Site icon Vistara News

Education Guide : ಕಾಮರ್ಸ್‌ ಓದಿದರೆ ಕಾಸಿಗಿಲ್ಲ ಬರ!

commerce courses

ನಾವಿಂದು ಪ್ರತಿಯೊಂದು ವ್ಯವಹಾರವನ್ನೂ ವ್ಯಾಪಾರಿ ದೃಷ್ಟಿಕೋನದಿಂದ ನೋಡುತ್ತಿದ್ದೇವೆ, ಮಾಡುತ್ತಿದ್ದೇವೆ. ಹೀಗಾಗಿ ವಾಣಿಜ್ಯ (education news)ಎಂಬುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದಾಗಿ ವಾಣಿಜ್ಯ (ಕಾಮರ್ಸ್‌) ಓದಿದವರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಅತಿ ಹೆಚ್ಚು ರೀತಿಯ ಉದ್ಯೋಗಾವಕಾಶಗಳನ್ನು ಹೊಂದಿರುವ ವಿಷಯ ಎಂದರೆ ಕಾಮರ್ಸ್‌. ಕಾಮನ್‌ಸೆನ್ಸ್‌ ಇದ್ದು, ಕಾಮರ್ಸ್‌ ಓದಿದ್ದರೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಬದುಕಬಹುದು ಎಂಬ ಮಾತೊಂದಿದೆ.

ವ್ಯಾಪಾರ, ವ್ಯವಹಾರ, ಬ್ಯಾಂಕಿಂಗ್‌, ಇನ್ಷೂರೆನ್ಸ್‌, ಆಫೀಸ್‌ ಮ್ಯಾನೇಜ್‌ಮೆಂಟ್‌, ಅಕೌಂಟಿಂಗ್‌, ಪ್ಲಾನಿಂಗ್‌, ಹಣಕಾಸು ವ್ಯವಹಾರ, ಶಿಕ್ಷಣ, ಇ-ಕಾಮರ್ಸ್‌, ಮಾನವ ಸಂಪನ್ಮೂಲ, ತೆರಿಗೆ, ಷೇರು ಮಾರುಕಟ್ಟೆ, ಆಡಿಟಿಂಗ್‌ ಹೀಗೆ ಅನೇಕ ಕ್ಷೇತ್ರದಲ್ಲಿ ಕಾಮರ್ಸ್‌ ಮಾಡಿದವರಿಗೆ ಉದ್ಯೋಗಾವಕಾಶಗಳಿವೆ. ಈ ಪ್ರತಿಯೊಂದು ವಿಷಯಗಳ ಕುರಿತಾದ ಅಧ್ಯಯನಕ್ಕೆ ವಾಣಿಜ್ಯದ ವಿವಿಧ ಸಂಯೋಜನೆಗಳಿವೆ.

ಉದ್ಯೋಗಾವಕಾಶಗಳಿಂದಾಗಿ ಕಾಮರ್ಸ್‌ನ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೇಚ್ಚುತ್ತಲೇ ಇದ್ದು, ಎಂಜಿನಿಯರಿಂಗ್‌, ಮೆಡಿಕಲ್‌ಗಳ ಆಕರ್ಷಣೆಯ ನಡುವೆಯೂ ಈ ಕೋರ್ಸ್‌ ಮಿಂಚುತ್ತಿದೆ. ಇಲ್ಲಿ ಎಲ್ಲರೂ ಗಮನಿಸಬೇಕಾದ ವಿಷಯವೆಂದರೆ ತಾಂತ್ರಿಕ, ವೈದ್ಯಕೀಯ ಮೊದಲಾದ ಕೋರ್ಸ್‌ಗಳಿಗೆ ಖರ್ಚಾಗುವಷ್ಟು ಹಣ ಕಾರ್ಮರ್ಸ್‌ ಓದಲು ಬೇಕಾಗುವುದಿಲ್ಲ. ಇಲ್ಲಿ ಬಹಳ ಮುಖ್ಯವಾಗಿ ಬೇಕಾಗುವುದೆಂದರೆ ಆಸಕ್ತಿ. ಲೆಕ್ಕಾಚಾರದಲ್ಲಿ, ವ್ಯವಹಾರದಲ್ಲಿ, ಎಕನಾಮಿಕ್ಸ್‌ನಲ್ಲಿ, ಬಿಸ್ನೆಸ್‌ನಲ್ಲಿ ನಿಮಗೆ ಆಸಕ್ತಿ ಇತ್ತೆಂದರೆ ಕಾಮರ್ಸ್‌ ಓದಿ ನೀವು ಕೈ ತುಂಬಾ ಕಾಸು ಮಾಡಬಹುದು.

ಏನೇನು ಓದಬಹುದು?

ಕಾಮರ್ಸ್‌ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕೆಂಬ ಆಸೆ ಹೊಂದಿದವರು ಪಿಯುಸಿಯಲ್ಲಿಯೇ ಮೂಲಗಣಿತ, ಸ್ಟಾಟಿಸ್ಟಿಕ್ಸ್‌, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಗಣಿತ ವಿಜ್ಞಾನ, ಅರ್ಥಶಾಸ್ತ್ರ ವಿಷಯಗಳನ್ನೊಳಗೊಂಡ ಸಂಯೋಜನೆಗಳನ್ನು ಓದಬೇಕು. ವಿಜ್ಞಾನ ವಿಭಾಗದ ಕಂಪ್ಯೂಟರ್‌ ಸೈನ್ಸ್‌ ಅನ್ನು ಕೂಡ ಕಾಮರ್ಸ್‌ ವಿಭಾಗದ ವಿದ್ಯಾರ್ಥಿಗಳು ಅಭ್ಯಾಸಿಸಲು ಅವಕಾಶವಿರುತ್ತದೆ. ಈ ಸಂಯೋಜನೆ ಆಯ್ಕೆ ಮಾಡಿಕೊಂಡರೆ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಪ್ರಾಯೋಗಿಕ ಪರೀಕ್ಷೆ ಬರೆಯಬೇಕಾಗಿರುತ್ತದೆ.

ದ್ವಿತೀಯ ಪಿಯುಸಿಯಲ್ಲಿ ಕಾಮರ್ಸ್‌ ಓದಿದವರು, ಬಿಕಾಂ, ಸಿಎ, ಬಿಎಫ್‌ಎ (Bachelor of Finance and Accounting), ಬಿಸಿಎ (Bachelor of Computer Applications), ಬಿಎಸ್ಸಿ-ಅಪ್ಲ್ಡೈ ಮ್ಯಾಥ್‌ಮೆಟಿಕ್ಸ್‌, ಬಿಎಸ್ಸಿ-ಸ್ಟ್ಯಾಟಿಸ್ಟಿಕ್ಸ್‌, ಬಿಬಿಎ ((Bachelors of Business Administration), ಬಿಎಂಎಸ್‌ (Bachelors of Management Studies), ಕಂಪನಿ ಸೆಕ್ರೆಟರಿ (ಸಿಎಸ್‌), ಬ್ಯಾಚುಲರ್ಸ್‌ ಆಫ್‌ ಟ್ರಾವೆಲ್‌ ಆ್ಯಂಡ್‌ ಟೂರಿಸಮ್‌, ಬ್ಯಾಚುಲರ್‌ ಇನ್‌ ಹಾಸ್ಪಿಲಿಟಿ, ಬ್ಯಾಚುಲರ್‌ ಇನ್‌ ಈವೆಂಟ್‌ ಮ್ಯಾನೇಜ್‌ಮೆಂಟ್‌, ಬ್ಯಾಚುಲರ್‌ ಇನ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಬಿಬಿಎಎಲ್‌ಎಎಲ್‌ಬಿ (BBA LLB ), ಬಿಎ ಎಲ್‌ಎಲ್‌ಬಿ, ಬ್ಯಾಚುಲರ್‌ ಆಫ್‌ ಸೋಷಿಯಲ್‌ ವರ್ಕ್‌, ಬಿಎಡ್‌ (Bachelor of Education) ಹೀಗೆ 20 ಕ್ಕೂ ಹೆಚ್ಚು ವಿವಿಧ ಪದವಿ ಕೋರ್ಸ್‌ಗಳನ್ನು ಮಾಡಬಹುದಾಗಿರುತ್ತದೆ.

ಇದಲ್ಲದೆ ಡಿಪ್ಲೊಮಾ ಇನ್‌ ಡಿಜಿಟಲ್‌ ಮಾರ್ಕೆಟಿಂಗ್‌, ಡಿಪ್ಲೊಮಾ ಇನ್‌ ಬ್ಯಾಕಿಂಗ್‌ ಆ್ಯಂಡ್‌ ಫೈನಾನ್ಸ್‌, ಡಿಪ್ಲೊಮಾ ಇನ್‌ ರೀಟೈಲ್‌ ಮ್ಯಾನೇಜ್‌ಮೆಂಟ್‌, ಡಿಪ್ಲೊಮಾ ಇನ್‌ ಪಿಜಿಕಲ್‌ ಎಜುಕೇಷನ್‌, ಡಿಪ್ಲೊಮಾ ಇನ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್‌ ಸೇರಿದಂತೆ 16 ಕ್ಕೂ ಹೆಚ್ಚು ಡಿಪ್ಲೊಮಾ ಕೋರ್ಸ್‌ ಮಾಡಲು ಅವಕಾಶವಿರುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಕಾರ್ಮಸ್‌ ಓದಿದರೆ ಹಲವು ಅವಕಾಶ

ಇವುಗಳಲ್ಲದೆ, ಬ್ಯಾಚುಲರ್‌ ಆಫ್‌ ಜರ್ನಲಿಸಮ್‌ ಆ್ಯಂಡ್‌ ಮಾಸ್‌ ಕಮ್ಯುನಿಕೇಷನ್‌, ಬ್ಯಾಚುಲರ್‌ ಆಫ್‌ ಫೈನ್‌ ಆರ್ಟ್‌, ಅನಿಮೇಷನ್‌ ಆ್ಯಂಡ್‌ಮಲ್ಟಿಮೀಡಿಯ ಕೋರ್ಸ್‌ನಂತಹ ಕ್ರಿಯೇಟಿವ್‌ ಕೋರ್ಸ್‌ಗಳನ್ನೂ ಮಾಡಬಹುದು. ಬಿಎಎಲ್‌ಎಲ್‌ಬಿ, ಡಿಜಿಟಲ್‌ ಮಾರ್ಕೆಟಿಂಗ್‌, ಜಿಎಸ್‌ಟಿ ಕೋರ್ಸ್‌, ಇನ್‌ಕಮ್‌ ಟ್ಯಾಕ್ಸ್‌ ಕೋರ್ಸ್‌, ಟ್ಯಾಲಿ ಕೋರ್ಸ್‌, ಕಂಪನಿ ಸೆಕ್ರೆಟರಿ ಕೋರ್ಸ್‌, ಅಕೌಂಟಿಂಗ್‌ ಆ್ಯಂಡ್‌ ಟ್ಯಾಕ್ಸೇಷನ್‌ ಕೋರ್ಸ್‌ ಹೀಗೆ ವೃತ್ತಿ ಪರವಾದ ಕೋರ್ಸ್‌ಗಳನ್ನು ಮಾಡಿ, ಉದ್ಯೋಗವನ್ನು ಖಚಿತಪಡಿಸಿಕೊಳ್ಳಬಹುದು.

ಬ್ಯಾಚುಲರ್‌ ಆಫ್‌ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ( Bachelors of Business Management, ಬಿಎ/ಬಿಎಸ್ಸಿ (Statistics/Economics/ Maths/ Actuarial Science) ಚಾರ್ಟರ್ಡ್‌ ಅಕೌಂಟೆಂಟ್‌‌ (ಸಿಎ), ಕಂಪನಿ ಸೆಕ್ರೆಟರಿ ಕೋರ್ಸ್‌ ಮಾಡಿದರೆ ಹೆಚ್ಚಿನ ವೇತನದ ಉದ್ಯೋಗ ಪಡೆಯಲು ಅವಕಾಶಗಳಿರುತ್ತವೆ. ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಮಾಡಬಹುದು. ಚಾರ್ಟರ್ಡ್‌ ಅಕೌಂಟೆಂಟ್‌ ಮಾಡುವವರು ಫೈನಾನ್ಸಿಂಗ್‌, ಟ್ಯಾಕ್ಸೇಷನ್‌, ಕಾರ್ಪೋರೇಟ್‌ ಗವರ್ನನ್ಸ್‌, ರಿಸ್ಕ್‌ ಮ್ಯಾನೇಜ್‌ಮೆಂಟ್‌ ಪರಿಣಿತರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿವೆ.

ಸಿಎ ಮತ್ತು ಸಿಎಸ್‌
ಚಾರ್ಟರ್ಡ್‌ ಅಕೌಂಟೆಂಟ್‌ ಆಗಲು ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟೆಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ (ಐಸಿಎಐ) ನಡೆಸುವ ಪರೀಕ್ಷೆಗಳನ್ನು ಬರೆಯಬೇಕಿರುತ್ತದೆ. ಈ ಪರೀಕ್ಷೆಗಳನ್ನು ಮೂರು ಹಂತದಲ್ಲಿ ನಡೆಸಲಾಗುತ್ತದೆ. ಸಿಪಿಟಿ (ಕಾಮನ್‌ ಪ್ರೊಫಿಸಿಯೆನ್ಸಿ ಟೆಸ್ಟ್‌) ಮೊದಲ ಹಂತವಾದರೆ ಐಪಿಸಿಸಿ (ಇಂಟಿಗ್ರೇಟೆಡ್‌ ಪ್ರೊಫೆಷನಲ್‌ ಕಾಂಪಿಟನ್ಸ್‌ ಕೋರ್ಸ್‌) ಎರಡನೇ ಹಂತ, ಸಿಎ ಫೈನಲ್‌ ಪರೀಕ್ಷೆ ಮೂರನೇ ಹಂತವಾಗಿರುತ್ತದೆ. ಸಿಎ ಮಾಡಲು ಎರಡು ದಾರಿಗಳಿವೆ. ಪಿಯುಸಿಯಲ್ಲಿ ಕಾಮರ್ಸ್‌ ಓದಿದವರು ಸಿಎಗೆ ಅರ್ಜಿ ಸಲ್ಲಿಸಬಹುದು. ಇಲ್ಲವೇ ಪದವಿ ಮುಗಿಸಿ ಕಾಮನ್‌ ಪ್ರೊಫಿಸಿಯೆನ್ಸಿ ಟೆಸ್ಟ್‌ (ಸಿಪಿಟಿ) ಬರೆಯಬಹುದು.
ಕಂಪನಿ ಸೆಕ್ರೆಟರಿ (ಸಿಎಸ್‌) ಕೂಡ ಸಿಎ ಮಾದರಿಯಲ್ಲಿಯೇ ಇರುತ್ತದೆ. ಭಾರತೀಯ ಕಂಪನಿ ಸೆಕ್ರೆಟರಿಗಳ ಸಂಸ್ಥೆಯಲ್ಲಿ (ಐಸಿಎಸ್‌ಐ) ಈ ಕೋರ್ಸ್‌ ನೀಡುತ್ತದೆ. ಪದವಿ ಪಡೆದವರಿಗೆ ಅಥವಾ ಫೌಂಡೇಷನ್‌ ಪ್ರೋಗ್ರಾಮ್‌ ಕೋರ್ಸ್‌ ಮಾಡಿದವರಿಗೆ ಮೂರು ವರ್ಷಗಳ ಪೂರ್ಣಾವಧಿಯ ಕೋರ್ಸ್‌ ಇದಾಗಿದೆ.

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿಯೂ ಅವಕಾಶ!

ಇಂದು ಎಲ್ಲರನ್ನೂ ಆಕರ್ಷಿಸುತ್ತಿರುವ ಉದ್ಯೋಗ ಎಂದರೆ ಸಾಫ್ಟ್‌ವೇರ್‌ ಕ್ಷೇತ್ರ. ಕಾಮರ್ಸ್‌ ಮಾಡಿದವರಿಗೂ ಇಲ್ಲಿ ಅವಕಾಶವಿದೆ. ಕಾಮರ್ಸ್‌ ಮತ್ತು ಕಂಪ್ಯೂಟರ್‌ ಆಸಕ್ತಿ ಇರುವವರು ಪಿಯುಸಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಸಂಯೋಜನೆ ಆಯ್ಕೆ ಮಾಡಿಕೊಂಡು ನಂತರ ಪದವಿ ಹಂತದಲ್ಲಿ ಬಿಸಿಎ ಕಲಿತರೆ ಸಾಫ್ಟ್‌ವೇರ್‌ ಅಥವಾ ಕಂಪ್ಯೂಟರ್‌ ಉದ್ಯಮಗಳಲ್ಲಿ ಕೆಲಸ ಮಾಡಬಹುದು. ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್ ಓದಿ ಕಂಪ್ಯೂಟರ್‌ ಎಂಜಿನಿಯರ್‌ ಎಂದು ಕರೆಸಿಕೊಳ್ಳಬಹುದು!. ಬಿಸ್ನೆಸ್‌ ಕಂಪ್ಯೂಟಿಂಗ್‌ ಕೋರ್ಸ್‌ ಕೂಡ ಮಾಡಬಹುದು.

ಇದನ್ನೂ ಓದಿ : Education Guide: ವಿದೇಶದಲ್ಲಿದ್ದು ಓದಿನಲ್ಲಿ ಪರ್ಫೆಕ್ಟ್‌ ಆಗಬೇಕೆಂದರೆ ಹೀಗೆ ಮಾಡಿ…

ಅಮೆರಿಕದಲ್ಲಿರುವ ಸಿಎಫ್‌ಎ (CFA Institute) ಸಂಸ್ಥೆಯು ಚಾರ್ಟರ್ಡ್‌ ಫೈನಾನ್ಷಿಯಲ್‌ ಅನಾಲಿಸ್ಟ್‌ (CFA) ಕೋರ್ಸ್‌ ನೀಡುತ್ತಿದ್ದು, ಇದನ್ನು ಲೆವೆಲ್‌ 1,2,3 ಎಂದು ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಈ ಕೋರ್ಸ್‌ ಮಾಡಿದರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ, ಹೆಸರಾಂತ ಕಂಪನಿಗಳಲ್ಲಿ ಉದ್ಯೋಗ ಖಚಿತ ಎನ್ನುವ ಸ್ಥಿತಿ ಇದೆ.

Exit mobile version