ಬೆಂಗಳೂರು: ಗುರುವಾರ ನಡೆದಿದ್ದ ಮೊದಲ ದಿನದ ಸಿಇಟಿ-2024 ಪರೀಕ್ಷೆಯಲ್ಲಿ (CET 2024 exam) ಗಣಿತ ಹಾಗೂ ಜೀವಶಾಸ್ತ್ರದ ವಿಷಯದಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ದೂರು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಇಎ, ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ (ಏಪ್ರಿಲ್ 24) ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡುವುದಾಗಿ ಹೇಳಿದೆ.
ಜೀವಶಾಸ್ತ್ರದ 11 ಪ್ರಶ್ನೆಗಳು ಹಾಗೂ ಗಣಿತದ 9 ಪ್ರಶ್ನೆಗಳು ಔಟ್ ಆಫ್ ಸಿಲೆಬಸ್ ಕೇಳಲಾಗಿದೆ ಎಂದು ವಿದ್ಯಾರ್ಥಿಗಳು ಕೆಇಎಗೆ ದೂರು ನೀಡಿದ್ದಾರೆ. ಇವುಗಳಿಗೆ ಗ್ರೇಸ್ ಮಾರ್ಕ್ಸ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಠ್ಯಪುಸ್ತಕದಲ್ಲಿ ಇಲ್ಲದ ಪ್ರಶ್ನೆಗಳು ಬಂದಿವೆ. ಒಟ್ಟು 14 ಮಾರ್ಕ್ಸ್ ಔಟ್ ಆಫ್ ಸಿಲೆಬಸ್ ಬಂದಿದೆ ಎಂದು ಗುರುವಾರ ವಿದ್ಯಾರ್ಥಿಗಳು ಆರೋಪ ಮಾಡಿದ್ದರು. ಈಗ 11 ಮಾರ್ಕ್ಸ್ ಬಗ್ಗೆ ದೂರಿದ್ದಾರೆ.
ಕೆಇಎ ಹೇಳೋದೇನು?
ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಕೆಇಎ ಈವರೆಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು. ನಂತರ ಗ್ರೇಸ್ ಮಾರ್ಕ್ಸ್ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ವಿಸ್ತಾರ ನ್ಯೂಸ್‌ಗೆ ಕೆಇಎ ಮಂಡಳಿ ಮಾಹಿತಿ ನೀಡಿದೆ. ಈ ಸಮಿತಿ ರಚನೆಯಾದ ಬಳಿಕ ಅಧ್ಯಯನ ಮಾಡಿ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು.
ದಾಖಲೆ ಸಂಖ್ಯೆಯಲ್ಲಿ ಸಿಇಟಿ ಬರೆದಿರುವ ವಿದ್ಯಾರ್ಥಿಗಳು
ಈ ವರ್ಷ ಸಿಇಟಿ ಪರೀಕ್ಷೆಗೆ ದಾಖಲೆಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಯನ್ನು ಬರೆದಿದ್ದಾರೆ. ಈ ಹಿಂದೆ ಯಾವತ್ತೂ ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿರಲಿಲ್ಲ. ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ 167 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆಯನ್ನು ನಡೆಸಲಾಗಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಭೇಟಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಗುರುವಾರ ಮಲ್ಲೇಶ್ವರಂ ಪಿಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶುಕ್ರವಾರ ನಡೆಯುವ ಪರೀಕ್ಷೆಗೂ ಬಿಗಿ ಭದ್ರತೆ ಇರಲಿದೆ ಎಂದು ಹೇಳಿದ್ದರು.
ಸಿಇಟಿಗೆ ಹೆಚ್ಚು ಅಂಕಗಳ ಪಟ್ಟಿ ಪರಿಗಣನೆ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್‌ನ್ಯೂಸ್ ನೀಡಿದೆ. ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಯಾವುದರಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೋ ಅದನ್ನೇ ಸಿಇಟಿ (CET 2024)ಗೆ ಪರಿಗಣಿಸಲು ಕೆಇಎ ಸಮ್ಮತಿ ಸೂಚಿಸಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ನಿರಾಳವಾಗಿದ್ದಾರೆ. ಎಂಜಿನಿಯರ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೆಇಎ ಪ್ರತಿವರ್ಷ ಸಿಇಟಿ ನಡೆಸುತ್ತದೆ.
ಸಿಇಟಿ ಜತೆಗೆ ದ್ವಿತೀಯ ಪಿಯುಸಿಯಲ್ಲಿ ಗಳಿಸಿದ ಅಂಕವನ್ನೂ ರ್ಯಾಂಕಿಂಗ್ಗೆ ಪರಿಗಣಿಸಲಾಗುತ್ತದೆ. ಇದುವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದರೆ ಪೂರಕ ಪರೀಕ್ಷೆ ಬರೆದು ತೇರ್ಗಡೆಯಾಗಬೇಕಿತ್ತು. ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕ್ರೋಡೀಕರಿಸಿ ಅಂಕಪಟ್ಟಿ ನೀಡಲಾಗುತ್ತಿತ್ತು.
ನಿಯಮದಲ್ಲಿ ಬದಲಾವಣೆ
ಈ ಬಾರಿ ಈ ನಿಯಮದಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಒಂದು ವೇಳೆ ಕಡಿಮೆ ಅಂಕ ಬಂದಿದ್ದರೆ ಅದನ್ನು ಉತ್ತಮಪಡಿಸಿಕೊಳ್ಳಲು ವಿದ್ಯಾರ್ಥಿಗಳು ಇನ್ನು ಉಳಿದ ಎರಡು ಪರೀಕ್ಷೆಗಳನ್ನೂ ಬರೆಯಬಹುದು. ಹೆಚ್ಚು ಅಂಕ ಬಂದಿರುವುದನ್ನೇ ಪರಿಗಣಿಸಿ ಅಂತಿಮ ಅಂಕಪಟ್ಟಿ ನೀಡಲಾಗುತ್ತದೆ.
ಇದೀಗ ಆ ಹೆಚ್ಚುವರಿ ಅಂಕವನ್ನೇ ಸಿಇಟಿ ರ‍್ಯಾಂಕಿಂಗ್‌ಗೂ ಪರಿಣಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಈ ಬಗ್ಗೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾತನಾಡಿ, ʼʼಹೆಚ್ಚು ಅಂಕ ಬಂದಿರುವ ಅಂತಿಮ ಅಂಕ ಪಟ್ಟಿಯನ್ನು ಸಿಇಟಿ ಅಂಕಗಳ ಜತೆ ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲು ಪರೀಕ್ಷಾ ಪ್ರಾಧಿಕಾರ ಪರಿಗಣಿಸಲಿದೆʼʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Neha Murder Case: ಐಸಿಸ್ ಮಾದರಿಯಲ್ಲಿ ನೇಹಾಗೆ ಚಾಕು ಇರಿತ; ಲವ್ ಜಿಹಾದ್ ಫಲಿಸದ್ದಕ್ಕೆ ಕೃತ್ಯ: ಪ್ರಮೋದ್ ಮುತಾಲಿಕ್
ನಾಳೆ ಯಾವ ಪರೀಕ್ಷೆ?
ಸಿಇಟಿ 2024ರ ಪರೀಕ್ಷೆಗಳು ಏಪ್ರಿಲ್ 18ರಿಂದ ಆರಂಭವಾಗಿದ್ದು, ಏಪ್ರಿಲ್ 20ರವರೆಗೆ ನಡೆಯಲಿದೆ. ಏಪ್ರಿಲ್ 19ರ ಬೆಳಗ್ಗೆ 10.30ರಿಂದ ಭೌತಶಾಸ್ತ್ರ , ಮಧ್ಯಾಹ್ನ ರಸಾಯನ ಶಾಸ್ತ್ರ, ಏಪ್ರಿಲ್ 20 – ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಭಾಷಾ ಪರೀಕ್ಷೆಯನ್ನು ಆಯೋಜಿಸಲಾಗಿದೆ.