ನವ ದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು (CBSE Board Exam 2023) ಇಂದಿನಿಂದ (ಫೆ.15) ಆರಂಭಿಸಲಿದೆ. 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮಾರ್ಚ್ 21 ರವರಗೆ ನಡೆದರೆ, 12ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 5 ರವರೆಗೆ ನಡೆಸಲಾಗುತ್ತದೆ.
ಈ ಬೋರ್ಡ್ ಪರೀಕ್ಷೆಗಳನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಡೆಸಲಾಗುತ್ತದೆ. ಕೆಲವು ವಿಷಯಗಳ ಪರೀಕ್ಷೆಯು 12.30ಕ್ಕೆ ಮುಕ್ತಾಯವಾಗಲಿವೆ. ವಿದ್ಯಾರ್ಥಿಗಳು ಬೆಳಗ್ಗೆ 9.30ರ ವೇಳೆಗೆ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಪರೀಕ್ಷಾ ಕೇಂದ್ರದ ಗೇಟ್‌ನ ಬಾಗಿಲು ಹಾಕಲಾಗುತ್ತದೆ. ನಂತರ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಸಿಬಿಎಸ್‌ಇಯು ತಿಳಿಸಿದೆ.
10ನೇ ತರಗತಿಯ ಬೋರ್ಡ್ ಪರಿಕ್ಷೆಯು ಚಿತ್ರಕಲೆ, ರಾಯ್, ಗುರುಂಗ್, ತಮಾಂಗ್, ಶೇರ್ಪಾ ಮತ್ತು ಥಾಯ್ ಪತ್ರಿಕೆಗಳೊಂದಿಗೆ ಪ್ರಾರಂಭವಾಗುತ್ತದೆ. ಕೊನೆಯಲ್ಲಿ ಗಣಿತದ ಮೂಲ ಪತ್ರಿಕೆ ಪರೀಕ್ಷೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಸಿಬಿಎಸ್‌ಇ12ನೇ ತರಗತಿಯ ಬೋರ್ಡ್ ಪರೀಕ್ಷೆಯು ಎಂಟರ್‌ಪ್ರೆನರ್‌ಶಿಪ್ ಪತ್ರಿಕೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಸೈಕಾಲಜಿ ಪತ್ರಿಕೆಯೊಂದಿಗೆ ಮುಕ್ತಾಯಗೊಳ್ಳಲಿದೆ.
10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುತ್ತಿದ್ದಂತೆಯೇ ಪ್ರಶ್ನೆ ಪತ್ರಿಕೆಗಳನ್ನು ಓದಿಕೊಳ್ಳಲು 15 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಈಗಾಗಲೇ ಸಿಬಿಎಸ್‌ಇಯು ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರವೇ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಿಬಿಎಸ್‌ಇಯು ತಿಳಿಸಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸಹಿ ಮಾಡಿದ ಪ್ರವೇಶ ಪತ್ರ, ಶಾಲೆಯ ಐಡಿಕಾರ್ಡ್ ಮತ್ತು ಯಾವುದಾದರೂ ಒಂದು ಐಡಿ ಕಾರ್ಡ್ ತೆಗೆದುಕೊಂಡು ಬರಬೇಕೆಂದು ಸಿಬಿಎಸ್‌ಇಯು ಸೂಚಿಸಿದ್ದು, ಸರಿಯಾದ ದಾಖಲೆಗಳಿಲ್ಲದೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಎಚ್ಚರಿಸಿದೆ.
ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. ಪರೀಕ್ಷೆ ಬರೆಯಲು ಅಗತ್ಯವಾಗಿರುವ ಪೆನ್ನು, ಕಲರ್‌ಪೆನ್ನು, ಪೆನ್ಸಿಲ್ ಇತ್ಯಾದಿಗಳನ್ನು ವಿದ್ಯಾರ್ಥಿಗಳೇ ತರಬೇಕೆಂದು ಸೂಚಿಸಲಾಗಿದೆ. ಪರೀಕ್ಷೆಯ ಕುರಿತು ಈಗಾಗಲೇ ಸಿಬಿಎಸ್‌ಇಯು ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದು, ಇದನ್ನು ನೋಡಿಕೊಂಡೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕೆಂದು ಸಿಬಿಎಸ್‌ಇಯು ಕೋರಿದೆ.
ಪರೀಕ್ಷೆಯ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: http://www.cbse.gov.in
ಇದನ್ನೂ ಓದಿ : SSLC Exam 2023 | ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಮಾ. 31 ರಿಂದಲೇ ಎಕ್ಸಾಮ್ ಶುರು