Site icon Vistara News

Education News : ಮಗುವನ್ನು ಶಾಲೆಗೆ ಸೇರಿಸಲು ಹೊರಟಿರಾ? ವಯಸ್ಸಿನ ಲೆಕ್ಕಾಚಾರವನ್ನು ಸರಿಯಾಗಿ ತಿಳಿದುಕೊಳ್ಳಿ!

Education News age calculator for school admission in karnataka

ಬೆಂಗಳೂರು: ಶಾಲೆಗೆ ಮಕ್ಕಳನ್ನು ಸೇರಿಸಲು ಹೊರಟಿರಾ? ನಿಮ್ಮ ಮಗುವಿನ ವಯಸ್ಸೆಷ್ಟು ಎಂಬುದನ್ನು ಸರಿಯಾಗಿ (Education News) ನೋಡಿಕೊಳ್ಳಿ. ಏಕೆಂದರೆ ಈ ವರ್ಷ ಯುಕೆಜಿಗೆ ದಾಖಲಾಗುವ ಮಕ್ಕಳು ದಿನಾಂಕ 31-05-2019 ಅಥವಾ ಅದಕ್ಕೂ ಮೊದಲು ಜನಿಸಿರಬೇಕು.

ಯುಕೆಜಿಗೆ ದಾಖಲಾಗುವ ಮಕ್ಕಳು ದಿನಾಂಕ 31-12-2018 ಅಥವಾ ಅದಕ್ಕೂ ಮೊದಲು ಜನಿಸಿರಬೇಕು. ಒಂದನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿ/ ವಿದ್ಯಾರ್ಥಿನಿ 31-12-2017ಕ್ಕೆ ಅಥವಾ ಅದಕ್ಕೂ ಮೊದಲು ಜನಿಸಿರಬೇಕು. 1 ನೇ ತರಗತಿಗೆ ದಾಖಲಿಸಲು ಕನಿಷ್ಠ 5 ವರ್ಷ 5 ತಿಂಗಳು, ಗರಿಷ್ಠ 7 ವರ್ಷ ಆಗಿರಬೇಕು ಎಂದು ಈಗಾಗಲೇ ಇಲಾಖೆ ಸೂಚಿಸಿದೆ. ಆದರೆ 2025-26 ನೇ ಶೈಕ್ಷಣಿಕ ಸಾಲಿನಿಂದ ಜೂನ್‌ 1ನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಿಕೊಳ್ಳಲಾಗುತ್ತದೆ.

ಕಳೆದ ವರ್ಷವೇ ಈ ಸಂಬಂಧ ಆದೇಶ ಹೊರಡಿಸಲಾಗಿದೆ. ಹೀಗಾಗಿ ಈ ಶೈಕ್ಷಣಿಕ (Education News) ಸಾಲಿನಿಂದಲೇ ಎಲ್‌ಕೆಜಿ ತರಗತಿಗೆ ದಾಖಲು ಮಾಡಿಕೊಳ್ಳಲು ಜೂನ್‌ 01ನೇ ತಾರೀಖಿಗೆ ಅನ್ವಯವಾಗುವಂತೆ ನಾಲ್ಕು (4) ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಈ ಸಂಬಂಧ ಇಲಾಖೆಯು ಜ್ಞಾಪನ ಪತ್ರ ಹೊರಡಿಸಿದ್ದು, ಬರುವ ಜೂನ್‌ 1ಕ್ಕೆ ನಾಲ್ಕು ವರ್ಷ ಪೂರ್ಣಗೊಂಡ ಮಕ್ಕಳು ಮಾತ್ರ ಈ ಬಾರಿ ಎಲ್‌ಕೆಜಿಗೆ ಸೇರಬಹುದಾಗಿದೆ. ಮುಂದೆ ಗೊಂದಲವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆಯು ಈ ಕ್ರಮತೆಗೆದುಕೊಂಡಿದೆ.

ಕಳೆದ ವರ್ಷ ಅಂದರೆ 2022 ಜುಲೈ 26ರಂದು ಆದೇಶ ಹೊರಡಿಸಿದ್ದ ಶಿಕ್ಷಣ (Education News) ಇಲಾಖೆ ಇನ್ನು ಮುಂದೆ ಒಂದು ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್‌ ಒಂದನೇ ತಾರೀಖಿಗೆ ಅನ್ವಯವಾಗುವಂತೆ ಆರು ವರ್ಷ ತುಂಬಿರಲೇಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು 2023-24 ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತಾದರೂ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಇದನ್ನು 2025-26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿತ್ತು.

ಶಿಕ್ಷಣ ಇಲಾಖೆ ಹೊರಡಿಸಿದ ಜ್ಞಾಪನ ಪತ್ರ.

ಹೊಸ ನಿಯಮದಂತೆ 2025-26ನೇ ಸಾಲಿನಲ್ಲಿ ಒಂದನೇ ತರಗತಿಗೆ ನಿಮ್ಮ ಮಗುವನ್ನು ಸೇರಿಸಿಬೇಕೆಂದರೆ ಎಲ್‌ಕೆಜಿ ಸೇರ್ಪಡೆ ವಿಷಯದಲ್ಲಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ 2025-26ನೇ ಸಾಲಿಗೆ ಬರುವಾಗ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರುವುದು ಕಡ್ಡಾಯ. ಹಾಗಾಗಿ, ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗ ನಿಮ್ಮ ಮಗು ಕಡ್ಡಾಯವಾಗಿ ನಾಲ್ಕು ವರ್ಷ ಪೂರ್ಣಗೊಳಿಸಿರಬೇಕು. ಇಲ್ಲದೇ ಇದ್ದಲ್ಲಿ ಎಲ್‌ಕೆಜಿ ಅಥವಾ ಯುಕೆಜಿಯಲ್ಲಿಯೇ ಮಗು ಒಂದು ವರ್ಷ ಹೆಚ್ಚಾಗಿ ಉಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾಗಿದೆ.

ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗಲೇ ವಯಸ್ಸನ್ನು ಸರಿಯಾಗಿ ನೋಡಿಕೊಂಡು ಸೇರಿಸಿದಲ್ಲಿ, ಮುಂದೆ ಗೊಂದಲವಾಗುವುದು ತಪ್ಪಲಿದೆ. ಆರು ವರ್ಷಪೂರ್ಣಗೊಳ್ಳದ ಮಕ್ಕಳನ್ನು ಯಾವುದೇ ಕಾರಣಕ್ಕೂ ಮುಂದೆ (2025-26ನೇ ಸಾಲಿನಲ್ಲಿ ) ಒಂದನೇ ತರಗತಿಗೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ವಯಸ್ಸು ಎಷ್ಟಿತ್ತು?

ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ 2016-17ನೇ ಶೈಕ್ಷಣಿಕ ವರ್ಷದಲ್ಲಿ ಎಲ್​ಕೆಜಿ ಪ್ರವೇಶಕ್ಕೆ ಮಗುವಿಗೆ 4 ವರ್ಷ, 10 ತಿಂಗಳು ತುಂಬಿರಬೇಕು ಎಂದು ನಿಯಮ ಮಾಡಲಾಗಿತ್ತು. ಅದಕ್ಕೂ ಮೊದಲು ಎಲ್​ಕೆಜಿ ಪ್ರವೇಶಕ್ಕೆ 3 ವರ್ಷ 10 ತಿಂಗಳು ಆಗಿದ್ದರೆ ಸಾಕಾಗಿತ್ತು. ಅದೇ ರೀತಿ 1ನೇ ತರಗತಿ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ನಡುವೆ ಮಗುವಿನ ವಯಸ್ಸು ಇದ್ದರೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ನಿಯಮ ರೂಪಿಸಿತ್ತು.

ಕರ್ನಾಟಕ ಸರ್ಕಾರವು ಈ ನಿಯಮವನ್ನು 2018ರಲ್ಲಿ ಮತ್ತೊಮ್ಮೆ ಸಡಿಲಿಸಿತ್ತು. 1ನೇ ತರಗತಿಗೆ ದಾಖಲಿಸಲು ಕನಿಷ್ಠ 5 ವರ್ಷ 5 ತಿಂಗಳು, ಗರಿಷ್ಠ 7 ವರ್ಷ ಆಗಿರಬೇಕು ಎಂದು ಆದೇಶ ಹೊರಡಿಸಿತ್ತು.

ಇದನ್ನೂ ಓದಿ : Education News : ಮೇ 29 ರಿಂದ ನೂತನ ಶೈಕ್ಷಣಿಕ ವರ್ಷ ಆರಂಭ; ಮೇ 31 ರಿಂದ ತರಗತಿಗಳು ಶುರು

Exit mobile version