ಬೆಂಗಳೂರು: 8ನೇ ತರಗತಿಯಲ್ಲಿ ಓದುವ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತ ಸೈಕಲ್ (Free bicycle) ಕೊಡಲು ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಜತೆ ಚರ್ಚೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಅವರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಹೇಳಿರುವ ಬೆನ್ನಲ್ಲೇ, ಮಕ್ಕಳು ಹಾಗೂ ಸರ್ಕಾರಿ ಶಾಲೆಗಳ ಹಿತದೃಷ್ಟಿಯಿಂದ ಇನ್ನಷ್ಟು ಆಗಲೇಬೇಕಾದ ಕಾರ್ಯಗಳ ಬಗ್ಗೆ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಶಿಕ್ಷಣ ಸಚಿವರ ಗಮನಕ್ಕೆ ತಂದಿದೆ. ಏಕೋಪಾಧ್ಯಾಯ / ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಕಾಯಂ ಶಿಕ್ಷಕರ ನೇಮಕ ಮಾಡಬೇಕು. ಕಾಯಂ ಶಿಕ್ಷಕರನ್ನು ಅತ್ಯಗತ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ನಿಯೋಜನೆ ಮಾಡುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರ ಬರೆದು ಒತ್ತಾಯ ಮಾಡಿದೆ. ಈ ಸಂಬಂಧ ಹತ್ತು ಸೂತ್ರವನ್ನೂ ನೀಡಿದೆ. ಮಕ್ಕಳ ಶೈಕ್ಷಣಿಕ (Education News) ಪ್ರಗತಿಯ ಹಿತದೃಷ್ಟಿಯಿಂದ ಈ ಕಾರ್ಯಗಳನ್ನು ಮಾಡುವಂತೆ ಒತ್ತಾಯ ಮಾಡಿದೆ.
ಮನವಿ ಪತ್ರದಲ್ಲೇನಿದೆ?
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದ ಸದನದಲ್ಲಿ ಬಂದ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಮಕ್ಕಳಿಗೆ ಮುಂದಿನ ವರ್ಷದಿಂದ ಬೈಸಿಕಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಸ್ಥಗಿತಗೊಂಡಿರುವ ಯೋಜನೆಯನ್ನು ಪುನಾರಂಭಿಸುವ ಸಚಿವರ ಭರವಸೆ ಸ್ವಾಗತಾರ್ಹ. ಇದೇ ಸಂದರ್ಭದಲ್ಲಿ, ಉಳಿದ ಉತ್ತೇಜಕಗಳು ಸಕಾಲಕ್ಕೆ ದೊರೆಯುವಂತೆ ಕ್ರಮವಹಿಸುವುದು ಕೂಡ ಆದ್ಯತೆಯ ವಿಷಯವಾಗಬೇಕು.
ಇದನ್ನೂ ಓದಿ: Health Card: ಸರ್ಕಾರದ ಹೊಸ ಹೆಲ್ತ್ ಕಾರ್ಡ್; ದೇಶದ ಎಲ್ಲೆಡೆ ಸಿಗಲಿದೆ Treatment! ಏನಿದರ ವಿಶೇಷತೆ?
ಶಾಲಾ ಶಿಕ್ಷಣದಲ್ಲಿ ಮಕ್ಕಳು ಹಾಗೂ ಮಕ್ಕಳ ಕಲಿಕೆಯು ಕೇಂದ್ರ ಬಿಂದುವಾಗಿದೆ. ಮಕ್ಕಳಿಗಿರುವ ಶಿಕ್ಷಣದ ಮೂಲಭೂತ ಹಕ್ಕಿನ ಭಾಗವಾಗಿ ಒದಗಿಸಬೇಕಾದ ಉತ್ತೇಜಕಗಳು, ಕಲಿಯಲು ಅಗತ್ಯವಾದ ಮೂಲ ಸೌಕರ್ಯ ಹಾಗೂ ಕಲಿಸಲು ಬೇಕಾದ ಅರ್ಹ ಶಿಕ್ಷಕರನ್ನು ಒದಗಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕಾಗುತ್ತದೆ.
ರಾಜ್ಯದಲ್ಲಿ ಹಲವು ವರ್ಷಗಳಿಂದ ಶಾಲೆ ಪ್ರಾರಂಭವಾಗಿ ಹಲವು ತಿಂಗಳು ಕಳೆದರೂ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ, ಸಮವಸ್ತ್ರ ಮತ್ತು ಶೂ, ಸಾಕ್ಸ್ ಸಕಾಲಕ್ಕೆ ದೊರೆತಿಲ್ಲ. ಜತೆಗೆ, ಏಳನೇ ತರಗತಿಯಿಂದ ಎಂಟು ಅಥವಾ ಎಂಟರಿಂದ ಒಂಭತ್ತನೇ ತರಗತಿಗೆ ಹೋಗುತ್ತಿರುವ ಮಕ್ಕಳಿಗೆ ಕಳೆದ ಮೂರು ವರ್ಷದಿಂದ ಉಚಿತ ಬೈಸಿಕಲ್ ಸಿಕ್ಕಿಲ್ಲ.
ಸಚಿವರು ಮಕ್ಕಳ ಕಲಿಕೆಗೆ ಪೂರಕವಾಗಿರುವ ಈ ಕೆಳಗಿನ ವಿಷಯಗಳ ಬಗ್ಗೆ ಆದ್ಯತೆಯ ಮೇಲೆ ಗಮನ ಹರಿಸಿ, ಮುಂದಿನ ಶೈಕ್ಷಣಿಕ ವರ್ಷ 2024-25 ರಿಂದಲಾದರೂ ಈ ಕೆಳಗಿನ ಎಲ್ಲ ಉತ್ತೇಜಕಗಳನ್ನು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಒತ್ತಾಯಿಸುತ್ತದೆ.
ಹಕ್ಕೊತ್ತಾಯಗಳು ಇಂತಿವೆ
- ಎಲ್ಲ ಮಕ್ಕಳಿಗೆ ಪರಿಷ್ಕೃತ ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ, 2 ಜತೆ ಸಮವಸ್ತ್ರ ಮತ್ತು 2 ಜತೆ ಶೂ ಹಾಗೂ ಸಾಕ್ಸ್ ವಿತರಣೆ
- ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ. ವಿಳಂಬವಾದಲ್ಲಿ ಶಾಲೆ ಪ್ರಾರಂಭದಲ್ಲಿಯೇ ಅತಿಥಿ ಶಿಕ್ಷಕರ ನೇಮಕ
- ಏಕೋಪಾಧ್ಯಾಯ / ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಕಾಯಂ ಶಿಕ್ಷಕರ ನೇಮಕ ಮಾಡಬೇಕು. ಕಾಯಂ ಶಿಕ್ಷಕರನ್ನು ಅತ್ಯಗತ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ನಿಯೋಜನೆ ಮಾಡಬೇಕು
- ಪ್ರೌಢ ಶಿಕ್ಷಣ ಮುಂದುವರಿಸಲು ಏಳನೇ ತರಗತಿಯಿಂದ ಎಂಟು ಅಥವಾ ಎಂಟರಿಂದ ಒಂಭತ್ತನೇ ತರಗತಿಗೆ ಹೋಗುತ್ತಿರುವ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ
- ಯಾವುದೇ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ ವಿಲೀನಗೊಳಿಸುವ ಪ್ರಕ್ರಿಯೆಗಳು ಪೂರ್ಣವಾಗಿ ನಿಲ್ಲಬೇಕು
- ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತಿ ಮಗುವಿನ ಯುನಿಟ್ ವೆಚ್ಚವನ್ನು ಹೆಚ್ಚಿಸಬೇಕು.
- ಈ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿಗತಿ ಅರಿಯಲು ಸಿಆರ್‌ಪಿ, ಶಿಕ್ಷಣ ಸಂಯೋಜಕರು, ಬಿಆರ್‌ಸಿ, ಬಿಆರ್‌ಪಿ, ಬಿಇಒ, ಡಿಡಿಪಿಐ ಮತ್ತು ಡಯಟ್ ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡಿ ವಿವರವಾದ ವರದಿ ಸಲ್ಲಿಸಲು ಕ್ರಮ ವಹಿಸಬೇಕು
- ಸಂವಿಧಾನದಲ್ಲಿನ ಮೂಲಭೂತ ಹಕ್ಕಾಗಿರುವ 21ಎ ಅನ್ನು ಕೊಡಮಾಡುವ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಜತೆಗೆ ನಿಗದಿತ ಸಮಯದಲ್ಲಿ ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಕಾಲಮಿತಿ ಯೋಜನೆ ರೂಪಿಸಬೇಕು.
- ಶಾಲಾ ಹಂತದಲ್ಲಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ರಚಿಸಿ ಬಲವರ್ಧನೆಗೊಳಿಸಲು ಪರಿಣಾಮಕಾರಿ ತರಬೇತಿ ಒದಗಿಸಲು ಕ್ರಮವಹಿಸುವುದು
- ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣವೂ ಒಳಗೊಂಡಂತೆ ಕನಿಷ್ಠ 12ನೆಯ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವಿಸ್ತರಿಸಲು ಸಂವಿಧಾನ ಹಾಗೂ ಶಿಕ್ಷಣ ಹಕ್ಕು ಕಾಯಿದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು.
ಇದನ್ನೂ ಓದಿ: CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್ ಮಾಡಿದ ಯತ್ನಾಳ್ ಎಂದ ಸಿದ್ದರಾಮಯ್ಯ
ಈ ರೀತಿಯಾಗಿ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯಲ್ಲಿ ಕೆಲವು ಆದ್ಯತೆಯ ಕೆಲಸಗಳಿಗೆ ಮೊದಲು ಗಮನಹರಿಸಬೇಕು ಎಂಬುದಾಗಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ಹಾಗೂ ಅಭಿವೃದ್ಧಿ ಶಿಕ್ಷಣ ತಜ್ಞರಾದ ಪ್ರೊ. ಡಾ. ನಿರಂಜನಾರಾಧ್ಯ ವಿ.ಪಿ., ರಾಜ್ಯಾಧ್ಯಕ್ಷ ಉಮೇಶ್ ಜಿ ಗಂಗವಾಡಿ, ರಾಜ್ಯ ಕಾರ್ಯದರ್ಶಿ ಪಾರ್ವತಿ ಜಿ.ಎಸ್., ಹಿರಿಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ವಿಭಾಗೀಯ ಸಂಘಟನಾ ಕಾರ್ಯದರ್ಶಿಗಳಾದ ಮಾಥ್ಯು ಮುನಿಯಪ್ಪ ಬೆಂಗಳೂರು, ಅಬ್ದುಲ್ ಸಲಾಂ ಚಿತ್ತೂರು –ಮೈಸೂರು, ಶಂಕರ ಬನಪ್ಪನವರ -ಬೆಳಗಾವಿ, ರಾಜಶೇಖರ ಗುಲ್ಬರ್ಗ ಅವರು ಮನವಿ ಮಾಡಿದ್ದಾರೆ.