Site icon Vistara News

Chandassu: ಕನ್ನಡ ಛಂದಸ್ಸಿನ ಮೇಲೊಂದು ನೋಟ…

kannada inscription

ಕನ್ನಡ ಕಾವ್ಯಗಳಲ್ಲಿ (kannada poetry) ಮೂರು ಪ್ರಕಾರದ ಛಂದಸ್ಸುಗಳು (Chandassu) ಕಂಡುಬರುತ್ತವೆ. ಒಂದು, ಕನ್ನಡಕ್ಕೆ ವಿಶಿಷ್ಟವಾದ ಛಂದಸ್ಸು. ಇನ್ನೊಂದು, ಚಂಪೂಕಾವ್ಯಗಳಲ್ಲಿ ಮಿಳಿತವಾಗಿರುವ ಸಂಸ್ಕೃತ (Sanskrit) ವರ್ಣಛಂದಸ್ಸು. ಮೂರನೇಯದು, ಪ್ರಾಕೃತಕ್ಕೆ ವಿಶಿಷ್ಟವಾದ ಮಾತ್ರಾಗಣ ಛಂದಸ್ಸು.

ಅದಕ್ಕೂ ಮುನ್ನ, ಛಂದಸ್ಸಿನ ವ್ಯುತ್ಪತ್ತಿ ಮತ್ತು ಕಲ್ಪನೆಗಳತ್ತ ಗಮನ ಹರಿಸೋಣ. ಛಂದಸ್ಸಿನ ವ್ಯುತ್ಪತ್ತಿಯನ್ನು ಛದ್‌ ಮತ್ತು ಛಂದ್-‌ ಈ ಎರಡೂ ಧಾತುಗಳಿಂದ ಸಾಧಿಸುತ್ತಾರೆ. ಎರಡೂ ಧಾತುಗಳ ಅರ್ಥ ಬಹುತೇಕ ಒಂದೇ. ಆಚ್ಛಾದಿಸು ಅಥವಾ ಹೊದಿಸು ಎಂಬ ಅರ್ಥವನ್ನು ಕೊಡುತ್ತವೆ. “ಆಹ್ಲಾದವನ್ನುಂಟು ಮಾಡುವುದು ಯಾವುದೇ ಅದು ಛಂದ” ಎಂದೂ ಅರ್ಥೈಸುವುದುಂಟು. ಅಂದರೆ, ಛಂದಸ್ಸು ಕಾವ್ಯದ ಹೊರಗಿನ ಅಂಶವಲ್ಲ; ಒಳಗಿನ ಅಂಶ. ಕಾವ್ಯಕ್ಕೆ ಚಲನೆಯುಂಟಾಗುವುದು ಛಂದದಿಂದಲೇ.

ಛಂದಸ್ಸಿನ ಸಂಬಂಧದದಲ್ಲಿ ಎರಡು ದೃಷ್ಟಿಗಳನ್ನು ಗುರುತಿಸಬಹುದು. ಒಂದು ಸೌಂದರ್ಯ ದೃಷ್ಟಿ, ಇನ್ನೊಂದು ಪ್ರಯೋಜನ ದೃಷ್ಟಿ. ಛಂದಸ್ಸು ಕಾವ್ಯದ ಸೌಂದರ್ಯಕ್ಕೆ ಕಳೆಕಟ್ಟಿ ಆನಂದವನ್ನುಂಟುಮಾಡುತ್ತದೆ ಎಂಬುದು ಸೌಂದರ್ಯ ದೃಷ್ಟಿ. ಕಾವ್ಯಕ್ಕೆ ಪ್ರವಹಿಸಲು ನೆರವಾಗುತ್ತದೆ ಎಂಬುದು ಅಥವಾ ಜ್ಞಾಪಕಕ್ಕೆ ಅನುಕೂಲವಾಗುತ್ತದೆ ಎಂಬುದು ಪ್ರಯೋಜನ ದೃಷ್ಟಿ. ಕಾವ್ಯವು ನೃತ್ಯಕಲೆ, ಸಂಗೀತಗಳ ಸಂಪರ್ಕದಿಂದ ಕಲೆಯ ಛಾಯೆಯನ್ನು ಹೊಂದುವುದೆಂಬುದು ಸೌಂದರ್ಯ ದೃಷ್ಟಿ. ಮಾತ್ರೆ, ಗಣ, ಚರಣ, ಪ್ರಾಸಗಳ ಲೆಕ್ಕಾಚಾರವನ್ನು ಒಳಗೊಂಡ ಶಾಸ್ತ್ರ ಎಂಬುದು ಪ್ರಯೋಜನ ದೃಷ್ಟಿ. ಬಲ್ಲವರಿಗೆ ಸೌಂದರ್ಯದಲ್ಲಿ ಪ್ರಯೋಜನವುಂಟು. ಪ್ರಯೋಜನದಲ್ಲಿ ಸೌಂದರ್ಯ ಒಂದುಗೂಡಬಹುದು.

ಶಾಸ್ತ್ರವೋ, ಕಲೆಯೋ?

ಛಂದಸ್ಸು ಶಾಸ್ತ್ರ ಎನ್ನಲಾಗುತ್ತದೆ. ಕಾವ್ಯದ ಲಯಗಳನ್ನು ಪರಿಶೀಲಿಸಿ ಅವುಗಳ ಲಕ್ಷಣ ಹೇಳುವ ಶಾಸ್ತ್ರವದು. ಆದರೆ ಅದನ್ನು ಬರಿಯ ಶಾಸ್ತ್ರವೆಂದು ತಿಳಿಯುವುದು ಸಾಧುವಲ್ಲ. ಏಕೆಂದರೆ ಅದಕ್ಕೆ ಕಲೆಯ ಸಂಪರ್ಕವೂ ಉಂಟು. ಛಂದಸ್ಸು ನೀಡುವ ಆನಂದವನ್ನು ಗಮನಿಸಿದರೆ ಅದಕ್ಕಿರುವ ಕಲೆಯ ಸಂಪರ್ಕದ ಅರಿವು ಆಗದಿರದು. ಛಂದಸ್ಸು ಒಂದು ಕೈಯನ್ನು ಕಾವ್ಯದೆಡೆಗೆ ಚಾಚಿದರೆ, ಇನ್ನೊಂದನ್ನು ಸಂಗೀತದೆಡೆಗೆ ಚಾಚುತ್ತದೆ. ಅದು ಭಾವಾನುಸಾರಣಿಯು ಹೇಗೋ ಹಾಗೆ ರಾಗಾನುವರ್ತಿಯೂ ಹೌದು. ಹೀಗೆ ಭಾವ, ರಾಗ, ತಾಳಗಳನ್ನು ಅನುಸರಿಸುವ ಛಂದಸ್ಸು ನಿಜವಾಗಿಯೂ ಒಂದು ಕಲೆ.

ಛಂದೋಗ್ರಂಥಗಳು

ಲಭ್ಯವಿರುವ ಕನ್ನಡ ಛಂದೋಗ್ರಂಥಗಳಲ್ಲಿ ಒಂದನೆಯ ನಾಗವರ್ಮ ಬರೆದ ಛಂದೋಂಬುಧಿ ಅತ್ಯಂತ ಪ್ರಾಚೀನವೂ ಪ್ರಮಾಣಭೂತವೂ ಪ್ರಸಿದ್ಧವೂ ಆದ ಗ್ರಂಥ. ಇದಲರಲಿ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ನಾನಾ ವಿಷಯಗಳು ಸ್ವತಂತ್ರವಾಗಿಯೂ ತಕ್ಕಮಟ್ಟಿಗೆ ವಿಸ್ತಾರವಾಗಿಯೂ ಪ್ರತಿಪಾದಿತವಾಗಿವೆ. ಇದಕ್ಕೂ ಮುಂಚಿನ ಕಾವ್ಯಲಕ್ಷಣ ಗ್ರಂಥವಾದ ಕವಿರಾಜಮಾರ್ಗ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಒಳಗೊಂಡಿದೆ. ಮಾತ್ರವಲ್ಲ, ಈಶ್ವರ ಕವಿಯ ಕವಿಜಿಹ್ವಾಬಂಧನಂ, ಗುಣಚಂದ್ರನ ಛಂದಸ್ಸಾರ, ಶಾಲ್ಯದ ಕೃಷ್ಣರಾಜನ ಷಟ್ಪ್ರತ್ಯಯ ಮೊದಲಾದ ಛಂದೋಗ್ರಂಥಗಳಲ್ಲಿ ಛಂದಸ್ಸಿನ ಸಾಮಾನ್ಯ ವಿಷಯಗಳನ್ನೂ ಕನ್ನಡ ಛಂದಸ್ಸನ್ನೂ ಕುರಿತಂತೆ ಯಥೋಚಿತವಾಗಿ ವಿಷಯ ನಿರೂಪಣೆ ಕಂಡುಬರುತ್ತದೆ.

ಕನ್ನಡ ಛಂದಸ್ಸಿನ ಸ್ವರೂಪ

ಕನ್ನಡದಲ್ಲಿ ಪ್ರಚಲಿತದಲ್ಲಿರುವ ಪದ್ಯಜಾತಿಗಳಲ್ಲಿ ಮೂರು ವಿಧ. ವರ್ಣವೃತ್ತಗಳು, ಮಾತ್ರವೃತ್ತಗಳು ಮತ್ತು ಅಂಶವೃತ್ತಗಳು. ವರ್ಣವೃತ್ತಗಳಲ್ಲಿ ಪ್ರತಿಪಾದಗಳಲ್ಲಿಯೂ ನಿರ್ದಿಷ್ಟವಾದ ಅಕ್ಷರ ಸಂಖ್ಯೆಯಿದ್ದು ಲಘುವೋ ಗುರುವೋ ಆಗಿರುವ ಆಯಾ ಅಕ್ಷರಗಳ ವಿನ್ಯಾಸವೂ ನಿರ್ದಿಷ್ಟವಾಗಿರುತ್ತದೆ. ಮಾತ್ರಾವೃತ್ತಗಳಲ್ಲಿ ಪ್ರತಿಪಾದದಲ್ಲಿಯೂ ಇಷ್ಟಿಷ್ಟು ಮಾತ್ರೆಗಳ ಇಷ್ಟಿಷ್ಟು ಗಣಗಳೆಂದಿದ್ದು, ಮಾತ್ರಾ ಸಂಖ್ಯೆಗೆ ಅನುಗುಣವಾಗಿ ಕೆಲವು ಸಂದರ್ಭಗಳಲ್ಲಿ ಕೆಲವು ಗಣನಿಯಮಗಳನ್ನು ಅನುಸರಿಸಿ ಗಣವಿಭಾಗವಿರುತ್ತದೆ. ಅಂಶವೃತ್ತಗಳಲ್ಲಿ ಪ್ರತಿಪಾದದಲ್ಲಿಯೂ ವಾಚನದ ಅಥವಾ ಗಾಯನದ ಗತಿಯನ್ನು ಅನುಸರಿಸಿ, ತಾಳಲಯಗಳು ಸರಿಯಾಗಿ ಹೊಂದಿಕೊಳ್ಳಲು ಅನುವಾಗುವಂತೆ ಅಕ್ಷರಗಳಿಂದ ಕೂಡಿದ ಗಣಗಳು ಬಂದಿರುತ್ತವೆ. ಅಚ್ಚಕನ್ನಡ ಮಟ್ಟುಗಳು ಅಂಶವೃತ್ತದವು.

ಸಂಸ್ಕೃತ ಛಂದಸ್ಸಿನ ಮೂಲದ ವರ್ಣವೃತ್ತಗಳು

ಪ್ರಾಚೀನ ಕನ್ನಡ ಸಾಹಿತ್ಯದ ಕಾವ್ಯಗಳೂ ಪುರಾಣಗಳೂ ವಿಶೇಷವಾಗಿ ಚಂಪೂ ಪದ್ಧತಿಯಲ್ಲಿ ರಚಿತವಾಗಿವೆ. ಚಂಪೂ ಪದ್ಧತಿಯ ಚೌಕಟ್ಟು ಮುಖ್ಯವಾಗಿ ಗದ್ಯ ಹಾಗೂ ಕಂದ, ವೃತ್ತಗಳಿಂದ ರಚಿತವಾಗಿದೆ. ಸಮ, ಅರ್ಧಸಮ ಮತ್ತು ವಿಷಮ ಎಂಬ ಅವುಗಳ ಮೂರು ಪ್ರಕಾರಗಳಲ್ಲಿ ಮೊದಲನೆಯದೇ ವಿಶೇಷವಾಗಿ ಬಳಕೆಯಾಗಿದ್ದು, ಉಳಿದವು ಕ್ವಚಿತ್ತಾಗಿ ಬಂದಿವೆ. ವರ್ಣವೃತ್ತಗಳಲ್ಲಿ ಕೆಲವನ್ನು ಸಂಸ್ಕೃತ ಛಂದಸ್ಸಿನಿಂದ ನೇರವಾಗಿ ಕನ್ನಡಕ್ಕೆ ತೆಗೆದುಕೊಂಡಿದೆ.

ಕನ್ನಡ ಪದ್ಯಸಾಹಿತ್ಯದಲ್ಲಿ ಬಹುಪ್ರಚಲಿತವಾಗಿರುವ ವರ್ಣವೃತ್ತಗಳು ಖ್ಯಾತ ಕರ್ಣಾಟಕಗಳು ಎಂಬ ಹೆಸರಿನಿಂದ ರೂಢಿಯಲ್ಲಿವೆ. ಇವು ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಉತ್ಪಲಮಾಲೆ, ಚಂಪಕಮಾಲೆ, ಸ್ರಗ್ಧರೆ ಮತ್ತು ಮಹಾಸ್ರಗ್ಧರೆ ಎಂಬ ಆರು ವೃತ್ತಗಳು. ಇವು ಸರಿಸುಮಾರು ಏಳನೇ ಶತಮಾನದಿಂದ ಕನ್ನಡ ಶಾಸನಗಳಲ್ಲಿಯೂ ಕಾವ್ಯಗಳಲ್ಲಿಯೂ ಬಳಕೆಯಲ್ಲಿವೆ.

ಪ್ರಾಕೃತಕ್ಕೆ ವಿಶಿಷ್ಟವಾದ ಮಾತ್ರಾಗಣ ಛಂದಸ್ಸು

ಕನ್ನಡ ಸಾಹಿತ್ಯದ ಕಾವ್ಯ ಶಾಸ್ತ್ರಾದಿ ಗ್ರಂಥಗಳಲ್ಲಿ ವಿಶೇಷವಾಗಿ ಬಳಕೆಯಾಗಿರುವ ಕಂದಪದ್ಯವೂ ವಿರಳವಾಗಿ ಬಳಕೆಯಾಗಿರುವ ರಗಳೆಯೂ ಈ ಗುಂಪಿನಲ್ಲಿವೆ. ಸಂಸ್ಕೃತದ ಆರ್ಯಾವೃತ್ತಗಳ ಮೂಲಕ ಆರ್ಯಾಗೀತೆಯೇ ಪ್ರಾಕೃತದಲ್ಲಿ ಸ್ಕಂಧಕವೆಂದಾಗಿ ಈ ಮೂಲಕ ಕನ್ನಡಕ್ಕೆ ಬಂದು ಕಂದ ಎಂಬ ಹೆಸರಿನಲ್ಲಿ ರೂಢಿಯಾಗಿರುವಂತೆ ತೋರುತ್ತದೆ. ಲಕ್ಷಣಗ್ರಂಥಗಳ ರಚನೆಗೆ ಕಂದಪದ್ಯಗಳು ಹೆಚ್ಚಾಗಿ ಬಳಕೆಯಾಗಿವೆ. ಇದನ್ನೇ ಬಳಸಿ ಕೃತಿ ರಚನೆ ಮಾಡಿರುವುದೂ ಇದೆ. ಜನ್ನನ ಯಶೋಧರ ಚರಿತೆ ಕಾವ್ಯವಾಗಿಯೂ ಸಮಗ್ರವಾಗಿ ಕಂದದಲ್ಲಿ ರಚಿತವಾಗಿದೆ.

ಹರಿಹರ ಮತ್ತು ಅವನೀಚಿನ ಕೆಲವು ಕವಿಗಳು ರಚಿಸಿರುವ ಕೃತಿಗಳು ರಗಳೆಯಲ್ಲಿವೆ. ನಾಗವರ್ಮ ಮತ್ತು ಜಯಕೀರ್ತಿ ಈ ಛಂದಸ್ಸಿನ ಲಕ್ಷಣಗಳನ್ನು ಹೇಳಿದವರಲ್ಲಿ ಪ್ರಮುಖರು. ಮಂದಾನಿಲ, ಲಲಿತ ಮತ್ತು ಉತ್ಸಾಹ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಮೂರು ರಗಳೆಗಳು ಹರಿಹರನ ಮತ್ತು ಆನಂತರ ಕಾವ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ.

ಅಚ್ಚಕನ್ನಡ ಛಂದಸ್ಸಿನ ಮಟ್ಟುಗಳು

ಇದನ್ನು ನಾಗವರ್ಮನು ಕರ್ಣಾಟಕ ವಿಷಯಜಾತಿವೃತ್ತ ಎಂದೂ ಜಯಕೀರ್ತಿಯು ಕರ್ಣಾಟಕ ವಿಷಯಭಾಷಾಜಾತಿ ಎಂದೂ ಕರೆದಿದ್ದಾರೆ. ಅಕ್ಕರ, ತ್ರಿಪದಿ, ಏಳೆ, ಚೌಪದಿ, ಛಂದೋವತಂಸ, ಅಕ್ಕರಿಕೆ, ಮದನವತಿ, ಗೀತಿಕೆ, ಉತ್ಸಾಹ ಮತ್ತು ಷಟ್ಪದಿಗಳೆಂಬ ಹತ್ತು ಮುಖ್ಯವಾದ ಮಟ್ಟುಗಳನ್ನು ನಾಗವರ್ಮ ಹೇಳಿದ್ದಾನೆ.

ಅಕ್ಕರ: ಇದರಲ್ಲಿ ಪಿರಿಯಕ್ಕರ, ದೊರೆಯಕ್ಕರ, ನಡುವಕ್ಕರ, ಎಡೆಯಕ್ಕರ ಮತ್ತು ಕಿರಿಯಕ್ಕರ ಎಂಬ ಐದು ಪ್ರಬೇಧಗಳಿವೆ. ಸಂಸ್ಕೃತದಲ್ಲಿ ಇವಕ್ಕೆ ಕ್ರಮವಾಗಿ ಮಹಾಕ್ಷರ, ಸಮಾನಾಕ್ಷರ, ಮಧ್ಯಾಕ್ಷರ, ಅಂತರಾಕ್ಷರ ಮತ್ತು ಅಲ್ಪಾಕ್ಷರಗಳೆಂದು ಕರೆಯಲಾಗುತ್ತದೆ.

ತ್ರಿಪದಿ: ಮೂರುಸಾಲಿನ ಒಂದು ಪದ್ಯಜಾತಿ. ಕನ್ನಡದಲ್ಲಿ ಬಾದಾಮಿ ಶಾಸನದ ತ್ರಿಪದಿಗಳೇ ಅತ್ಯಂತ ಪ್ರಾಚೀನವಾದುದು. ಆದರೆ ಕನ್ನಡ ಲಿಖಿತ ಸಾಹಿತ್ಯ ದೊರೆಯುವುದಕ್ಕೆ ಮೊದಲೇ ಜನಪದ ಸಾಹಿತ್ಯದ ರೂಪದಲ್ಲಿ ತ್ರಿಪದಿಗಳು ಪ್ರಚಲಿತದಲ್ಲಿರುವಂತೆ ಕಾಣುತ್ತವೆ. ವಿದ್ಯಾವಂತರಲ್ಲದವರು, ಅಕ್ಷರ ಸಂಸ್ಕೃತಿ ಇಲ್ಲದವರು ಸಹ ತ್ರಿಪದಿಗಳನ್ನು ಕಟ್ಟಿ ಹಾಡಿ ನಲಿಯುತ್ತಿದ್ದರೆಂಬುದಕ್ಕೆ ಶಾಸನಗಳಲ್ಲಿ ಸಾಕ್ಷಿ ದೊರೆತಿದೆ. ಬೀಸುವಾಗ, ಕುಟ್ಟುವಾಗ, ಸಾಮಾನ್ಯ ಜನರು ತ್ರಿಪದಿಗಳನ್ನು ಹಾಡುತ್ತಿದ್ದರು. ಇವೆಲ್ಲ ಮನೋಲ್ಲಾಸಕ್ಕೆ ಅಗತ್ಯವಾದ ಕ್ರಿಯೆಗಳಾಗಿದ್ದವು.

ಏಳೆ: ಇದಕ್ಕೆ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ನಿದರ್ಶನಗಳಿಲ್ಲ. ಜನಪದ ಸಾಹಿತ್ಯದಲ್ಲಿಯೂ ಹೊಸಗನ್ನಡ ಕಾವ್ಯದಲ್ಲಿಯೂ ಈಚೆಗೆ ವಿರಳವಾಗಿ ನಿದರ್ಶನಗಳು ದೊರೆಯುತ್ತವೆ. ನಾಗವರ್ಮ, ಜಯಕೀರ್ತಿ ಮುಂತಾದ ಲಾಕ್ಷಣಿಕರು ಈ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ʼನೇತಿ ನೇತಿ’- ವಾಸ್ತವ ಮತ್ತು ತೋರಿಕೆಯಲ್ಲಿ ಸತ್ಯದ ಹುಡುಕಾಟ

ಚೌಪದಿ: ಇದರಲ್ಲಿ ಅಂಶಗಣ ಚೌಪದಿ ಮತ್ತು ಮಾತ್ರಾಗಣ ಚೌಪದಿ ಎಂಬ ಎರಡು ವಿಧಗಳಿವೆ. ಇವರಡರ ಹುಟ್ಟು ಮತ್ತು ಸ್ವರೂಪ ಬೇರೆಯೆ ಆಗಿದೆ. ಕನ್ನಡದಲ್ಲಿ ಅಂಶಗಣ ಲಕ್ಷಣದ (ನಾಗವರ್ಮ ಮತ್ತು ಜಯಕೀರ್ತಿ ವಿವರಿಸಿದ) ಚೌಪದಿ ದೊರೆತಿರುವುದು ಒಂದು ಮಾತ್ರ. ಮಾತ್ರಾಗಣದ ಚೌಪದಿಯ ಲಕ್ಷಣಗಳನ್ನು ಪ್ರಾಚೀನ ಲಕ್ಷಣ ಗ್ರಂಥಗಳಲ್ಲಿ ಹೇಳಿಲ್ಲ. ನಾಗವರ್ಮನ ಗ್ರಂಥದಲ್ಲಿ ಹೇಳಿರುವ ಇಂಥ ಲಕ್ಷಣಗಳು ನಡುಗನ್ನಡ ಕಾಲದ ಕಾವ್ಯ, ದಾಸರ ಪದಗಳಲ್ಲಿ ಕಂಡುಬರುತ್ತವೆ.

ಛಂದೋವತಂಸ: ಇದಕ್ಕೆ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಉದಾಹರಣೆಗಳಿಲ್ಲ. ನಡುಗನ್ನಡ ಕಾವ್ಯ ಮತ್ತು ದಾಸರ ಪದಗಳಲ್ಲಿ ಇದರ ಲಕ್ಷಣಗಳನ್ನು ಹೋಲುವ ಪದ್ಯಗಳಿವೆ.

ಅಕ್ಕರಿಕೆ: ಮೊದಲಿಗೆ ಅಂಶಗಣದಂತೆ ನಿರೂಪಿತವಾಗಿವೆ ಇದರ ಲಕ್ಷಣಗಳು. ನಂತರ ಮಾತ್ರಾಗಣವಾಗಿ ಪರಿಣಮಿಸಿದಂತೆ ತೋರುತ್ತವೆ.

ಮದನವತಿ: ನಾಗವರ್ಮ ಮತ್ತು ಜಯಕೀರ್ತಿಯ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಇದು ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಕಂಡುಬಂದಿಲ್ಲ.

ಗೀತಿಕೆ: ಇದು ಗೇಯಾತ್ಮಕವಾದದ್ದು. ಏಳೆ, ತ್ರಿಪದಿ, ಸಾಂಗತ್ಯ, ಗೀತಿಕೆ- ಇವೆಲ್ಲ ಒಂದೇ ಛಂದೋರೀತಿಯವಾದ್ದರಿಂದ ಇವಕ್ಕೆಲ್ಲ ಪರಸ್ಪರ ಸಂಬಂಧವಿದ್ದಂತೆ ತೋರುತ್ತದೆ. ಗೀತಿಕೆಯ ಮೊದಲ ಉಲ್ಲೇಖ ಕಂಡಿರುವುದು ಕವಿರಾಜ ಮಾರ್ಗದಲ್ಲಿ. ಉಳಿದಂತೆ ಪ್ರಾಚೀನ ಕಾವ್ಯಗಳಲ್ಲಿ ಗೀತಿಕೆ ಕಂಡುಬರುವುದಿಲ್ಲ.

ಷಟ್ಪದಿ: ಅಚ್ಚಕನ್ನಡದ ಮಟ್ಟುಗಳಲ್ಲಿ ಗಮನಾರ್ಹವಾದ ಮಟ್ಟಿದು. ಅಂಶಗಣದ ಒಂದು ಷಟ್ಪದಿ ಕಾಣಿಸಿಕೊಂಡಿದ್ದರೆ, ಮಾತ್ರಾ ಗಣದಲ್ಲಿ- ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ ಮತ್ತು ವಾರ್ಧಕ ಎಂಬ ಆರು ಷಟ್ಪದಿಗಳು ಪ್ರಸಿದ್ಧವಾಗಿವೆ.

ಇದನ್ನೂ ಓದಿ: ಧೀಮಹಿ ಅಂಕಣ: ಪ್ರಾಚೀನ ಭಾರತದಲ್ಲಿ ಸಪ್ತರ್ಷಿಗಳ ನ್ಯಾಯಾಡಳಿತ

Exit mobile version