಾನ್‌ನ 117 ಮತ್ತು ಚೀನಾದ 95 ವಿವಿಗಳು ಪಟ್ಟಿಯಲ್ಲಿ ಸ್ಥಾನ ಪಡೆದು, ಅಗ್ರಸ್ಥಾನ ಪಡೆದಿವೆ.
ನಿರೀಕ್ಷೆಯಂತೆಯೇ ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) (ಭಾರತೀಯ ವಿಜ್ಞಾನ ಸಂಸ್ಥೆ ವಿವಿ) ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ವಿವಿಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ʻಟೈಮ್ಸ್ ಹೈಯರ್ ಎಜುಕೇಷನ್ ಏಷ್ಯಾ ಯೂನಿರ್ವಸಿಟಿ ರ‍್ಯಾಂಕಿಂಗ್ -2023ʼ ಎಂಬ ಈ ಪಟ್ಟಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ 48 ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 42 ನೇ ಸ್ಥಾನದಲ್ಲಿತ್ತು.
ರಾಜ್ಯದ ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ 68 ನೇ ಸ್ಥಾನ ಪಡೆದುಕೊಂಡಿದೆ. ಹಿಮಾಚಲ ಪ್ರದೇಶದ ಶೂಲಿನಿ ವಿಶ್ವವಿದ್ಯಾಲಯ ಈ ಪಟ್ಟಿಯಲ್ಲಿ 77 ಸ್ಥಾನ ಪಡೆದಿದ್ದರೆ, ಕೇರಳದ ಮಹಾತ್ಮಗಾಂಧಿ ಯೂನಿರ್ವಸಿಟಿ 95 ನೇ ಸ್ಥಾನ ಪಡೆದುಕೊಂಡಿದೆ. ಆಶ್ಚರ್ಯವೆಂದರೆ ದೇಶದ ಪ್ರತಿಷ್ಠಿತ ವಿವಿ ಎಂಬ ಹೆಗ್ಗಳಿಕೆ ಪಡೆದಿರುವ ದೆಹಲಿಯ ಜೆಎನ್‌ಯು ವಿವಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಚೀನಾದ ಐತಿಹಾಸಿಕ ಹಾಗೂ ಅತಿ ದೊಡ್ಡ ವಿವಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಸಿಂಗುವಾ ವಿಶ್ವವಿದ್ಯಾಲಯ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಚೀನಾ ಪೀಕಿಂಗ್ ವಿವಿ ಇದೆ. ಮೂರನೇ ಸ್ಥಾನವನ್ನು ಸಿಂಗಾಪುರದ ನ್ಯಾಷನಲ್ ಯೂನಿರ್ವಸಿಟಿ ಪಡೆದುಕೊಂಡಿದೆ. ಟಾಪ್ 50 ರ ಪಟ್ಟಿಯಲ್ಲಿ ಭಾರತದ ಒಂದು ವಿವಿ ಇದ್ದರೆ ಟಾಪ್ 100 ಪಟ್ಟಿಯಲ್ಲಿ ನಾಲ್ಕು ವಿವಿಗಳು ಸ್ಥಾನಪಡೆದಿವೆ. ಟಾಪ್ 200 ಪಟ್ಟಿಯಲ್ಲಿ 18 ವಿವಿಗಳು ಸ್ಥಾನ ಪಡೆದಿವೆ.
ಈ ಬಾರಿ ದೇಶದ ಹೆಚ್ಚು ವಿವಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಅನೇಕ ವಿವಿಗಳ ಸ್ಥಾನ ಕುಸಿತವಾಗಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕಳೆದ ವರ್ಷ 42 ನೇ ಸ್ಥಾನದಲ್ಲಿತ್ತು. ಈ ವರ್ಷ 48 ನೇ ಸ್ಥಾನಕ್ಕೆ ಕುಸಿದಿದೆ. ಹಾಗೆಯೇ ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ ಕಳೆದ ವರ್ಷ 65 ನೇ ಸ್ಥಾನದಲ್ಲಿತ್ತು. ಈ ವರ್ಷ 68ನೇ ಸ್ಥಾನ ಪಡೆದುಕೊಂಡಿದೆ. ಹೈದರಾಬಾದ್‌ನ ಐಐಟಿ ಮಾತ್ರ ಸ್ಥಾನ ಸುಧಾರಿಸಿಕೊಂಡಿದ್ದು, ಕಳೆದ ಬಾರಿ 174ನೇ ಸ್ಥಾನದಲ್ಲಿದ್ದ ಈ ವಿವಿ ಈ ಬಾರಿ 106 ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: NIRF Ranking 2023 : ಬೆಂಗಳೂರು ಐಐಎಸ್‌ಸಿ ಸೆಕೆಂಡ್; ಲಾ ಮತ್ತು ರಿಸರ್ಚ್‌ನಲ್ಲಿ ಬೆಂಗಳೂರು ಫಸ್ಟ್