ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಆಗೆಲ್ಲ, ಮಕ್ಕಳ ಕೈಯಲ್ಲಿ ದುಡ್ಡು ಓಡಾಡುತ್ತಿರಲಿಲ್ಲ. ಶಾಲೆ ಕಾಲೇಜು ಬಿಟ್ಟರೆ ಮನೆಯ ಹೊರತಾಗಿ ಬೇರೆ ಪ್ರಪಂಚವಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ (education) ಪೋಷಕರು ಕಷ್ಟಪಟ್ಟು ದುಡಿಯುತ್ತಾರೆ. ಅವರಿಷ್ಟದ ವಿದ್ಯೆ ಕಲಿಯಲಿ ಎಂದು ಪೋಷಕರು ಹಗಲಿರುಳು ಬೇಡುತ್ತಾರೆ. ಮಕ್ಕಳೂ ಕೂಡಾ ಹೆತ್ತವರ ಪರಿಶ್ರಮವನ್ನು ಅರಿತು ಶಾಲೆ ಕಾಲೇಜು ದಿನಗಳಲ್ಲಿ (saving in college) ಹಣ ವಿಪರೀತ ಪೋಲು ಮಾಡದೆ ಉಳಿಸಿಕೊಳ್ಳಲು (saving) ಪ್ರಯತ್ನಿಸಬೇಕು. ಸಾಕಷ್ಟು ಮಂದಿಗೆ ಪೋಷಕರು ನೀಡುವ ಪಾಕೆಟ್ ಮನಿ ಸಾಕಾಗದೆ ಇರುವ ಪ್ರಸಂಗವೂ ಇದೆ. ಹೊರ ಜಗತ್ತಿನಲ್ಲಿ ಬೇರೆ ಮಕ್ಕಳಂತೆ ತಾವೂ ಇರಬೇಕು ಎಂಬ ಒತ್ತಡ, ಜಗತ್ತಿನ ನಾನಾ ವಿಚಾರಗಳ ಸೆಳೆತ ಇತ್ಯಾದಿಗಳು ವಿದ್ಯಾರ್ಥಿಗಳ ಮನಸ್ಸನ್ನು ಚಂಚಲವಾಗಿಸುವುದೂ ನಿಜವೇ. ಆದರೂ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ತಮ್ಮ ಹೆತ್ತವರು ಕೊಡುವ ಪಾಕೆಟ್ ಮನಿಯನ್ನು (pocket money) ಹೇಗೆ ಮಿತವಾಗಿ ಬಳಸಬೇಕು ಹಾಗೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ಹಣ ಉಳಿತಾಯ ಮಾಡಬಹುದು (Education Guide) ಎಂಬುದನ್ನು ನೋಡೋಣ.
1. ಸೆಕೆಂಡ್ ಹ್ಯಾಂಡ್ ಅಂದರೆ ಬಳಸಿದ ಪುಸ್ತಕಗಳನ್ನು (second hand books) ಖರೀದಿಸಿ. ಹೊಸ ಪುಸ್ತಕಗಳನ್ನು ಸೀದಾ ಖರೀದಿಸುವ ಮೊದಲು ಈ ಮೊದಲು ಹಿರಿಯ ವಿದ್ಯಾರ್ಥಿಗಳು ಓದಿ ಬಿಟ್ಟ ಪುಸ್ತಕಗಳು ಸಿಗುತ್ತವೆಯೋ ನೋಡಿ. ಆಗ ಹೊಸ ಪುಸ್ತಕಕ್ಕೆ ಖರ್ಚು ಮಾಡುವ ಅರ್ಧದಷ್ಟು ಹಣ ಇಲ್ಲಿ ಉಳಿಸಬಹುದು.
2. ಒಬ್ಬರೇ ರೂಮು ಹುಡುಕುವ ಬದಲು ಮೂರ್ನಾಲ್ಕು ಗೆಳೆಯರು ಅಥವಾ ಗೆಳತಿಯರು ಸೇರಿ (sharing room) ರೂಮು ಮಾಡಿಕೊಳ್ಳಿ. ಆಗ ಎಲ್ಲ ಖರ್ಚುಗಳೂ ಹಂಚಿ ಹೋಗುತ್ತವೆ.
3. ಹೊರಗಡೆ ನಿತ್ಯವೂ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದರೆ, ನೀವೇ ಅಡುಗೆ ಮಾಡಲು ಪ್ರಯತ್ನಿಸಿ. ಹೊರಗೆ ತಿನ್ನುವುದನ್ನು ಕಡಿಮ ಮಾಡಿದರೆ ತಾನೇ ತಾನಾಗಿ ದುಡ್ಡು ಉಳಿಯುತ್ತದೆ. ಜೀವನಕ್ಕೆ ಅತೀ ಅಗತ್ಯವಾದ ಅಡುಗೆಯ ತಪ್ಪು ಸರಿಗಳನ್ನು ಯಾವ ಭಯವೂ ಇಲ್ಲದೆ ಪ್ರಯೋಗಿಸಿ ಕಲಿಯಲೂ ಇದು ಸಕಾಲ.
4. ಆಹಾರ ವಸ್ತುಗಳು ಅಥವಾ ಅಗತ್ಯ ಸಾಮಾನುಗಳನ್ನು ಖರೀದಿಸಲು ಸಂಜೆಯ ಹೊತ್ತು ಮೀಸಲಿಡಿ. ಬಹಳಷ್ಟು ಸಾರಿ, ಸೂಪರ್ ಮಾರ್ಕೆಟ್‌ಗಳಲ್ಲಿ ಅಥವಾ ತರಕಾರಿ ಮಾರುಕಟ್ಟೆಗಳಲ್ಲಿ ದಿನದಾಂತ್ಯಕ್ಕೆ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
5. ಉಚಿತವಾಗಿ ಸಿಗುವ ಲಾಭಗಳನ್ನು ಆದಷ್ಟೂ ಬಳಸಿ. ಮನರಂಜನೆಗಾಗಿ ಉಚಿತವಾಗಿ ಲಭ್ಯವಿರುವ ಪ್ರದರ್ಶನಗಳು, ಉಚಿತವಾದ ಚಂದಾದಾರಿಕೆಗಳನ್ನು ಬಳಸಬಹುದು.
6. ಪುಸ್ತಕಗಳನ್ನು ಬಾಡಿಗೆಗಾಗಿ ಪಡೆಯುವುದು ಹಾಗೂ ಆದಷ್ಟೂ ಗ್ರಂಥಾಲಯಗಳನ್ನು ಬಳಸುವುದು ಬಹಳ ಒಳ್ಳೆಯದು. ಇದರಿಂದ ಪುಸ್ತಕಗಳ ಅನಗತ್ಯ ಖರೀದಿ ತಪ್ಪುತ್ತದೆ. ಹಾಗೂ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಕಳೆಯುವ ಮೂಲಕ ಹಲವು ಬಗೆಯ ಪುಸ್ತಕಗಳ ಪ್ರಪಂಚದೊಳಕ್ಕೆ ನಿಮಗೆ ಪ್ರವೇಶವೂ ದೊರೆಯುತ್ತದೆ. ಬಹಳ ಸಾರಿ ಬದುಕು ಬದಲಾಗುವುದೇ ಇಲ್ಲಿಂದ.
ಇದನ್ನೂ ಓದಿ: Education Guide: ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಕೌಶಲಗಳಿವು
7. ವಿದ್ಯಾರ್ಥಿಗಳಿಗಾಗಿ ಹಲವೆಡೆ ಸಿಗುವ ರಿಯಾಯಿತಿಗಳನ್ನು ಬಳಸಿ. ಹಲವೆಡೆ ಪ್ರವೇಶಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಅಥವಾ ಅರ್ಧ ಬೆಲೆಯಲ್ಲಿ ಲಭ್ಯವಿರುತ್ತವೆ.
8. ಬಹಳ ಸಾರಿ ನಿಮಗೆ ಸಿಗಬಹುದಾದ ಸ್ಕಾಲರ್‌ಶಿಪ್‌ಗಳ ಅರಿವೇ ಇರುವುದಿಲ್ಲ. ಆನ್‌ಲೈನ್ ಜಾಲಾಡಿ. ನೀವು ಪಡೆಯಲು ಅರ್ಹವಾದ ಸ್ಕಾಲರ್‌ಶಿಪ್‌ಗಳು ಇದೆಯಾ ಪರೀಕ್ಷಿಸಿಕೊಳ್ಳಿ. ಅರ್ಜಿ ಹಾಕಿ. ಅದೃಷ್ಟ, ಶ್ರಮ ಇದ್ದರೆ ಸ್ಕಾಲರ್‌ಶಿಪ್ ಪಡೆದುಕೊಂಡೂ ಓದಬಹುದು.
9. ಖರ್ಚಿನ ಬಗ್ಗೆ ಲೆಕ್ಕ ಇಟ್ಟುಕೊಳ್ಳಿ. ಇರುವ ದುಡ್ಡು, ಖರ್ಚು ಮಾಡಿದ ಲೆಕ್ಕಾಚಾರಗಳು ಬರೆದಿನೋಟ್ ಮಾಡಿಟ್ಟುಕೊಂಡರೆ, ಖರ್ಚಿನ ಅಂದಾಜು ಹಾಗೂ ಮಾಡಬಾರದ ಖರ್ಚುಗಳ ಅರಿವಿರುತ್ತದೆ.
10. ಕೆಟ್ಟ ಅಭ್ಯಾಸಗಳಿದ್ದರೆ ಬಿಡಲು ಪ್ರಯತ್ನಿಸಿ. ಅವುಗಳಿಗಾಗಿ ಹಣವೂ, ಆರೋಗ್ಯವೂ ಹಾಳು ಮಾಡದೆ ಉತ್ತಮ ದಾರಿಯಲ್ಲಿ ಪಯಣಿಸಿ. ಖರೀದಿಸಿ ತಂದ ವಸ್ತುಗಳನ್ನು ಪೋಲು ಮಾಡದೆ, ಸದ್ವಿನಿಯೋಗ ಮಾಡಲು ಪ್ರಯತ್ನಿಸಿ. ಪ್ರತಿಯೊಂದರ ಬೆಲೆಯನ್ನು ಅರಿತುಕೊಂಡು ಬಳಸಿ.
ಇದನ್ನೂ ಓದಿ: Education Guide : ಬೆಸ್ಟ್ ಎಂಜಿನಿಯರಿಂಗ್ ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಟಾಪ್ 5 ಸಲಹೆ