ನವದೆಹಲಿ: ಸಿಬಿಎಸ್ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು (CBSE Board Exams) ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ಡಿವಿಷನ್/ಡಿಸ್ಟಿಂಕ್ಷನ್/ಅಗ್ರೇಗೇಟ್ (division/distinction/aggregate) ನೀಡಲಾಗುವುದಿಲ್ಲ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(The Central Board of Secondary Education – CBSE) ಹೇಳಿದೆ. ಮಂಡಳಿ ಕೈಗೊಂಡ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಮಂಡಳಿಯ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳ ಶೇಕಡಾವಾರು ಲೆಕ್ಕಾಚಾರದ ಮಾನದಂಡವನ್ನು ಕೋರಿ ಅನೇಕ ಮನವಿಗಳು ಸಲ್ಲಿಕೆಯಾಗಿದ್ದವು. ಬಳಿಕ ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಡಾ. ಸನ್ಯಮ್ ಭಾರದ್ವಾಜ್ ಅವರು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ನಿರ್ಧಾರವನ್ನು ತಿಳಿಸಿದ್ದಾರೆ. ಪರೀಕ್ಷೆಯ ಉಪ-ನಿಯಮಗಳ ಅಧ್ಯಾಯ -7 ರ ಉಪ-ವಿಭಾಗ 40.1 (iii) ಪ್ರಕಾರ ಒಟ್ಟಾರೆಯಾಗಿ ಯಾವುದೇ ಡಿವಿಷನ್/ಡಿಸ್ಟಿಂಕ್ಷನ್/ಅಗ್ರೆಗೇಟ್ ನೀಡುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಯು ಐದಕ್ಕಿಂತ ಹೆಚ್ಚು ವಿಷಯಗಳನ್ನು ನೀಡಿದ್ದರೆ, ಅತ್ಯುತ್ತಮ ಐದು ವಿಷಯಗಳನ್ನು ನಿರ್ಧರಿಸುವ ನಿರ್ಧಾರವು ಪ್ರವೇಶ ಪಡೆಯುವ ಸಂಸ್ಥೆ ಅಥವಾ ಉದ್ಯೋಗದಾತರದ್ದಾಗಿದೆ ಎಂದು ಸಿಬಿಎಸ್ಇ ಹೇಳಿದೆ.
ಸಿಬಿಎಸ್ಇ ಯಾವುದೇ ರೀತಿಯಲ್ಲಿ ಅಂಕಗಳ ಶೇಕಡವಾರು ಲೆಕ್ಕಾಚಾರವನ್ನಾಗಲೀ, ಆ ಬಗ್ಗೆ ಮಾಹಿತಿಯನ್ನು ನೀಡವುದಾಗಲೀ, ಘೋಷಣೆ ಮಾಡಲು ಹೋಗುವುದಿಲ್ಲ. ಒಂದು ವೇಳೆ ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕೆ ಅಗತ್ಯವಿದ್ದರೆ ಪ್ರವೇಶ ನೀಡುವ ಸಂಸ್ಥೆ ಅಥವಾ ಉದ್ಯೋಗದಾತರು ಈ ಪ್ರಕ್ರಿಯೆನ್ನು ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಕೈಗೊಂಡಿರುವ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲ ತಿರುಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವು ಸಮರ್ಥವಾಗಿದೆ. ಮಕ್ಕಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡಲು, ಶಿಕ್ಷಣದತ್ತ ಹೆಚ್ಚು ಸಮಗ್ರ ವಿಧಾನ ಪ್ರೋತ್ಸಾಹಿಸಲು, ಹೆಚ್ಚು ಅಂಕಗಳನ್ನು ಪಡೆಯಬೇಕು ಎಂಬ ಮಾನಸಿಕ ಒತ್ತಡವನ್ನು ತೆಗೆದು ಹಾಕಲು ಈ ನಿರ್ಧಾರವು ಹೆಚ್ಚು ನೆರವು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಪರೀಕ್ಷೆಯ ದೃಷ್ಟಿಯಿಂದ ಓದುವುದರ ಬದಲಿಗೆ ಒಟ್ಟಾರೆ ಕಲಿಕೆಯನ್ನು ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ. ಶೈಕ್ಷಣಿಕ ಪರಿಸರದಲ್ಲಿ ಹೆಚ್ಚು ಸಮತೋಲನವನ್ನು ಕಾಯ್ದುಕೊಳ್ಳಲು, ಮೌಖಿಕ ಕಲಿಕೆಯಿಂದ ದೂರ ಸರಿಯುವುದು ಈ ನಿರ್ಧಾರದ ಸಕಾರಾತ್ಮಕ ಪರಿಣಾಮಗಳಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಜಕೀಯ ಹಗೆತನಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಬಲಿಯಾಗದಿರಲಿ