ಬೆಂಗಳೂರು: ಕರ್ನಾಟಕದ ವೈದ್ಯಕೀಯ ( Medical), ಎಂಜಿನಿಯರಿಂಗ್ (Engineering) ಮತ್ತು ದಂತ ವೈದ್ಯಕೀಯ (Dental) ಕಾಲೇಜುಗಳ ಒಕ್ಕೂಟವು (COMEDK) ಪದವಿ ಪೂರ್ವ (Undergraduate) ಸಾಮಾನ್ಯ ಪ್ರವೇಶ ಪರೀಕ್ಷೆ (UGET) 2024ರ ನೋಂದಣಿ ಗಡುವನ್ನು ವಿಸ್ತರಿಸಿದೆ. ಈ ಕುರಿತು ಅಧಿಕೃತ ವೆಬ್‌ಸೈಟ್ ನಲ್ಲಿ (website) ಮಾಹಿತಿ ನೀಡಲಾಗಿದ್ದು, ಅಭ್ಯರ್ಥಿಗಳಿಗೆ ಏಪ್ರಿಲ್ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪದವಿ ಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (UGET) 2024ರ ನೋಂದಣಿಗೆ ಈ ಮೊದಲು ಏಪ್ರಿಲ್ 8ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ.
ಪದವಿ ಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲಿಚ್ಛಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 10ರೊಳಗೆ ನೋಂದಣಿ ಮಾಡಿಕೊಳ್ಳಲು ಅಧಿಕೃತ ವೆಬ್‌ಸೈಟ್ comedk.orgಗೆ ಭೇಟಿ ನೀಡಬಹುದು.
ಇದನ್ನೂ ಓದಿ: Monsoon Prediction: ಈ ವರ್ಷ ಸಾಮಾನ್ಯ ಮಾನ್ಸೂನ್; ಕರ್ನಾಟಕದಲ್ಲಿ ಅಧಿಕ ಮುಂಗಾರು
ಹಬ್ಬದ ರಜಾ ದಿನಗಳ ಹಿನ್ನೆಲೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ವಿನಂತಿಯ ಮೇರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಗೆ ಏಪ್ರಿಲ್ 10ರಂದು ಸಂಜೆ 4.30ರವರೆಗೆ ಅವಕಾಶ ನೀಡಲಾಗಿದೆ.
ವೆಬ್‌ಸೈಟ್ ಮಾಹಿತಿ ಪ್ರಕಾರ ನೋಂದಣಿ ಬಳಿಕ ಅರ್ಜಿಯ ತಿದ್ದುಪಡಿಗೆ ಏಪ್ರಿಲ್ 12ರಿಂದ ಏಪ್ರಿಲ್ 16ರವರೆಗೆ ಅವಕಾಶವಿದೆ. ಪರೀಕ್ಷೆಯ ಪ್ರವೇಶ ಪತ್ರಗಳನ್ನು ಮೇ 6ರಂದು ನೀಡಲಾಗುತ್ತದೆ. ಕಾಮೆಡ್ ಕೆ ಯುಜಿ ಇಟಿ 2024ರ ಪರೀಕ್ಷೆಯನ್ನು ಮೇ 12ರಂದು ಆಯೋಜಿಸಲಾಗಿದೆ. ಪರೀಕ್ಷೆಯು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಎರಡು ಪಾಳಿಯಲ್ಲಿ ನಡೆಯಲಿದೆ. ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 18 ಪ್ರಶ್ನೆಗಳಿರುತ್ತವೆ.
ಪ್ರಮುಖ ದಿನಾಂಕ
ಆನ್‌ಲೈನ್ ನೋಂದಣಿ ಪ್ರಾರಂಭ: ಫೆಬ್ರವರಿ 1
ಆನ್‌ಲೈನ್ ನೋಂದಣಿಗೆ ಕೊನೆಯ ದಿನ: ಏಪ್ರಿಲ್ 10
ತಿದ್ದುಪಡಿಗೆ ಅವಕಾಶ: ಏಪ್ರಿಲ್ 12ರಿಂದ 16ರವರೆಗೆ
ಪ್ರವೇಶ ಕಾರ್ಡ್ ಬಿಡುಗಡೆ ದಿನ: ಮೇ 6ರಂದು
ಪರೀಕ್ಷೆ ನಡೆಯಲಿರುವ ದಿನ: ಮೇ 12
ನೋಂದಣಿ ಹೇಗೆ?
ಪದವಿ ಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (COMEDK UGET) 2024ರ ನೋಂದಣಿಗೆ ಮೊದಲು ಅಧಿಕೃತ ವೆಬ್‌ಸೈಟ್ comedk.org ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ ಲಾಗಿನ್/ ರಿಜಿಸ್ಟರ್ ಗೆ ಕ್ಲಿಕ್ ಮಾಡಿ, ಹೊಸ ಪುಟದ ಮೇಲೆ ನೋಂದಾಯಿಸಿ ಮತ್ತು ಅರ್ಜಿಯನ್ನು ಭರ್ತಿ ಮಾಡಿ.
ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ. ದಾಖಲೆಗಾಗಿ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.