ಬೆಂಗಳೂರು: ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ (Anauthorised schools) ಶಾಲೆಗಳ ಮುಚ್ಚುಗಡೆಗೆ (Closing of schools) ಶಿಕ್ಷಣ ಇಲಾಖೆ (Education department) ನೀಡಿದ್ದ ಆಗಸ್ಟ್ 14ರ ಅಂತಿಮ ಗಡುವನ್ನು (August 14 Deadline) ವಿಸ್ತರಿಸುವ ಅಗತ್ಯ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ. ಇದರೊಂದಿಗೆ ಮುಚ್ಚುಗಡೆಯ ತೂಗುಗತ್ತಿ ಎದುರಿಸುತ್ತಿದ್ದ ರಾಜ್ಯದ ನೂರಕ್ಕೂ ಅಧಿಕ ಶಾಲೆಗಳು ಸದ್ಯ ಬಚಾವ್ ಆಗಲಿವೆ.
ಅನುಮತಿ ಪಡೆದುದಕ್ಕಿಂತ ಮೇಲ್ಮಟ್ಟದ ತರಗತಿಗಳನ್ನು ನಡೆಸುವುದು, ಅನುಮತಿ ಇಲ್ಲದೆ ಇಂಗ್ಲಿಷ್ ಮೀಡಿಯಂ ನಡೆಸುವುದು, ರಾಜ್ಯ ಸಿಲೆಬಸ್‌ಗೆ ಅನುಮತಿ ಪಡೆದು ಸಿಬಿಎಸ್‌ಸಿ ತರಗತಿಗಳನ್ನು ನಡೆಸುವುದು ಹೀಗೆ ಹಲವು ರೀತಿಯಲ್ಲಿ ಅಕ್ರಮ ನಡೆಸುತ್ತಿದ್ದ ಶಾಲೆಗಳ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು, ಬೆಂಗಳೂರಿನ ಕೆಲವು ಅಂತಾರಾಷ್ಟ್ರೀಯ ಶಾಲೆಗಳು ಸಿಬಿಎಸ್‌ಇ ಶಿಕ್ಷಣ ಪದ್ಧತಿಗೆ ಅನುಮತಿಯನ್ನೇ ಪಡೆಯದೆ ಸಿಬಿಎಸ್‌ಇ ಶಿಕ್ಷಣದ ಹೆಸರಿನಲ್ಲಿ ಅಧಿಕ ಫೀಸ್ ವಸೂಲಿ ಮಾಡುತ್ತಿದ್ದವು. ಅಲ್ಲಿ ಕಲಿತ ಮಕ್ಕಳಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಕೂಡಾ ಅವಕಾಶ ಸಿಗಲಾರದು ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಸರ್ಕಾರ ಅಕ್ರಮ ಶಾಲೆಗಳ ಸಮೀಕ್ಷೆಗೆ ಆದೇಶ ಹೊರಡಿಸಿತ್ತು.
2023ರ ಏಪ್ರಿಲ್ 13ರಂದು ಶಿಕ್ಷಣ ಇಲಾಖೆ ಆದೇಶವೊಂದನ್ನು ಹೊರಡಿಸಿ ಜೂನ್ 20ರ ಒಳಗೆ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಳ್ಳಲು, ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಲು ಅವಕಾಶ ನೀಡಿತ್ತು. ಆದರೆ, ಇನ್ನೂ 1300 ಶಾಲೆಗಳು ಅನುಮತಿ ಪಡೆಯದೆ ಉಳಿದಿದ್ದವು. ಈ ಹಂತದಲ್ಲಿ ಮತ್ತೊಂದು ಸುತ್ತಿನ ಗಡುವು ವಿಸ್ತರಣೆ ಮಾಡಲಾಗಿತ್ತು. ಬಳಿಕ ನೀಡಿದ 45 ದಿನಗಳ ಗಡುವು ಆಗಸ್ಟ್ 14ರವರೆಗೆ ಚಾಲ್ತಿಯಲ್ಲಿದೆ. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಧಿಕೃತ ಶಿಕ್ಷಣ ಸಂಸ್ಥೆಗಳ ಹಾಲಿ ಸ್ಥಿತಿಗತಿಯ ಬಗ್ಗೆ ವರದಿ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶುಕ್ರವಾರ ಮಹತ್ವದ ಸಭೆ ನಡೆಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸುಮಾರು 2 ಗಂಟೆಗಳ ಕಾಲ ನಡೆದ ಖಾಸಗಿ ಶಾಲೆಗಳ ಒಕ್ಕೂಟ ಸಭೆಯಲ್ಲಿ ಖಾಸಗಿ ಒಕ್ಕೂಟಗಳಾದ ರುಪ್ಸಾ, ಕ್ಯಾಮ್ಸ್, ಕುಸುಮ ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಶಿಕ್ಷಣ ಇಲಾಖೆ ಆಯುಕ್ತರಾದ ಕಾವೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ರೂಪೇಶ್ ಉಪಸ್ಥಿತರಿದ್ದರು.
ಹಿಂದಿನ ಸುದ್ದಿ: Unauthorised Schools : ರಾಜ್ಯದ 1300 ಅನಧಿಕೃತ ಶಾಲೆಗಳಿಗೆ ಮುಚ್ಚುಗಡೆ ಭೀತಿ; ಆಗಸ್ಟ್ 14 Deadline
ಕ್ರಮ ಖಚಿತ ಆದರೆ, ಡೆಡ್ ಲೈನ್ ವಿಸ್ತರಣೆ
ಸಭೆಯ ನಂತರ ಮಾತನಾಡಿದ ಮಧು ಬಂಗಾರಪ್ಪ ಅವರು, ʻʻಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿರುವ ಶಾಲೆಗಳ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ನಾವು ಆಗಸ್ಟ್ 14ಕ್ಕೆ ಡೆಡ್ ಲೈನ್ ಕೊಟ್ಟಿದ್ದೆವು. ಆದರೆ ಅದನ್ನು ಇನ್ನೂ ಮುಂದುವರಿಸುವ ಅಗತ್ಯ ಇದೆ ಎಂದರು.
ʻʻನಮಗೆ ಸದ್ಯ ಆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಭವಿಷ್ಯ ಮುಖ್ಯ. ಎಷ್ಟೋ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳು ಸಹ ಇಲ್ಲ. ಆದರೂ ಮಕ್ಕಳ ಹಿತದೃಷ್ಟಿಯಿಂದ ನಾವು ಕ್ರಮ ಕೈಗೊಳ್ಳಬೇಕಿದೆ. ಅನಧಿಕೃತ ಶಾಲೆಗಳ ಪಟ್ಟಿಯನ್ನ ಮರು ಪರಿಶೀಲನೆ ಮಾಡಲು ಸೂಚಿಸಲಾಗಿದೆʼʼ ಎಂದು ಹೇಳಿದರು.
ʻʻರಾಜ್ಯಾದ್ಯಂತ 1695 ಶಾಲೆಗಳು ಅನಧಿಕೃತವಾಗಿವೆʼʼ ಎಂದು ವಿವರಿಸಿದ ಮಧು ಬಂಗಾರಪ್ಪ ಅವರು ಎಷ್ಟು ಶಾಲೆಗಳು, ಯಾವ್ಯಾವ ನಿಯಮ ಮೀರಿವೆ ಎಂದು ಕೂಡಾ ವಿವರಿಸಿದರು. ಈಗ ಇರುವ ಶಾಲೆಗಳು ನೆಲದ ಕಾನೂನು ಪಾಲಿಸುವಂತೆ ಮಾಡಲಾಗುವುದು ಎಂದು ಹೇಳಿದ ಅವರು, ಹೊಸದಾಗಿ ಅನಧಿಕೃತ ಶಾಲೆಗಳು ಆರಂಭವಾದರೆ ಬಿಇಒಗಳೇ ಹೊಣೆ ಎಂದರು.
ಅನಧಿಕೃತ ಶಾಲೆಗಳ ಮಾದರಿ-ಮಧು ಬಂಗಾರಪ್ಪ ಹೇಳಿದಂತೆ
- ಅನುಮತಿ ಇಲ್ಲದೆ ಉನ್ನತೀಕರಣ ಮಾಡಿರುವ ಶಾಲೆಗಳು 72
- ನಿಗದಿತ ಪಠ್ಯ ಬಿಟ್ಟು ಬೇರೆ ಬೋಧನೆ ಮಾಡುತ್ತಿರುವ ಶಾಲೆಗಳು 143.
- ಶಿಕ್ಷಣ ಇಲಾಖೆ ಅನುಮತಿ ಪಡೆಯದೇ ವಿಭಾಗ ಬದಲಾವಣೆ ಮಾಡಿರುವ ಶಾಲೆಗಳು 631
- ಅನುಮತಿ ಇಲ್ಲದೆ ಸ್ಥಳಾಂತರ ಮಾಡಿರುವ ಶಾಲೆಗಳು 190
- ಅನುಮತಿ ಪಡೆಯದೇ ಹಸ್ತಾಂತರ ಮಾಡಿರುವ ಶಾಲೆಗಳು 15
- ಕೇಂದ್ರ ಪಠ್ಯಕ್ಕೆ ಅನುಮತಿ ಪಡೆದು ರಾಜ್ಯ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು 68
- ರಾಜ್ಯ ಪಠ್ಯ ಅನುಮತಿ ಪಡೆದು ಇತರೆ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು 494