Site icon Vistara News

Education Guide : ಬೆಸ್ಟ್‌ ಎಂಜಿನಿಯರಿಂಗ್‌ ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಟಾಪ್‌ 5 ಸಲಹೆ

engineer education

ನೀವು ಎಂಜಿನಿಯರ್‌ ಆಗಬೇಕೆಂದು ನಿರ್ಧರಿಸಿದ್ದೀರಿ, ಬ್ರಾಂಚ್‌ ಯಾವುದು ಎಂದೂ ಈಗಾಗಲೇ ತೀರ್ಮಾನಿಸಿದ್ದೀರಿ, ಸಿಇಟಿ ರ‍್ಯಾಂಕಿಂಗ್‌ ಕೂಡ ಪ್ರಕಟವಾಗಿರುವುದರಿಂದ ಯಾವೆಲ್ಲಾ ಎಂಜಿನಿಯರಿಂಗ್‌ ಕಾಲೇಜಿಗಳಲ್ಲಿ ನಿಮಗೆ ಸೀಟ್‌ ಸಿಗಬಹುದು ಎಂಬ ಅಂದಾಜಿಸಿರಬಹುದು. ಇನ್ನೇನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೀಟ್‌ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳ ಪ್ರಕಟಿಸಲಿದ್ದು, ಆದ್ಯತಾ ಕ್ರಮದಲ್ಲಿ ನಿಮ್ಮ ಇಚ್ಛೆಯ ಕಾಲೇಜು ಮತ್ತು ಬ್ರಾಂಚ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಿದೆ.

ಎಂಜಿನಿಯರಿಂಗ್‌ ಓದುವಾಗ ಉದ್ಯೋಗ ಖಚಿತ ಪಡಿಸುವ ಬ್ರಾಂಚ್‌ಗಳ ಆಯ್ಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನೀವು ಯಾವ ಕಾಲೇಜಿನಲ್ಲಿ ಓದಿದ್ದೀರಿ ಎಂಬುದು ಕೂಡ. ನೀವು ಸರಿಯಾದ ಕಾಲೇಜನ್ನು (Right Engineering College) ಆಯ್ಕೆ ಮಾಡಿಕೊಳ್ಳದಿದ್ದರೆ, ಸರಿಯಾಗಿ ಕಲಿಯಲು ಮತ್ತು ಮುಂದೆ ಉದ್ಯೋಗದ ಅವಕಾಶಗಳನ್ನು ಪಡೆಯಲು ಪರದಾಡಬೇಕಾಗಿ ಬರಬಹುದು.

ಟಿಸಿಎಸ್‌ ಕಂಪನಿಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಯೊಬ್ಬರ ಪ್ರಕಾರ, ನೀವು ಸರಿಯಾದ ಎಂಜಿನಿಯರಿಂಗ್‌ ಬ್ರಾಂಚ್‌ ಅನ್ನು ಮತ್ತು ಅದನ್ನು ಚೆನ್ನಾಗಿ ಕಲಿಸುವ ಅಂತೆಯೇ ಪ್ರತಿಷ್ಠಿತ ಕಂಪನಿಗಳೊಂದಿಗೆ ಸಂಪರ್ಕ ಹೊಂದಿರುವ ಕಾಲೇಜನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಎಲ್ಲವೂ ಸೆಟಲ್‌ ಆದಂತೆ!ಈಗಾಗಲೇ ಸಿಇಟಿ ರ‍್ಯಾಂಕ್‌ ಪ್ರಕಟವಾಗಿರುವುದರಿಂದ ನಿಮಗೆ ಆಯ್ಕೆಯ ಅವಕಾಶ ಕಡಿಮೆ ಇರಬಹುದು. ಆದರೆ ಸಿಕ್ಕಿದ್ದರಲ್ಲಿಯೇ ಬೆಸ್ಟ್‌ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಮರೆಯಬೇಡಿ.

ಎಂಜಿನಿಯರಿಂಗ್‌ ಕಾಲೇಜಿನ ಆಯ್ಕೆ ಹೇಗೆ?

1. ಮೊದಲಿಗೆ ನೀವು ಆಯ್ಕೆ ಮಾಡಿಕೊಳ್ಳಬೇಕೆಂದಿರುವ ಎಂಜಿನಿಯರಿಂಗ್‌ ಕಾಲೇಜು ವಿವಿಧ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ಗಮನಿಸಿ. ಇದರಿಂದ ಕಾಲೇಜಿನಲ್ಲಿ ಶಿಕ್ಷಣದ ಗುಣಮಟ್ಟ ಹೇಗಿದೆ, ಮೂಲ ಸೌಕರ್ಯಗಳು ಎಷ್ಟರ ಮಟ್ಟಿಗಿವೆ ಎಂಬುದು ತಿಳಿಯುತ್ತದೆ. ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರೆಡಿಟೇಷನ್ ಕೌನ್ಸಿಲ್ (NAAC) ಮಾನ್ಯತೆ ಪಡೆದಿದೆಯೇ ಎಂಬುದನ್ನು ನೋಡಿ. ಇದಕ್ಕಾಗಿ ನೀವು ಗೂಗಲ್‌ ಸರ್ಚ್‌ನಲ್ಲಿ ಕಾಲೇಜಿನ ಹೆಸರನ್ನು ಟೈಪ್‌ ಮಾಡಿ ಹುಡುಕಾಟ ನಡೆಸಬಹುದು. ಇಲ್ಲವೇ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಮಾಹಿತಿ ಪಡೆದುಕೊಳ್ಳಬಹುದು.

ಇದು ನಿಮಗೆ ಗೊತ್ತಿರಲಿ: ಕೇಂದ್ರ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯು ಸ್ಥಾಪಿಸಿರುವ ರಾಷ್ಟ್ರೀಯ ಸಂಸ್ಥೆ ʻನ್ಯಾಷನಲ್‌ ಅಕ್ರೆಡಿಟೇಷನ್‌ ಬೋರ್ಡ್‌ʼ (ಎನ್‌ಬಿಎ) ದೇಶದ ಎಂಜಿನಿಯರಿಂಗ್‌ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಿ, ಅದು ಉತ್ತಮವಾಗಿದ್ದಲ್ಲಿ ದೃಢೀಕರಣ ಪತ್ರ ನೀಡುತ್ತದೆ (NBA Ranking 2023). ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯನ್ನೂ ಪ್ರಕಟಿಸಲಾಗುತ್ತದೆ.
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟು (National institute of ranking framework) ಎಂಬ ಹೆಸರಿನಲ್ಲಿ ಇದೇ ರೀತಿಯಾಗಿ ಎಂಜಿನಿಯರಿಂಗ್‌ ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯನ್ನು (NIRF Ranking 2023) ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ : NIRF Ranking 2023 : ರಾಜ್ಯದ ಬೆಸ್ಟ್‌ ಎಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್‌ 10 ಕಾಲೇಜುಗಳು!

2. ನೀವು ಆಯ್ಕೆ ಮಾಡಿಕೊಂಡಿರುವ ಬ್ರಾಂಚ್‌ಗೆ ನಿಪುಣ ಬೋಧಕರಿದ್ದಾರೆಯೇ ಎಂಬುದನ್ನು ಪರಿಶೀಲಿಸಿ. ಕಾಲೇಜಿನ ವೆಬ್‌ಸೈಟ್‌ನಲ್ಲಿನ ಫ್ಯಾಕಲ್ಟಿ ವಿಭಾಗಕ್ಕೆ ಹೋಗಿ ಯಾರೆಲ್ಲಾ ಬೋಧಕ ವರ್ಗದಲ್ಲಿದ್ದಾರೆ, ಅವರ ಸಾಧನೆಗಳೇನು ಎಂಬುದನ್ನೂ ಗಮನಿಸಬಹುದು. ಈಗಾಗಲೇ ಕಾಲೇಜಿನಲ್ಲಿ ಬೇರೆ ಬೇರೆ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದಲೂ ಮಾಹಿತಿ ಪಡೆದುಕೊಳ್ಳಬಹುದು. ಪಠ್ಯ ಕ್ರಮ ಅಪ್‌ಡೇಟ್‌ ಇದೆಯೇ ಎಂದೂ ಪರಿಶೀಲಿಸುವುದು ಅಗತ್ಯ.

ಪ್ಲೇಸ್‌ಮೆಂಟ್‌; ನಿಮಗಿದು ಗೊತ್ತೇ?
ಪ್ರಮುಖ ಐಟಿ ಕಂಪನಿಗಳು ಮತ್ತು ಇತರ ಉದ್ಯಮಗಳು ಅರ್ಹ ಉದ್ಯೋಗಿಗಳ ಆಯ್ಕೆಗಾಗಿ ಪ್ರಮುಖ ಎಂಜಿನಿಯರಿಂಗ್‌ ಕಾಲೇಜುಗಳ ಜತೆ ಸಂಪರ್ಕ ಹೊಂದಿರುವುದು ನಿಮಗೆ ಗೊತ್ತೇ ಇದೆ. ಕಾಲೇಜುಗಳು ಪ್ಲೇಸ್‌ಮೆಂಟ್‌ ಸೆಲ್‌ ತೆರೆದು, ಕ್ಯಾಂಪಸ್‌ ಸಂದರ್ಶನಗಳ ಮೂಲಕ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಅವಕಾಶ ಮಾಡಿಕೊಡುವುದು ಸಾಮಾನ್ಯ. ಈಗ ದೊಡ್ಡ ದೊಡ್ಡ ಉದ್ಯೋಗದಾತ ಕಂಪನಿಗಳು ತಮಗೆ ಸೂಕ್ತ ಅಭ್ಯರ್ಥಿಗಳು ದೊರೆಯಲಿ ಎಂದು ಕಾಲೇಜುಗಳ ಸಿಲಬಸ್‌ನಲ್ಲಿಯೇ ತಮಗೆ ಬೇಕಾದ ವಿಷಯಗಳನ್ನು ಪಾಠ ಮಾಡುವಂತೆ ಒಪ್ಪಂದ ಮಾಡಿಕೊಳ್ಳುತ್ತಿವೆ. ಅಲ್ಲದೇ, ತಾವೇ ಪ್ರಯೋಗಾಲಯಗಳನ್ನು ಸ್ಥಾಪಿಸಿ, ತಮ್ಮ ಕಂಪನಿಯಲ್ಲಿನ ಕೆಲಸದ ವಾತಾವರಣವನ್ನು ಪರಿಚಯ ಮಾಡಿಕೊಡುತ್ತಿವೆ. ಹೀಗೆ ಮಾಡುವ ಮೂಲಕ ತಮ್ಮ ಕಂಪನಿಗೆ ಸೂಕ್ತವಾದ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಮತ್ತು ತರಬೇತಿಗೆ ವಿನಿಯೋಗಿಸುವ ಸಮಯ ಮತ್ತು ಹಣವನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಹೀಗಾಗಿಯೇ ದೊಡ್ಡ ದೊಡ್ಡ ಕಂಪನಿಗಳ ಜತೆಗೆ ಸಂಪರ್ಕ ಹೊಂದಿರುವ ಪ್ರತಿಷ್ಠಿತ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಉದ್ಯೋಗ ಭದ್ರತೆಯನ್ನ ಈಗಿನಿಂದಲೇ ವಿದ್ಯಾರ್ಥಿಗಳು ಅನುಭವಿಸಬಹುದು!

3. ನೀವು ಹೋಗಬೇಕೆಂದಿರುವ ಎಂಜಿನಿಯರಿಂಗ್‌ ಕಾಲೇಜು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆಯೇ? ಲ್ಯಾಬ್‌ ಸೌಕರ್ಯಗಳು ಹೇಗಿವೆ? ಕಾಲೇಜಿನ ಹಿಂದಿನ ವಿದ್ಯಾರ್ಥಿಗಳು ಯಾವೆಲ್ಲಾ ಪ್ರಾಜೆಕ್ಟ್‌ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಿದ್ದರೆ ಪಡೆಯಬಹುದು. ಹಳೆಯ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

4. ಕಾಲೇಜಿನಲ್ಲಿ ಕ್ಯಾಂಪಸ್‌ ಪ್ಲೇಸ್‌ಮೆಂಟ್‌ ಸೆಲ್‌ (ಘಟಕ) ಹೇಗಿದೆ ಎಂದು ಮೊದಲ ವಿಚಾರಿಸಿ. ಪ್ರತಿಷ್ಠಿತ ಕಂಪೆನಿಗಳು ಮತ್ತು ಹೆಸರಾಂತ ಸಂಶೋಧನಾ ಸಂಸ್ಥೆಗಳು ಕ್ಯಾಂಪಸ್‌ ಪ್ಲೇಸ್‌ಮೆಂಟ್‌ಗೆಂದು ಕಾಲೇಜಿಗೆ ಬರುತ್ತಿವೆಯೇ ಎಂದು ಪರಿಶೀಲಿಸಿ. ಎಲ್ಲಾ ಕಾಲೇಜುಗಳು ವೆಬ್‌ಸೈಟ್‌ನಲ್ಲಿ ಪ್ಲೇಸ್‌ಮೆಂಟ್‌ ಸೆಲ್‌ನ ಕುರಿತು ಮತ್ತು ಯಾವೆಲ್ಲಾ ಕಂಪನಿಗಳು ಸಂದರ್ಶನಕ್ಕೆ ಬರುತ್ತಿವೆ ಎಂಬ ಮಾಹಿತಿಯನ್ನು ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎ.ಐ.ಸಿ.ಟಿ.ಇ) ಈ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ನೀಡಲೇಬೇಕಿದೆ ಎಂದು ಸೂಚಿಸಿದೆ. ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲದಿದ್ದಲ್ಲಿ ಅಥವಾ ಬಹಳ ಹಳೆಯ ಮಾಹಿತಿಯನ್ನು ನೀಡಿದ್ದಲ್ಲಿ ಇತ್ತೀಚಿನ ಮಾಹಿತಿಯನ್ನು ಆ ಕಾಲೇಜಿನಿಂದಲೇ ನೀವು ಪಡೆಯಬಹುದು.

ಪ್ಲೇಸ್‌ಮೆಂಟ್‌ ಸೆಲ್‌ ಎಷ್ಟು ಕ್ರಿಯಾಶೀಲವಾಗಿದೆ, ಯಾವೆಲ್ಲಾ ವಿಷಯಗಳ ಕುರಿತು ತರಬೇತಿ ನೀಡುತ್ತಿದೆ (ಅನೇಕ ಪ್ರತಿಷ್ಠಿತ ಕಾಲೇಜುಗಳ ಪ್ಲೇಸ್‌ಮೆಂಟ್‌ ಸೆಲ್‌ಗಳು ಉದ್ಯೋಗಿಗಳಿಗೆ ಅಗತ್ಯವಾಗಿರುವ ಸಾಫ್ಟ್‌ ಸ್ಕಿಲ್‌ಗಳನ್ನು ಕಲಿಸಲು ವ್ಯವಸ್ಥೆ ಮಾಡಿರುತ್ತವೆ) ಎಂಬುದನ್ನು ತಿಳಿಯಿರಿ. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಲು ನೀವು ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಬಹುದು.

ಅಲ್ಲದೆ, ಯಾವೆಲ್ಲಾ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ (Internship) ಮಾಡಲು ಈ ಕಾಲೇಜು ಅವಕಾಶ ನೀಡುತ್ತದೆ ಎಂಬುದನ್ನು ಪರಿಶೀಲಿಸಿ, ಉದ್ಯೋಗ ಪಡೆಯುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬೇಡಿ.

ಇದನ್ನೂ ಓದಿ : Education Guide: ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಕೌಶಲಗಳಿವು

5. ಬೇರೆಯವರಿಂದ ಪಡೆದ ಮಾಹಿತಿಯನ್ನು, ಗೊತ್ತಿದ್ದವರು ಹೇಳಿದ ಮಾತುಗಳನ್ನು ಸಂಪೂರ್ಣವಾಗಿ ನಂಬುವ ಮೊದಲು ಸಾಧ್ಯವಿದ್ದರೆ, ನೀವೇ ನಿಮ್ಮ ಆಯ್ಕೆಯ ಎಂಜಿನಿಯರಿಂಗ್‌ ಕಾಲೇಜಿಗೆ ಭೇಟಿ ನೀಡಿ. ಕಾಲೇಜಿನ ವಾತಾವರಣ, ಸೌಕರ್ಯಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹೇಗಿದ್ದಾರೆ ಎಂಬುದನ್ನೆಲ್ಲಾ ಪರಿಶೀಲಿಸಿ. ಆ ನಂತರವಷ್ಟೇ ತೀರ್ಮಾನಕ್ಕೆ ಬನ್ನಿ. ಗೊಂದಲವಿದ್ದರೆ ಸೂಕ್ತ ತಜ್ಞರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

Exit mobile version