ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karantaka Examination Authority) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance test -CET) ಮೂಲಕ ನಾನಾ ಕೋರ್ಸ್‌ಗಳಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಹೆತ್ತವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾತ್ರಿ ಸೀಟು ಹಂಚಿಕೆಯನ್ನು ಪ್ರಕಟಿಸಿ (CET Seat allottment) ಮರುದಿನವೇ ಪ್ರವೇಶ ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳಬೇಕಾದ ಅವಸರದ ಡೆಡ್‌ಲೈನ್‌ಗೆ ಸಿಲುಕಿ ಅವರು ಕಂಗಾಲಾಗಿದ್ದಾರೆ. ಒಂದು ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ಸಾಮಾನ್ಯ ಜ್ಞಾನವಾಗಲೀ, ಬ್ಯಾಂಕ್ ರಜೆಗಳ ಅವಗಾಹನೆಯಾಗಲೀ ಇಲ್ಲದೆ ಬೇಕಾಬಿಟ್ಟಿ ನಿರ್ಧಾರ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸೆಪ್ಟೆಂಬರ್ 7ರಂದು ರಾತ್ರಿ ಎಂಟು ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಬಿ-ಫಾರ್ಮಾ, ಬಿಎಸ್‌ಸಿ ನರ್ಸಿಂಗ್ ಮತ್ತು ಇತರ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಿತ್ತು. ಸೀಟು ಆಯ್ಕೆಯನ್ನು ಸೆಪ್ಟೆಂಬರ್ 8ರಿಂದ 10ರವರೆಗೆ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 11.59ರವರೆಗೆ ನಡೆಸಬಹುದು, ಸೆಪ್ಟೆಂಬರ್ 11ರಂದು ಬ್ಯಾಂಕಿಂಗ್ ಅವಧಿಯಲ್ಲಿ ನಡೆಸಬಹುದು ಎಂದು ಸೂಚಿಸಲಾಗಿತ್ತು.
ಸೀಟು ಹಂಚಿಕೆಯ ಪಟ್ಟಿ ಪ್ರತಿ ಬಾರಿಯೂ ರಾತ್ರಿ ಎಂಟು ಗಂಟೆಯ ನಂತರವೇ ಪ್ರಕಟವಾಗುತ್ತದೆ ಮತ್ತು ಮರುದಿನವೇ ಅಡ್ಮಿಷನ್ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲೆ ಭಾರಿ ಒತ್ತಡ ಸೃಷ್ಟಿ ಮಾಡುತ್ತದೆ ಎಂದು ಪೋಷಕರು ಹೇಳಿದ್ದಾರೆ. ʻʻಅವರು ಲಿಸ್ಟ್ ಬಿಡುಗಡೆ ಮಾಡಿದ್ದು ಗುರುವಾರ ರಾತ್ರಿ. ಶುಕ್ರವಾರಕ್ಕೆ ಚಲನ್ ಲಿಸ್ಟ್ ಮಾಡಿದ್ದಾರೆ. ಆದರೆ, ಫೀಸು ತುಂಬಲು ಡೆಡ್ ಲೈನ್ ಇರುವುದು ಸೋಮವಾರಕ್ಕೆ. ಯಾರು ಹೇಗೆ ತಾನೇ ಈ ಪ್ರಕ್ರಿಯೆಗಳನ್ನು ಅಷ್ಟು ವೇಗವಾಗಿ ಮುಗಿಸುವುದು? ಶನಿವಾರ ಮತ್ತು ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಅವರು ಸರಿಯಾಗಿ ಪ್ಲ್ಯಾನ್ ಮಾಡಬಹುದಿತ್ತುʼʼ ಎಂದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ ಹುಡುಗನ ಹೆತ್ತವರು ಹೇಳಿದರು.
ಕೆಲವು ಪೋಷಕರ ಪ್ರಕಾರ, ಇದು ಅಂತಲ್ಲ. ಒಟ್ಟಾರೆ ಪ್ರವೇಶ ಪ್ರಕ್ರಿಯೆಯೇ ಈ ವರ್ಷ ಭಾರಿ ಕಿರಿಕಿರಿಗಳಿಂದ ಕೂಡಿದೆ. ಈಗಾಗಲೇ ಕಾಮೆಡ್ ಕೆ ಕೂಡಾ ಮುಗಿದಿರುವುದರಿಂದ ಹುಡುಗರಿಗೆ ಬೇರೆ ಆಯ್ಕೆಗಳು ಕೂಡಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರು ಹೇಳುವುದೇನು?
ಈ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಮ್ಯಾ ಎಸ್ ಅವರು, ʻʻಶುಲ್ಕ ಪಾವತಿಗೆ ನಾವು ಬ್ಯಾಂಕ್‌ಗಳನ್ನೇ ಅವಲಂಬಿಸಬೇಕಾಗಿಲ್ಲ. ಶುಲ್ಕ ಒಂದು ಲಕ್ಷ ರೂ.ಯ ಒಳಗೆ ಇರುವುದರಿಂದ ಆನ್‌ಲೈನ್ ಮೂಲಕವೂ ಪಾವತಿಸಬಹುದು. ಎಲ್ಲರೂ ಚಲನ್ ತೆಗೆದುಕೊಳ್ಳಬೇಕಾದ ಅವಶ್ಯಕತೆಯೇನೂ ಬರುವುದಿಲ್ಲ. NEFT ಮೂಲಕ ಅತ್ಯಂತ ಸುಲಭದಲ್ಲಿ ಹಣ ವರ್ಗಾವಣೆ ಮಾಡಬಹುದು. ಯಾರಿಗಾದರೂ ಇದು ಕಷ್ಟ ಅನಿಸಿದರೆ ಪರಿಸ್ಥಿತಿಯನ್ನು ಅವಲಂಬಿಸಿ ಒಂದೆರಡು ದಿನ ಹೆಚ್ಚುವರಿ ಕಾಲಾವಕಾಶವನ್ನು ನೀಡಬಹುದುʼʼ ಎಂದು ಹೇಳಿದ್ದಾರೆ.
ಸೀಟು ಹಂಚಿಕೆ ಪಟ್ಟಿ ರಾತ್ರಿ ಎಂಟು ಗಂಟೆಯ ನಂತರವೇ ಬಿಡುಗಡೆಯಾಗುತ್ತಿರುವ ಬಗ್ಗೆ ವಿವರಣೆ ನೀಡಿದ ಅವರು, ನಮ್ಮ ಸಾಫ್ಟ್‌ವೇರ್ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಇಲ್ಲಿ ಹಲವಾರು ಕೋರ್ಸ್ ಮತ್ತು ಸೀಟುಗಳು ಇರುವುದರಿಂದ ಒಂದು ಕೋರ್ಸ್‌ನಿಂದ ಹೆಸರು ತೆಗೆದು ಮತ್ತೊಂದು ಕೋರ್ಸ್‌ಗೆ ಹಾಕುವುದು ಮೊದಲಾದ ಕೆಲಸಗಳೆಲ್ಲ ಸಮಯ ತೆಗೆದುಕೊಳ್ಳುತ್ತದೆʼʼ ಎಂದರು.
ಈಗ ಆಗಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಸುತ್ತೋಲೆಗಳನ್ನು ಮುಂಚಿತವಾಗಿಯೇ ನೀಡಲಾಗುತ್ತದೆ. ಯಾರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.