Site icon Vistara News

Education Guide : ಜಾಬ್‌ ಗ್ಯಾರಂಟಿಯ ಎವರ್‌ಗ್ರೀನ್‌ ಎಂಜಿನಿಯರಿಂಗ್‌ ಬ್ರಾಂಚ್‌ಗಳಿವು!

top 5 engineering branches

ಸಿಇಟಿಯಲ್ಲಿ ಒಳ್ಳೆಯ ರ‍್ಯಾಂಕ್‌ ಪಡೆದವರಿಗೆ ಯಾವ ಎಂಜಿನಿಯರಿಂಗ್‌ ಮಾಡುವುದು ಎಂಬುದೇ ದೊಡ್ಡ ತಲೆಬಿಸಿಯ (Education Guide) ಸಂಗತಿ. ಆಟೋಮೇಷನ್‌, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ, ಜಾಟ್‌ ಜಪಿಟಿ ಮತ್ತಿತರ ತಂತ್ರಜ್ಞಾನದ ಕ್ರಾಂತಿಗಳಿಂದಾಗಿ ಜಗತ್ತಿನ ಬಹಳಷ್ಟು ಕೆಲಸಗಳು ಈಗ ಹಗರುವಾಗುತ್ತಿದ್ದು, ಲಕ್ಷಾಂತರ ಉದ್ಯೋಗ ನಷ್ಟವಾಗುತ್ತಿದೆ. ಹೀಗಾಗಿ ಏನನ್ನು ಓದಿದರೆ ಉದ್ಯೋಗ ಖಾತ್ರಿ ಇರುತ್ತದೆ ಎಂಬುದನ್ನು ಊಹಿಸುವುದೇ ದೊಡ್ಡ ಸವಾಲಾಗಿದೆ.

ಆದರೆ ಜಗತ್ತಿನಲ್ಲಿ ಏನೇ ಬದಲಾವಣೆಗಳಾದರೂ ಕೆಲವು ಬೇಸಿಕ್‌ ಎಂಜಿನಿಯರಿಂಗ್‌ ವಿಷಯಗಳನ್ನು ತಿಳಿದವರು ಬೇಕೇ ಬೇಕಿರುತ್ತದೆ. ಈ ರೀತಿಯ ಬ್ರಾಂಚ್‌ಗಳನ್ನು ಆಯ್ಕೆ ಮಾಡಿಕೊಂಡಲ್ಲಿ, ಎಂತಹ ಪರಿಸ್ಥಿತಿಯನ್ನು ಎದುರಿಸಬಹುದು ಎನ್ನುತ್ತಾರೆ ಜಾಬ್‌ ಮಾರುಕಟ್ಟೆಯ ತಜ್ಞರು. ಕೇವಲ ಎಂಜಿನಿಯರಿಂಗ್‌ ಪದವಿ ಪಡೆಯುವುದಲ್ಲ, ಅದರ ಜತೆಯಲ್ಲಿ ಕಾಲಕ್ಕೆ ತಕ್ಕಂತೆ ಸ್ಕಿಲ್‌ ಅಪ್‌ ಗ್ರೇಡ್‌ ಮಾಡಿಕೊಳ್ಳಬೇಕು. ಮಾರುಕಟ್ಟೆಯ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಹೆಚ್ಚುವರಿ ಕೋರ್ಸ್‌ ಮಾಡಬೇಕು. ಆಗ ಉದ್ಯೋಗ ಪಡೆಯುವುದು ದೊಡ್ಡ ಸವಾಲೇನೂ ಅಲ್ಲ.

ಎಂಜಿನಿಯರಿಂಗ್‌ ಬ್ರಾಂಚ್‌ಗಳಲ್ಲಿ ಸದಾ ಬೇಡಿಕೆಯಲ್ಲಿರುವ ಮತ್ತು ಹೆಚ್ಚು ಅಪ್‌ಡೇಟ್‌ ಆಗುತ್ತಾ ಪ್ರಸ್ತುತೆಯಲ್ಲಿರುವ ಬ್ರಾಂಚ್‌ಗಳನ್ನು ಎವರ್‌ಗ್ರೀನ್‌ ಎಂಜಿನಿಯರಿಂಗ್‌ ಬ್ರಾಂಚ್‌ಗಳೆಂದು ಕರೆಯಲಾಗುತ್ತವೆ. ಟಾಪ್‌ ಐದು ಎಂಜಿನಿಯರಿಂಗ್‌ ಎವರ್‌ಗ್ರೀನ್‌ ಬ್ರಾಂಚ್‌ಗಳ (evergreen engineering branch) ಪರಿಚಯ ಇಲ್ಲಿದೆ;

1. ಕಂಪ್ಯೂಟರ್‌ ಎಂಜಿನಿಯರಿಂಗ್‌

ನಮ್ಮ ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಎಂಜಿನಿಯರಿಂಗ್‌ ಬ್ರಾಂಚ್‌ ಎಂದರೆ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್‌ (ಸಿಎಸ್‌). ನಮ್ಮ ಬೆಂಗಳೂರು ಐಟಿ ಹಬ್‌. ಅನೇಕ ಸಾಫ್ಟ್‌ವೇರ್‌ ಕಂಪನಿಗಳ ನೆಲೆಬೀಡು. ಹೀಗಾಗಿ ಕಂಪ್ಯೂಟರ್‌ ಸೈನ್ಸ್‌ನ ವಿವಿಧ ಬ್ರಾಂಚ್‌ಗಳಿಗೆ ಡಿಮ್ಯಾಂಡ್‌ ಇದ್ದೇ ಇದೆ. ಸ್ಟಾವೇರ್ ಎಂಜಿನಿಯರ್‌ ಆಗಿ ಕೈತುಂಬಾ ಸಂಬಳ ಪಡೆಯುತ್ತಿರುವವರು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದಾರೆ.

ಆಕರ್ಷಕ ವೇತನದ ಪ್ಯಾಕೇಜ್ ಮತ್ತು ಸಾಗರದಾಚೆಗೆ ಉದ್ಯೋಗಾವಕಾಶಗಳಿಂದಾಗಿ ಇದು ಯುವ ಸಮೂಹವನ್ನು ಸೆಳೆಯುತ್ತಿದೆ. ಹೊಸ ಕಂಪ್ಯೂಟರ್ ಎಂಜಿನಿಯರ್‌ಗಳಿಗೆ ಆರಂಭಿಕ ವೇತನ ವರ್ಷಕ್ಕೆ 4.5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿವರೆಗೂ ಇದೆ. ಇದರಲ್ಲಿಯೂ ಎಐ ಎಂಜಿನಿಯರಿಂಗ್‌ (Artificial intelligence -AI) ಬ್ರಾಂಚ್‌ಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗುತ್ತಿದೆ. ಈ ಎಂಜಿನಿಯರಿಂಗ್‌ ಬ್ರಾಂಚ್‌ 2030 ರ ವೇಳೆಗೆ ಜಗತ್ತಿನ ಆರ್ಥಿಕತೆಗೆ 15.7 ಟ್ರಿಲಿಯನ್‌ ಡಾಲರ್‌ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಇನ್ಫೋಸಿಸ್‌, ಟಿಸಿಎಸ್‌, ಮೈಕೋಸಾಫ್ಟ್‌, ಗೂಗಲ್‌, ಅಮೆಜಾನ್‌, ಐಬಿಎಂ, ಫೇಸ್‌ಬುಕ್‌, ವಿಪ್ರೋ ಮತ್ತಿತರ ದೊಡ್ಡ ದೊಡ್ಡ ಐಟಿ ಕಂಪನಿಗಳು ಪ್ರತಿ ವರ್ಷ ಸಾವಿರಾರು ಎಂಜಿನಿಯರಿಂಗ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಒಟ್ಟಾರೆಯಾಗಿ ಕಂಪ್ಯೂರ್‌ ಸೈನ್ಸ್‌ ಎಂಜಿನಿಯರಿಂಗ್‌ ಎವರ್‌ಗ್ರೀನ್‌ ಎಂಜಿನಿಯರಿಂಗ್‌ ಎಂದು ಹೆಸರು ಪಡೆದಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

2. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌

ಅತ್ಯಂತ ಹಳೆಯ ಎಂಜಿನಿಯರಿಂಗ್‌ ಕೋರ್ಸ್‌ ಎಂದರೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌. ಭಾರತದಲ್ಲಿ ಇದು ಎರಡನೇ ಅತ್ಯಂತ ಹಳೆಯ ಎಂಜಿನಿಯರಿಂಗ್‌ ಪದವಿ ಎಂದು ಗುರುತಿಸಲ್ಪಟ್ಟಿದೆ. ಇದನ್ನು ಎಂಜಿನಿಯರಿಂಗ್‌ನ ʻರಾಯಲ್‌ʼ ಬ್ರಾಂಚ್‌ ಎಂದೂ ಕರೆಯಲಾಗುತ್ತದೆ. ಕೆಲವು ವರ್ಷಗಳ ಕಾಲ ಬೇಡಿಕೆ ಕಡಿಮೆಯಾಗಿದ್ದ ಈ ಎಂಜಿನಿಯರಿಂಗ್‌ ಈಗ ಹೊಸ ಹೊಸ ವಿಷಯಗಳನ್ನು ಒಳಗೊಂಡು ಮತ್ತೆ ಮುನ್ನೆಲೆಗೆ ಬಂದಿದ್ದು, ಹೇರಳ ಉದ್ಯೋಗಾವಕಾಶವೂ ದೊರೆಯುತ್ತಿದೆ.

2030 ರ ವೇಳೆಗೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕ್ಷೇತ್ರವು ಶೇ.10 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಲಾಗುತ್ತಿದ್ದು, ಎಲ್ಲ ರೀತಿಯ ಕೈಗಾರಿಕೆಗಳಲ್ಲಿಯೂ ಈ ಎಂಜಿನಿಯರಿಂಗ್‌ ಮಾಡಿದವರಿಗೆ ಅವಕಾಶವಿದೆ. ಸರ್ಕಾರಿ ಉದ್ಯಮಗಳಲ್ಲಿ, ಬೃಹತ್‌ ಕೈಗಾರಿಕೆಗಳಲ್ಲಿ ಮಾತ್ರವಲ್ಲದೆ, ಈಗ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ನ್ಯಾನೋ ಟೆಕ್ನಾಲಜಿ ಕ್ಷೇತ್ರ ಕೂಡ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿದವರಿಗೆ ಉದ್ಯೋಗ ನೀಡುತ್ತಿದೆ. ಮಾರುಕಟ್ಟೆ ಮತ್ತು ಸೇವಾ ಕ್ಷೇತ್ರದಲ್ಲಿಯೂ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಪ್ರಾರಂಭಿಕವಾಗಿ 3.5 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳವರೆಗೆ ಪ್ರಾರಂಭಿಕ ವೇತನವನ್ನು ಪಡೆಯಬಹುದು. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಮತ್ತು ಇನ್ನಿತರ ಸ್ಕಿಲ್‌ ಕಲಿತವರಿಗೆ ಬೇಡಿಕೆ ಇದ್ದು, ರಾಯಲ್‌ ಬ್ರಾಂಚ್‌ನಲ್ಲಿ ಕಲಿತವರು ರಾಯಲ್‌ ಆಗಿಯೇ ಬದುಕಬಹುದಾಗಿದೆ.

3. ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್

ಈ ಕೋರ್ಸ್ ಮಾಡಿದವರು ಗ್ಯಾಜೆಟ್ ಗುರು ಆಗಬಹುದು! ಈ ಬ್ರಾಂಚ್‌ನಲ್ಲಿ ಡಿಜಿಟಲ್ ಎಲೆಕ್ಟ್ರಾನಿಕ್ಸ್‌, ಲಾಜಿಕ್‌ಡಿಸೈನ್, ಕಮ್ಯುನಿಕೇಷನ್ ಎಂಜಿನಿಯರಿಂಗ್ ಇತ್ಯಾದಿ ಕಲಿಸಲಾಗುತ್ತದೆ. ಬೇರೆ ಬೇರೆ ಉದ್ದೇಶಗಳಿಗೆ ಬಳಸಲ್ಪಡುವ ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನು ಸಂಶೋಧಿಸುವುದು, ವಿನ್ಯಾಸಮಾಡುವುದು, ಪರೀಕ್ಷಿಸುವುದು, ಅಭಿವೃದ್ಧಿಪಡಿಸುವುದು ಹೀಗೆ ಹಲವು ರೀತಿಯ ಕೆಲಸವನ್ನು ಮಾಡಬಹುದು. ಟೆಲಿಕಮ್ಯುನಿಕೇಷನ್ ಉದ್ಯಮ ಮತ್ತು ಮೊಬೈಲ್ ಡೆವಲಪ್ ಮೆಂಟ್ ಉದ್ಯಮಗಳು ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ವಿಸ್ತಾರವಾಗಿ ಬೆಳೆಯುತ್ತಿರುವುದರಿಂದ ಭರಪೂರ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಉತ್ತಮ ಕಾಲೇಜುಗಳಿಂದ ಎಂಜಿನಿಯರಿಂಗ್‌ ಪದವಿ ಪಡೆದವರು ಪ್ರಾರಂಭಿಕವಾಗಿ ವರ್ಷಕ್ಕೆ 4 ರಿಂದ 6 ಲಕ್ಷ ರೂಪಾಯಿ ವೇತನ ಪಡೆಯಬಹುದು. ಟೆಲಿಕಮ್ಯುನಿಕೇಷನ್‌ ಸಂಸ್ಥೆಗಳು, ಎಲೆಕ್ಟ್ರಾನಿಕ್ಸ್‌ ಸಾಧನಗಳ ಉತ್ಪಾದನೇ ಉದ್ಯಮಗಳು ಈ ಎಂಜಿನಿಯರಿಂಗ್‌ ಪದವೀಧರರನ್ನು ಕೈ ಬೀಸಿ ಕರೆಯುತ್ತಿವೆ. ನಮ್ಮ ದೇಶ ಎಲೆಕ್ಟ್ರಾನಿಕ್ಸ್‌ ಚಿಪ್‌ ವಿನ್ಯಾಸ, ಉತ್ಪಾದನೆಯಲ್ಲಿ ಮುಂಚುಣಿಯಲ್ಲಿದ್ದು, ಅನೇಕ ದೇಶೀಯಾ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಆಗಾಗ ನೇಮಕ ಮಾಡಿಕೊಳ್ಳುತ್ತಿರುತ್ತವೆ. ಹೀಗಾಗಿ ಬಹಳಷ್ಟು ಮಂದಿ ಈ ಎಂಜಿನಿಯರಿಂಗ್‌ ಮಾಡುತ್ತಿದ್ದು, ದೇಶದ ಬಹುತೇಕ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಈ ಬ್ರಾಂಚ್‌ ಇದೆ. ಹೀಗಾಗಿ ಇದನ್ನೊಂದು ಎವರ್‌ಗ್ರೀನ್‌ ಎಂಜಿನಿಯರಿಂಗ್‌ ಕೋರ್ಸ್‌ ಎಂದು ಗುರುತಿಸಲಾಗಿದೆ.

4. ಸಿವಿಲ್‌ ಎಂಜಿನಿಯರಿಂಗ್‌

ನಮ್ಮ ದೇಶದಲ್ಲಿ ಬಹುತೇಕರಿಗೆ ಪರಿಚಿತವಾಗಿರುವ ಮತ್ತು ಅತ್ಯಂತ ಜನಪ್ರಿಯ ಎಂಜಿನಿಯರಿಂಗ್‌ ಕೋರ್ಸ್‌ ಎಂದರೆ ಸಿವಿಲ್‌ ಎಂಜಿನಿಯರಿಂಗ್‌. ಮನೆ, ಮಾರು, ಸಾರ್ವಜನಿಕ ಕಟ್ಟಡ, ರಸ್ತೆ, ಮೋರಿ, ಸೇತುವೆ ಹೀಗೆ ಎಲ್ಲದರ ನಿರ್ಮಾಣದ ಹಿಂದಿರುವ ಶಕ್ತಿ ಸಿವಿಲ್‌ ಎಂಜಿನಿಯರ್‌. ಇಂದು ಮೂಲ ಸೌಕರ್ಯ ಕ್ಷೇತ್ರ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿರುವುದರಿಂದ ಸಿವಿಲ್‌ ಎಂಜಿನಿಯರ್‌ಗಳಿಗೂ ಬೇಡಿಕೆ ಹೆಚ್ಚಿದೆ. ಕೇವಲ ಯೋಜನೆ ರೂಪಿಸುವುದು, ಕಾರ್ಯಗತಗೊಳಿಸುವುದು ಮಾತ್ರವಲ್ಲದೆ, ನಿರ್ಮಾಣಕ್ಕೆ ಸಂಬಂಧಿಸಿದ ಇನ್ನಿತರ ಕ್ಷೇತ್ರಗಳಲ್ಲಿಯೂ ಸಿವಿಲ್‌ ಎಂಜಿನಿಯರ್‌ಗಳು ಇಂದು ತಮ್ಮ ಕೈಚಳಕ ತೋರಿಸುತ್ತಿದ್ದಾರೆ.

ಸಿವಿಲ್‌ ಎಂಜಿನಿಯರಿಂಗ್‌ ಪದವಿಯೊಂದಿಗೆ ಇನ್ನಿತರ ಸ್ಕಿಲ್‌ ಕಲಿತವರಿಗೆ ಇಂದು ಹೆಚ್ಚಿನ ಬೇಡಿಕೆ ಇದೆ. ಮುಖ್ಯವಾಗಿ ಸರ್ಕಾರದ ನಿರ್ಮಾಣ ಸಂಸ್ಥೆಗಳು, ಸ್ಥಳೀಯ ಆಡಳಿತ, ನಿರ್ಮಾಣ ಯೋಜನೆಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳು ಸಿವಿಲ್‌ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಮುಖ್ಯವಾಗಿ ಸರ್ಕಾರಿ ಮತ್ತು ಖಾಸಗಿ ವಸತಿ ಯೋಜನೆಗಳು ಈ ಎಂಜಿನಿಯರ್‌ಗಳಿಗೆ ಬೃಹತ್ತ್‌ ಉದ್ಯೋಗ ನೀಡುವ ಕ್ಷೇತ್ರಗಳಾಗಿವೆ. ಪ್ರಾರಂಭಿಕವಾಗಿ ವಾರ್ಷಿಕ 3 ರಿಂದ 8 ಲಕ್ಷ ರೂ.ಗಳವರೆಗೆ ವೇತನ ಪಡೆಯಬಹುದು.

ಸಿವಿಲ್‌ ಎಂಜಿನಿಯರಿಂಗ್‌ ಪದವಿ ಇಂದು ಕಂಪ್ಯೂಟರ್‌, ಮೆಕ್ಯಾನಿಕಲ್‌ ಮತ್ತು ರೋಬೋಟಿಕ್‌ ಎಂಜಿನಿಯರಿಂಗ್‌ ವಿಷಯಗಳನ್ನು ಒಳಗೊಂಡು ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಮಾರುಕಟ್ಟೆಯ ಅಗತ್ಯತೆಗೆ ತಕ್ಕಂತೆ ವಿಷಯಗಳನ್ನು ಕಲಿಸಲಾಗುತ್ತಿದೆ. ಹೀಗಾಗಿ ಈಗಲೂ ಈ ಎಂಜಿನಿಯರಿಂಗ್‌ ಕೋರ್ಸ್‌ ಬಹು ಬೇಡಿಕೆಯ ಎಂಜಿನಿಯರಿಂಗ್‌ ಆಗಿ ಕೋರ್ಸ್‌ ಆಗಿದೆ.

5. ಎಲೆಕ್ಕಿಕಲ್‌ ಅ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌

ಎಲೆಕ್ಟ್ರಿಕಲ್‌ ಒಂದು ಎವರ್‌ಗ್ರೀನ್‌ ಕ್ಷೇತ್ರವಾಗಿರುವುದರಿಂದ ಎಲೆಕ್ಟ್ರಿಕಲ್‌ ಎಂಜಿನಿಯರ್‌ಗಳಿಗೆ ಅವಕಾಶಗಳ ಬಾಗಿಲು ಸದಾ ತೆರೆದೇ ಇರುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿಯೇ ವ್ಯಾಪಕವಾದ ಅವಕಾಶಗಳಿವೆ. ಅಲ್ಲದೇ ಉಕ್ಕು ಕಾರ್ಖಾನೆ, ರೈಲ್ವೇ ಮತ್ತಿತರ ಕ್ಷೇತ್ರಗಳೂ ಕೈ ಬೀಸಿ ಕರೆಯುತ್ತಿವೆ. ವಿದ್ಯುತ್‌ ಉತ್ಪಾದನೆ, ವಿತರಣೆ, ಎಲೆಕ್ಟ್ರಾನಿಕ್‌ ಸರ್ಕ್ಯೂಟ್‌ ನಿರ್ಮಾಣ, ನಿರ್ವಹಣೆ ಹೀಗೆ ವಿದ್ಯುತ್‌ ಸಂಬಂಧಿಸಿದ ಹಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿರುತ್ತವೆ.

ಇದನ್ನೂ ಓದಿ: Education Guide : ಉದ್ಯೋಗ ಖಚಿತ ಪಡಿಸುವ ವಿಶಿಷ್ಟ ಎಂಜಿನಿಯರಿಂಗ್ ಪದವಿಗಳಿವು!

ಏರೋಸ್ಪೇಸ್‌, ಐಟಿ ಇಂಡಸ್ಟ್ರಿ, ಟೆಲಿಕಮ್ಯುನಿಕೇಷನ್‌ಗೆ ಬೇಕಾಗುವ ಎಲೆಕ್ಟ್ರಿಕಲ್‌ ಸಾಧನಗಳನ್ನು ಉತ್ಪಾದಿಸುವ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ಎಂಜಿನಿಯರಿಂಗ್‌ ಪದವೀಧರರನ್ನು ಕೈ ಬೀಸಿ ಕರೆಯುತ್ತಿವೆ. ಸಂಶೋಧನೆ ಮತ್ತು ಅಭವೃದ್ಧಿ (Research and Development -R&D) ಕ್ಷೇತ್ರದಲ್ಲಿಯೂ ಸಾಕಷ್ಟು ಉದ್ಯೋಗಾವಕಾಶಗಳಿರುತ್ತವೆ. ಪ್ರಾರಂಭಿಕವಾಗಿ ವಾರ್ಷಿಕ 3 ರಿಂದ 9 ಲಕ್ಷ ರೂ.ಗಳವರೆಗೆ ವೇತನ ನೀಡಲಾಗುತ್ತದೆ. ವಿದ್ಯುತ್‌ ನಮ್ಮೆಲ್ಲರ ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ ಇದಕ್ಕೆ ಸಂಬಂಧಿಸಿದ ಈ ಎಂಜಿನಿಯರಿಂಗ್‌ ಪದವಿ ಕೂಡ ಸದಾ ಚಾಲ್ತಿಯಲ್ಲಿದೆ.

Exit mobile version