Site icon Vistara News

Dharmendra Pradhan: ಅನುಸೂಚಿತವಲ್ಲದ ಭಾಷೆಗಳ 52 ಪಠ್ಯಪುಸ್ತಕ ಬಿಡುಗಡೆ

Dharmendra Pradhan

Dharmendra Pradhan

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ (Union education minister) ಧರ್ಮೇಂದ್ರ ಪ್ರಧಾನ್ (Dharmendra Pradhan) ಶನಿವಾರ ಬುಡಕಟ್ಟು ಭಾಷೆಗಳು (Tribal languages) ಸೇರಿದಂತೆ ಭಾರತದ ಅನುಸೂಚಿತವಲ್ಲದ (Indian non-scheduled languages) ಭಾಷೆಗಳ 52 ಕಿರು ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (CIIL) ಸಹಯೋಗದೊಂದಿಗೆ ಸಿದ್ಧಪಡಿಸಿದ ಈ ಪ್ರೈಮರ್ಸ್ ಕಿರುಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಭಾರತದಲ್ಲಿ ಮಾತನಾಡುವ ಆದರೆ ಅಧಿಕೃತ ಮಾನ್ಯತೆ ಲಭಿಸದ ಎಲ್ಲ ಭಾಷೆಗಳನ್ನು ಅನುಸೂಚಿತವಲ್ಲದ ಭಾಷೆಗಳು ಎಂದು ಕರೆಯಲಾಗುತ್ತದೆ.

“ಅನುಸೂಚಿತವಲ್ಲದ ಭಾಷೆಗಳಲ್ಲಿನ ಈ ಪಠ್ಯ ಪುಸ್ತಕಗಳು ಚಿಕ್ಕ ಮಕ್ಕಳು ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣ ಹೊಂದಲು ನೆರವಾಗಲಿದೆ. ಇದು ಚಿಕ್ಕ ಮಕ್ಕಳಲ್ಲಿ ಸ್ಫೂರ್ತಿ ತುಂಬಿ ಬದಲಾವಣೆಗೆ ಕಾರಣವಾಗಲಿದೆ. ಈ ಕ್ರಮ ಭಾರತೀಯ ಭಾಷೆಗಳಲ್ಲಿನ ಕಲಿಕೆಯನ್ನು ಉತ್ತೇಜಿಸುತ್ತವೆ. ಜತೆಗೆ ಎನ್ಇಪಿ 2020 (National Education Policy 2020)ರ ದೃಷ್ಟಿಕೋನವನ್ನು ಸಾಕಾರಗೊಳಿಸಲಿದೆ ಮತ್ತು ಶಾಲಾ ಶಿಕ್ಷಣವನ್ನು ಸಮಗ್ರವಾಗಿ ಪರಿವರ್ತಿಸಲಿದೆ” ಎಂದು ಸಚಿವರು ತಿಳಿಸಿದರು.

“ಪ್ರೈಮರ್ಸ್ ಪುಸ್ತಕಗಳು ಎಳೆ ಮನಸ್ಸುಗಳಲ್ಲಿ ಕುತೂಹಲವನ್ನು ಬಿತ್ತಿ ಆಳವಾದ ಅಧ್ಯಯನಕ್ಕೆ ಕಾರಣವಾಗಲಿದೆ. ಜತೆಗೆ ಮಕ್ಕಳು ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲಿದ್ದಾರೆ. ಆ ಮೂಲಕ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಯಶಸ್ಸು ಪಡೆದುಕೊಳ್ಳಲಿದ್ದಾರೆʼʼ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ಮಾತನಾಡಿ, ʼʼಮಾಧ್ಯಮಿಕ ಶಾಲಾ ಮಟ್ಟದ ಒಟ್ಟು ದಾಖಲಾತಿ ಅನುಪಾತವನ್ನು (GER) 2030ರ ವೇಳೆಗೆ ಶೇ. 100ಕ್ಕೆ ಕೊಂಡೊಯ್ಯಬೇಕು. ಅದಕ್ಕಾಗಿ ಇಲಾಖೆ ಬದ್ಧವಾಗಿದೆ. ಹೊಸ ಪಠ್ಯಪುಸ್ತಕಗಳು 3-12ನೇ ತರಗತಿಗಳಿಗೆ ಮೀಸಲಾಗಿದ್ದು, ಆ ಪೈಕಿ ಕೆಲವನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಉಳಿದವುಗಳನ್ನು ಶೀಘ್ರದಲ್ಲೇ ಹೊರ ತರಲಾಗುವುದು. ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಲಹೆಗಳನ್ನು ಅನುಸರಿಸಿ 52 ಪ್ರೈಮರ್‌ಗಳನ್ನು ಸಿದ್ಧಪಡಿಸಲಾಗಿದೆ” ಎಂದು ತಿಳಿಸಿದರು.

ವಿವಿಧ ಯೋಜನೆ ಪ್ರಕಟಿಸಿ ಸಚಿವರು

ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ವಿವಿಧ ಯೋಜನೆಗಳನ್ನು ಪ್ರಕಟಿಸಿದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಶಿಕ್ಷಕರಿಗೆ ರಾಷ್ಟ್ರೀಯ ವೃತ್ತಿಪರ ಮಾನದಂಡ, ಮಾರ್ಗದರ್ಶನಕ್ಕಾಗಿ ರಾಷ್ಟ್ರೀಯ ಮಿಷನ್ ಮತ್ತು ರಾಷ್ಟ್ರೀಯ ವಿದ್ಯಾ ಸಮಿಕ್ಷಾ ಕೇಂದ್ರ, 200 ಟಿವಿ ಡಿಟಿಎಚ್ ಚಾನೆಲ್‌ಗಳನ್ನು ಘೋಷಿಸಿದರು.

ಇದನ್ನೂ ಓದಿ: Dharmendra Pradhan: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಎರಡು ಬಾರಿ 10, 12ನೇ ತರಗತಿ ಬೋರ್ಡ್‌ ಪರೀಕ್ಷೆ ಬರೆಯಲು ಅವಕಾಶ

ಆರ್ಥಿಕ ನೆರವಿನ ಘೋಷಣೆ

“ಎಲ್ಲ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು (DIETs) ಭೌತಿಕವಾಗಿ ಮೇಲ್ದರ್ಜೆಗೇರಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಕೇಂದ್ರ ಪ್ರಾಯೋಜಿತ ಸಮಗ್ರ ಶಿಕ್ಷಣ ಯೋಜನೆಯಡಿ 15 ಕೋಟಿ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುವುದು” ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version