Site icon Vistara News

CET Result: ದ್ವಿತೀಯ ಪಿಯು 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ; ಮೇ 30 ಅಥವಾ 31ಕ್ಕೆ ಪ್ರಕಟ?

CET result only after II PU 2nd exam Published on May 30 or 31

ಬೆಂಗಳೂರು: 2024-25ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ರಿಸಲ್ಟ್‌ಗಾಗಿ (CET Result) ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ದ್ವಿತೀಯ ಪಿಯು 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ಪಷ್ಟನೆ ನೀಡಿದೆ. ಹೀಗಾಗಿ ಮೇ 30 ಇಲ್ಲವೇ ಮೇ 31ಕ್ಕೆ ಪ್ರಕಟವಾಗುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 18, 19ರಂದು ನಡೆಸಿತ್ತು. ಇದರ ಫಲಿತಾಂಶವು ಲೋಕಸಭಾ ಚುನಾವಣೆಯ ರಿಸಲ್ಟ್‌ ಬಳಿಕವೇ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಸ್ಪಷ್ಟನೆ ನೀಡಿದ್ದು, ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮೊದಲ ಎರಡು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೊ ಅವುಗಳನ್ನೇ ಸಿಇಟಿ ರ‍್ಯಾಂಕ್‌ಗೆ ಪರಿಗಣನೆ ಮಾಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಎರಡನೇ ಪರೀಕ್ಷೆಯ ಫಲಿತಾಂಶಕ್ಕಾಗಿ ಕೆಇಎ ಕಾಯುವುದು ಅನಿವಾರ್ಯವಾಗಿದೆ.

ಅಧಿಕಾರಿಗಳ ಎಡವಟ್ಟು

ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ವೃತ್ತಿಪರ ಕೋಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ, ಈ ಬಾರಿಯ ಸಿಇಟಿ ಪರೀಕ್ಷೆ ಗೊಂದಲದ ಗೂಡಾಗಿತ್ತು. ಪರೀಕ್ಷೆಯಲ್ಲಿ 4 ವಿಷಯಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಔಟ್‌ ಆಫ್‌ ಸಿಲಬಸ್‌ (Out of Syllabus) ಪ್ರಶ್ನೆಗಳನ್ನು ಕೇಳಲಾಗಿತ್ತು. ರಸಾಯನ ಶಾಸ್ತ್ರ ವಿಷಯದಲ್ಲಿ 6, ಭೌತಶಾಸ್ತ್ರ ವಿಷಯದಲ್ಲಿ 5, ಪ್ರಶ್ನೆಗಳು, ಜೀವಶಾಸ್ತ್ರ ಪರೀಕ್ಷೆಯಲ್ಲಿ 11 ಪ್ರಶ್ನೆಗಳು, ಗಣಿತದಲ್ಲಿ 9 ಪ್ರಶ್ನೆಗಳು ಪಠ್ಯಕ್ರಮದಿಂದ ಹೊರತಾಗಿದ್ದವು. ಇದಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದ್ದವು. ಬಳಿಕ ಆ 50 ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳ ಮೌಲ್ಯ ಮಾಪನ ಮಾಡಲಾಗಿದೆ.

ಸದ್ಯ ಸಿಇಟಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೌಲ್ಯಮಾಪನ ಮಾಡಿ ಸಿದ್ಧಪಡಿಸಿದೆ. ಇದರ ಜತೆಗೆ ಶೇ. 50ರಷ್ಟು ದ್ವಿತೀಯ ಪಿಯುಸಿ ಅಂಕ ಮತ್ತು ಬಿಎಸ್‌ಸಿ ಸೀಟು ಹಂಚಿಕೆಗಾಗಿ ಜಿಕೆವಿಕೆ ನಡೆಸುವ ಪ್ರಾಯೋಗಿಕ ಪರೀಕ್ಷೆ ಫಲಿತಾಂಶದ ಅಂಕ ಸೇರಿಸಬೇಕಾಗಿರುವುದರಿಂದ ಕೆಇಎ ಅದಕ್ಕಾಗಿ ಕಾಯುತ್ತಿದೆ.

ಮೇ 30ಕ್ಕೆ ಪಿಯು ಪರೀಕ್ಷೆ-2ರ ಫಲಿತಾಂಶ?

ಜೆಕೆವಿಕೆಯ ಪ್ರಾಯೋಗಿಕ ಪರೀಕ್ಷೆ ಮೇ 25ರಂದು ನಡೆಯಲಿದ್ದು, ಫಲಿತಾಂಶ ಮೇ 30ರಂದು ಪ್ರಕಟವಾಗಲಿದೆ. ಇತ್ತ ದ್ವಿತೀಯ ಪಿಯು ಪರೀಕ್ಷೆ-2ರ ಫಲಿತಾಂಶವೂ ಇನ್ನಷ್ಟೇ ಹೊರ ಬರಬೇಕಿದೆ. ಇದರ ಫಲಿತಾಂಶ ಮೇ 30ರಂದು ಹೊರಬರುವ ನಿರೀಕ್ಷೆ ಇದೆ.

ಈ ಬಾರಿ 3.49 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದರು. ಪ್ರತಿ ವರ್ಷ ಮೇ, ಜೂನ್‌ನಲ್ಲಿ ಪರೀಕ್ಷೆ ನಡೆದರೆ ಈ ಬಾರಿ ಏಪ್ರಿಲ್‌ನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಫಲಿತಾಂಶ ವಿಳಂಬವಾಗಿದೆ ಎಂಬ ದೂರುಗಳೂ ಕೇಳಿ ಬರುತ್ತಿವೆ.

ಇದನ್ನೂ ಓದಿ: KEA : ಸಿಇಟಿ ಪರೀಕ್ಷೆಯಲ್ಲಿ ಸಾಲು ಸಾಲು ವಿವಾದ; ಕೆಇಎ ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ರಮ್ಯಾ ಎತ್ತಂಗಡಿ

ರಿಸಲ್ಟ್‌ ಚೆಕ್‌ ಮಾಡುವ ವಿಧಾನ

ರಿಸಲ್ಟ್‌ ಪ್ರಕಟವಾದ ಬಳಿಕ ಚೆಕ್‌ ಮಾಡುವ ವಿಧಾನದ ಹಂತ ಹಂತದ ಮಾಹಿತಿ ಇಲ್ಲಿದೆ.

Exit mobile version