ನಮ್ಮ ದೇಶದಲ್ಲಿ ವೈದ್ಯ ವೃತ್ತಿಯನ್ನು ಅತ್ಯಂತ ಪವಿತ್ರ ವೃತ್ತಿ ಎಂದು ಪರಿಗಣಿಸಲಾಗುತ್ತದೆ. ʻವೈದ್ಯೋ ನಾರಾಯಣ ಹರಿಃʼ ಎಂದು ಪೂಜ್ಯ ಭಾವದಿಂದ ವೈದ್ಯರನ್ನು ಗೌರವಿಸಲಾಗುತ್ತದೆ. ಮಾರಣಾಂತಿಕ ಕಾಯಿಲೆ ಗುಣ ಪಡಿಸುವ, ಅನಾರೋಗ್ಯ ಕಾಡಿದಾಗ ಕಾಪಾಡುವ ವೈದ್ಯರು ಪ್ರತಿಯೊಬ್ಬರ ಜೀವನದ ಭಾಗವಾಗಿರುತ್ತಾರೆ. ಹೀಗಾಗಿಯೇ ನಮ್ಮ ದೇಶದಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು (education news) ʻನಾನು ಮುಂದೆ ಡಾಕ್ಟರ್ ಆಗಬೇಕುʼ ಎಂದು ಕನಸು ಕಾಣುತ್ತಲೇ ಬೆಳೆಯುತ್ತಾರೆ.
ವೈದ್ಯರಾಗಬೇಕೆಂದರೆ ವೈದ್ಯಕೀಯ ಶಿಕ್ಷಣ ಪಡೆದಿರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಸೇವಾ ಮನೋಭಾವದಿಂದ ದುಡಿಯುವ ಮನಸ್ಸಿರಬೇಕು. ಆತ್ಮ ವಿಶ್ವಾಸ, ತಾಳ್ಮೆ ಮತ್ತು ಸಹನೆ, ಜನರೊಡನೆ ಬೆರೆಯುವ ಮನೋಭಾವ, ಬುದ್ಧಿಶಕ್ತಿ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಜ್ಞಾಪನ ಶಕ್ತಿ, ಖಚಿತವಾದ ನಿರ್ಧಾರ ತೆಗೆದುಕೊಳ್ಳುವ ಗುಣ ಮತ್ತು ಎಲ್ಲಕ್ಕೂ ಮಿಗಿಲಾಗಿ ಮಾನವೀಯತೆ ಹೊಂದಿರಬೇಕು. ತಂತ್ರಜ್ಞಾನ ಇಂದು ಎಲ್ಲ ಕ್ಷೇತ್ರದಲ್ಲಿಯೂ ಬದಲಾವಣೆಗೆ ಕಾರಣವಾಗುತ್ತಿರುವಂತೆಯೇ ವೈದ್ಯಕೀಯ ಕ್ಷೇತ್ರವೂ ದಿನ ದಿನ ಹೊಸ ಬದಲಾವಣೆಗಳನ್ನು ಕಾಣುತ್ತಿದೆ. ಹೊಸ ಹೊಸ ಆವಿಷ್ಕಾರಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಇದನ್ನು ಅರ್ಥಮಾಡಿಕೊಳ್ಳುವ ಮತ್ತು ಅಪ್‌ಡೇಟ್ ಆಗುವ ಮುಕ್ತ ಮನೋಭಾವ ಹೊಂದಿರಬೇಕು.
ಭಾರತೀಯ ವೈದ್ಯರಿಗೆ ಜಗದಗಲ ಬೇಡಿಕೆ ಇದೆ. ನಮ್ಮ ದೇಶದಲ್ಲಿಯೇ ವೈದ್ಯರ ಕೊರತೆ ಬಹಳವಾಗಿದೆ. ನಮ್ಮಲ್ಲೀಗ ಒಂದು ಲಕ್ಷ ಜನರಿಗೆ ಇರುವುದು ಕೇವಲ 64 ಮಂದಿ ವೈದ್ಯರು. ವಿಶ್ವ ಆರೋಗ್ಯ ಸಂಸ್ಥೆಯು ಸಾವಿರ ಮಂದಿಗೆ ಒಬ್ಬರು ವೈದ್ಯರಿರಬೇಕೆಂದು ಹೇಳುತ್ತಿದೆ. ಹೀಗಾಗಿ ವೈದ್ಯರ ಬೇಡಿಕೆ ನಿರೀಕ್ಷೆಗೂ ಮೀರಿದೆ. ವೈದ್ಯರಾದಲ್ಲಿ ಉದ್ಯೋಗ ಆಯ್ಕೆಯ ಅವಕಾಶಗಳೂ ಬಹಳವಾಗಿರುತ್ತದೆ.
ವೈದ್ಯಕೀಯ ಶಿಕ್ಷಣದಲ್ಲಿ ಹಲವು ವಿಭಾಗ
ವೈದ್ಯಕೀಯ ಶಿಕ್ಷಣ ಪಡೆಯಲು ಅಥವಾ ವೈದ್ಯರಾಗಿ ವೃತ್ತಿ ಅಯ್ಕೆ ಮಾಡಲು ವಿವಿಧ ಆವಕಾಶಗಳಿವೆ. ಮುಖ್ಯವಾಗಿ ಪ್ರತಿಚಿಕಿತ್ಸೆ (ಅಲೋಪತಿ) ವೈದ್ಯಕೀಯ ವಿಭಾಗ, ಸಾಂಪ್ರದಾಯಿಕ ವೈದ್ಯಕೀಯ ವಿಭಾಗ ಮತ್ತು ಪಶು ಚಿಕಿತ್ಸಾ ವೈದ್ಯಕೀಯ ವಿಭಾಗ.
ಅಲೋಪತಿ ವೈದ್ಯಕೀಯ ವಿಭಾಗದಲ್ಲಿ ಪದವಿ ಹಂತದಲ್ಲಿ ಎಂ.ಬಿ.ಬಿ.ಎಸ್ ಪದವಿ ನೀಡುವ ಚಿಕಿತ್ಸಕ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗ ಮತ್ತು ಬಿ.ಡಿ.ಎಸ್ ಪದವಿ ನೀಡುವ ಹಲ್ಲಿನ ಶಸ್ತ್ರ ಚಿಕೆತ್ಸೆ ವಿಭಾಗ ಎಂಬ ಎರಡು ಕವಲುಗಳಿವೆ.
ಸಾಂಪ್ರದಾಯಿಕ ವೈದ್ಯಕೀಯ (ಆಯುಷ್) ವಿಭಾಗದಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೊಮಿಯೊಪಥಿ ಎಂಬ ಐದು ವಿಭಾಗಗಳಿವೆ. ಆಯುರ್ವೇದಕ್ಕೆ ಸಂಬಂಧಿಸಿದಂತೆ ಬಿ.ಎ.ಎಮ್ಎ.ಸ್ ಪದವಿ, ಯೋಗ ಮತ್ತು ಪ್ರಕೃತಿ ಚಿಕೆತ್ಸೆಗೆ ಬಿ.ವೈ.ಎನ್.ಎಸ್. ಪದವಿ, ಯುನಾನಿ ಪದ್ಧತಿಗೆ ಬಿ.ಯು.ಎಮ್.ಎಸ್ ಪದವಿ, ಸಿದ್ಧ ಚಿಕಿತ್ಸೆಗೆ ಬಿ.ಯು.ಎಮ್.ಎಸ್ ಪದವಿ ಮತ್ತು ಹೊಮಿಯೊಪಥಿಗೆ ಬಿ.ಹೆಚ್.ಎಮ್.ಎಸ್ ಪದವಿ ಇರುತ್ತದೆ. ಪಶುಚಿಕಿತ್ಸೆ ವಿಭಾಗ ಪ್ರತಿಚಿಕಿತ್ಸೆ ( ಅಲೋಪತಿ) ಮಾದರಿಯದ್ದು ಆಗಿರುತ್ತದೆ. ಈ ವಿಬಾಗಕ್ಕೆ ಸಂಬಂಧಿಸಿದಂತೆ ಬಿ.ವಿ.ಎಸ್.ಸಿ. ಪದವಿ ಶಿಕ್ಷಣ ಲಭ್ಯವಿದೆ.
ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಲು ಇಚ್ಚಿಸುವವರು ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿ ಕಡ್ಡಾಯವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವ ಶಾಸ್ತ್ರ ವಿಷಯಗಳನ್ನು ಆಧ್ಯಯನ ಮಾಡಬೇಕು. ಅಂತಿಮ ಪರೀಕ್ಷೆಯಲ್ಲಿ ಪಿಸಿಬಿ ವಿಷಯದಲ್ಲಿ ಕನಿಷ್ಟ ಶೇ.50 ಅಂಕ ಪಡೆದಿರಬೇಕು. ವೈದ್ಯಕೀಯ ಶಿಕ್ಷಣ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ನಿರ್ಧಾರಿತ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ (Click Here) ಮಾಡಿ.
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಪ್ರವೇಶ
ಯಾವುದೇ ಮೇಡಿಕಲ್ ಮತ್ತು ಡೆಂಟಲ್ ಕಾಲೇಜುಗಳಲ್ಲಿ ಇರುವ ಎಂ.ಬಿ.ಬಿ.ಯಸ್. ಹಾಗೂ ಬಿಡಿ.ಯಸ್ ಪದವಿ ಕೋರ್ಸಿಗೆ ಸೇರಲು ನೀಟ್ (ಎನ್‌ಇಇಟಿ) ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವುದು ಅತ್ಯವಶಕ. ಈ ಹಿಂದೆ ಆಖಿಲ ಭಾರತ ವೈದ್ಯಕೀಯ ಸಂಸ್ಥೆ (ಎಇಇಎಮ್‌ಎಸ್)ಯ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವರೇ ನಡೆಸುವ ಎಮ್ಸ್ –ಎಂ.ಬಿ.ಬಿಯಸ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಈಗ ಅದನ್ನು ರದ್ದು ಪಡಿಸಿ, ನೀಟ್ ಪರೀಕ್ಷೆಯ ಮೂಲಕವೇ ಈ ಕಾಲೇಜುಗಳಿಗೂ ಪ್ರವೇಶ ನೀಡಲಾಗುತ್ತಿದೆ.
ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಬಿ.ಬಿ.ಯಸ್. ಹಾಗೂ ಬಿಡಿ.ಯಸ್ ಪದವಿ ಕೋರ್ಸಿಗೆ ಸೇರಲು ಕೇವಲ ನೀಟ್ ಪ್ರವೇಶ ಪರೀಕ್ಷೆಯಲ್ಲಿ ದೊರಕಿದ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಆರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ಸಾಂಪ್ರದಾಯಿಕ ವೈದ್ಯಕೀಯ (ಆಯುಷ್) ವಿಭಾಗದ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿಧ್ಧ, ಮತ್ತು ಹೊಮಿಯೊಪಥಿ ಹಾಗು ಪಶುಚಿಕಿತ್ಸೆ ವಿಭಾಗದಲ್ಲಿ ವೈದ್ಯರಾಗಬಯಸುವವರು ತಮ್ಮ ಆಯ್ಕೆ ಆನುಸಾರ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಇವರು ನಡೆಸುವ ಸಿ.ಇ.ಟಿ. ಆಥವಾ ಖಾಸಗಿ ಆಡಳಿತ ಮಂಡಳಿಯವರು ನಡೆಸುವ ಕಾಮೆಡ್-ಕೆ ಪ್ರವೇಶ ಪರೀಕ್ಷೆ ಬರೆಯಬೇಕಿರುತ್ತದೆ.
ಇಲ್ಲಿ ಅಧ್ಯಯನಕ್ಕೆ ಅಂತ್ಯವೆಂಬುದೇ ಇಲ್ಲ!
ವೈದ್ಯಕೀಯ ಶಿಕ್ಷಣದ ಎಲ್ಲ ವಿಭಾಗಗಳಲ್ಲಿಯೂ ಪದವಿ ಪಡೆದ ನಂತ ಎಂಡಿ / ಎಂಎಸ್/ ಡಿಎನ್‌ಬಿ ಮತ್ತಿತರ ಸ್ನಾತಕೊತ್ತರ ಶಿಕ್ಷಣ ಪಡೆಯಲು ಆವಕಾಶವಿದೆ. ಇದಕ್ಕಾಗಿಯೇ ನೀಟ್-ಪಿಜಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ. ಸ್ನಾತಕೊತ್ತರ ಶಿಕ್ಷಣ ಪೂರೈಸಿದವರು ತಮ್ಮ-ತಮ್ಮ ಆಯ್ಕೆ ವಿಷಯದಲ್ಲಿ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಬಹುದು.
ಅಲೋಪತಿ ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣದ ನಂತರ ಉನ್ನತ ವಿಶೇಷ ತಜ್ಞರಾಗಿ ಪ್ರವೀಣತೆ ಪಡೆಯಲು ಡಿ.ಎಮ್/ ಎಮ್.ಸಿ.ಹೆಚ್. ನಂತಹ ಹೈಯರ್ ಸ್ಪೆಷ್ಯಾಲಿಟಿ ಕೋರ್ಸುಗಳನ್ನೂ ಮಾಡಬಹುದಾಗಿದೆ. ಮುಂದೆ ವಿವಿಧ ಅಂತರಾಷ್ಟ್ರೀಯ ಹೆಸರಾಂತ ಸಂಸ್ಥೆಗಳಿಂದ ಗೌರವಾನ್ವಿತ ಪದವಿಗಳನ್ನು ಪಡೆಯಬಹುದು. ಒಟ್ಟಾರೆಯಾಗಿ ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ತರಬೇತಿ ಮತ್ತು ವ್ಯಾಸಂಗಕ್ಕೆ ಅಂತ್ಯವೆಂಬುದೇ ಇಲ್ಲ!
ಬಹು ಬೇಡಿಕೆಯ ಕೋರ್ಸ್‌ಗಳು
ವೈದ್ಯಕೀಯ ಶಿಕ್ಷಣದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕೋರ್ಸ್‌ಗಳೆಂದರೆ ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚಲರ್ ಸರ್ಜರಿ (ಎಂಬಿಬಿಎಸ್), ಮಾಸ್ಟರ್ ಆಫ್ ಸರ್ಜರಿ (ಎಂಎಸ್), ಡಾಕ್ಟರ್ ಆಫ್ ಮೆಡಿಸಿನ್ (ಎಂಡಿ), ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ ಆ್ಯಂಡ್ ಸರ್ಜರಿ (ಬಿಎಎಂಎಸ್), ಬ್ಯಾಚುಲರ್ ಆಫ್ ಹೊಮೆಯೋಪಥಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ (ಬಿಎಚ್‌ಎಂಎಸ್), ಬ್ಯಾಚುಲರ್ ಆಫ್ ಪಿಜಿಯೋಥೆರಫಿ (ಬಿಪಿಟಿ), ಬ್ಯಾಚುಲರ್ ಆಫ್ ವೆಟನರಿ ಸೈನ್ಸ್ (ಬಿ.ವಿಎಸ್‌ಸಿ), ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಆ್ಯಂಡ್ ಸರ್ಜರಿ (ಬಿಯುಎಂಎಸ್).
ಬೆಸ್ಟ್ ವೈದ್ಯಕೀಯ ಕಾಲೇಜು ಯಾವುದು?
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‍್ಯಾಂಕಿಂಗ್ (NIRF Ranking 2023) ಪಟ್ಟಿಯಲ್ಲಿ ದಿಲ್ಲಿಯ ಏಮ್ಸ್ (All India Institute of Medical Sciences) ನಮ್ಮ ದೇಶದಲ್ಲಿಯೇ ಅತ್ಯುತ್ತಮ ವೈದ್ಯಕೀಯ ಕಾಲೇಜು (medical college) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರು ಈ ಕಾಲೇಜನ್ನು ಸೇರಬಹುದು.
ಚಂಡೀಗಢದ ಪೋಸ್ಟ್ ಗ್ರಾಜ್ಯುವೆಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜಿಕೇಷನ್ ಆ್ಯಂಡ್ ರೀಸರ್ಚ್ ಎರಡನೇ ಸ್ಥಾನದಲ್ಲಿದೆ. ತಮಿಳು ನಾಡಿನ ವೆಲ್ಲೂರಿನಲ್ಲಿ ಕ್ರಿಶ್ಚಿನ್ ಮೆಡಿಕಲ್ ಕಾಲೇಜ್ ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮಾನ್ಸ್) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಪುದುಚೆರಿಯ ಜವಹಾರ್‌ಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್‌ಮೆಡಿಕಲ್ ಎಜುಕೇಷನ್ ಆ್ಯಂಡ್ ರೀಸರ್ಚ್ ಐದನೇ ಸ್ಥಾನಲದಲ್ಲಿದೆ.
ಸದ್ಯ ನಮ್ಮ ದೇಶದಲ್ಲಿ 702 ಮೆಡಿಕಲ್ ಕಾಲೇಜುಗಳಿವೆ. ಇಲ್ಲಿ 1,07,658 ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶಗಳಿವೆ. ನಮ್ಮ ರಾಜ್ಯದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, ವೈದ್ಯ ಶಿಕ್ಷಣದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 72 ವೈದ್ಯಕೀಯ ಕಾಲೇಜುಗಳಿದ್ದು, 10,995 ಸೀಟುಗಳಿವೆ.
ವೈದ್ಯಕೀಯ ಶಿಕ್ಷಣದಂತೆ ದಂತ ವೈದ್ಯಕೀಯ ಶಿಕ್ಷಣದಲ್ಲಿಯೂ ನಮ್ಮ ರಾಜ್ಯ ಮುಂಚುಣಿಯಲ್ಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‍್ಯಾಂಕಿಂಗ್ (NIRF Ranking 2023) ಪಟ್ಟಿಯಲ್ಲಿ ದೇಶದ ಟಾಪ್ 40 ದಂತ ವೈದ್ಯಕೀಯ ಕಾಲೇಜುಗಳ ಪೈಕಿ ಹತ್ತು ಕಾಲೇಜುಗಳು ರಾಜ್ಯದಲ್ಲಿಯೇ ಇವೆ.
ಇದನ್ನೂ ಓದಿ: NIRF Ranking 2023 : ದೇಶದ ಟಾಪ್ 40 ಡೆಂಟಲ್ ಕಾಲೇಜುಗಳ ಪೈಕಿ 10 ಕರ್ನಾಟಕದಲ್ಲಿವೆ!
ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಮೂಲ ಸೌಕರ್ಯ, ಬೋಧಕ ವರ್ಗ ಮತ್ತು ಪ್ರಯೋಗಾಲಯ ಹೊಂದಿರುವ ವೈದ್ಯಕೀಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.