Site icon Vistara News

Education Guide : ಪ್ಯಾರಾ ಮೆಡಿಕಲ್‌ ಕೋರ್ಸ್‌ ಮಾಡಿದರೆ ಭರ್ಜರಿ ಅವಕಾಶ

paramedical courses

ವೈದ್ಯಕೀಯ ಕ್ಷೇತ್ರಲ್ಲಿ ವೈದ್ಯರ ನಂತರ ಪ್ರಾಮುಖ್ಯತೆ ಪಡೆದ ಮತ್ತೊಂದು ಉದ್ಯೋಗ ಎಂದರೆ ಅರೆ ವೈದ್ಯ ಹುದ್ದೆ. ಇವರನ್ನು ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಎಂದು ಕರೆಯುತ್ತೇವೆ. ಇವರಿಲ್ಲದೆ ವೈದ್ಯರಿಲ್ಲ ಎನ್ನುವಷ್ಟು ಈ ಹುದ್ದೆಗೆ ಪ್ರಾಮುಖ್ಯತೆ ಇದೆ (education news). ನಾವೆಲ್ಲಾ ಕಾಯಿಲೆ ಬಂದಾಕ್ಷಣ ಆಸ್ಪತ್ರೆಗೆ ಹೋಗುತ್ತೇವೆ. ಕೆಲವೊಮ್ಮೆ ನಮಗೆ ಸೂಕ್ತ ಚಿಕಿತ್ಸೆ ಆರಂಭಿಸುವ ಪೂರ್ವದಲ್ಲಿ ವೈದ್ಯರಿಗೆ ಕೆಲವು ತಪಾಸಣೆಗಳ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರಿಗೆ ನೆರವಾಗುವವರೇ ಈ ಪ್ಯಾರಾ ಮೆಡಿಕಲ್ ಸಿಬ್ಬಂದಿ.

ಇನ್ನೂ ಬಿಡಿಸಿ ಹೇಳುವುದಾದರೆ ರೋಗಿಯ ಚಿಕಿತ್ಸೆಗೆ ಅಗತ್ಯವಾಗಿರುವ ರಕ್ತಪರೀಕ್ಷೆ, ಎಕ್ಸ್ ರೇ ಮೊದಲಾದ ತಪಾಸಣೆಯನ್ನು ಕರಾರುವಾಕ್ಕಾಗಿ ನಿರ್ವಹಿಸುವವರೇ ಪ್ಯಾರಾ ಮೆಡಿಕಲ್ ಸಿಬ್ಬಂದಿ. ಇವರು ರೋಗಿಯ ಕಾಯಿಲೆ/ ದೇಹಸ್ಥಿತಿ ಬಗ್ಗೆ ಸಮರ್ಪಕ ವರದಿ ನೀಡುತ್ತಾರೆ. ಅದರ ಆಧಾರದ ಮೇಲೆಯೇ ವೈದ್ಯರು ಚಿಕಿತ್ಸೆ ಶುರುಮಾಡುತ್ತಾರೆ.

ಈ ಸಿಬ್ಬಂದಿ ಇಲ್ಲದಿದ್ದರೆ ಆಸ್ಪತ್ರೆಗಳಲ್ಲಿ ಯಾವ ಕೆಲಸವೂ ನಡೆಯದು. ಹೀಗಾಗಿಯೇ ಸದಾ ಬೇಡಿಕೆಯಲ್ಲಿರುವ ಉದ್ಯೋಗ ಎಂದು ಇದು ಗುರುತಿಸಲ್ಪಟ್ಟಿದೆ. ಈ ಹುದ್ದೆಗಳನ್ನು ಪಡೆಯಬೇಕಾದರೆ ಪ್ಯಾರಾ ಮೆಡಿಕಲ್ ಕೋರ್ಸ್
ಮಾಡಿರಬೇಕು. ಇದು ತೀರಾ ಕಷ್ಟಸಾಧ್ಯವಾದ ಕೋರ್ಸ್ ಅಲ್ಲ, ಸುಲಭವಾಗಿ ಓದಬಹುದಾದ ಕೋರ್ಸ್. ಅಂತೆಯೇ ನಮ್ಮ ದೇಶದಲ್ಲಿಯಂತೂ ಉದ್ಯೋಗ ಗ್ಯಾರಂಟಿಯ ಕೋರ್ಸ್‌ ಇದು.

ಏನು ಓದಬೇಕು?

ಅರೆ ವೈದ್ಯ ಸಿಬ್ಬಂದಿಗೆ ಸಮರ್ಪಣೆ ಮತ್ತು ಸೇವಾ ಮನೋಭಾವನೆ ಅಗತ್ಯ. ತಪಾಸಣೆ ಮಾಡುವಾಗ ಜಾಗರೂಕತೆ ಮುಖ್ಯ. ಪ್ಯಾರಾ ಮೆಡಿಕಲ್ ಕೋರ್ಸ್‌ಗಳಲ್ಲಿ ವಿವಿಧ ಟೆಸ್ಟ್ (ದೇಹ ಪರೀಕ್ಷೆ) ಗಳನ್ನು ಮಾಡುವುದು ಹೇಗೆಂದು ಕಲಿಸಲಾಗುತ್ತದೆ. ಎಸ್ಎಸ್ಎಲ್ಸಿಯವರೆಗೆ ಕಲಿತ ಜೀವವಿಜ್ಞಾನ ಇಲ್ಲಿ ಈ ಸಿಬ್ಬಂದಿರಿಗೆ ನೆರವಾಗುತ್ತದೆ. ಇಂತಹ ಕೋರ್ಸ್‌ಗಳಲ್ಲಿ ಥಿಯರಿ ಶಿಕ್ಷಣಕ್ಕಿಂತಲೂ ಪ್ಯಾಕ್ಟಿಕಲ್‌ಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ಪ್ಯಾರಾ ಮೆಡಿಕಲ್‌ ಸಂಪೂರ್ಣವಾಗಿ ವೃತ್ತಿಪರವಾದದ್ದು (ಪ್ರೊಫೆಷನಲ್). ಈ ಹುದ್ದೆಗೆ ನಾಲ್ಕು ರೀತಿಯ ಕೋರ್ಸ್‌ಗಳನ್ನು ಮಾಡಬಹುದು;
1. ಡಿಪ್ಲೊಮಾ ಪ್ಯಾರಮೆಡಿಕಲ್‌ ಕೋರ್ಸ್‌ – 2- 3ವರ್ಷ
2. ಪದವಿ ಪೂರ್ವ ಪ್ಯಾರಮೆಡಿಕಲ್‌ ಕೋರ್ಸ್‌- 3 ವರ್ಷ
3. ಸ್ನಾತಕೋತ್ತರ ಪ್ಯಾರಮೆಡಿಕಲ್‌ ಕೋರ್ಸ್‌-2 ವರ್ಷ
4. ಡಾಕ್ಟರೇಟ್‌ ಪ್ಯಾರಮೆಡಿಕಲ್‌ ಕೋರ್ಸ್‌- 3-4 ವರ್ಷ

ಇದರಲ್ಲಿ ಯಾವ ಕೋರ್ಸ್‌ ಮಾಡಿದರೂ ಉದ್ಯೋಗ ಖಚಿತ ಎಂಬ ಸ್ಥಿತಿ ನಮ್ಮ ದೇಶದಲ್ಲಿದೆ. ನರ್ಸಿಂಗ್‌, ಪಿಜಿಯೋಥೆರಪಿ, ಫಸ್ಟ್‌ ಏಯ್ಡ್‌, ಎಕ್ಸ್‌-ರೇ, ರೇಡಿಯೋಗ್ರಫಿ ಹೀಗೆ ಯಾವುದಾದರೂ ವಿಷಯವನ್ನು ಆಯ್ಕೆಮಾಡಿಕೊಂಡು ಈ ಕೋರ್ಸ್‌ ಮಾಡಬಹುದು.

ರಾಜ್ಯದಲ್ಲಿ ಲಭ್ಯವಿರುವ ಡಿಪ್ಲೊಮಾ ಕೋರ್ಸ್‌ಗಳು;

  1. ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (ಡಿಎಂಎಲ್ ಟಿ) (Diploma in Medical Laboratory Technology (DMLT))
  2. ಡಿಪ್ಲೊಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (ಡಿಎಂಐಟಿ.) (Diploma in Medical Imaging Technology (DMIT))
  3. ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‍ಪೆಕ್ಟರ್ (ಡಿಎಚ್ಐ) (Diploma in Health Inspector(DHI)).
  4. ಡಿಪ್ಲೊಮಾ ಇನ್ ಮೆಡಿಕಲ್ ರೆಕಾಡ್ರ್ಸ್ ಟೆಕ್ನಾಲಜಿ (ಡಿಎಂಆರ್ ಟಿ) (Diploma in Medical Records Technology(DMRT)).
  5. ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ಥೇಶಿಯಾ ಟೆಕ್ನಾಲಜಿ (ಡಿ.ಓ.ಟಿ&ಎ.ಟಿ) (Diploma in Operation Theatre and Anaesthesia Technology(DOT&AT))
  6. ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ (ಡಿಡಿಟಿ) (Diploma in Dialysis Technology (DDT).
  7. ಡಿಪ್ಲೊಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ (ಡಿ.ಓ.ಟಿ) (Diploma in Ophthalmic Technology (DOT).
  8. ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ (ಡಿಡಿಎಂ) (Diploma in Dental Mechanics (DDM).
  9. ಡಿಪ್ಲೊಮಾ ಇನ್ ಡೆಂಟಲ್ ಹೈಜೀನ್ (ಡಿಡಿಎಚ್) (Diploma in Dental Hygiene (DDH).

ಡಿಪ್ಲೋಮಾ ಕೋರ್ಸ್‍ಗಳಿಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಪಿಯುಸಿಯಲ್ಲಿ ವಿಜ್ಞಾನ (Physics, Chemistry & Biology/Zoology/Botany) ವಿಷಯಗಳಲ್ಲಿ ಅಭ್ಯಾಸ ಮಾಡಿರಬೇಕು. ಇವರಿಗೆ ಕೋರ್ಸ್‍ನ ಅವಧಿ 02 ವರ್ಷ + 03 ತಿಂಗಳು ಇಂಟರ್ನ್‌ಶಿಪ್‌ಗಳಾಗಿರುತ್ತವೆ.

ಎಸ್‌ಎಸ್‌ಎಲ್‌ಸಿ ಮಾಡಿದವರು ಡಿಪ್ಲೊಮಾ ಮಾಡಬಹುದು. ಆದರೆ ನಮ್ಮ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಪಿಯುಸಿ ಮಾಡಿದವರಿಗೆ ಪ್ರವೇಶಾತಿಯಲ್ಲಿ ಆಧ್ಯತೆ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿ ಮೂರು ವರ್ಷ ಮತ್ತು 3 ತಿಂಗಳ ಇಂಟರ್ನ್‌ಶಿಪ್ ಇರುತ್ತದೆ.
32 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಅರೆ ವೈದ್ಯಕೀಯ ಕಾಲೇಜುಗಳು / ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ಕೇಂದ್ರ ಕೌನ್ಸಿಲಿಂಗ್ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಬಹು ಬೇಡಿಕೆಯ ಬಿಎಸ್ಸಿ ನರ್ಸಿಂಗ್‌

ಬಿಎಸ್ಸಿ ನರ್ಸಿಂಗ್‌ (B.Sc.Nursing) ಮಾಡಬೇಕಾಗಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ (Physics, Chemistry & Biology) ಓದಿರಬೇಕು. ಇಂಗ್ಲಿಷ್‌ ಭಾಷೆಯಲ್ಲಿಯೂ ಉತ್ತೀರ್ಣರಾಗಿರಬೇಕು. ದ್ವಿತೀಯ ಪಿಯುಸಿಯಲ್ಲಿ ಈ ನಾಲ್ಕು ವಿಷಯಗಳಲ್ಲಿ ಒಟ್ಟಾರೆ ಶೇ. 45 ರಷ್ಟು ಅಂಕ ಪಡೆದಿರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼ (KCET 2023)ಯ ಮೂಲಕ ನರ್ಸಿಂಗ್‌ ಕಾಲೇಜುಗಳಿಗೆ ಪ್ರವೇಶ ನೀಡಲಾಗುತ್ತದೆ.

ಬಿಎಸ್ಸ್‌ ನರ್ಸಿಂಗ್‌ ಓದಿದವರಿಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶ ಅಂದರೆ ಎಂಎಸ್ಸಿ ನರ್ಸಿಂಗ್‌, ಮಾಸ್ಟರ್‌ ಆಫ್‌ ಪಿಜಿಯೋಥೆರಪಿಯಂತ ಪದವಿ ಪಡೆಯಲು ಅವಕಾಶಗಳಿರುತ್ತವೆ. ಏಮ್ಸ್‌ನಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿಯೂ ಬಿಎಸ್ಸಿ ನರ್ಸಿಂಗ್‌ ಮಾಡಬಹುದು. ಇದರ ಪ್ರವೇಶಕ್ಕಾಗಿಯೇ ಏಮ್ಸ್‌ ಪ್ರತ್ಯೇಕವಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ.

ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬಿಎಸ್ಸಿ ನರ್ಸಿಂಗ್‌ ಮತ್ತು ಬ್ಯಾಚುಲರ್‌ ಆಫ್‌ ಪಿಜಿಯೋಥೆರಪಿ ನಮ್ಮ ದೇಶದಲ್ಲಿ ಸದ್ಯ ಬಹು ಬೇಡಿಕೆ ಇರುವ ಪ್ಯಾರಾ ಮೆಡಿಕಲ್‌ ಕೋರ್ಸ್‌ಗಳಾಗಿವೆ.

ರಾಜ್ಯದಲ್ಲಿ ಬೆಂಗಳೂರಿನ ʻಬೆಂಗಳೂರು ಮೆಡಿಕಲ್‌ ಕಾಲೇಜು (ಬಿಎಂಸಿ)ʼ ಅತ್ಯುತ್ತಮ ಪ್ಯಾರಾಮೆಡಿಕಲ್‌ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಲ್ಲದೆ, ಬೆಂಗಳೂರಿನಲ್ಲಿಯೇ ಮಾನ್ಯತೆ ಪಡೆದ ಒಟ್ಟು 58 ಪ್ಯಾರಾಮೆಡಿಕಲ್‌ ಕಾಲೇಜುಗಳಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೇ ಈ ಕಾಲೇಜುಗಳಿವೆ.

ರಾಜ್ಯದ ಮಾನ್ಯತೆ ಪಡೆದ ಪ್ಯಾರಾಮೆಡಿಕಲ್‌ ಕಾಲೇಜುಗಳ ವಿವರಕ್ಕೆ ಇಲ್ಲಿ ಕ್ಲಿಕ್‌ (Click Here) ಮಾಡಿ.

ರಾಜ್ಯದಲ್ಲಿದೆ ನಿಯಂತ್ರಣ ಪ್ರಾಧಿಕಾರ

ಕರ್ನಾಟಕ ಸರ್ಕಾರವು ʻʻಕರ್ನಾಟಕ ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರʼʼ ರಚಿಸಿದ್ದು, ಈ ಪ್ರಾಧಿಕಾರವು ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಅರೆ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ. ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು, ಸಂಯೋಜನೆ ನೀಡುವುದು, ಪ್ರವೇಶಾತಿ ನಿಯಂತ್ರಿಸುವುದು ಈ ಪ್ರಾಧಿಕಾರ ಮುಖ್ಯಕೆಲಸವಾಗಿದೆ.

ಮಂಡಳಿಯು ನಿಗದಿಪಡಿಸಿದ ಶುಲ್ಕದ ಮಾಹಿತಿಗೆ ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ಪ್ರಾಧಿಕಾರವು “ಪರೀಕ್ಷಾ ಪ್ರಾಧಿಕಾರದ ಮಂಡಳಿ” ಯಾಗಿ ಕಾರ್ಯನಿರ್ವಹಿಸುತ್ತದೆ. ಪರೀಕ್ಷೆಗಳನ್ನು ನಡೆಸುವುದು ಮತ್ತು ಉತ್ತೀರ್ಣ ಅಭ್ಯರ್ಥಿಗಳಿಗೆ ಡಿಪ್ಲೊಮಾ ಪ್ರಮಾಣಪತ್ರಗಳನ್ನು ನೀಡುವ ಕೆಲಸ ಮಾಡುತ್ತದೆ. ಈ ಮಂಡಳಿಯ ಅನುಮತಿ ಇಲ್ಲದ ಪ್ಯಾರಾ ಮೆಡಿಕಲ್‌ ಕಾಲೇಜುಗಳಿಗೆ ಮಾನ್ಯತೆ ಇರುವುದಿಲ್ಲ.

ಹೆಚ್ಚಿನ ಮಾಹಿತಿ ಪಡೆಯಲು ಪ್ರಾಧಿಕಾರದ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಉದ್ಯೋಗಾವಕಾಶ ಎಲ್ಲೆಲ್ಲಿ?

ಪ್ಯಾರ ಮೆಡಿಕಲ್‌ನಲ್ಲಿ ಬೇರೆ ಬೇರೆ ಕೋರ್ಸ್ ಇರುವಂತೆಯೇ ಅದಕ್ಕೆ ತಕ್ಕ ಉದ್ಯೋಗಾವಕಾಶಗಳಿವೆ. ಕೆಲವೊಮ್ಮೆ ಪೂರಕ ಕೋರ್ಸ್‌ಗಳನ್ನು ಮಾಡಬೇಕಿರುತ್ತದೆ (ಸರ್ಟಿಫಿಕೇಷನ್‌ ಕೋರ್ಸ್‌). ಆಗ ಅವಕಾಶವೂ ಹೆಚ್ಚಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಆಗಾಗ ನೇಮಕ ಮಾಡಿಕೊಳ್ಳುತ್ತವೆ. ಅಲ್ಲದೆ, ರೈಲ್ವೆ, ಭಾರತೀಯ ಉಕ್ಕು ಪ್ರಾಧಿಕಾರ, ಕೋಲ್ ಇಂಡಿಯಾದಂತಹ ದೊಡ್ಡ ಸಾರ್ವಜನಿಕ ಉದ್ಯಮಗಳು ನೇಮಕ ಮಾಡಿಕೊಳ್ಳುತ್ತವೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾತ್ರವಲ್ಲ ; ವಿದೇಶಗಳಲ್ಲಿಯೂ ಪ್ಯಾರಾ ಮೆಡಿಕಲ್ ಕೆಲಸ ಸಿಗುತ್ತದೆ. ಉದಾಹರಣೆಗೆ ಕುವೈತ್ ಮೊದಲಾದ ಅರಬ್ ದೇಶಗಳಲ್ಲಿ ಇವರಿಗೆ ಬೇಡಿಕೆ ಇದೆ.

ಇದನ್ನೂ ಓದಿ: Education Guide : ವೈದ್ಯಕೀಯ ಶಿಕ್ಷಣ; ಹಲವು ಅವಕಾಶಗಳ ಆಗರ!

ಸ್ವಂತ ಬಂಡವಾಳ ಹಾಕಿ ಲ್ಯಾಬ್‌ಗಳನ್ನು ತೆರೆಯಬಹುದು. ಡಯಾಗ್ನಸ್ಟಿಕ್ ಕಂಪನಿಗಳಲ್ಲಿಯೂ ಕೆಲಸ ಮಾಡಬಹುದು. ದೊಡ್ಡ ದೊಡ್ಡ ಆಸ್ಪತ್ರೆಗಳು, ಬ್ಲಡ್ ಬ್ಯಾಂಕ್‌ಗಳಲ್ಲಿ ಉದ್ಯೋಗಾವಕಾಶವಿದೆ.

Exit mobile version