ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಸಮಾನವಾಗಿ ಪಡೆಯುವ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಡಿಜಿಟಲ್ ವೇದಿಕೆಯಲ್ಲಿ ರೂಪಿಸಿದ ಯೋಜನೆ ʻಮ್ಯಾಸಿವ್ ಓಪನ್ ಆನ್ ಲೈನ್ ಕೋರ್ಸ್ (ಎಂಒಒಸಿ) ಅಥವಾ ʻಸ್ವಯಂ’. ಬೇರೆ ಬೇರೆ ಕಾರಣಗಳಿಂದ ಅತ್ಯುತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವ, ಮುಖ್ಯವಾಹಿನಿಯ ಜ್ಞಾನದಿಂದ ದೂರ ಉಳಿದಿರವವರಿಗೆ ಡಿಜಿಟಲ್ ಕ್ರಾಂತಿಯ ಮೂಲಕ ಅತ್ಯುತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಇದರ ಉದ್ದೇಶ.
ಇಲ್ಲಿ ಡಿಜಿಟಲ್ ರೂಪದಲ್ಲಿ ಪಾಠ-ಪ್ರವಚನ ಒದಗಿಸಲಾಗುತ್ತದೆ. ವಿಡಿಯೋಗಳ ರೂಪದಲ್ಲಿ ಆನ್ ಲೈನ್ ಮೂಲಕ ಉಚಿತವಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ನೇರವಾಗಿ ಆನ್‌ಲೈನ್
ಮುಖಾಂತರವೇ ತಮ್ಮ ಗೊಂದಲ, ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಸಾಂಪ್ರದಾಯಿಕ ಶಾಲಾ-ಕಾಲೇಜುಗಳಲ್ಲಿರುವಂತೆ ಎಲ್ಲ ರೀತಿಯ ಕಲಿಕೆಯ ಅವಕಾಶಗಳೂ ಇಲ್ಲಿರುತ್ತವೆ. ಆದರೆ ಎಲ್ಲ ಸೌಕರ್ಯಗಳನ್ನೂ ಡಿಜಿಟಲ್ ವೇದಿಕೆಯಲ್ಲಿ ಒದಗಿಸಲಾಗಿರುತ್ತದೆ.
ಸ್ವಯಂ ಯೋಜನೆಯ ವೆಬ್ ಸೈಟ್ ವಿಳಾಸ ಇಂತಿದೆ: https://swayam.gov.in
1. ಆನ್‌ಲೈನ್ ಕೋರ್ಸ್‌ನಲ್ಲಿ ವಿಡಿಯೋ ಉಪನ್ಯಾಸ, 2. ಪಠ್ಯ ಸಾಮಗ್ರಿಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯವಿದ್ದರೆ ಪ್ರಿಂಟ್ ತೆಗೆದುಕೊಳ್ಳುವ ಅವಕಾಶ, 3.ಪರೀಕ್ಷೆಗಳ ಮೂಲಕ ಸ್ವಯಂ ಮೌಲ್ಯಮಾಪನದ ಅವಕಾಶ ಮತ್ತು 4. ಪ್ರಶ್ನೋತ್ತರ ಹಾಗೂ ಅನುಮಾನಗಳಿಗೆ ಸೂಕ್ತ ಪರಿಹಾರ ಪಡೆದುಕೊಳ್ಳಲು ಆನ್‌ಲೈನ್ ಚರ್ಚಾ ವೇದಿಕೆ ಹೀಗೆ ನಾಲ್ಕು ವಿಭಾಗಗಳಲ್ಲಿ ಇಲ್ಲಿ ತರಗತಿ ನಡೆಯುತ್ತದೆ. ಪ್ರಶ್ನೋತ್ತರವನ್ನು ವಿಡಿಯೋ, ಆಡಿಯೋ ಇನ್ನಿತರ ಮಲ್ಟಿ ಮೀಡಿಯಾ ತಂತ್ರಜ್ಞಾನವನ್ನು ಬಳಸಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ʻಸ್ವಯಂʼ ಯೋಜನೆಯ ಜತೆಯಲ್ಲಿ ಒಟ್ಟು 32 ಡಿಟಿಎಚ್ ಚಾನಲ್‌ಗಳನ್ನು “ಸ್ವಯಂ ಪ್ರಭಾʼʼ ಹೆಸರಿನಲ್ಲಿ ಲಾಂಚ್ ಮಾಡಲಾಗಿದೆ.
ಈ ತರಗತಿಗಳನ್ನು ನಡೆಸಲು ಅಖಿಲ ಭಾರತೀಯ ತಂತ್ರಜ್ಞಾನ ಶಿಕ್ಷಣ ಮಂಡಳಿ (AICTE), ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC), ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿಯ ಮಂಡಳಿ (NCERT), ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ (IGNOU), ಬೆಂಗಳೂರಿನ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIMB) ಸೇರಿದಂತೆ ದೇಶದ ಒಂಬತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ನೆರವು ನೀಡುತ್ತಿವೆ. ಸ್ಥಳೀಯ ಭಾಷೆಗಳಲ್ಲಿಯೇ ಪಠ್ಯ ಸಾಮಗ್ರಿಗಳನ್ನು ಒದಗಿಸುವ ವ್ಯವಸ್ಥೆ ಕೂಡ ಇದೆ.
ಸ್ಥಳೀಯ ಭಾಷೆಯಲ್ಲಿ ಪಠ್ಯವನ್ನು ಪಡೆಯುವುದು ಹೇಗೆಂದು ನೋಡಲು ಇಲ್ಲಿ(Click Here) ಕ್ಲಿಕ್ ಮಾಡಿ.
ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವಿಜ್ಞಾನ, ಕಲೆ ಮತ್ತು ಮನರಂಜನೆ, ಗಣಿತ, ಭಾಷೆ, ಸಾಮಾನ್ಯ ಅಧ್ಯಯನ, ಮಾನವಿಕ, ಗ್ರಂಥಾಲಯ ವಿಜ್ಞಾನ, ಇಂಧನ, ಸುಸ್ಥಿರ ಅಭಿವೃದ್ಧಿ, ಸಮಾಜ ವಿಜ್ಞಾನ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಒದಗಿಸಲಾಗಿದೆ. ಸುಮಾರು ಎರಡು ಸಾವಿರ ಕೋರ್ಸ್‌ಗಳನ್ನು ಈ ವೇದಿಕೆಯ ಮೂಲಕ ನೀಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಉದ್ದೇಶಿಸಿದ್ದು, ಐದು ವಿವಿಧ ವಿಭಾಗಗಳಲ್ಲಿ ಒಟ್ಟು 755 ಕೋರ್ಸ್‌ಗಳನ್ನು ಸದ್ಯ ನೀಡಲಾಗುತ್ತಿದೆ. ಹೊಸದಾಗಿ ಭಾರತೀಯ ಜ್ಞಾನ ವ್ಯವಸ್ಥೆಯ (Indian Knowledge System (IKS)) ಕುರಿತ ಕೋರ್ಸ್‌ಗಳೂ ಲಭ್ಯವಿದ್ದು, ಈ ಪ್ರವೇಶಾತಿ ಆರಂಭವಾಗಿದೆ.
ಕೋರ್ಸ್ ಮಾಡುವುದು ಹೇಗೆ?
ಯಾವುದೇ ವಿದ್ಯಾರ್ಥಿಯು ಈ ಕೋರ್ಸ್‌ಗಳಿಗೆ ಪ್ರಮಾಣ ಪತ್ರ ಬಯಸಿದರೆ, ಮೊದಲು ‘ಸ್ವಯಂ’ ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ, ಅತ್ಯಲ್ಪ ಶುಲ್ಕ ಪಡೆದು ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ. ಈ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅವರ ಪಡೆದ ಅಂಕಗಳು/ ಗ್ರೇಡ್‌ಗಳನ್ನು ನೇರವಾಗಿ ಅವರ ಶೈಕ್ಷಣಿಕ ದಾಖಲೆಗೆ ವರ್ಗಾವಣೆ ಮಾಡಲಾಗುತ್ತದೆ.
ಈಗ ನೀವು ಯಾವ ಕೋರ್ಸ್ ಸೇರಬಹುದು ತಿಳಿಯಲು ಇಲ್ಲಿ ಕ್ಲಿಕ್ (Click Here) ಮಾಡಿ.
ಸ್ವಯಂ ಬಗ್ಗೆ ನಿಮಗೆ ಇದು ಗೊತ್ತಿರಲಿ
- ದೇಶದ ಅತ್ಯನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ ಮತ್ತು ಐಐಎಸ್ (ಭಾರತೀಯ ವಿಜ್ಞಾನ ಸಂಸ್ಥೆ) ಮತ್ತಿತರ ಸಂಸ್ಥೆಗಳು ಇಲ್ಲಿನ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿವೆ.
- 9ನೇ ತರಗತಿಯಿಂದ 12ನೇ ತರಗತಿಯವರೆಗೆ ಶಾಲೆಯಿಂದ ಹೊರಬಿದ್ದ ವಿದ್ಯಾರ್ಥಿಗಳೂ ಈ ಕೋರ್ಸ್ ಮಾಡಿ, ಉನ್ನತ ಶಿಕ್ಷಣ ಪಡೆಯಬಹುದು.
- ಎಂಜಿನಿಯರಿಂಗ್ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಗಳಿಗೆ, ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೂ ಇಲ್ಲಿ ಕೋರ್ಸ್‌ಗಳಿವೆ.
- ಸದ್ಯ ಬಳಕೆಯಲ್ಲಿರುವ ತಮ್ಮ ಸಾಮಾಜಿಕ ಜಾಲತಾಣ ಅಕೌಂಟ್‌ನಿಂದಲೇ ಸೈನ್ಅಪ್ ಮಾಡಲು ಅವಕಾಶ. ಹತ್ತು ಲಕ್ಷ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಈ ಕೋರ್ಸ್‌ಗಳನ್ನು ಮಾಡಲು ಸಾಧ್ಯವಿದೆ.
- ಆನ್ಲೈನ್ ಸ್ವಯಂ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದಲ್ಲಿ ಕ್ರೆಡಿಟ್ ಸಿಗುತ್ತದೆ. ಆನ್ಲೈನ್ ಕೋರ್ಸ್ ಕ್ರೆಡಿಟ್ (ಅಂಕ) ಅನ್ನು ವಿದ್ಯಾರ್ಥಿಗಳ ಮೂಲ ಶಿಕ್ಷಣ ಸಂಸ್ಥೆಗೆ ವರ್ಗಾಯಿಸಲಾಗುತ್ತದೆ.
ಸ್ವಯಂ ಯೋಜನೆಯಿಂದ ಲಾಭವೇನು?
- ಮನೆಯಲ್ಲಿಯೇ ಕುಳಿತು ಟಿವಿ ಅಥವಾ ಮೊಬೈಲ್ ಮೂಲಕ ತರಗತಿಗಳಿಗೆ ಹಾಜರಾಗಬಹುದು.
- ಉದ್ಯೋಗ ಮಾಡುತ್ತಲೇ ವಿವಿಧ ಕೋರ್ಸ್‌ಗಳನ್ನು ಮಾಡಬಹುದು.
- ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ಮಾಡಿಕೊಳ್ಳಬಹುದು.
- ಹೆಚ್ಚು ಖರ್ಚಿಲ್ಲದೆ ಹೊಸ ಹೊಸ ಕೋರ್ಸ್ ಕಲಿಯಬಹುದು.
- ಉನ್ನತ ಶಿಕ್ಷಣವನ್ನು ಬೆರಳ ತುದಿಯಲ್ಲಿಯೇ ಪಡೆದುಕೊಳ್ಳಬಹುದು.
ಇದನ್ನೂ ಓದಿ : Education Guide : ನಂ.1 ಜಾಬ್ ಗ್ಯಾರಂಟಿ ಕೋರ್ಸ್; ಆರ್ಟಿಫಿಷಿಯಲ್ ಇಂಟಲಿಜೆನ್ಸಿ