Site icon Vistara News

School timing : ಶಾಲಾ ಸಮಯ ಬದಲಾವಣೆ ಇಲ್ಲ; ಶಿಕ್ಷಣ ಇಲಾಖೆ ಸ್ಪಷ್ಟ ನಿರ್ಧಾರ

School Timings in Bangalore no change

ಬೆಂಗಳೂರು: ಬೆಂಗಳೂರು ನಗರದ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ತಪ್ಪಿಸಲು ಶಾಲೆಗಳ ಸಮಯ (School timing) ಬದಲಾವಣೆ ಸಾಧ್ಯವೇ ಎಂಬ ಹೈಕೋರ್ಟ್‌ (karnataka high Court) ಸಲಹೆಯ ಬಗ್ಗೆ ಚರ್ಚೆ ನಡೆಸಿದ ಶಿಕ್ಷಣ ಇಲಾಖೆ (Education Department) ಸಮಯ ಬದಲಾವಣೆಯ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ವಾಹನ ದಟ್ಟಣೆ ತಪ್ಪಿಸುವ ಸಲುವಾಗಿ ಶಾಲೆಗಳು ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಹೈಕೋರ್ಟ್‌ ಸರಕಾರಕ್ಕೆ ಸಲಹೆ ನೀಡಿತ್ತು. ಈ ನಿಟ್ಟಿನಲ್ಲಿ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳು, ಶಾಲಾ ಬಸ್‌ ಆಪರೇಟರ್‌ಗಳು, ಪೋಷಕರ ಸಂಘಗಳೂ ಸೇರಿದಂತೆ ಸಂಬಂಧಿಸಿದ ಎಲ್ಲರ ಸಭೆ ಕರೆದು ವಾಹನ ದಟ್ಟಣೆ ತಗ್ಗಿಸಲು ಶಾಲಾ ಸಮಯ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬಹುದು ಎಂದು ಹೈಕೋರ್ಟ್‌ ಹೇಳಿತ್ತು. ಸೋಮವಾರ ಬೆಂಗಳೂರಿನ ನೃಪತುಂಗ ರಸ್ತೆಯ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆದು ಅದರಲ್ಲಿ ಶಾಲಾ ಸಮಯ ಬದಲಾವಣೆ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಕಾವೇರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಖಾಸಗಿ ಶಾಲಾ ಒಕ್ಕೂಟ ಕ್ಯಾಮ್ಸ್ ಅಧ್ಯಕ್ಷ ಶಶಿಕುಮಾರ್, ರುಪ್ಸಾ ಸಂಘಟನೆಯ ಹಾಲನೂರು ಲೇಪಾಕ್ಷಿ, ಪೋಷಕರ ಒಕ್ಕೂಟದ ಸದಸ್ಯರು ಭಾಗಿಯಾಗಿದ್ದರು. ಎಲ್ಲ ಆಯಾಮಗಳಲ್ಲಿ ಚರ್ಚೆ ನಡೆಸಿ ಸಮಯ ಬದಲಾವಣೆ ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ ಮತ್ತು ಈ ನಿರ್ಧಾರವನ್ನು ಹೈಕೋರ್ಟ್‌ಗೆ ತಿಳಿಸಲು ನಿರ್ಧರಿಸಲಾಗಿದೆ.

Karnataka High court

ಬಿಎಂಟಿಸಿ ಬಸ್‌ಗಳ ಬಳಕೆಗೆ ಚಿಂಚನೆ

ಸಭೆಯ ಬಳಿಕ ಮಾತನಾಡಿದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು, ಶಾಲಾ ಸಮಯದ ಬದಲಾವಣೆ ಬಗ್ಗೆ ಅಭಿಪ್ರಾಯ ಪಡೆದಿದ್ದೇವೆ. ಎಲ್ಲರ ಅಭಿಪ್ರಾಯದ ವರದಿಯನ್ನು ಮಂಗಳವಾರ ಹೈಕೋರ್ಟ್‌ಗೆ ನೀಡುತ್ತೇವೆ. ಎಲ್ಲರ ಸಲಹೆಗಳು ಕೂಡ ಒಂದೇ ರೀತಿಯಾಗಿವೆ. ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಗೂ ಚರ್ಚಿಸಿದ್ದೇವೆ. ಕೋರ್ಟ್ ಏನೂ ಆದೇಶ ಕೊಡುತ್ತದೋ ಅದನ್ನು ಅನುಸರಿಸುತ್ತೇವೆ ಎಂದು ಹೇಳಿದರು.

ಹೈಕೋರ್ಟ್ ಆದೇಶದಂತೆ ಸಭೆ ನಡೆಸಿದ್ದೇವೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾ ಸಮಯ ಬದಲಾಯಿಸುವುದು ಬೇಡ ಎಂದು ತೀರ್ಮಾನಿಸಿದ್ದೇವೆ. ಸ್ಕೂಲ್ ಬಸ್, ಶಾಲಾ ವಾಹನಗಳ ಸಮಸ್ಯೆ ಬಗ್ಗೆ ಸಲಹೆ ಕೊಟ್ಟಿದ್ದೇವೆ ಎಂದು ಕ್ಯಾಮ್ಸ್‌ ಅಧ್ಯಕ್ಷ ಶಶಿಕುಮಾರ್‌ ತಿಳಿಸಿದರು.

ಸಮಯ ಬದಲಾವಣೆ ಬೇಡ ಎಂದ ಒಕ್ಕೂಟಗಳು

ಸಭೆಯಲ್ಲಿ ಕ್ಯಾಮ್ಸ್‌, ರುಪ್ಸಾ ಸೇರಿದಂತೆ ಖಾಸಗಿ ಶಾಲಾ ಒಕ್ಕೂಟಗಳು ಸಮಯ ಬದಲಾವಣೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದವು. ಈಗ ಇರೋ ಸಮಯದಲ್ಲೇ ಶಾಲೆ ಮುಂದುವರಿಸುವಂತೆ ಸಲಹೆ ನೀಡಿದವರು.

ಒಂದು ವೇಳೆ ಶಾಲಾ ವಾಹನಗಳಿಂದಲೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯವಿದ್ದರೆ ಸಂಚಾರಕ್ಕೆ ಬಿಎಂಟಿಸಿ ಬಳಕೆ ಬಗ್ಗೆ ಚಿಂತನೆ ನಡೆಸಬಹುದು ಎಂಬ ಸಲಹೆಯನ್ನು ಸಂಘಟನೆಗಳು ನೀಡಿವೆ.

ಯಾವ ಯಾವ ಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಅವುಗಳನ್ನು ಹೇಗೆ ನಿಯಂತ್ರಿಸಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಬಹುದು ಎಂದು ಅಭಿಪ್ರಾಯಪಡಲಾಗಿದೆ.

ಹಿಂದಿನ ವರದಿ: School Timing : ಮತ್ತೆ ಬದಲಾಗುತ್ತಾ ಶಾಲಾ ಸಮಯ!

ಈಗಿನ ಸಮಯವೇ ಸರಿ ಎಂದ ಬಿಇಒಗಳು

ಬೆಂಗಳೂರು ನಗರ ಜಿಲ್ಲೆಯ ಬಿಇಒಗಳು ಈಗಿರುವ ಬೆಳಗ್ಗೆ 9.30ರಿಂದ 4.00 ಗಂಟೆಯವರೆಗಿನ ಸಮಯವೇ ಸರಿಯಾಗಿದೆ ಎಂದು ಅಭಿಪ್ರಯಾಪಟ್ಟಿದ್ದಾರೆ. ಬೆಳಗ್ಗೆ 8 ಗಂಟೆಗೆ ಮಾಡಿದ್ರೆ ಮಕ್ಕಳಿಗೆ, ಪೋಷಕರಿಗೆ ಕಷ್ಟ ಆಗಲಿದೆ ಎಂದು ಹೇಳಿದ್ದಾರೆ.

ಹೈಕೋರ್ಟ್‌ ಸಮಯ ಬದಲಾವಣೆ ವಿಚಾರ ಪ್ರಸ್ತಾಪಿಸಿದ್ದೇಕೆ?

Karnataka High court

ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಸರಕಾರೇತರ ಸಂಸ್ಥೆ ಸಮರ್ಪಣಾ ಸಾಮಾಜಿಕ- ಸಾಂಸ್ಕೃತಿಕ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಇತ್ತೀಚೆಗೆ ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಶಾಲೆಗಳು ಮತ್ತು ಕೈಗಾರಿಕೆಗಳ ಸಮಯ ಬದಲಾವಣೆಯ ಸಲಹೆಯನ್ನು ಅದು ನೀಡಿತ್ತು. ಆದರೆ, ಎಲ್ಲ ಸಂಬಂಧಿತರ ಚರ್ಚೆ ನಡೆದು ಅಂತಿಮ ಅಭಿಪ್ರಾಯ ತಿಳಿಸಲು ಸೂಚಿಸಲಾಗಿತ್ತು.

ಈ ಸಂಬಂಧ ಚರ್ಚೆ ನಡೆಸಲು ಅ. 5ರಂದು ಶಿಕ್ಷಣ ಇಲಾಖೆ ಸಭೆ ಕರೆದಿತ್ತಾದರೂ ಕೊನೆಯ ಕ್ಷಣದಲ್ಲಿ ಅಕ್ಟೋಬರ್‌ 9ಕ್ಕೆ ಮುಂದೂಡಲಾಗಿತ್ತು. ಇದೀಗ ಸಭೆಯ ಅಭಿಪ್ರಾಯವನ್ನು ಹೈಕೋರ್ಟ್‌ಗೆ ತಿಳಿಸಬೇಕಾಗಿದೆ. ಬಳಿಕ ಅಂತಿಮ ತೀರ್ಮಾನವನ್ನು ಹೈಕೋರ್ಟ್‌ ತೆಗೆದುಕೊಳ್ಳಬೇಕಾಗಿದೆ.

Exit mobile version